ಹೊಸ ವರುಷ ಹೊಸ ಹರುಷ
ಹೊಸ ವರುಷದ ಹೊಸ ಹರುಷದ
ಸಂಕ್ರಮಣದ ನೂರೆಂಟು ಸಂಕಟಗಳು
ಮಾಯವಾಗಬಹುದೆಂಬ ಭರವಸೆಯ
ಕನಸುಗಳ ಗಟ್ಟಿಗೊಳಿಸಿ ಹದವಾಗಿ
ಎಳ್ಳು ಬೆಲ್ಲವ ಬೆರೆಸಿ ಮೆಲ್ಲ ಮೆಲ್ಲನೆ
ಸವಿಯೋಣ.
ದಾರಿಗುಂಟ ತೊಡರುವ ಕಲ್ಲು ಮುಳ್ಳುಗಳ
ಮೆಲ್ಲನೆ ನೋವಾಗದಿ ದಾಟೋಣ
ಆಗುವುದೆಲ್ಲ ಒಳಿತಿಗೆ ಎಂಬ ಹಿರಿಯರ
ಭರವಸೆಯ ಜಾಡ ಹಿಡಿದು ಜೀವ ಜೀಕೋಣ
ಬಿಟ್ಟೆನೆಂದರೆ ಬಿಡದ ಮಾಯೆಯ ಬೆಂಬಿಡದೆ
ಕಾಯೋಣ ಒಳಗಣ್ಣಿಂದ
ಕೈಗೆ ಸಿಗದೆ ಅತ್ತಿತ್ತ ಓಡಾಡಿ
ನಲಿಯುತ ಸಮರಸದಿ ಬಾಳೋಣ
ನೋವಿರಲಿ ನಲಿವಿರಲಿ ನಸುನಗುತ ಬೆಚ್ಚಗೆ
ಬಿಗಿದಪ್ಪಿ ರಮಿಸಿ ಲಾಲಿ ಹಾಡೋಣ
ಓಡಿ ಹೋದರೆ ತಪ್ಪಿಸಿಕೊಳ್ಳಲಾಗದ
ಆಗುಹೋಗುಗಳ ಎಳ್ಳು -ಬೆಲ್ಲದ ತೆರದಿ
ಸವಿಯೋಣ ಸುಖಿಸೋಣ
ನೂರರಾಟದ ಬದುಕ ಪಯಣದಲಿ
ಬರುವುದೆಲ್ಲ ಬರಲಿ ಇರುವುದೆಲ್ಲ ಇರಲಿ
ಉಸಿರ ಆಟ ನಡೆಯುವವರೆಗೆ
ಸಾಗುತಿರಲಿ ಭರವಸೆಯ ನಡಿಗೆ...
---ಸಿದ್ದು ಯಾಪಲಪರವಿ
ಸಂಕ್ರಮಣದ ಶುಭಾಶಯಗಳು
No comments:
Post a Comment