ಕವಿತೆ ಹಾಗೂ ಪ್ರಾಸ
ಕವಿತೆ ಕಟ್ಟಲು ತ್ರಾಸು
ಮಾಡಿಕೊಂಡು ಪ್ರಾಸ
ಹುಡುಕಬೇಕಿಲ್ಲ
ಯಾರೀಗೂ ಹೇಳದ ನೋವು
ಅವಮಾನ , ಮುಜುಗರವಷ್ಟೇ ಸಾಕು
ಕವಿತೆ ಕಟ್ಟಲು.
ಬಾಲ್ಯದಲ್ಲಿ ನನಸಾಗದ ಕನಸುಗಳು
ಪ್ರೀತಿಸಿ ಕೈಕೊಟ್ಟ ಹುಡುಗಿ
ನಂಬಿದ ಗೆಳೆಯ ಕದ್ದು-ಮುಚ್ಚಿ
ಕುಡಿದ ಬೀರು
ಆಘಾತ ಮೂಡಿಸಿದ ಮುಷ್ಠಿ-
-ಮೈಥುನ
ನೆತ್ತಿಗೇರಿದ ಕೊರಿ ಬೀಡಿ
ಫೇಲಾಗಿ ಓಡಿ ಹೋಗಿ
ಸಾಯಲು ಒದ್ದಾಡಿದ ಹಿಂಸೆ
ಬೆಚ್ಚಿ ಬೀಳಿಸಿ ಎಚ್ಚರಾಗಿಸಿ
ಕಸಿವಿಸಿಗೊಳಿಸಿದ ಸ್ವಪ್ನ-
-ಸ್ಖಲನ.
ದೀಪಾವಳಿ ಇಸ್ಪೀಟು ಆಟದ
ನಾಕಾಣೆಯ ಗೆಲುವು
ಕಬಡ್ಡಿ ಸೋಲಲಿ ಕೆತ್ತಿದ
ಮೊಣಕಾಲು
ಕಾಲೇಜಲಿ ಮುಸಿನಕ್ಕು ಹುಸಿ
ಭರವಸೆ ಮೂಡಿಸಿ ಮಾಯವಾದ
ಮಲೆನಾಡ ಹುಡುಗಿ
ಮೀನಲಡಗಿದ ಮುಳ್ಳ ತೆಗೆದು
ತಿನಿಸಿ ಖುಷಿ ಪಟ್ಟಿ ಗೆಳೆಯ
ಮೊದಲ ಬಾರಿ ಹೊಟ್ಟೆ ಸೇರಿದ
ಮೊಟ್ಟೆ ಕೋಳಿಯ ನರ್ತನ
ಮೈಲಿಗೆಯಾದ ಲಿಂಗಾಯತ
ಹುಡುಗನ ಆಕ್ರಂದನ
ಹುಟ್ಟು ಹಬ್ಬದೂಟದಲಿ
ಬಾಯಲಿ ಕೇಕಿಟ್ಟು ಕಚಗುಳಿ
ಕೊಟ್ಟು ನೂರೆಂಟು ಕನಸ
ಬಿಟ್ಟು ಮರೆಯಾದ ಹಸಿ ಪ್ರೇಮಿ
ಹೀಗೆ ನೀ ಕವಿತೆ ಕಟ್ಟಿ ಹಾಡಲು
ಇನ್ನೇನು ಬೇಕು
ಜೀವಕ ಆಗೋ ತ್ರಾಸು ಬೇಕು
ನಿನಗ್ಯಾಕ ಬೇಕು
ಎಲ್ಲಿಲ್ಲದ ಪ್ರಾಸ
ಕವಿತೆ ಕಟ್ಟಲು.
---ಸಿದ್ದು ಯಾಪಲಪರವಿ
No comments:
Post a Comment