Sunday, October 21, 2018

ಪೊಯೆಟಿಕ್ ಜಸ್ಟಿಸ್

*Poetic justice- ವಿಜಯದಶಮಿ ಮತ್ತು ವರ್ತಮಾನ*

ವಿಜಯ ದಶಮಿ ನಿಮಿತ್ಯ ಅನೇಕ ಕತೆಗಳು. ದುಷ್ಟ ಸಂಹಾರದ ಸಂಕೇತಗಳಿಂದ ಆರಂಭವಾಗಿ ಮನದೊಳಗಿನ ದುಷ್ಟತನದ ಸಂಹಾರದ ವ್ಯಾಖ್ಯಾನಗಳ ಸಂದರ್ಭದಲ್ಲಿ ನೆನಪಾದ #Poetic justice ಎಂಬ ಪದ.

ನಮ್ಮ ಬದುಕಿನಲ್ಲಿ ನ್ಯಾಯ-ಅನ್ಯಾಯ, ಧರ್ಮ-ಅಧರ್ಮ, ಸೋಲು-ಗೆಲುವು ಅನಿಸಿದಾಗಲೆಲ್ಲ “ ಅಯ್ಯೋ ಯಾಕೆ ಹೀಗಾಯಿತು ? “ ಎಂಬ ಹಳಹಳಿಕೆ.

*ಬಾರದು ಬಪ್ಪದು ಬಪ್ಪುದು ತಪ್ಪದು* ಎಂಬ ವಚನದ ಸಾಲುಗಳ ಜಾಡ ಹಿಡಿದು ಹೋಗುವಾಗ ಮಾಡದ ತಪ್ಪಿಗೆ ಶಿಕ್ಷೆಗಾಗಿ ತಲ್ಲಣಿಸುತ್ತೇವೆ. ಹಾಗಾದರೆ ನಾವು ತಪ್ಪು ಮಾಡಿಲ್ಲ ಅಂದುಕೊಳ್ಳುವುದೇ ಮಾಹಾ ತಪ್ಪು.

ತಪ್ಪು ನಮ್ಮ ಮನದ ಮುಂದಣ ದುರಾಸೆ, ಮಹತ್ವಾಕಾಂಕ್ಷೆಯಿಂದಾಗಿಯೇ ನಡೆದಿರುತ್ತದೆ.

ನಮ್ಮ ಮಹಾಕಾವ್ಯಗಳು ಹೇಳುವದು ಅದನ್ನೇ.
*ಹೆಣ್ಣು-ಹೊನ್ನು-ಮಣ್ಣು* ನೆಪ ಇಟ್ಟುಕೊಂಡು ಘಟಿಸಿದ ರಾಮಾಯಣ, ಮಹಾಭಾರತದ ಕತೆಗಳಿಂದ ಪಾಠ ಕಲಿಯದೇ ಅವೇ ತಪ್ಪನ್ನು ಮಾಡುತ್ತ ರಾಮ ರಾವಣರಾಗಿ ಸಂಭ್ರಮಿಸುತ್ತೇವೆ.

ರಾಮ ರಾವಣ, ಪಾಂಡವ ಕೌರವರಾಗುವ ಅವಕಾಶ ನಮ್ಮಲ್ಲಿದ್ದರೂ ಅಧರ್ಮದ ಹಾದಿ ಹಿಡಿಯುತ್ತೇವೆ.

ವಿಲಿಯಂ ಶೇಕ್ಸ್‌ಪಿಯರ್ ಬಳಸಿದ poetic justice ಎಲ್ಲ ಕಾಲಕ್ಕೂ ಹೊಸ ಅರ್ಥ ಪಡೆಯುತ್ತದೆ.

ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ದೌರ್ಬಲ್ಯವನ್ನು *Tragi flaw* ಎಂದು ಗುರುತಿಸಿ ಅವನ ದುರಂತಕೆ ಅವನ flaw ಕಾರಣ ಎಂಬ ಜಾಣ Poetic justice ಭಿನ್ನ ಆಯಾಮ ಪರಿಚಯಿಸುತ್ತಾನೆ. ಹಣೆಬರಹ, ವಿಧಿ ಅವನ ದುರಂತ ನಾಟಕಗಳಲಿ ಎರಡನೇ ಸ್ಥಾನ ಪಡೆಯುತ್ತವೆ‌.  ಮೊದಲ ಆದ್ಯತೆ ದೌರ್ಬಲ್ಯ.

ಮನುಷ್ಯ ತನ್ನ ಮಿತಿ ಅರಿತುಕೊಳ್ಳದೇ ನರಳುತ್ತಾನೆ, ಅದರ ಮುಂದುವರೆದ ವಿವರಣೆಯೇ ಆತ್ಮಾವಲೋಕನವೆಂಬ #SWOT analysis.

ಅವನ ನಾಟಕಗಳ ದುರಂತ ನಾಯಕರಿಗೆ ನ್ಯಾಯ ಸಿಗಲಿಲ್ಲ ಎಂಬ ಕೊರಗು ಪ್ರೇಕ್ಷಕರಿಗೆ ಉಂಟಾಗದೇ flaw ವಿಶ್ಲೇಷಣೆ ಮಾಡುತ್ತ ಮರುಗುತ್ತಾರೆ.

*ಅನುಮಾನಿಸುವ ಒಥೆಲೋ , ಮಂದಗತಿಯ ಹ್ಯಾಮ್ಲೆಟ್, ಮಹತ್ವಾಕಾಂಕ್ಷೆಯ ಮ್ಯಾಕ್ ಬೆತ್ ಹಾಗೂ ವಯೋಮಾನದ ಮಿತಿ ಅರಿಯದ ಮುಪ್ಪಿನ ಕಿಂಗ್ ಲಿಯರ್* ನಮಗೆ ಎಚ್ಚರಿಕೆ ಗಂಟೆಯಾಗಬೇಕು.

ಮನುಷ್ಯ ಈ ನಾಲ್ಕು ಹಂತಗಳನ್ನೂ ದಾಟಿ ಅಂತ್ಯ ಕಾಣುತ್ತಾನೆ. ಯೌವನದಲ್ಲಿ ಈ ನಾಲ್ಕು ಪಾತ್ರಗಳನ್ನು ಅರ್ಥಮಾಡಿಕೊಂಡರೂ ನಾವೂ ದುರಂತ ನಾಯಕರಾಗಿ ಮರೆಯಾಗುತ್ತೇವೆ.
ಹಾಗೆ ದುರಂತದಲ್ಲಿ ಮರೆಯಾಗುವಾಗ ಮೊದಲು ನಮ್ಮೊಳಗಿದ್ದ tragic flaw ಮರೆತು ದುಃಖ ಪಡುತ್ತೇವೆ. ಅವೇ ಹೆಣ್ಣು-ಹೊನ್ನು-ಮಣ್ಣು ಮತ್ತು ಅದರಾಚೆಗಿನ ತಳಮಳ.

ನಮ್ಮ ಶರಣರು, ಸಾಧು ಸಂತರುಗಳು, ಬುದ್ಧ ಹೇಳಿದ್ದು ಇದನ್ನೇ ಅಲ್ಲವೇ?
*ಆಸೆಯೇ ದುಃಖಕ್ಕೆ ಮೂಲ, ಮನದ ಮುಂದಣ ಆಸೆಯೇ ಮಾಯೆ*.

ಮನದ ಮುಂದಣ ಅಂದದ ಮಾಯೆಗೆ ಬೆನ್ನು ಹತ್ತಿ ನರಳಿ ವರ್ತಮಾನದ ಸುಖ ಕಳೆದುಕೊಳ್ಳುತ್ತೇವೆ.
ಕೀರ್ತಿ ಶನಿಯ ಹೆಗಲೇರಿಸಿಕೊಂಡು ಅದರ ಮೂಲಕ ಹೆಣ್ಣು-ಹೊನ್ನು-ಮಣ್ಣು ಸುಲಭವಾಗಿ ದಕ್ಕಲಿ ಎಂಬ ಹೊಸ ಖಯಾಲಿ.

ಅದಕ್ಕಾಗಿಯೇ ಈ #metoo, #wetoo ರೋಗಗಳ ಹರಿದಾಟ. ಎಲ್ಲ ಕಾನೂನು ಹಾಗೂ ನಿಯಮಗಳ ದುರುಪಯೋಗದ ಹಪಾಹಪಿ. 

ಕೀರ್ತಿ ಗಳಿಸಲು, ಮೇಲೆರಲು ಕಂಡ ಕಂಡವರ ಕಾಲು ನೆಕ್ಕಿ, ಹಿಡಿದು, ಹೊಗಳಿ, ಸಾಧ್ಯವಾದರೆ ತಲೇನೂ ಹಿಡಿಯುವ ಅಸಹ್ಯ.
ಹೀನ ಕೆಲಸ  ಮಾಡದವರು ಬೇಗ ಮೇಲೇರುವುದಿಲ್ಲ, ಸ್ವಯಂಪ್ರತಿಭೆ ಇದ್ದವರು ನಿಧಾನವಾಗಿಯಾದರೂ ಮೇಲೇರುತ್ತಾರೆ.
ಹಾಗೆ ಸಾಧಿಸಲು ಅಪಾರ ಸಹನೆ, ಸಂಯಮ ಬೇಕು.
ಆ ಸಂಯಮ ಇದ್ದರೆ ಖಂಡಿತವಾಗಿ ಪೊಯಟಿಕ್ ಜಸ್ಟಿಸ್ ತನ್ನ ಅರ್ಥ ಉಳಿಸಿಕೊಳ್ಳುತ್ತದೆ.

