Friday, June 1, 2018

ಸಿದ್ಧರಾಮಯ್ಯನವರು

*ಸೂಕ್ಷ್ಮ ರಾಜಕಾರಣದ ನಾಯಕ: ಸಿದ್ಧರಾಮಯ್ಯನವರು*

ರಾಜ್ಯ ರಾಜಕಾರಣದ ಅಸ್ಪಷ್ಟ ನೆನಪಿನಲಿ ಕೆಲವೇ ಮುಖ್ಯಮಂತ್ರಿಗಳು ಉಳಿಯುತ್ತಾರೆ. ಅಚಾನಕಾಗಿ ಆದವರು, ಪ್ರಾಸಂಗಿಕವಾಗಿ ಪಟ್ಟಕೇರಿದವರು ಮುಖ್ಯಮಂತ್ರಿಗಳು ಅನಿಸುವುದೇ ಇಲ್ಲ.

ಒಂದು ರಾಜ್ಯದ ಅರಸನಾಗಿ ಜನಪರ ಕಾಳಜಿ ಇಟ್ಟುಕೊಂಡು ಹುದ್ದೆಯ ಘನತೆಗೆ ತಕ್ಕಂತೆ ನಡೆದುಕೊಳ್ಳುವ ಕಾಲ ಮುಗಿಯಿತೇನೋ ಎನಿಸುತ್ತದೆ.

ನಿಜಲಿಂಗಪ್ಪ, ವೀರೇಂದ್ರ ಪಾಟೀಲ, ದೇವರಾಜ ಅರಸು ಹಾಗೂ ರಾಮಕೃಷ್ಣ ಹೆಗಡೆ ಘನತೆಯ ಜೊತೆಗೆ ಜಾಣತನವನೂ ಬಳಸಿಕೊಂಡು ಅಧಿಕಾರ ನಡೆಸಿದರು.

ನಂತರದ ದಿನಗಳಲ್ಲಿ ರಾಜ್ಯದ ರಾಜಕೀಯ ಪರಂಪರೆ ತನ್ನ ಘನತೆಯನ್ನು ಕಳೆದುಕೊಂಡಿತು.

ತೊಂಬತ್ತರ ದಶಕದ ನಂತರ ರಾಜಕಾರಣದಲ್ಲಿ ತೋಳ್ಬಲ ಪ್ರದರ್ಶನ, ಜಂಗೀ ಕುಸ್ತಿ ದಿನಗಳು ಆರಂಭವಾಗಿ ರಾಜಕೀಯ ತನ್ನ ತತ್ವ ಹಾಗೂ ಸತ್ವ ಎರಡನ್ನೂ ಮರೆಯಿತು.

ಹಿಂದಿನ ಇತಿಹಾಸ ಮೆಲುಕು ಹಾಕದೇ, ತುಂಬಾ ಹತ್ತಿರದಿಂದ ನೋಡಿದ, ಕೇಳಿದ ಪಟೇಲರ ನಂತರ ನೆನಪಿನಲ್ಲಿ ಉಳಿಯುವ ಮುಖ್ಯಮಂತ್ರಿಗಳೆಂದರೆ ಮಾನ್ಯ *ಸಿದ್ಧರಾಮಯ್ಯನವರು*.

ಪಕ್ಷ, ಸಿದ್ಧಾಂತ ಯಾವುದನ್ನೂ ಲೆಕ್ಕಿಸದೇ ದೇಸಿಯ ಮುಗ್ಧ ಹಟಮಾರಿ ಹುಡುಗನ ಹಾಗೆ ತೊಡೆತಟ್ಟಿ ಎದೆಗಾರಿಕೆಯಿಂದ ಕಂಡ ಕನಸನು ನನಸಾಗಿಸಿಕೊಂಡು ಪೂರ್ಣ ಪ್ರಮಾಣದಲ್ಲಿ ಆಳಿದವರು.

