*ಅಳದಿರು ಅಳುಕದಿರು*
ನಾವಿರುವುದು ಅಳಲು, ಅಳುಕಲೂ 
ಅಲ್ಲ ಉಕ್ಕಿಬರುವ ದುಕ್ಕಕೆ ಬೆದರಿ
ಚದುರಿದೆ ಮನ
ಅಳಬೇಡ ಕೂಸೆ, ಅಳಬೇಡ ತಪ್ಪು
ನಮ್ಮದಲ್ಲ ನಾವು ಅಪರಾದಿಗಳೂ 
ಅಲ್ಲ
ಯಾವುದೋ ರುಣಾನುಬಂದ ಎಳೆದು
ಕಟ್ಟಿ ಹಾಕಿ ಕರಗಿಸಿ ನೀರಾಗಿಸಿದೆ
ಮೈಮನಗಳ ಆಳದಲಿ
ಬೆದರದಿರು ಕರಗದಿರೂ ಅಲುಗದಿರು
ರಮಿಸಲು ನಾ ನಿಲ್ಲಿ ಏಕಾಂಗಿ
ಇರುವೆ ದೂರ ಬಹುದೂರ
ನೀ ನಕ್ಕರೆ ನಾ ನಗುವೆ ಅತ್ತರೆ ನಾ
ಇದ್ದೂ ಇರದಂತೆ
ಕೊಡದಿರು ನೀ ಏನನೂ ನನಗೆ
ನನಗಾಗಿ ಇರು ನಿನಗೆ 
ನೀ 
ಸರಿಕಂಡಂತೆ 
ಬೆಟ್ಟದಶ್ಟು ಆಸೆಗಳು ಹಿಡಿದು ಬಿಗಿ
ದಪ್ಪಿ ಮುದ್ದು ಮಾಡಿ ಸಾಕಿ ಸಲಹುವ
ಕನಸುಗಳಿಗೆ ನೀ ಕಂಗಾಲಾಗದಿರು
ಅದೆಲ್ಲ ನಾ ಕಟ್ಟಿಕೊಂಡ ಕನಸಿರಮನೆ
ಅಲ್ಲಿಯ ಮಹಾರಾಣಿ ನೀ ನಾಗದಿರೆ 
ನಾ ಹೊಣೆಯಲ್ಲ ನಾ ಕಾರಣ
ಎಲ್ಲದಕೂ ವಿನಾಕಾರಣ 
ಈ ಬದುಕೇ ಹೀಗೆ  ನದಿಯ
ಮೂಲ ಹುಡುಕಿ ದುಡುಕಿದಂತೆ 
ನಡೆದಷ್ಟೇ ದಾರಿ ಕಂಡಷ್ಟೇ ಮುಗಿಲು
ನೆಲ ಹಿಡಿದು ನಡೆಯೋಣ 
ತಲೆ ಎತ್ತಿ ಬಾಳೋಣ ನೀ
ಪಾಪಿಯಲ್ಲ ನಾ ಕೋಪಿಯೂ
ಅಲ್ಲ 
ಬರೀ ಪರತಪಿಸುವೆ 
ನಿನಗಾಗಿ ಅದು ನನ್ನ ಹಾಡು
ನನ್ನ ಪಾಡು 
ಇಲ್ಲ ಇಲ್ಲಿ ನಿನಗೆ
ಸಮ ಪಾಲು 
ಅಳದಿರು ಕಣ್ಣ ನೀರಿಗೆ ಬೆಲೆ
ಕಟ್ಟಲಾಗದು ಅಣೆಕಟ್ಟನೂ
ಕಟ್ಟಲಾಗದು 
ಬಯಸಿದೆ ಬಯಕೆಯ ಹೇಳಿದೆ
ಬಳಲಿ ಬೆಂಡಾದೆ ಹೇಳಿದೆ ಬಿಂಕ
ಬದಿಗಿರಿಸಿ ನಿಸ್ಸಂಕೋಚದಿ 
ಕೇಳಿದರೆ ಕೇಳು ಬಿಟ್ಟರೆ ಬಿಡು
ನಾ ಹಾಡುವೆ ನನ್ನ ಪಾಡಿಗೆ 
ಅವನು ಒಲಿದಂತೆ ಒಲಿಸಿಕೊಳ್ಳವೆ.
*ಸಿದ್ದು ಯಾಪಲಪರವಿ*
 
 
 
 Posts
Posts
 
 
No comments:
Post a Comment