ಜಗದ ಮೊಟ್ಟ ಮೊದಲ ಲಿಬರೇಟೆಡ್ ಮಹಿಳೆ, ಮೊದಲ ಕವಿ, ಆಧ್ಯಾತ್ಮ ಸಾಧಕಿ *ಅಕ್ಕಮಹಾದೇವಿ* ಯಾವುದೇ #metoo ಆರೋಪ ಮಾಡದೇ ದಟ್ಟ ಕಾಡಲಿ ಏಕಾಂಗಿಯಾಗಿ ಸಂಚರಿಸಿ ಮಹಿಳೆಯ ನೈತಿಕ ಮಟ್ಟದ ಹಿರಿಮೆ ಮರೆದ ಮಹಾ ಚಲುವೆ. ಅನುಭವ ಮಂಟಪದ ಶರಣರ ಪಾಲಿನ ದೊಡ್ಡಕ್ಕಳಾದಳು.
ಕೌಶಿಕ ಮಹಾರಾಜನ ದುಷ್ಟ ಬಾಹುಗಳಿಗೂ ದಕ್ಕಲಿಲ್ಲ.

ನಮಗೆ ಅಕ್ಕ ಹಾಗೂ ಈ ದೇಶದ ಲಕ್ಷಾಂತರ ಗ್ರಾಮೀಣ ಮಹಿಳೆಯರು, ಆದರ್ಶ ಗೃಹಿಣಿಯರು ಮಾದರಿಯಾಗಬೇಕು. ಅವರು ತಮ್ಮನ್ನು ಕೆಣಕುವ ಕಾಮುಕರಿಗೆ *ಯಾಕೋ ಭಾಡ್ಕೋ ಹೆಂಗಿದೆ ಮೈಗೆ* ಎಂದು ಅಲ್ಲೇ ಜಾಡಿಸಿ ಒದ್ದು ಹೋಗಿ ಕಣ್ಣು ತೆರೆಸುತ್ತಾರೆ, #ಮೀಟೂ #ಮಿಟೂ ಎಂದು ಆರೋಪ ಮಾಡದೇ. ಯಾವುದೇ ಕಾನೂನು ಕೈಗೆ ತೆಗೆದುಕೊಳ್ಳದೆ ಚಾರಿತ್ರ್ಯವೆಂಬ ಆತ್ಮವಿಶ್ವಾಸದ ಆಯುಧದ ಮೂಲಕ ತಮ್ಮನ್ನು ಸಂರಕ್ಷಿಸಿಕೊಂಡಿರುತ್ತಾರೆ.

ಮಹತ್ವಾಕಾಂಕ್ಷೆ, ಹಣ, ಪ್ರಚಾರದ ಬೆನ್ನು ಹತ್ತಿದವರು, ಕೀರ್ತಿ ಶನಿಯ ಹೆಗಲಿಗೆ ಏರಿಸಿಕೊಂಡವರ ದೌರ್ಬಲ್ಯವ ಗುರುತಿಸಿ ಕಾಮುಕರು ಕೌಶಿಕರಾಗುತ್ತಾರೆ.
ಅಸಹಾಯಕತೆ ಹೇಳಿಕೊಂಡು ನೆರವು ಕೇಳಲು  ಬರುವವರನ್ನು ಸಹಾಯದ ಮುಖವಾಡದಿ ಶೋಷಣೆ ಮಾಡುವ ಜನ ಕೂಡ ಇದ್ದಾರೆ. ಮುಖವಾಡಗಳ ಅರಿಯುವ ವಾತಾವರಣ ಸೃಷ್ಟಿ ಮಾಡಬೇಕು.

ಆಂತರಿಕ ನೈತಿಕ ತಾಕತ್ತು ಹೊಂದಿದ, ಗಟ್ಟಿ ಮನಸಿನ ಸುಂದರ ಮಹಿಳೆಯರ ತಂಟೆಗೆ ಕಾಮುಕರು ಯಾಕೆ ಹಾಯುವುದಿಲ್ಲ?.
ಇಲ್ಲಿ ಕೂಡ ಕೊಂಡುಕೊಳ್ಳುವ ಪ್ರಯೋಗದ ನಂತರ ನಿರ್ಧರಿಸುತ್ತಾರೆ.

*ಕಡೇ ಮಾತು*

*ಮನದ ತುಂಬ ಆಸೆಗಳ, ಕಣ್ಣ ತುಂಬ ಕನಸುಗಳ,  ಮೈತುಂಬ ಸೌಂದರ್ಯ ಇಟ್ಟುಕೊಂಡಿರುವ ನನ್ನ ಮಕ್ಕಳ ಸಮಾನರಾದ ಹುಡುಗಿಯರ ಮನಸ್ಥಿತಿ ಗಟ್ಟಿಗೊಳಿಸಲು ಮಿಟೂ ಬಳಕೆಯಾಗಲಿ*.

ಯಾವುದೋ ಕಾಲದಲ್ಲಿ ನಡೆದ ಘಟನೆಗಳನ್ನು ಕೆದಕಿ ಸಾಮಾಜಿಕ ಸ್ವಾಸ್ಥ್ಯ ಹಾಳುಮಾಡಬಾರದು. ಆಗ ಸುಮ್ಮನಿದ್ದು ಏಣಿ ಏರಿದ ಮೇಲೆ ಈಗ ಹಾರಾಡಿ ವಿಕೃತರನ್ನು ಇನ್ನೂ ವಿಕೃತಗೊಳಿಸಬಾರದು.

ಹೋರಾಟಗಳು ಹಾದಿ ತಪ್ಪಿ ದುರುಪಯೋಗಬಾರದು.

  #ಸಿದ್ದು ಯಾಪಲಪರವಿ.

ತೋಂಟದಾರ್ಯ ಸ್ವಾಮಿಗಳು

*ಸಾಮಾಜಿಕ ನ್ಯಾಯ, ಜನಪರ ಹೋರಾಟಗಳ ಸಂತ: ಕನ್ನಡದ ಜಗದ್ಗುರು ಡಾ.ತೋಂಟದಾರ್ಯ ಸ್ವಾಮಿಗಳು*

ಧಾರ್ಮಿಕ ಮಡಿವಂತನೆಗಳನ್ನು ಸಾರಾಸಗಟ ತಿರಸ್ಕರಿಸಿ ಮೂಲಭೂತ ಸಂಪ್ರದಾಯವಾದಿಗಳ ಬಾಯಿ ಮುಚ್ಚಿಸಿದ ಶ್ರೇಯಸ್ಸು ಗದುಗಿನ ತೋಂಟದಾರ್ಯ ಸಿದ್ಧಲಿಂಗ ಸ್ವಾಮಿಗಳಿಗೆ ಸಲ್ಲುತ್ತದೆ.
೧೯೭೪ ರಲ್ಲಿ ಪೀಠಾರೋಹಣದ ನಂತರ ಅನೇಕ ಗೊಡ್ಡು ಸಂಪ್ರದಾಯಗಳಿಗೆ ತಿಲಾಂಜಲಿ ಇಟ್ಟರು. ಪೀಠ ಪರಂಪರೆಯ ನೆಪದಲ್ಲಿ ಆಚರಿಸುತ್ತಿದ್ದ ಮೂಢ ನಂಬಿಕೆಗಳನ್ನು ಜನರ ಪ್ರೀತಿ, ವಿಶ್ವಾಸ ಗಳಿಸಿಕೊಂಡು ಬದಲಾಯಿಸಿದರು.‌
ಜಾತ್ರೆಯ ಸಂದರ್ಭದಲ್ಲಿ ತೇರಿನ ಗಾಲಿಗೆ ಅನ್ನ ಹಾಕುವುದನ್ನು ತಡೆದರು. ಹಸಿದವರು ತಿನ್ನುವ ಅನ್ನ ಪ್ರಸಾದಕ್ಕೆ ಸಮ, ಅದನ್ನು ಗಾಲಿಗೆ ಸುರಿಯುವುದು ಮೂರ್ಖತನವನ್ನು ವೈಚಾರಿಕವಾಗಿ ಪ್ರಶ್ನಿಸಿದ್ದನ್ನು ಅನೇಕ ಮಠಾಧೀಶರು ಇಷ್ಟಪಡಲಿಲ್ಲ.
ಸ್ವಾಮಿಗಳು ಭಕ್ತರು ಹೊರುವ  ಪಲ್ಲಕ್ಕಿಯಲ್ಲಿ ಕುಳಿತುಕೊಂಡು ಮೆರೆಯುವುದು ಅಮಾನವೀಯ ಎಂದು ಘೋಷಿಸಿ ಪಾದಯಾತ್ರೆ ಮೂಲಕ ಜಾತ್ರೆಯಲ್ಲಿ ಭಾಗವಹಿಸಿದರು.
ಇವರ ಸಿಂಹ ಘರ್ಜನೆಯ ಮಾತುಗಳ ಕೇಳಿ ಸಂಪ್ರದಾಯವಾದಿಗಳು ಬಾಲ ಮುದುರಿಕೊಂಡರು.
ಬಸವಾದಿ ಶರಣರ ವಚನಗಳನ್ನು, ಕನ್ನಡ ಸಾಹಿತ್ಯದ ಪ್ರಗತಿಶೀಲ, ನವ್ಯ ಸಾಹಿತ್ಯದ ಒಡನಾಡಿಯೂ ಆಗಿದ್ದ ಶ್ರೀಗಳು ಹಂತ ಹಂತವಾಗಿ ಸರಳೆತೆಯನ್ನು ಜಾರಿಗೊಳಿಸಿದರು.