*ಇವತ್ತಿನ ರಾಜಕಾರಣದ ಹತ್ತು ಹಲವು ವಿರೋಧಾಭಾಸ, ಭಷ್ಟತೆ, ಹೈಕಮಾಂಡ್ ಓಲೈಕೆ, ಮಸಲತ್ತು, ಜಾತೀಯತೆ, ವೈಯಕ್ತಿಕ ದೌರ್ಬಲ್ಯ, ಸ್ವಜನಪಕ್ಷಪಾತ ಹಾಗೂ ದೃತರಾಷ್ಟ್ರ ವ್ಯಾಮೋಹದಿಂದ ಮುಕ್ತವಾಗದಿದ್ದರೂ ನೆನಪಿನಲ್ಲಿ ಉಳಿಯುವ ಜನನಾಯಕ*.

ಹತ್ತಾರು ಬಾರಿ ಕಾವೇರಿಯಲ್ಲಿ, ಸಾರ್ವಜನಿಕ ಸಭೆಗಳಲ್ಲಿ ಹತ್ತಿರದಿಂದ ಅವರ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿ ಸಂಭ್ರಮಿಸಿದ್ದೇನೆ. ಆ ಸಂಭ್ರಮಿಸುವಿಕೆಯಲ್ಲೂ ನಿರ್ಲಿಪ್ತತೆಯನ್ನು ಕಾಪಾಡಿದೆ.

ಪರಿಚಯಿಸಿಕೊಳ್ಳುವ ಮಾತನಾಡಿಸುವ ಗೋಜಿಗೂ ಹೋಗಲಿಲ್ಲ. ಯಾಕೋ ನನಗೆ ಅಧಿಕಾರಸ್ಥರ ಓಲೈಕೆ ರೇಜಿಗೆ ಹುಟ್ಟಿಸಿತ್ತು.

ಅಲ್ಲದೇ ಅವರ ಸುತ್ತಲಿನ ಕೆಲವರ ಹಿಡಿತ ನನಗೆ ಅರ್ಥವಾಗಿತ್ತು. ಸರಕಾರಿ ಸ್ಥಾನಮಾನಗಳಿಂದ ಆಗುವ ಲಾಭಗಳ ಹಣೆಬರಹ ಅರಿತಿದ್ದೆ.

ಅಗತ್ಯವಿದ್ದಾಗ ಮಾತ್ರ ನಮ್ಮ ಹಿರಿಯರೊಂದಿಗೆ ಕಾಣಲು ಹೋದಾಗ ಒಬ್ಬ ಬರಹಗಾರನಾಗಿ ಒಳಗಣ್ಣಿನಿಂದ ಅವರ ವ್ಯಕ್ತತ್ವ ಕಟ್ಟಿಕೊಂಡಿದ್ದೆ.

ವ್ಯಕ್ತಿ ಅಧಿಕಾರದಿಂದ ಇಳಿಯಲೇಬೇಕು. ಹುಟ್ಟಿದ ಮನುಷ್ಯ ಹೋಗಲೇಬೇಕು. ಈ ಇಳಿಯುವ ಮತ್ತು ಹೋಗುವ ಮಧ್ಯೆ ಹೇಗೆ ನಡೆದುಕೊಳ್ಳುತ್ತಾನೆ ಎಂಬುದೇ ಮುಖ್ಯ.

ಹಾಗೆ ತುಂಬಾ ಎಚ್ಚರಿಕೆಯಿಂದ, ಅಷ್ಟೇ ಜಾಣತನದಿಂದ ನಡೆದುಕೊಂಡ ನಾಯಕ *ಸಿದ್ಧರಾಮಯ್ಯ*.

ಅಧಿಕಾರದ ಇತಿಮಿತಿಗಳನ್ನು ನೊಂದವರು, ಪೆಟ್ಟು ತಿಂದವರು ಸರಿಯಾಗಿ ಅರ್ಥಮಾಡಿಕೊಂಡಿರುತ್ತಾರೆ.

