Tuesday, January 30, 2018

ಸಿದ್ಧೇಶ್ವರ ಸ್ವಾಮೀಜಿ ಹಾಗೂ ಪದ್ಮಶ್ರೀ

*ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಹಾಗೂ ಪದ್ಮಶ್ರೀ*

ನಿರೀಕ್ಷೆಯಂತೆ ಸಿದ್ದೇಶ್ವರ ಸ್ವಾಮೀಜಿಗಳು ಪ್ರಶಸ್ತಿ ಸ್ವೀಕರಿಸದಿರಲು ನಿರ್ಧರಿಸಿ ತಮ್ಮ ನಿಜ ವಿರಕ್ತಿ ಸಾಬೀತು ಮಾಡಿದ್ದಾರೆ.

ನುಡಿದಂತೆ ನಡೆಯುವುದು ಸರಳವಲ್ಲವೆಂದು ಗೊತ್ತಿದ್ದರೂ ಎಲ್ಲರೂ ನುಡಿಯುತ್ತಲೇ ಇದ್ದಾರೆ ನಡೆಯಲಾಗದೆ.

ಜನಸಾಮಾನ್ಯರಿಗೆ ಆಧ್ಯಾತ್ಮಿಕ ತಿರುಳನ್ನು ಗ್ರಹಿಸುವ ಮನೋಧರ್ಮ ಬೆಳೆಸಿದ ಪೂಜ್ಯರ ಸಾಧನೆ ಹಿಂದೆ ದೊಡ್ಡ ಪರಿಶ್ರಮವಿದೆ.

ವೇದಾಂತ ಸಾರವನ್ನು ಜನರಿಗೆ ತಲುಪಿಸಲು ಸನ್ಯಾಸ ಸ್ವೀಕರಿಸಿದರೂ ಕಾವಿಗೆ ಬಲಿಯಾಗದೆ ನಿಜ ಶರಣರಾದವರು.

ಇಂದು ಕಾವಿ,ಸನ್ಯಾಸ,ಧರ್ಮ ಹಾಗೂ ಲಿಂಗಾಯತತ್ವ ತುಂಬ ಗೊಂದಲಕ್ಕೆ ಬಿದ್ದಿರುವಾಗ ಕಾವಿಧಾರಿಗಳಾಗದ ಸಿದ್ದೇಶ್ವರ ಶ್ರೀಗಳು ಹೆಚ್ಚು ಪ್ರಸ್ತುತವೆನಿಸುತ್ತಾರೆ.

ಬುದ್ಧ,ಅಲ್ಲಮ,ಬಸವ,ವೇದಾಂತ,ಗೀತೆ, ಝೆನ್,ಸೂಫಿ ಹಾಗೂ ಎಲ್ಲ ಜಾಗತಿಕ ಧರ್ಮಗಳ ಸಾರವನ್ನು ಅಂಗೈಯಲ್ಲಿ ಹಿಡಿದರೂ ಬೇಕಾದವರಿಗೆ ಬೇಕಾದಷ್ಟೇ ಉಣಬಡಿಸುವ ತಾಯ್ತನವಿದೆ.

ಹೆಚ್ಚು ತಿನಿಸಿ ಆರೋಗ್ಯ ಕೆಡಿಸುವ ಪಾಂಡಿತ್ಯ ಪ್ರದರ್ಶನವಿಲ್ಲ.

ಬಹಳಷ್ಟು ಜನ ತುಂಬಾ ಶಾಸ್ತ್ರಗಳನ್ನು ಅರಗಿಸಿಕೊಂಡು ಕುಡಿದು ನಡೆ ಇಲ್ಲದೆ  ಭಾರವಾಗಿದ್ದಾರೆ.

ಆಧ್ಯಾತ್ಮದ ಸಾರವನ್ನು ಬದುಕಿನಲ್ಲಿ ಪಾಲಿಸುತ್ತ ಜನರಿಗೆ ತಲುಪಿಸುವ ಏಕ ಮಾತ್ರ ಉದ್ದೇಶ.