ಸ್ವಾಮಿಗಳು ಪೂಜೆ, ಧ್ಯಾನಗಳ ಮೂಲಕ ಭಕ್ತರು ಕೊಡುವ ಕಾಣಿಕೆ, ಪ್ರಸಾದ ತಿಂದು ಕಾಲ ಕಳೆಯಲಿ ಎಂಬ ವಾದವನ್ನು ಕಠೋರವಾಗಿ ಪ್ರಶ್ನಿಸಿದರು. ಅನುಭವ ಮಂಟಪದ ಮೂಲಕ ಬಸವಾದಿ ಶರಣರು ಕಲಿಸಿದ ಜಾತ್ಯಾತೀತ ಮೌಲ್ಯಗಳ ಅನುಸಂಧಾನವನ್ನು ಪ್ರತಿ ಸೋಮವಾರದ ಶಿವಾನುಭವ ಚಿಂತನ ಗೋಷ್ಟಿಗಳ ಮೂಲಕ ಚರ್ಚೆಗೆ ಒಡ್ಡಿದರು.
ಎಡಪಂಥೀಯ ವಿಚಾರವಾದಿಗಳಿಗೆ ವೇದಿಕೆ ಮೇಲೆ ಅಭಿಪ್ರಾಯ ಹಂಚಿಕೊಳ್ಳುವ ಅವಕಾಶ ಕಲ್ಪಿಸಿದರು.
ಈಗ ಎರಡು ಸಾವಿರ ಗಡಿ ದಾಟಿರುವ ಶಿವಾನುಭವಗಳಿಗೀಗ ಗಿನ್ನಿಸ್ ದಾಖಲೆ.

ದೀನ ದಲಿತರು, ಮುಸ್ಲಿಂ , ಕ್ರಿಶ್ಚಿಯನ್ ಹಾಗೂ ಇತರ ಸಮುದಾಯದ ಹಬ್ಬಗಳನ್ನು ಮಠದ ಶಿವಾನುಭವಗಳಲ್ಲಿ ಆಚರಿಸಿದ ಮೊದಲ ಲಿಂಗಾಯತ ಮಠಾಧೀಶರು.
ಅನ್ಯ ಧರ್ಮೀಯರನ್ನು ಮಠದಲ್ಲಿ ಅಷ್ಟೇ ಅಲ್ಲ, ತಮ್ಮ ಪೂಜಾ ಮಂದಿರದಲ್ಲಿ ಕರೆದುಕೊಂಡು ಊಟ ಮಾಡಿದರು.
ಮಠಕ್ಕೆ ಬರುವ ಅತಿಥಿಗಳ ಜೊತೆ ಸಮೂಹ ಪಂಕ್ತಿ ಭೋಜನ ಮಾಡಲಾರಂಭಿಸಿದರು. ದಲಿತ ಕುಟುಂಬಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಮುಕ್ತ ಪ್ರವೇಶ ನೀಡಿದರು. ಜಾತಿ ಕೇಳುವ ಅಮಾನವೀಯತೆಯ ಕೈ ಬಿಟ್ಟರು. ಭಕ್ತ ಸಮೂಹಕ್ಕೆ ಆರಂಭದಲ್ಲಿ ಇದು ಆಘಾತಕಾರಿ ಅನಿಸಿದರೂ, ತಮಗೆ  ಮನಸ್ಸಿರದಿದ್ದರೂ ಪೂಜ್ಯರ ಇಚ್ಛಾಶಕ್ತಿಗೆ ಶರಣಾಗಿ ಮೌನ ತಾಳಿದರು.

ಸ್ವಾಮಿಗಳಿಗೂ ಸಾಮಾಜಿಕ ಹೋರಾಟಕ್ಕೂ ಸಂಬಂಧವೇ ಇಲ್ಲದ ಕಾಲಘಟ್ಟದಲ್ಲಿ ಕನ್ನಡ ಪರ ಗೋಕಾಕ ಚಳುವಳಿಯಲ್ಲಿ ಭಾಗವಹಿಸಿ ಅನೇಕ ಸಂಪ್ರದಾಯವಾದಿ ಮಠಾಧೀಶರ ಪಾಲಿನ ಬಿಸಿ ತುಪ್ಪವಾದರು.

“ಸ್ವಾಮಿ ಮಠದ ಒಳಗ ಗೌಪ್ಯವಾಗಿ ಕುಂತರ ಕೆಡತಾನ , ಅವನ ಖಾಸಗಿ ಬದುಕು ತೆರೆದ ಪುಸ್ತಕಧಂಗ ಇರಬೇಕು” ಎಂದು ಸಾರ್ವಜನಿಕ ಜೀವನ ಪ್ರವೇಶಿಸಲು ಕರೆ ಕೊಟ್ಟರು.
ಗೋಕಾಕ ಚಳುವಳಿ ತೀವ್ರ ಸ್ವರೂಪ ಪಡೆಯಲು ತೋಂಟದಾರ್ಯ ಶ್ರೀಗಳ ಭಾಷಣ ಕಾರಣವಾಯಿತು.
ವೇದಾಂತ ಉಪದೇಶ ಮೂಲೆಗೆಸೆದು ವಾಸ್ತವ ಸಂಗತಿಗಳನ್ನು ಭಕ್ತರೊಡನೆ ಹಂಚಿಕೊಳ್ಳಲಾರಂಭಿಸಿದರು.
ಕಾಯಕ, ದಾಸೋಹದ ಪರಿಕಲ್ಪನೆಗೆ ಹೊಸ ಆಯಾಮ ಒದಗೊಸಲು ಡಂಬಳದ ಬಂಜರು ಭೂಮಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಬಾವಿ ತೋಡಿ ನೀರು ಬರಿಸಿ ವ್ಯವಸಾಯ ಪ್ರಾರಂಭಿಸಿದ್ದನ್ನು ಅನೇಕರು ಮರೆತಿಲ್ಲ.

“ಸ್ವಾಮಿತ್ವ ಅಂದರೆ ಅರಸೊತ್ತಿಗೆಯಲ್ಲ, ನಿಜ ಕಾಯಕವಾಗಬೇಕು ಎಂಬುದನ್ನು ಸ್ವತಃ ದುಡಿದು ತೋರಿಸಿದರು.
ಆಧುನಿಕ ಮಠಾಧೀಶರು ತಮ್ಮ ಪೂಜಾ ಕೊಠಡಿ ಬಿಟ್ಟು ಹೊರ ಬಂದ ಉದಾಹರಣೆಗೆ ಆಗ ಇರಲಿಲ್ಲ.‌
ಮುಂಡರಗಿ ತಾಲೂಕಿನ ಹಿಂದುಳಿದ ಹಳ್ಳಿ ಡಂಬಳದ ಅಭಿವೃದ್ಧಿಗೆ ತಾವೇ ಮುಂದಾದರು. ರೈತರ ಕಲ್ಯಾಣ ಹಾಗೂ ಶೈಕ್ಷಣಿಕ ವಾತಾವರಣ ಕಲ್ಪಿಸಲು ಗದುಗಿನಿಂದ ಡಂಬಳಕೆ ಪ್ರತಿ ಅಮವಾಸ್ಯೆಯೆಂದು ಹತ್ತು ವರ್ಷ ಪಾದಯಾತ್ರೆ
ಮಾಡಿದರು. ಅಭಿವೃದ್ಧಿ ಕಾಣುವ ತನಕ ನಿಲ್ಲಿಸಲೇ ಇಲ್ಲ.
ಧಾರ್ಮಿಕ ಜಾತ್ರೆ ರೈತರ ರೊಟ್ಟಿ ಜಾತ್ರೆಯಾಗಿ ಪರಿವರ್ತನೆಯಾಯಿತು. ಪ್ರತಿ ಮನೆಯಿಂದ ರೊಟ್ಟಿ ಸಂಗ್ರಹಿಸಿ ಸಾಮೂಹಿಕ ಊಟ ಮಾಡುವ ಪಾಲ್ಗೊಳ್ಳುವಿಕೆ ಗ್ರಾಮ ಸಾಮರಸ್ಯ ಕಾಪಾಡಲು ಕಾರಣವಾಯಿತು.

ತೊಂಬತ್ತರ ದಶಕದ ಅದ್ವಾನಿಯವರ ರಥಯಾತ್ರೆಯ ಪುರುಷಾರ್ಥವನ್ನು ಧಾರವಾಡದ ಸಭೆಯಲ್ಲಿ ಬಹಿರಂಗವಾಗಿ ಪ್ರಶ್ನಿಸಿ ತಮ್ಮ ದಿಟ್ಟ ಎಡಪಂಥೀಯ ನಿಲುವನ್ನು ನಿರೂಪಿಸಿದರು.
ಭಗವಾ ಧ್ವಜದ ಟೀಕೆಯನ್ನು , ರಾಷ್ಟ್ರ ದ್ವಜದ ಟೀಕೆ ಎಂದು ತಿರುಚುವ ಪ್ರಯತ್ನಕ್ಕೆ ಸಮರ್ಪಕ ಉತ್ತರ ನೀಡುವ ಎದೆಗಾರಿಕೆ ತೋರಿಸಿದರು.