ಅಧಿಕಾರ ಬಂದ ಕೂಡಲೇ ಮೈಮರೆತು ಬಿಡುತ್ತಾರೆ. ಆದರೆ ಸಿದ್ಧರಾಮಯ್ಯ ಐದು ವರ್ಷ ಒಂದು ಕ್ಷಣವೂ ಮೈ ಮರೆಯಲಿಲ್ಲ. ಒಳಗಿನ, ಹೊರಗಿನ ಹಿತಶತ್ರುಗಳ ಸಮರ್ಥವಾಗಿ ಎದುರಿಸಿದರು.

ಸಮಾಜವಾದ, ಅರಸುತನ ಬರೀ ಮೇಲ್ನೋಟಕೆ ಉಳಿದರೂ ಕೆಲವು ಜನಪರ, ಪ್ರಗತಿಪರ, ಜನಪ್ರಿಯ ಯೋಚನೆಗಳನ್ನು ಉಳಿಸಿಕೊಂಡರು.

ಅಧಿಕಾರ ಉಳಿಸಿಕೊಳ್ಳುವ ಕಾರಣಕ್ಕಾಗಿ ಅನಿವಾರ್ಯ ರಾಜಿಯೊಂದಿಗೆ ಸಂಪನ್ಮೂಲ ರವಾನಿಸುತ್ತಲೇ ಹೈಕಮಾಂಡ್ ಲೋಕಮಾಂಡ್‌ ಆಗುವಂತೆ ಮಾಡಿದರು.

ಕಾಂಗ್ರೆಸ್ ಸಂಸ್ಕೃತಿಯ ವಿರುದ್ಧ ರಾಜಕೀಯ ಆರಂಭಿಸಿದ್ದರೂ, ಕಾಂಗ್ರೆಸ್ಸಿನಲ್ಲಿ ಇದ್ದೇ ಆ ಸಂಸ್ಕೃತಿಯಿಂದ ಅಂತರ ಕಾಪಾಡಿಕೊಂಡರು.

ಅವರನ್ನು ಹಿಂದುಳಿದ ವರ್ಗದ ನಾಯಕ ಎಂಬ ವಿವರಣೆಯನ್ನು ಒಪ್ಪಲಾಗದು.

ಜಾತಿಗೂ, ಜಾಣತನಕ್ಕೂ ಸಂಬಂಧವೇ ಇಲ್ಲ.
ಹಿಂದುಳಿವಿಕೆಯೆಂಬುದು ಜಾತಿಯಾಧಾರಿತ ಅಲ್ಲವೇ ಇಲ್ಲ.

ಮೇಲ್ಜಾತಿಯಲಿ ಹುಟ್ಟಿದ್ದರೂ ಎಡಬಿಡಂಗಿ, ಅಹಂಕಾರಿ, ಅಜ್ಞಾನಿಗಳು ಬೇಕಾದಷ್ಟು ಸಿಗುತ್ತಾರೆ.

ಜಾತಿ, ಕುಲ, ಗೋತ್ರ ಮೀರಿದ ರಾಜಕೀಯ ನಡೆಯನ್ನು ಸಿದ್ಧರಾಮಯ್ಯ ಸಾಬೀತು ಮಾಡಿದರು.

ಹಳೆಯ ಗೆಳೆಯರು, ಕೈಹಿಡಿದು ಕೈಕೊಟ್ಟವರು, ಕೈ ಹಿಡಿದವರನೂ ಅನಿವಾರ್ಯವಾಗಿ ಕೈ ಬಿಟ್ಟರೂ ಎಲ್ಲಾ ಅರ್ಥ ಮಾಡಿಕೊಂಡಿದ್ದರು.

