Wednesday, January 4, 2017

ಸೇರಿ ಬಿಡೋಣ

ಸೇರಿ ಬಿಡೋಣ

ಹೊಸ ಗೆಳೆತನದ ಹಂಗಾಮಾ
ಯಾತರದ ಹಂಗೂ ಇಲ್ಲ

ಮುಂದೊಂದು ದಿನ ಬೀಳುವ
ಅನುಮಾನದ ಲೆಕ್ಕವಿಲ್ಲದ
ಪರಮಾನಂದದ ತುದಿಯಲಿ
ಇನ್ನಿಲ್ಲದ ತುಡಿತ

ನಿಧಾನದಿ ಕಳಚಿ ಬೀಳಲಿವೆ
ಅಡೆತಡೆಗಳು ಹೊಸ ಬೆಸುಗೆಯ
ಸೊಗಸಲಿ

ಮಾತು-ಕತೆಗಳ ಮಿಲನ
ಭಾವಚಿತ್ತಾರಗಳ ವಿನಿಮಯದ
ತಂಗಾಳಿ ಒಮ್ಮೆ ನಿಧಾನದಿ
ಮಗದೊಮ್ಮೆ ಜೋರಾಗಿ
ಸೆರಗು
ಜಾರಿದರ ಪರಿವಿಲ್ಲ
ಎದೆಯ ಏರಿಳಿತ ಹೊರಗೂ
ಒಳಗೂ ನಿಂತಿಲ್ಲ

ಹೊಸ ಗೆಳೆತನದ ಹಂಗಾಮಾ
ಎಂದರೆ ಇದೆ ಎಂದು
ಗೊತ್ತಿರಲಿಲ್ಲ

ಕೊರೆಯುವ ಛಳಿಯಲಿ
ಮೈಮನಗಳ ಬೆಚ್ಚಗಿಡಲು ಬರೀ
ನೆನಪೇ ಸಾಕು
ಇನ್ನು ನೀ ಸಿಕ್ಕರೇ ?!

ಪ್ರಶ್ನೆ -ಉತ್ತರಗಳ ನಿಟ್ಟುಸಿರ
ನಿಟ್ಟನೇರಿ ನಿನ್ನ ಸೇರುವ
ನಿತ್ಯ ಜಪ

ಒಮ್ಮೆ ಸಿಕ್ಕು ಪರಸ್ಪರ ಹಿಂಡಿ
ಹಿಪ್ಪೆಯಾಗಿ ಕಬ್ಬಿನ ಜೇನ ಸುರಿಸಿ
ಸವಿಯೋಣ

ಇನ್ನು ಕಾಲ ತಳ್ಳಿದರೆ ಕಾಲ
ನಮಗಾಗಿ ಕಾಯುವುದಿಲ್ಲ

ಮನಸಿನ ವಿಶಾಲದ ಹರವು
ದೇಹಕೆ ಇಲ್ಲವಲ್ಲ
ಬಾಗಿ ಮುದುಡಿ ಮುಪ್ಪಾಗುವ
ಜೋಲಿಗೆ ನಿಮಿರುವ ಗತ್ತು
ಮುಗಿಯುವ ಮುನ್ನ
ಒಮ್ಮೆ ಸೇರಿ
ಬಿಡೋಣ
ಉಸಿರು

ಉಸಿರು
ನಿಲುವ ಮುನ್ನ...

-----ಸಿದ್ದು ಯಾಪಲಪರವಿ

No comments:

Post a Comment