ಬಸತತ್ವ ನಿಷ್ಠೆಯುಳ್ಳ ಇಲಕಲ್ಲ ಮಹಾಂತ ಸ್ವಾಮಿಗಳು ಜಂಗಮೇತರ ಸಮಾಜದ ವ್ಯಕ್ತಿಯನ್ನು ಉತ್ತರಾಧಿಕಾರಿಯಾಗಿ ನೇಮಿಸುವ ಸಂದರ್ಭದಲ್ಲಿ ಉಂಟಾದ ಗಲಭೆಯನ್ನು ತಮ್ಮ ಗಟ್ಟಿ ಬೆಂಬಲದಿಂದ ನಿಯಂತ್ರಿಸಿದರು.
ಲಿಂಗಾಯತ ಅಧ್ಯಯನ ಸಂಸ್ಥೆಯ ಮೂಲಕ ಡಾ.ಎಂ.ಎಂ.ಕಲಬುರ್ಗಿಯವರ ಮಾರ್ಗದರ್ಶನದಲ್ಲಿ ನೂರಾರು ಸಂಶೋಧನಾ ಗ್ರಂಥಗಳು,  ಸಾವಿರಾರು ಸಾಹಿತ್ಯೇತರ ಅಪರೂಪದ ಐತಿಹಾಸಿಕ ಪುಸ್ತಕ ಪ್ರಕಟಿಸಿ ಪುಸ್ತಕ ಸ್ವಾಮೀಜಿ ಎಂದು ಖ್ಯಾತರಾದರು.
ಮಲಗಿ ಮುಲುಗುತ್ತಿದ್ದ ವಿಶ್ವವಿದ್ಯಾಲಯದ ಪ್ರಸಾರಾಂಗಗಳು ಎಚ್ಚರಾಗುವಂತೆ ಮಾಡಿದರು.
ಡಾ. ಎಂ.ಎಂ‌. ಕಲಬುರ್ಗಿ ಅವರ ಬಸವ ತತ್ವ ಚಿಂತನೆಗಳಿಗೆ ಗಟ್ಟಿ ಧ್ವನಿಯಾದರು. ಅವರು ಗುಡುಗಿದರೆ ಮಡಿವಂತ ಪರಂಪರೆಗೆ ನಡುಕ ಹುಟ್ಟುತ್ತಿತ್ತು.

ಕಪ್ಪತಗುಡ್ಡ ವಿನಾಶದ ಅಂಚಿಗೆ ದೂಡುವ ರಾಜಕೀಯ ಸಂಚನ್ನು ಬಯಲು ಮಾಡಿ ರಕ್ಷಣೆಗೆ ಬದ್ಧರಾದರು. ಪೋಸ್ಕೋ ಬಹುರಾಷ್ಟ್ರೀಯ ಕಂಪನಿ ಜಿಲ್ಲೆಗೆ ಬರುವ ಸುಳಿವು ಸಿಕ್ಕ ಕೂಡಲೇ ಬೀದಿಗಿಳಿದರು.
ರೈತರಿಗೆ ಭೂಮಿ ಹಾಗೂ ಮಣ್ಣಿನ ಮಹತ್ವ ವಿವರಿಸಿ ಭೂಮಿ ನೀಡದಂತೆ ತಡೆಯೊಡ್ಡಿದರು

ಆ ಸಂದರ್ಭದಲ್ಲಿ ಪ್ರಭಾವ ಬೀರಲು ಯತ್ನಿಸಿದ ಸಚಿವರುಗಳನ್ನು ಹತ್ತಿರ ಸೇರಿಸಿಕೊಳ್ಳದೇ ಜಾಣ, ನಿಸ್ವಾರ್ಥ ನಡೆ ತೋರಿದರು.
“ನ್ಯಾಯ ನಿಷ್ಟುರಿ ನಾ, ದಾಕ್ಷಿಣ್ಯ ಪರನಲ್ಲ” ಎಂಬ ಬಸವ ತತ್ವ ನಾಡಿಗೆ ಸಾರಿದರು. ಆಂತರಿಕ ರಾಜಕಾರಣದ ಒತ್ತಡ ಲೆಕ್ಕಿಸದೇ ರೈತರ ಮನ ಒಲಿಸಿದರು.
ಹಣದ ಆಸೆಗೆ ಭೂಮಿ ಮಾರಲು ಪ್ರೇರೇಪಿಸಿದ ಸಂಘಟನೆಗಳಿಗೆ ಆಘಾತ ನೀಡಿದರು.
ನಂತರ ಕಪ್ಪತಗುಡ್ಡವನ್ನು ಅಧಿಕೃತ ಗಣಿಗಾರಿಕೆ ನೆಪದಲ್ಲಿ ಬಲ್ದೋಟಾ ಕಂಪನಿಗೆ ನೀಡುವ ಆದೇಶವನ್ನು ಮರಳಿ ಪಡೆಯಲು ಅಹೋರಾತ್ರಿ ಧರಣಿ ನಡೆಸಿದರು.
ಎರಡನೇ ಬಾರಿ ಸಂಕಷ್ಟ ಎದಿರಿಸಿದ್ದ ಕಾಡನ್ನು ಉಳಿಸಿದರು.
ರಾಜಕಾರಣಿಗಳ ಒಳ್ಳೆಯ ಕಾರ್ಯಗಳನ್ನು ಹೊಗಳುತ್ತಿದ್ದರೂ ಅವರು ಹಾದಿ ಬಿಟ್ಟಾಗ ಮೂಗು ಹಿಡಿಯುತ್ತಿದ್ದರು.
ಹೊಗಳಿಕೆಯಷ್ಟೇ, ಟೀಕೆಯೂ ಉಗ್ರವಾಗಿರುತ್ತಿತ್ತು.

ಅವರ ನೇರ ಮಾತುಗಳಲಿ ಜನಪರ ಕಾಳಜಿ ಲಾಸ್ಯವಾಡುತ್ತಿತ್ತು, ಅವ್ವನ ಮಮತೆ ತುಂಬಿರುತ್ತಿತ್ತು.
ಒಮ್ಮೆ ಹೊಗಳಿಸಿಕೊಂಡವರು ತಪ್ಪು ಮಾಡಿದರೇ ಅಷ್ಟೇ ನಿರ್ದಾಕ್ಷಿಣ್ಯವಾಗಿ ಟೀಕೆ ಮಾಡಿ ಎಚ್ಚರಿಸುತ್ತಿದ್ದರು.

ಕಟ್ಟಾ ಬ್ರಹ್ಮಚರ್ಯ ಪೂಜ್ಯರ ನೈತಿಕ ಶಕ್ತಿಯಾಗಿತ್ತು. ಕಾಮ ನಿಗ್ರಹಕೆ ಕಾಯಕವೊಂದೇ ಸಾಕು ಎಂದು ಘಂಟಾಘೋಷವಾಗಿ ಹೇಳುವ ತಾಕತ್ತು ಅವರಿಗಿತ್ತು.
ನಿರಂತರ ಜನರ ಕಷ್ಟ ಸುಖ ಆಲಿಸುವ ತಾಳ್ಮೆಯೂ ಇವರ ಹೆಚ್ಚುಗಾರಿಕೆ.
ಆಧುನಿಕ ಮಠಗಳ ಐಷಾರಾಮಿ ಸಂಸ್ಕೃತಿಗೆ ತೋಂಟದಾರ್ಯ ಮಠದಲ್ಲಿ ಅವಕಾಶವಿರಲಿಲ್ಲ. ಇಲ್ಲಿ ಎಲ್ಲರೂ ಸರಿ ಸಮಾನ.
ಐಷಾರಾಮಿ ಜೀವನ ಶೈಲಿ ನಿರಾಕರಿಸಿ ಕೊನೆ ತನಕ ಸಾಮಾನ್ಯರೊಡನೆ, ಸಾಮಾನ್ಯರಂತೆ ಬಾಳಿದರು.

ದೇಸಿಯ ಖಡಕ್ ಮಾತು, ಆಳ ಅಧ್ಯಯನ, ಅಪಾರ ಸಾಮಾನ್ಯ ಜ್ಞಾನ ಹೊಂದಿದ್ದ ಪೂಜ್ಯರು ಲಕ್ಷಾಂತರ ಭಕ್ತರ ನೇರ ಸಂಪರ್ಕ ಹೊಂದಿದ್ದರು. ಅವರ ಕಷ್ಟ ಸುಖ ಖುದ್ದಾಗಿ ವಿಚಾರಿಸುವ ಮಾನವೀಯತೆ ಅವರಲ್ಲಿತ್ತು.