ಎಚ್.ವಿಶ್ವನಾಥ, ಶ್ರೀನಿವಾಸ ಪ್ರಸಾದ ಇತ್ಯಾದಿ ಇತ್ಯಾದಿ ವ್ಯಕ್ತಿಗಳನು ಉಲ್ಲೇಖಿಸಬಹುದು. ಆದರೆ ರಾಜಕೀಯ ಅನಿವಾರ್ಯತೆ ಅದಾಗಿತ್ತು. ಹುಂಬತನ
ಅಹಂಕಾರ ಅಲ್ಲವೇ ಅಲ್ಲ.

ಅವರ ಭಾಗ್ಯಗಳು ಆರ್ಥಿಕ ಹೊರೆಯಾದರೂ ಅಧಿಕಾರ ಉಳಿಸಿಕೊಳ್ಳುವ ಉಪಕ್ರಮಗಳಾಗಿದ್ದವು.
ಲಾಭ, ನಷ್ಟಗಳ ಪ್ರಶ್ನೆಯೇ ಅಲ್ಲ.

ತಿಂದುಂಡು ತೇಗಿದವರ ಬಗ್ಗೆ ತಲೆಕೆಡಿಸಿಕೊಳ್ಳುವ ಜಾಯಮಾನವೂ ಇಲ್ಲದ ನಿರ್ಲಿಪ್ತ ನಡೆಯದು.

ವೈಯಕ್ತಿಕ ಆರೋಪಗಳಿಲ್ಲದೆ ಸಂಪನ್ಮೂಲ ಸಂಗ್ರಹಿಸಿ, ರವಾನಿಸುವ ಪರಿಯೂ ಫೆಂಟಾಸ್ಟಿಕ್.

ಲಿಂಗಾಯತ ಧರ್ಮದ ವಿಷಯವಾಗಿ ತೆಗೆದುಕೊಂಡು ಗಟ್ಟಿ ನಿರ್ಣಯ ಬೇರೆ ಯಾರಿಂದಲೂ ಅಸಾಧ್ಯ.

ಲಿಂಗಾಯತ ರಾಜಕಾರಣವನ್ನು ಒಡೆಯುವ ಹುನ್ನಾರ, ಲಿಂಗಾಯತರನ್ನು ಬಿಜೆಪಿ ಹಿಡಿತದಿಂದ ಬಿಡಿಸುವ ಉದ್ದೇಶ ಎಂಬ ಆರೋಪ ಕೇಳಿ ಬಂದರೂ ಎಲ್ಲವೂ *ಅರ್ಧಸತ್ಯ* .ಧೈರ್ಯ ಮಾತ್ರ *ಪೂರ್ಣ ಸತ್ಯ*.

ಸಣ್ಣ ಪ್ರಮಾಣದಲ್ಲಾದರೂ ಲಿಂಗಾಯತರು ಕಾಂಗ್ರೆಸ್ ಪ್ರೇಮ ಬೆಳೆಸಿಕೊಳ್ಳಲು ಲಿಂಗಾಯತ ಚಳುವಳಿಗೆ ಬೆಂಬಲವೇ ಕಾರಣ.

ಅದಕ್ಕೊಂದು ಕಾನೂನು ಚೌಕಟ್ಟು ರೂಪಿಸಿ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡ ಹೋದ ಪರಿ ಅಭಿನಂದನೀಯ. ಮುಂದೆ ಪರಿಣಾಮ ಏನೇ ಆಗಲಿ ಅದು ಬೇರೆ ಮಾತು.

ಜೆ.ಎಚ್.ಪಟೇಲರ ಧೈರ್ಯ, ಧೀಮಂತಿಕೆಯೊಂದಿಗೆ, ಇನ್ನೋರ್ವ ಜನತಾ ಪರಿವಾರದ ಯಜಮಾನರ ಒಳಪಟ್ಟುಗಳೂ ಇವರಿಗೆ ಕರಗತ. ಹೀಗಾಗಿ ಅವರ ಚದುರಂಗದಾಟ ಇವರ ಮುಂದೆ ನಡೆಯಲೇ ಇಲ್ಲ. ಈ ಮಿತಿಯವರೆಗೆ.

