*ವಿವಾದಕ್ಕಾಗಿ ವಿವಾದ: ಒಂದು ವಿಷಾದ*
ಕೆಲದಿನಗಳಿಂದ ಬರೀ ಅಬ್ಬರ, ಭೀಕರ ಸದ್ದು ಗದ್ದಲ. ವೈಚಾರಿಕತೆಯ ಹೆಸರಿನ ಚರ್ಚಾ ಭರಾಟೆಯಲಿ.
ಪ್ರೊ.ಭಗವಾನ ಅವರು ಆಗಾಗ ರಾಮನ ಹೆಸರಿನಲ್ಲಿ ರಾಮಾಯಣ ಮಾಡಿಕೊಳ್ಳುತ್ತಾರೆ.
ಭಾರತ ಅನೇಕ ನಂಬಿಕೆಗಳ ತವರು, ಈ ನಂಬಿಕೆ ಅನೇಕರಿಗೆ ಮೌಢ್ಯದಂತೆ ಕಾಣಿಸುವುದು ಸಹಜ. ಅವೈಜ್ಞಾನಿಕ ನಂಬಿಕೆಗಳಿಗೆ ನಮ್ಮ ಸನಾತನ ಕತೆ, ಪುರಾಣಗಳೂ ಕಾರಣವಿರಬಹುದು ಅನ್ನಿ. ಸರಿಯೋ, ತಪ್ಪೋ ಒಟ್ನಲ್ಲಿ ಅದನ್ನು ಅನೇಕರು ಪ್ರಶ್ನೆ ಮಾಡದಂತೆ ಪಾಲಿಸುವುದು ಅವರಿಗೆ ಸಮಾಧಾನ ತಂದಿದೆ.
ಅದು ಬಹುಸಂಖ್ಯಾತರ ಭಾವನಾತ್ಮಕ ನಂಬಿಕೆಯಾದಾಗ ನಾವದನ್ನು ಸಿದ್ಧಾಂತಗಳ ಹೆಸರಿನಲ್ಲಿ ಕೆರಳಿಸುವುದು ಸರಿಯಲ್ಲ.
ಹಾಗೆ ಟೀಕಿಸುವ ಭರದಲ್ಲಿ ಹತ್ತಾರು ಮಹಾಕಾವ್ಯದ ಪಾತ್ರಗಳನ್ನು ಮನಸೋ ಇಚ್ಛೆ ಈಗ ಜಾಡಿಸಲಾಗದು.
ಒಂದು ಕಾಲದಲ್ಲಿ ಈ ತರಹದ ಒಳನೋಟ ಕುತೂಹಲ ಉಂಟು ಮಾಡಿ ಓದಿಸಿಕೊಂಡು ಹೊಗುತ್ತಿತ್ತು.
ಎಡ-ಬಲ ವಾದ ಈಗ ಕೇವಲ ಸೈದ್ದಾಂತಿಕ ಚರ್ಚೆಯಾಗಿ ಉಳಯದೇ ಹಿಂಸಾ ಸ್ವರೂಪ ಪಡೆದುಕೊಂಡಿದೆ.
ಡಾ.ಎಂ.ಎಂ.ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಅವರ ಹತ್ಯೆ ನಂತರ ಕಾಲ ಸೂಕ್ಷ್ಮವಾಗಿದೆ. ಕೊಲೆಗಾರರು ಯಾರು ಎಂಬುದು ತನಿಖೆ ಮುಗಿಯದೇ ಹೇಳಲಾಗದು.
ಒಂದರ್ಥದಲ್ಲಿ ಎಲ್ಲವೂ ಓಪನ್ ಸೀಕ್ರೇಟ್ ನಂತೆ ಇರುವಾಗ ಭಗವಾನ್ ಅವರು ಮಾಧ್ಯಮಗಳಿಗೆ ಆಹಾರವಾಗಿ ಜನರನ್ನು ಕೆರಳಿಸುವುದು ಸರಿಯಲ್ಲ.
ಅದರಲ್ಲೂ ಜನರ ನಂಬಿಕೆಗಳನ್ನು ಅಲುಗಾಡಿಸುವಾಗ ಬಳಸುವ ಪದಗಳ ಮೇಲೆ ಹಿಡಿತವಿರಬೇಕು.
ವೈಚಾರಿಕ ಸಂಘರ್ಷಕೆ ಡೆಮಾಕ್ರಸಿಯಲ್ಲಿ ಜಾಗವಿದೆಯಾದರೂ ವಾತಾವರಣ ಪೂರಕ ಇರದೇ ಇದ್ದಾಗ ಕಹಿಯಾದ ಸತ್ಯಗಳ ನಿರರ್ಗಳವಾಗಿ ಹಂಚಿಕೊಳ್ಳಲಾಗದ ಸಂದರ್ಭ ವಿಶಾದನೀಯ.
ಎಡ-ಬಲ ಚರ್ಚೆ ನಿಯತ್ತನ್ನು ಕಳೆದುಕೊಂಡಿದೆ. ಸಾಮಾಜಿಕ ಜಾಲತಾಣದ ವಿಪರೀತ ದುರ್ಬಳಕೆ, ದೃಶ್ಯ ವಾಹಿನಿಗಳ ಟಿ.ಅರ್.ಪಿ. ದಾಹಕ್ಕೆ ಜನಸಾಮಾನ್ಯರು ಬಲಿಯಾಗುತ್ತಿದ್ದಾರೆ.