ಡಾ.ಕಲಬುರ್ಗಿಯವರ ಹತ್ಯೆಯ ನಂತರ ವ್ಯವಸ್ಥೆ ಕ್ರೂರತನಕೆ ನೊಂದುಕೊಂಡರು.
ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದ ಸಂದರ್ಭದಲ್ಲಿ ಬಹಿರಂಗ ಬೆಂಬಲಕೆ ನಿಂತು ತಾತ್ವಿಕ ಸಂಗತಿಗಳ ಸರಕಾರದ ಗಮನಕ್ಕೆ ತಂದರು. ಹೋರಾಟ ಕಾವೇರಲು ಬೆನ್ನೆಲುಬಾಗಿ ನಿಂತರು. 

ಹೀಗೆ ನಿರಂತರ ಓದು, ಓಡಾಟ, ಚಳುವಳಿ, ಪ್ರಖರ ಮಾತುಗಳ ಮೂಲಕ ಮಲಗಿದ ರಣ ಹೇಡಿ ಮನಸುಗಳ  ಎಚ್ಚರಿಸುತ್ತಲೇ ಇದ್ದರು.

ನಿನ್ನೆ ರಾತ್ರಿಯೂ ಎಂದಿನಂತೆ ವಿಜಯದಶಮಿ ಸಾರ್ವಜನಿಕ ಕಾರ್ಯಕ್ರಮದಲಿ ಭಾಗವಹಿಸಿ ಕೊನೆಯ ಆಶಿರ್ವಚನ ನೀಡಿದರು.
ಕನ್ನಡ ಪ್ರಗತಿಪರ ಮನಸುಗಳ ಅನಾಥ ಮಾಡಿ,
ಯಾರಿಗೂ ಸಾವಿನ ಸುಳಿವು ನೀಡದೇ ಮೌನವಾಗಿ ಹೊರಟೇ ಬಿಟ್ಟರು.

*ಸಿದ್ದು ಯಾಪಲಪರವಿ*

ಹೋರಾಟಕೀಗ

*#metoo ಹೋರಾಟಕೀಗ ಎಡ-ಬಲ ರೋಗ*

ನಮ್ಮ ಸಮಾಜದ ಒಳನೋಟದಲಿ, ಆಲೋಚನಾ ಕ್ರಮದಲ್ಲಿ ಸೈದ್ಧಾಂತಿಕ ವಾಸನೆ ಹೊಡೆಯುತ್ತಲೇ ಇರುತ್ತದೆ.
ಎಡ-ಬಲ, ಮೇಲು-ಕೀಳು, ಗಂಡು-ಹೆಣ್ಣು, ಕಪ್ಪು-ಬಿಳಿ,ಬಡವ-ಬಲ್ಲಿದ…
ಹೀಗೆ ತರತಮದ ಪೆಟ್ಟಿಗೆ ಎಲ್ಲ ಹೋರಾಟಗಳು ನಲುಗಿ ಹೋಗುತ್ತವೆ.

ಅಮೇರಿಕಾ ಮೂಲದ ಚಳುವಳಿ metoo ಭಾರತಕ್ಕೆ ಕಾಲಿಟ್ಟ ಕೂಡಲೇ ರಾಜಕಾರಣ ಶುರುವಾಯಿತು.
ನಮ್ಮದು ಮೊದಲೇ ಮಡಿವಂತ ದೇಶ. ಚಾರಿತ್ರ್ಯಹರಣವೆಂಬ ಅಸ್ತ್ರ ಹಿಡಿದು ಮಾನ ಹರಾಜು ಹಾಕುವ ಕುತಂತ್ರ ಮನಸ್ಥಿತಿ.
ಒಬ್ಬ ವ್ಯಕ್ತಿಯನ್ನು ಭ್ರಷ್ಟಾಚಾರ ಆರೋಪದ ಮೇಲೆ ಅಧಿಕಾರದಿಂದ ಕೆಳಗಿಳಿಸಲು ನೈತಿಕ ಹೊಣೆಗಾರಿಕೆಯೆಂಬ ಎಂಬ ಪದ ಬಳಕೆ ಚಾಲ್ತಿಯಲ್ಲಿತ್ತು.

ಆದರೀಗ ಭ್ರಷ್ಟಾಚಾರ ದೊಡ್ಡ ಸಂಗತಿಯಾಗಿ ಉಳಿಯಲಿಲ್ಲ. ಸಾರ್ವಜನಿಕ ಬದುಕಿನಲ್ಲಿ ಬೆಳೆಯಬೇಕಾದರೆ ಹಣದ ಚಲ್ಲಾಟ ಅನಿವಾರ್ಯವೆಂಬ ವಾತಾವರಣ.

ಈಗ ಕಡೆಯ ಅಸ್ತ್ರವಾಗಿ ಚಾರಿತ್ರ್ಯ ಹರಣದ ಸೆಕ್ಸ್ ಸ್ಕ್ಯಾಂಡಲ್ ತೀವ್ರ ಚಾಲ್ತಿಯಲ್ಲಿದೆ.
ಸೆಲಿಬ್ರಿಟಿಗಳ ಮುಖಕ್ಕೆ ಮಸಿ ಬಳಿಯಲು ಅದೇ ರಂಗದಲ್ಲಿ  ಪೈಪೋಟಿಯಲ್ಲಿರುವ ಇನ್ನೊಬ್ಬ ಪ್ರಯತ್ನಿಸುತ್ತಿರುತ್ತಾನೆ.
Professional jealous ಎಂಬ ರೋಗ ಇಂದಿಗೂ ವಾಸಿಯಾಗಿಲ್ಲ, ಆಗುವುದೂ ಇಲ್ಲ.

ಸ್ಟಾರಡಮ್ ದುನಿಯಾಗಳಾದ ಸಿನೆಮಾ, ಕ್ರೀಡೆ, ರಾಜಕಾರಣ, ಅಕ್ಯಾಡೆಮಿಕ್, ಪತ್ರಿಕೋದ್ಯಮದಂತಹ ಬಹು ಚರ್ಚಿತ ರಂಗಗಳಲ್ಲಿ ಹಣದೊಂದಿಗೆ ಪ್ರತಿಷ್ಟೆಯ ರುದ್ರನರ್ತನ.

ಪೈಪೋಟಿಯ ನೆಪದಲ್ಲಿ ಪರಸ್ಪರ ಮುಖಕ್ಕೆ ಮಸಿ ಬಳಿಯುವ ಹುಮ್ಮಸ್ಸಿನಲ್ಲಿ ಎಲ್ಲರ ಮಾನ ಹರಾಜು.
ಮಹಾಭಾರತ ಓದಿ ಬೆಳೆದವರು ನಾವು. ಧರ್ಮ,ಅಧರ್ಮಗಳ ತಾಕಲಾಟದಲ್ಲಿದ್ದುಕೊಂಡೆ ಅಧರ್ಮೀಯ ಒಲುಮೆ.

ನಮ್ಮ ಪಾಡಿಗೆ ನಾವು ನಮ್ಮ ಮನೆಯಲ್ಲಿದ್ದರೆ ಮಾನಾಪಮಾನದ ಮಾತೇ ಇರೋಲ್ಲ.
ಆದರೆ ಪ್ರತಿಯೊಂದು ಜೀವಕಿರುವ ಜನಪ್ರಿಯತೆಯ ತುಡಿತ, ಸಾರ್ವಜನಿಕ ಜೀವನದ ಸೆಳೆತ, ಹಣ,ಕೀರ್ತಿಯ ಹುಚ್ಚು ತಪ್ಪಲ್ಲ ಅನಿಸಿ ಅದು ಉಲ್ಬಣಗೊಂಡಾಗ ರೋಗವಾಗಿ ಸಮಾಜದ ಆರೋಗ್ಯ ಹಾಳಾಗುತ್ತೆ.

ದ್ರೌಪದಿಯ ಕುಹಕ ನಗು ದುರ್ಯೋಧನನ್ನು ಅವಮಾನಿಸಿತು. ವಸ್ತ್ರಾಪಹರಣದ ಮೂಲಕ ಸೇಡು ತೀರಿಸಿಕೊಳ್ಳುವ ದ್ವೇಶದಿಂದ ಕುರುಕ್ಷೇತ್ರ ಕಾಳಗ ನಡೆಯಿತು.

ಅಲ್ಲೂ ಅದೇ ಹೆಣ್ಣು ಕೇಂದ್ರಿತ ಯುದ್ಧ, ಹೆಣ್ಣಿಗಾಗಿ ಹೊಡೆದಾಟವೆಂಬ ಮರು ವ್ಯಾಖ್ಯಾನ.
ಆಧುನಿಕ ದಿನಮಾಗಳಲ್ಲೂ ಅದೇ ಸ್ತ್ರೀ ಕೇಂದ್ರಿತ ರಾಮಾಯಣ, ಮಹಾಭಾರತ.

ದ್ರೌಪದಿಯರ ಮಾನಾಪಹರಣ‌ ಭಿನ್ನ ರೀತಿಯಲ್ಲಿ.
ಏನೋ ಗಳಿಸುವ ಭರದಲ್ಲಿ ಮತ್ತೇನನ್ನೊ ಕಳೆದುಕೊಳ್ಳುವುದೇ ಹೆಚ್ಚು.