ಪ್ರಿಯ ಸಿದ್ಧರಾಮಯ್ಯನವರೇ,

ಜಾತಿ, ಧರ್ಮ, ಅಧಿಕಾರದ ಸೆಳೆತಗಳ ಮೀರಿ ಬರೆಯಬೇಕೆನಿಸುವ ವ್ಯಕ್ತಿತ್ವ ನಿಮ್ಮದಾದ ಕಾರಣದಿಂದಾಗಿ ಇಷ್ಟೆಲ್ಲ ಬರೆಯಬೇಕೆನಿಸಿತು.

ನೀವು ಬರೀ ನಿದ್ದೆ ಮಾಡುತ್ತೀರಿ, ದುರಹಂಕಾರಿ ಎಂದು ಬಿಂಬಿಸಿದ ಸಾಮಾಜಿಕ ಜಾಲತಾಣಗಳಿಗೆ‌ ಉತ್ತರ ಕೊಡುವ ಸಮರ್ಥರನ್ನು ನೀವಿಟ್ಟುಕೊಳ್ಳಲಿಲ್ಲ ಎಂಬ ಬೇಸರ.

ಸದಾ ನಗುತ್ತ, ನಗಿಸುತ್ತ ಎಲ್ಲರನ್ನು ಸ್ನೇಹದಿಂದ ವಿಚಾರಿಸುವುದನ್ನು ನೋಡಿ ಸಂಭ್ರಮಿಸಿದ್ದೇನೆ. ಆದರೇನು ಹೇಳಿದರೆ ಯಾರೂ ನಂಬುವುದೇ ಇಲ್ಲ.
ಒಂದು ಸುಳ್ಳನ್ನು ಸಾವಿರ ಬಾರಿ ಹೇಳಿ ನಂಬಿಸುವ ಕಳ್ಳರ ಮಧ್ಯೆ ಸತ್ಯ ಸತ್ತೇ ಹೋಯಿತು.

ಪ್ರಧಾನಿ ವಿರುದ್ಧ ಗುಡುಗಿದ ರಿಸ್ಕ್ ಸಣ್ಣದಲ್ಲ. ಏನೋ ಜಾದು ನಡೆಯಬಹುದೆಂಬುದನ್ನು ಲೆಕ್ಕಿಸದೇ ಪ್ರಧಾನಿ ವಿರುದ್ಧ ಗುಡುಗುವ ಧೈರ್ಯ ಮಾಡಿದಿರಿ.

ಜಾತಿ ಕಾರಣಗಳಿಂದ ಸೋಲುತ್ತೀರಿ ಎಂಬ ಸತ್ಯ ತಿಳಿದ ಕೂಡಲೇ ಸೇಫ್ ಝೋನ್ ನೋಡಿಕೊಂಡಿರಿ.

ಸೋಲು ಗೆಲುವು ಸಹಜವಾದರೂ ಈಗ ಸೋಲುವದು ನಿಮಗೆ ಬೇಡವಾಗಿತ್ತು‌.

ಈಗ ಎರಡೂ ರಾಜಕೀಯ ಪಕ್ಷಗಳು ಬಹುಮತ ಪಡೆಯದಿರಲು ಕಾರಣ ಮತದಾರ ಅಲ್ಲ. ಪಕ್ಷಗಳ ಓಳಗಿನವರ ಅಸಹನೆ,ಬೇಗುದಿ ಹಾಗೂ ಸಣ್ಣತನ.
ಅದನ್ನು ಅರಿತು ಈಗಲೂ ಆಟ ಮುಂದುವರೆಸಿದ್ದೀರಿ.

*All the best Sir*.

     *ಸಿದ್ದು ಯಾಪಲಪರವಿ*

No comments:

Post a Comment