ಭಗವಾನ ಅವರು ರಾಮಾಯಣ, ಮಹಾಭಾರತದ ವ್ಯಕ್ತಿಗಳನ್ನು ಕೇವಲ ಪಾತ್ರಗಳನ್ನಾಗಿ ನೋಡಿ ವಿಶ್ಲೆಷಿಸಬಹುದು. ಆದರೆ ಬಹುಪಾಲು ಜನರು ದೇವರೆಂದು ಆರಾಧಿಸುವ ಕಾರಣದಿಂದಾಗಿ ನಂಬಿಕೆಯ ಅಲುಗಾಟ ಶುರುವಾಗಿದೆ.
ಪೋಲಿಸರ ರಕ್ಷಣೆ ಪಡೆಯುವ ಅನಿವಾರ್ಯ ವಾತಾವರಣ ಸೃಷ್ಟಯಾದಾಗ ಸಹನೆ ಅನಿವಾರ್ಯವಾಗುತ್ತದೆ.
“ಲಿಂಗಾಯತರು ಸೈದ್ಧಾಂತಿಕವಾಗಿ ಹಿಂದುಗಳಲ್ಲ” ಎಂಬ ವಾಸ್ತವ ಸತ್ಯ ಹೇಳಿದ ಡಾ..ಕಲಬುರ್ಗಿ ಅವರನ್ನು ಸಹಿಸದ ವಾತಾವರಣದಲ್ಲಿ ಇಂತಹ ಕಠೋರ ಸಂಗತಿಗಳನ್ನು ಸಹಿಸಿಕೊಳ್ಳುತ್ತಾರೆಯೇ?
ಸಹಿಸದೇ ಇರುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಅಗತ್ಯವಿಲ್ಲ.
ಎಡ-ಬಲಗಳ ಗೆರೆಯನ್ನು ತೀಕ್ಷ್ಣವಾಗಿ ಎಳೆಯಲಾಗಿದೆ.
ಬಹುಸಂಖ್ಯಾತರೆಂದರೆ ದೇವರು ಎಂದು ನಂಬಿ ಆರಾಧಿಸುವ ಜನ. ಈ ಆರಾಧಕರಿಗೆ ಜಾತಿ, ಧರ್ಮ ಏನೇನೂ ಗೊತ್ತಿಲ್ಲ. ಬ್ಲೈಂಡ್ ಆಗಿ ನಂಬುತ್ತಾರೆ. ಹಾಗೆ ನಂಬದೇ ಇರುವವರಿಗೆ ವಾಸ್ತವ ಸಂಗತಿ ಗೊತ್ತಿದೆ ಎಂಬ ಭರದಲ್ಲಿ ಕಲ್ಲಿಗೆ ತಲೆ ಜಜ್ಜಿಕೊಳ್ಳಲಾಗದು. ಸಂಯಮದ ಅನಿವಾರ್ಯತೆ ಇದೆ.
ವೈಜ್ಞಾನಿಕ ಸಂಗತಿಗಳನ್ನು ಒಪ್ಪಲಾರದ ಜನರ ಸಂಖ್ಯೆ ಹೆಚ್ಚಿದ್ದಾಗ *ಬೆತ್ತಲೆ ಓಡಾಡುವವರು ಹೆಚ್ಚಾದಾಗ ಬಟ್ಟೆ ಹಾಕಿಕೊಂಡವರೇ ಅಸಹ್ಯವಾಗಿ ಕಾಣುತ್ತಾರೆ* ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಒಮ್ಮೆಲೇ ಬಟ್ಟೆಯ ಮಹತ್ವ ಹೇಳ ಹೋದರೆ ನಮ್ಮ ಬಟ್ಟೆ ಬಿಚ್ಚಿ ಒಗೆಯುತ್ತಾರೆ.
ಅತಿಯಾದ ಟೀಕೆಯಿಂದ ದಿಢೀರ್ ಸಾಮಾಜಿಕ ಬದಲಾವಣೆ ಅಸಾಧ್ಯ.
ಬುದ್ಧ, ಬಸವ,ಗಾಂಧಿ, ಅಂಬೇಡ್ಕರ್ ಹಾಗೂ ಇತರೆ ಸಾಮಾಜಿಕ ಸುಧಾರಕರು ಸತ್ಯ ಹೇಳುವ ಭರದಲ್ಲಿ ಸಾಮಾಜಿಕ ಸ್ವ್ಯಾಸ್ಥ ಕದಡಲಿಲ್ಲ.
ನಿಧಾನವಾಗಿ ಜನಜಾಗೃತಿ ಮೂಡಿಸಿದರು.
ಅವರಿಗೆ *ಪರಿವರ್ತನೆ* ಮುಖ್ಯವಾಗಿತ್ತು *ಪ್ರಚಾರ* ಅಲ್ಲ.
ಈಗಿನ ಇಸಂ ಗಳಿಗೆ ಬೇಕಾಗಿರುವುದು ಕೇವಲ ಪ್ರಚಾರ ಬದಲಾವಣೆ ಅಲ್ಲ.
ಅಬ್ಬರದ ಕೀಳು ಪ್ರಚಾರ ಬಿಟ್ಟು ಬದಲಾವಣೆಗಾಗಿ ಕೆಲಸ ಮಾಡೋಣ.
*ಸಿದ್ದು ಯಾಪಲಪರವಿ*
No comments:
Post a Comment