ಈಗ ಮತ್ತದರ ಪುನರ್ ಸೃಷ್ಟಗೆ #metoo ಬಳಕೆ, ಸೆಲಿಬ್ರಟಿಗಳ ಮಾನ ಅಲ್ಲ ಹೆಸರು ಕೆಡಿಸಲು.
ಇಷ್ಟು ದಿನ ಗಂಡು ಹೆಣ್ಣಿನ ಮಿತಿಯಲ್ಲಿ ಓಡಾಡುತ್ತಿದ್ದ ಚಳುವಳಿ ಬಹುಬೇಗ ರಾಜಕಾರಣದ ಸ್ವರೂಪ ಪಡೆದುಕೊಂಡಿದೆ.
ಈ ಹೋರಾಟಕ್ಕೆ ಎಡಪರ,ಬಲಪರ ಸಿದ್ಧಾಂತಗಳ ಮಾನದಂಡದ ಅಗತ್ಯವಿರಲಿಲ್ಲ.

ಗಂಡು-ಹೆಣ್ಣು ತುಂಬಾ ಹತ್ತಿರವಾಗಿ ಮೈಮನಗಳ ಸಾಮಿಪ್ಯದ ಸುಳಿಗೆ ಸಿಗುವ ಅವಕಾಶ ಸಿನೆಮಾ ರಂಗದಲ್ಲಿ ಎಲ್ಲಕ್ಕಿಂತ ಹೆಚ್ಚು. ಮಾನಸಿಕವಾಗಿ ಹತ್ತಿರವಾಗಿ ಭಾವನೆಗಳ ಹಂಚಿಕೊಳ್ಳುವ ಮೂಲಕ ಮನಸಿನೊಂದಿಗೆ ಮೈ ಕೂಡ ಕರಗಿ ಹೋಗುವುದು ಅಸಹಜವಲ್ಲ. ಇದು ಸೃಷ್ಟಿ ಸಮ್ಮತ ಕೂಡುವಿಕೆ, ಹಾದರದ ಬಣ್ಣ ಬಳಿಯಲಾಗದು, ಬಳಿಯಬಾರದು ಕೂಡ.

ಪರಸ್ಪರ ಆಸಕ್ತಿ, ಸೆಳೆತ, ಸ್ನೇಹವೂ ಇಲ್ಲದಾಗ ಮೀಟೂ ಅನಿಸುವುದು ಸಹಜ. ತಿರಸ್ಕರಿಸಿದ ಕೂಡಲೇ ಸೂಕ್ಮವಾಗಿ ಅರ್ಥಮಾಡಿಕೊಂಡು ದೂರ ಸರಿಯುವುದು ಜಾಣತನ.
ಮನದೊಳಗಿನ ತುಮುಲ, ವಿಕಾರ ಆಸೆಗಳು ದೊಡ್ಡವರೆನಿಕೊಂಡು ಬೆಳೆದವರಿಗೆ ಅಷ್ಟೇ ದೊಡ್ಡದಾಗಿ ಜೀವ ಹಿಂಡುತ್ತವೆ.
ನಿರ್ಲಜ್ಯ ಮನಸು, ಹಣ, ಖ್ಯಾತಿಯ ಮದದಿಂದಾಗಿ ಪಿತ್ತ ನೆತ್ತಿಗೇರಿರುತ್ತದೆ.

ಅಮೇರಿಕ ಹಾಗೂ ಯುರೋಪಿಯನ್ ಸಂಸ್ಕೃತಿಗಳ ಬದುಕನ್ನು ನೋಡಿ, ಕೇಳಿದ ಮೇಲೂ ಹೀಗೆ ನಡೆದುಕೊಳ್ಳುವದು ಎಷ್ಟೊಂದು ಸಮಂಜಸ.
ಮುಕ್ತ ಲೈಂಗಿಕ ವಾತಾವರಣದ ದೇಶಗಳಲ್ಲಿ ಜನ ಸಾಮಿಪ್ಯ ಬಯಸಿ propose ಮಾಡುತ್ತಾರೆ, reject ಮಾಡಿದಾಗ ಸಹಜವಾಗಿದ್ದುಬಿಡುತ್ತಾರೆ. ಪ್ರತಿಭಟಿಸುವ ಮಟ್ಟಕ್ಕೆ ಇಳಿಯುವುದಿಲ್ಲ.

ಮನಸಿನ ಕಹಿಯ ಮರೆತು ಸ್ನೇಹಿತರಾಗಿ ನಂಜಿಲ್ಲದೆ ಬೆರೆಯುವ ಮುಕ್ತ ವಾತಾವರಣದ ಅಗತ್ಯವಿದೆ.
*ಪರಸ್ಪರ* ಎಂಬ ಅನುಸಂಧಾನ ಅರಿಯದವರಂತೆ ನಡೆದುಕೊಂಡಾಗ ಇನ್ನಿಲ್ಲದ ರಾದ್ಧಾಂತ.
ಅನೇಕ ಕಾರಣಗಳ ಮೇಲೆ ವಿದೇಶ ಸುತ್ತುವ ಈ ಸೆಲಿಬ್ರಿಟಿಗಳಿಗೆ ಇಂತಹ ಸೂಕ್ಷ್ಮ ಸಂಗತಿಗಳು ಯಾಕೆ ಅರ್ಥವಾಗುವುದಿಲ್ಲ.

ಅಂತಹ ಮುಜುಗರದ ಪ್ರಸಂಗ ಎದುರಾದಾಗ ತಕ್ಷಣ ನಿರಾಕರಿಸದೇ ಸಹಿಸಿಕೊಂಡು ಕೆಲಸ ಮುಗಿದ ತುಂಬಾ ದಿನಗಳ ನಂತರ ಬೀದಿ ರಂಪ ಮಾಡುವುದು ಕೂಡ ಅಷ್ಟೇ ಅಪ್ರಬುದ್ಧ ನಡೆ.

ಊಟ,ನಿದ್ರೆ,ನೀರಿನಷ್ಟು ಸಹಜವಿರಬೇಕಾದ ಕಾಮದ ವೈಭವೀಕರಣ ನಮ್ಮ ದೌರ್ಬಲ್ಯ.
ನಾನು, ನೀವು ಯಾರು ಇದಕೆ ಹೊರತಾಗಲಿಲ್ಲವಲ್ಲ ಎಂಬ ಬೇಸರ, ಒಳಗೊಳಗೆ. ನಮ್ಮೊಳಗೆ.
ಇವರು ಯಾವುದೋ ರಾಜಕೀಯ ಪಕ್ಷಕ್ಕೆ ಬೆಂಬಲಿಸಿದ್ದಾರೆ ಎಂಬ ಕಾರಣಕ್ಕೆ ಮೀಟೂ ವಿಷಯವನ್ನು ಇದರ ವ್ಯಾಪ್ತಿಗೆ ಸೇರಿಸುವುದು ಅಸಂಗತ, ಅಪ್ರಸ್ತುತ. 

“ನಟ ಕ್ಷಮೆ ಕೇಳಬೇಕು” ಎಂದು ಇನ್ನೊಂದು ಗುಂಪು ಹೇಳುವ ಮೂಲಕ ಪ್ರಕರಣಕ್ಕೆ ರಾಜಕೀಯ ವಾಸನೆ ಬಡಿದುಕೊಂಡಿತಲ್ಲ ಎಂಬ ವಿಷಾದ.

*ಸಿದ್ದು ಯಾಪಲಪರವಿ*‌

Thursday, October 18, 2018

ನೀ ನಾನಾದ ಸಮ ಭೋಗ

*ನೀ ನಾನಾದ ಸಮ ಭೋಗ*

ಬಿಸಿಯುಸಿರು ಕಂಪನದಿ ಕಿತ್ತಿ

ಬಂದ ಬೆವರ ಹನಿಗಳ ಪರಿಮಳದಿ

ಮೈಮನಗಳ‌ ಮರೆತು ಕರಗಿ

ಬಿಗಿದಪ್ಪಿ ಸುರಿಸಿದ ಮುತ್ತ

ಮಳೆಯ ಮತ್ತಲಿ ನೀ

ಒತ್ತರಿಸಿ ಹರಿದ ಒಲವ

ಧಾತುವಿಗೆ ಅರಳಿ ಅರಗಿಸಿ

ಕೊಂಡ ಭೂರಮೆ

ಸಾಮಿಪ್ಯದ ಸಂಭ್ರಮಕೆ ತಿರುಗಿದ

ಹರೆ ಮರೆಯಾದ ಮುಪ್ಪು ನಿರಾಸೆ

ಈಗ ಏನಿದ್ದರೂ

ಛಳಿಯಲೂ ಬೆವರುವ ಉನ್ಮಾದ

ಮತ್ತೆ ಮತ್ತೆ ಮತ್ತೆ ಅದೇ

ಮತ್ತಿನ ಗಮ್ಮತ್ತಲಿ ಕತ್ತಲೆಯಲಿ

ಹೊಳೆಯುವ ಮೈಕಾಂತಿಯಲಿ

ಜಿನುಗುವ ಜೇನ ಹನಿ

ನೆಕ್ಕಲು ಸಾವಿರದ ನಾಲಿಗೆಗಳ

ತುಡಿತ ಸರ ಸರನೆ ಹರಿದಾಡಿ

ಬುಸುಗುಟ್ಟುವ ರಭಸಕೆ ಚಿಮ್ಮುವ

ಪ್ರಣಯ ರಸಧಾರೆಯ ಮಿಂಚಿನ

ಆರ್ಭಟಕೆ ಸೋಲದ ಮನ

ಗೆದ್ದ ತನುವಿಗೆ ಅಮೃತ ಸಿಂಚನ

ಮನದ ಮದನ ಮುಲುಗಿ ಮೌನ

ವಾದಾಗ ಬೆಳಕು ಹರಿದಿತ್ತು

ಒಡಲು ತುಂಬಿತ್ತು ಬತ್ತದ ಜೀವ

ಧಾತುವಿನ ಸವಿ ಸಮ ಭೋಗದಲಿ.

 *ಸಿದ್ದು ಯಾಪಲಪರವಿ*

ನೂರು ಕಲ್ಲು ಒಂದು ಹಣ್ಣು

*ನೂರು ಕಲ್ಲಿಗೆ ಒಂದು ಹಣ್ಣು ಮರಳಿ ಯತ್ನ*

ಬೇಕಾದ್ದು ಒಂದೇ ಹಣ್ಣು ಆದರೆ ಒಗೆಯುವುದು ನೂರು ಕಲ್ಲು. ಮನಸು ಬೇಕಿದ್ದನ್ನು ಪಡೆಯಲು ಮರಳಿ ಯತ್ನವ ಮಾಡುತ್ತದೆ.

ನೋಡಿದವರಿಗೆ ಹಣ್ಣು ತಿನ್ನುವುದು ಮಾತ್ರ ಕಾಣಿಸುತ್ತದೆ, ಒಗೆದ ಕಲ್ಲುಗಳಿಗೆ ಲೆಕ್ಕವೇ ಇಲ್ಲ.

ಈ ಬದುಕು ದೊಡ್ಡ ಮರ ನಮಗೆ ನೂರೆಂಟು ಆಸೆಗಳು .

ಅಲ್ಲಿರುವ ಎಲ್ಲದೂ ಬೇಕೆಂಬ ಹಟ ಆದರೆ ಮರ ಹತ್ತುವ ಧೈರ್ಯ , ತಾಕತ್ತಿಲ್ಲ . ಕೊನೆಗೆ ಹಣ್ಣು ತಿನ್ನುವ ಚಪಲ. ಒಂದಲ್ಲ ನೂರು !

ಹಾಗಾದರೆ ಪ್ರಯತ್ನಿಸಲೇಬೇಕಲ್ಲ , ಸಕಾರಾತ್ಮಕ ಪ್ರಯತ್ನವೇ ಒಗೆಯುವ ಕಲ್ಲು.

ಆಸೆಗಳು ತಪ್ಪಲ್ಲ , ಪ್ರಯತ್ನಿಸದೇ ಪಡೆಯಬೇಕೆಂಬುದು ಮಹಾ ಅಪರಾಧ.

ರುಚಿಯಾದ ಹಣ್ಣು ನೆಲಕ್ಕೆ ಬೀಳುವ ತನಕ ಕಲ್ಲು ಬೀಸುತ್ತಲೇ ಇರಬೇಕು. ಮರಳಿ ಯತ್ನವ ಮಾಡು ಎಂಬಂತೆ .

ಒಮ್ಮೆ ಹಣ್ಣಿನ ರುಚಿ ನೋಡಿದರೆ ಸಾಕು ಮರ ಹತ್ತಲು ಉತ್ಸಾಹ ಇಮ್ಮಡಿಸುತ್ತದೆ.

ಮೇಲೆರುವ ಉತ್ಸಾಹ ಇಟ್ಟುಕೊಂಡು ನಮ್ಮ ಪ್ರಯತ್ನ ಮುಂದುವರೆಸಬೇಕು.

ನಮ್ಮ ಕೆಲವು ಗುರಿಗಳನ್ನು ಖಾಸಗಿಯಾಗಿ ಮತ್ತೆ ಕೆಲವುಗಳನ್ನು ಸಾರ್ವಜನಿಕವಾಗಿ commit ಆಗಬೇಕು.

ಹಿಡಿದ ಗುರಿ ತಲುಪದೇ ಹೋದರೆ ಆಡಿಕೊಂಡಾರು ಎಂಬ ನೈತಿಕ ಅಳುಕು ಇರುತ್ತದೆ.

ಬೃಹತ್ ಆಸೆ ಹಾಗೂ ಗುರಿಗಳನ್ನು ಸಾರ್ವಜನಿಕವಾಗಿ ಹೇಳಿದರೆ ಕಾಲೆಳೆದಾರು ಎಂಬ ಸಣ್ಣ ಎಚ್ಚರಿಕೆಯೂ ಇರಲಿ.

ಯಾವುದು ಖಾಸಗಿ , ಯಾವುದು ಪಬ್ಲಿಕ್ ಎಂಬ ಸಾಮಾನ್ಯ ತಿಳುವಳಿಕೆ ಮೂಲಕ balance ಮಾಡಬೇಕು.

ಆದರೆ ಯಾವುದೇ ಕಾರಣಕ್ಕೂ ನಮ್ಮ ಪ್ರಯತ್ನ ಬಿಡಬಾರದು. ನೂರನೇ ಕಲ್ಲಿಗಾದರೂ ಹಣ್ಣು ಬಿದ್ದೀತು.

*Don't stop trying*

( Joyful living in personal and professional life )

---ಸಿದ್ದು ಯಾಪಲಪರವಿ

Tuesday, October 16, 2018

Ghost writing

*Ghost writing, ಬೇರೆಯವರ ಕೆಲಸಗಳು ಇತ್ಯಾದಿ*

ನಮ್ಮಲ್ಲಿ ಏನೋ ಒಂದು ಪ್ರತಿಭೆ ಇರುತ್ತದೆ , ಅದಕ್ಕನುಗುಣವಾಗಿ ಬೇರೆಯವರು ನಮ್ಮಿಂದ ಆ ಕೆಲಸ ತಮಗಾಗಿ ನಿರೀಕ್ಷಿಸುತ್ತಾರೆ.

ಬೇರೆಯವರಿಗಾಗಿ ನಾವು ಪೂರೈಸುವ ಕೆಲಸ ghost ಅನಿಸುತ್ತೆ.

ಬೇರೆಯವರ ಹೆಸರಿನಲ್ಲಿ ನಾವು ಬರೆಯುವುದು , ನಮ್ಮ ಹೆಸರಿನಲ್ಲಿ ಬೇರೇಯವರು ಬರೆಯುವದಕ್ಕೆ ghost writing ಅಂತಾರೆ , once we write , we lose our right.

ಮುಂದೆ ಈ ಪರಿಕಲ್ಪನೆ ಎಷ್ಟು ದೊಡ್ಡದಾಯಿತೆಂದರೆ , ಬೇರೆಯವರಿಗಾಗಿ ಹಡೆದು ಕೊಟ್ಟು surrogate mother ಆಗುವ ಕಾಲ ಬಂತು ನೋಡಿ !!

ಬರೆಯಲಾಗದವರು ಬೇರೆಯವರಿಂದ ಬರೆಸಿಕೊಂಡರೆ okey , ಬೇರೆಯವರು ನಮಗಾಗಿ ಹಡೆಯುವದೆಂದರೆ ?
ಅಬ್ಬಾ , ಅಬ್ಬಬ್ಬಾ ಅನಬೇಡಿ.

ಎಲ್ಲವೂ ಕಾಲನ ಮಹಿಮೆ , ಉಳ್ಳವರ ಗಮ್ಮತ್ತು ಬಿಡಿ.
ಹಾಗಾದರೆ ನಾವು ಈ ಕೆಲಸ ಯಾಕೆ ಮಾಡಬೇಕು , ನಮ್ಮ ಹಕ್ಕು ಹಾಗೂ ಅಸ್ತಿತ್ವ ಕಳೆದುಕೊಂಡು ಬಿಡುತ್ತೇವೆ ಎಂಬ ಆತಂಕದ ಮಧ್ಯೆ ಈ risk ತೆಗೆದುಕೊಳ್ಳುತ್ತೇವೆ.

ಕೆಲವು ಗೆಳೆಯರು request ಮಾಡಿಕೊಂಡಾಗ , ಕವಿ ಗೋಷ್ಟಿಗೆ ಹೊರಟು ನಿಂತಾಗ instant ಕವಿತೆ ಬರೆದುಕೊಟ್ಟಿದ್ದೇನೆ .
ಅದು ತುಂಬಾ ಹೊಗಳಿಸಿಕೊಂಡ ಗೆಳೆಯ ತಬ್ಬಿಬ್ಬು , ನಾನು ಅನಾಥ !

ಪ್ರೀತಿ , ವಿಶ್ವಾಸಕ್ಕೆ ಕಟ್ಟು ಬಿದ್ದು ಬರೆದ ನೂರಾರು ಭಾಷಣಗಳಿಗೆ ಲೆಕ್ಕವೇ ಇಲ್ಲ ಬಿಡಿ !!

ನಾನೇ ಬರೆದು ಪ್ರಕಟಿಸಿದ್ದರೆ ಹತ್ತಾರು ಪುಸ್ತಕಗಳು ಬರುವುದರೊಂದಿಗೆ ಹೆಸರೂ ಬರುತ್ತಿತ್ತು ಎಂಬುದು ಹಿತೈಷಿಗಳ ಅಂಬೋಣ , But I have no regret , I have become perfect in my writing.

ಬೇರೆಯವರಿಗಾಗಿ ಕೆಲಸ ಮಾಡಿದೆ ಅವರು ಯಾರಿಗೂ ಹೇಳಲಿಲ್ಲ ಎಂಬ ತಳಮಳ ಈಗ ನಿಂತಿದೆ ಯಾಕೆಂದರೆ ಇದು ಮನಸಾಕ್ಷಿಯ ಮಾತು , ಪಡೆದವರಿಗೆ , ಕೊಟ್ಟವರಿಗೆ ಮಾತ್ರ ಗೊತ್ತು *ಗುಟ್ಟಾಗಿ ನಡೆಯುವ ಸರಸ ಸಲ್ಲಾಪದ* ಹಾಗೆ .

ನಾವು ಬೇರೆಯವರಿಗಾಗಿ ಮಾಡುವ ಕೆಲಸಗಳನ್ನು ಬಿಡಬಾರದು , ನಮಗೆ ಸಿಗಬಹುದಾದ ಮನ್ನಣೆ ಸಿಗುವಾಗ ಸಿಕ್ಕೇ ಸಿಗುತ್ತದೆ.

*ನೀನು ತುಂಬಾ ಹಿಂದೆ ಬರೆದು ಪಡೆಯಬಹುದಾದ ಮನ್ನಣೆ ಪಡೆಯಬೇಕಿತ್ತು*  '

' You are too late ' ಎಂಬ ಸ್ನೇಹಿತರ ತಕರಾರನ್ನು ನಸುನಗುತ ಸ್ವೀಕರಿಸಿದ್ದೇನೆ.

ಈಗ ನನ್ನ ಖುಷಿಗಾಗಿ  *ಕಾವ್ಯ* ದ ಹಾದಿ ಹಿಡಿದಿದ್ದೇನೆ.

ಕಹಿ-ಸಿಹಿ ಅನುಭವಗಳ ಮೇಲೆ *ಮನದ ಮಾತು* ನಾನೂರರ ಗಡಿ ದಾಟಿವೆ.

ವ್ಯಕ್ತಿತ್ವ ವಿಕಸನ ಮಾಲಿಕೆಯ *Joyful* ಪುಟ್ಟ ಲೇಖನಗಳು ಸಾಗಿವೆ.

*ಕಥೆಗಳು* ಕೈ ಹಿಡಿದು ಮುಂದೆ ಹೊರಟಿವೆ.

*ಸಾಮಾಜಿಕ ಜಾಲತಾಣ* ನನಗಂತೂ ವರ , ಶಾಪವಲ್ಲ.
ಸಾವಿರಾರು ಮನಸುಗಳ ಸುಮಧುರ ಸಾಂಗತ್ಯ *ಭ್ರಮೆಯಲ್ಲ* .

ಬ್ಲಾಗ್ , ಮುಖ ಪುಸ್ತಕಗಳ ಮೂಲಕ ಬರೆದ ಸಾವಿರಾರು ಶಬ್ದಗಳು ಈಗ ನಿಶಬ್ದವಾಗಿ ಪುಸ್ತಕ ರೂಪದಲಿ ಬಂಧಿಯಾಗಲು ಶೃಂಗಾರಗೊಂಡಿವೆ.

ಹಿಂದೆ ಬರೆಯಬೇಕಿತ್ತು ಎಂಬ ಸಣ್ಣ ಅಳುಕೂ ಇಲ್ಲ , ಹಿಂದಿಗಿಂತ ಈಗ *ನನ್ನ ಬಳಗ ಬೆಳೆದಿದೆ* .

ನಾನು ghost ಆಗಿ ಹಡೆದ ಬರಹವೆಂಬ ಮಕ್ಕಳನ್ನು ಬೇರೆಯವರು ಮುದ್ದಾಗಿ ಬೆಳೆಸುತ್ತಾರೆ ಬಿಡಿ.

ಈಗ ನಾ Surrogate ಅವ್ವನಲ್ಲ,  ನಿಶ್ಚಿಂತವಾಗಿ ಈಗ ನಾನು ನನಗಾಗಿ ಹಡೆದು ಮುದ್ದಾಡುತ್ತೇನೆ : ನೀವು ಕೈಗೆತ್ತಿಕೊಂಡು ಆಡಿಸಿ ಖುಷಿಪಡುತ್ತೀರಿ ಎಂಬ ಧನ್ಯತೆ.

*ಸಿದ್ದು ಯಾಪಲಪರವಿ*

Sunday, October 14, 2018

ಆಲಿಸೋಣ

*ಸರಿಯಾಗಿ ಆಲಿಸೋಣ ಬರೀ ಕೇಳೋದಲ್ಲ*

*ಹಾಡಿದರೆ ಎನ್ನೊಡೆಯನ ಹಾಡುವೆ , ಬೇಡಿದರೆ ಎನ್ನೊಡೆಯನ ಬೇಡುವೆ*
ಬಸವಣ್ಣನ ವಚನದ ಸಾಲುಗಳು ಬೇಡುವ ಮತ್ತು ಬೇಡಿಸಿಕೊಳ್ಳುವವರ ಅನುಸಂಧಾನ. ಹೇಳುವ ಮತ್ತು ಕೇಳಿಸಿಕೊಳ್ಳುವ ಶೃದ್ಧಾಭಕ್ತಿ.

ನಾವು ಸದಾ ತುಂಬ ಪರಿಣಾಮಕಾರಿಯಾಗಿ ಮಾತನಾಡಬೇಕು , ನಮ್ಮ ಮಾತುಗಳನ್ನು ಬೇರೆಯವರು ಖುಷಿಯಿಂದ ಕೇಳಬೇಕು ಎಂದು ಬಯಸುತ್ತೇವೆ.

ಆದರೆ ನಾವು ಬೇರೆಯವರ ಮಾತುಗಳನ್ನು ಎಷ್ಟು ಸರಿಯಾಗಿ ಕೇಳುತ್ತೇವೆ ಎಂಬುದು ಅಷ್ಟೇ ಮುಖ್ಯ.

ಇಂಗ್ಲೀಶಿನಲ್ಲಿ hear-listen ಎಂಬ ಎರಡೂ ಪದಗಳು ಒಂದೇ ಅರ್ಥವನ್ನು ಕೊಟ್ಟರೂ ಭಾವಾರ್ಥ ಭಿನ್ನವಾಗಿದೆ.

ಎರಡೂ ಅರ್ಥ *ಕೇಳುವುದೇ* ಆದರೂ ಒಂದು ಸಣ್ಣ ಅಂತರ ಇದೆ.

ಬೇರೆಯವರು ಆಡುವ ಮಾತುಗಳನ್ನು ಬರೀ ಕೇಳಿಸಿಕೊಳ್ಳುವುದು *hearing* ಆದರೆ  , ಅದೇ ತುಂಬ ಶೃದ್ಧೆಯಿಂದ ಆಲಿಸುವುದು *listening* .

ನಮ್ಮ ಬದುಕಿನಲ್ಲಿ ಯಶಸ್ಸು ದೊರಕಬೇಕಾದರೆ ಎಲ್ಲಾ ಸಂಗತಿಗಳನ್ನು ಬರೀ *ಕೇಳಬಾರದು* ಗಂಭೀರವಾಗಿ ಸಂಗೀತದಂತೆ *ಆಲಿಸಬೇಕು* .

ಮಾತುಗಳನ್ನು ಬರೀ ಕೇಳಿಸಿಕೊಳ್ಳುತ್ತೇವೆ ಆದರೆ ಅದೇ ಸಂಗೀತವಾದರೆ ಆಲಿಸಿ ಸಂಭ್ರಮಿಸುತ್ತೇವೆ.

ಹಾಡುಗಳ ಮಾಧುರ್ಯ earphone ಹಾಕಿಕೊಂಡು ಕೇಳಿದಾಗ ಇನ್ನೂ ಹೆಚ್ಚು ತನ್ಮಯರಾಗಲು deep listening ಕಾರಣ.

ಮಾತುಗಳನ್ನು ಕೂಡಾ  ಗಂಭೀರವಾಗಿ ಸಂಗೀತದಂತೆ ಆಲಿಸಬೇಕು.

*Only good listener can become best speaker*

ಸರಿಯಾದ ಆಲಿಸುವಿಕೆ ಒಂದರ್ಥದ ಧ್ಯಾನಸ್ಥ ಸ್ಥಿತಿ ಅನ್ನೋದನ್ನ ಮರೆಯಬಾರದು.

ಬೇರೆಯವರು ಹೇಳುವುದನ್ನು ಗಂಭೀರವಾಗಿ ಆಲಿಸಿವುದು ಹೇಳುವವರ ಘನತೆ ಹೆಚ್ಚಿಸುತ್ತದೆ , ಅವರಿಗೂ ಖುಷಿ ಎನಿಸುತ್ತದೆ. ಇಲ್ಲದಿದ್ದರೆ ಅವರನ್ನು ಅವಮಾನಿಸಿ *listen to me*
ಎಂದು ಅರಚುವಂತಾಗುತ್ತದೆ.

ಬೇರೆಯವರು ಆಲಿಸುವಂತೆ ಮಾತನಾಡಬೇಕು , ಮನಬಿಚ್ಚಿ ಮಾತನಾಡಲು  ಹುಮ್ಮಸ್ಸು ಬರುವಂತೆ ಆಲಿಸಬೇಕು.

( Joyful living in personal and professional life )

---ಸಿದ್ದು ಯಾಪಲಪರವಿ