ಎಲ್ಲ ವರ್ಗದ ಸಾವಿರಾರು ಜನರನ್ನು ಸೆಳೆಯುವ ಏಕೈಕ ಪ್ರವಚನಕಾರರು.
ಅವರ ಅನುಕರಣೆಯಲ್ಲಿ ಅನೇಕರು ತಯಾರಾಗಿದ್ದರೂ ಅವರೇರಿದೆತ್ತರಕೆ ಏರಲಾಗಿಲ್ಲ.

ಇಂಗ್ಲಿಷ್, ಮರಾಠಿ, ಹಿಂದಿ ಭಾಷೆಗಳಲ್ಲಿಯೂ ಅಷ್ಟೇ ಸಮರ್ಥವಾಗಿ ಪ್ರತಿಪಾದಿಸಿ ಇಡೀ ಲೋಕ ಸುತ್ತಿದ್ದಾರೆ.

ಸರಳತೆ, ಸಮಾಧಾನ, ನಿರ್ಲಿಪ್ತತೆ, ನಿರಾಕರಣೆ, ನಿರ್ಭಯ ಪದಗಳಿಗೆ ಉಪಮೇಯವೇ ಸಿದ್ಧೇಶ್ವರರು.

ತಮ್ಮ ಮಾತುಗಳಲ್ಲಿ ಅಪ್ಪಿ ತಪ್ಪಿಯೂ ಕೆಟ್ಟ, ನಕಾರಾತ್ಮಕ ಪದಪ್ರಯೋಗ ಮಾಡದೇ ಸಕಾರಾತ್ಮಕ ಆಲೋಚನೆಯಡೆಗೆ ಕರೆದೊಯ್ಯುವ ಲೈಫ್ ಸ್ಕಿಲ್ ಸಿದ್ಧಾಂತ.

ಹಾಗಂತ ಇವರನ್ನು ಎಲ್ಲರೂ ಒಪ್ಪುವ ವಾತಾವರಣವೂ ಇಲ್ಲ.

ಕೆಲವು ಅಪ್ಪಟ ಬಸವಾಭಿಮಾನಿಗಳು 'ಕೇವಲ ಶರಣ ಸಿದ್ಧಾಂತ ಪ್ರತಿಪಾದಿಸಲಿ, ಎಲ್ಲವೂ ಅಲ್ಲೇ ಇದೆ, ಮತ್ತೇಕೆ ಅಲ್ಲಿ ಇಲ್ಲಿಯದು ಹೇಳುವುದು' ಎಂಬ ತಕರಾರು ಎತ್ತುತ್ತಾರೆ.

ಅದಕ್ಕೆ ಉತ್ತರಿಸುವ ಅಗತ್ಯವಿಲ್ಲ. ಎಲ್ಲರಿಗೆ ಎಲ್ಲವೂ ಗೊತ್ತಿದೆ.

ನಮ್ಮ ಆಚರಣೆ ಹಾಗೂ ನಂಬಿಕೆಗಳು ಏನೇ ಇದ್ದರೂ ಬೇರೆ ಧರ್ಮಗಳನ್ನು ಓದಬಾರದೇಕೆ? ಎಂಬ ಪ್ರಶ್ನೆ ನನ್ನನ್ನೂ ಕಾಡುತ್ತಿದೆ.

ಎಲ್ಲರ ವಾದ-ವಿವಾದಗಳಿಗೆ ಉತ್ತರ ಕೊಡುವ ಅಗತ್ಯ ಹಾಗೂ ಅನಿವಾರ್ಯತೆ ಇಲ್ಲ ಬಿಡಿ.

ಆಧ್ಯಾತ್ಮಿಕ ಲೋಕಕ್ಕೆ ಭಾರತದ ಕೊಡುಗೆ ಅಪಾರವಾಗಿದೆ. ಅನೇಕ ಗೊಂದಲಗಳನ್ನು ನಿವಾರಿಸಲು ಸಾವಿರಾರು ಸಿದ್ಧೇಶ್ವರ ಅಪ್ಪಗಳ ಅಗತ್ಯವಿರುವಾಗ ಎಲ್ಲವನ್ನೂ ಇವರಿಂದ ಏಕೆ ನಿರೀಕ್ಷಿಸಬೇಕು.

ನಿಜ ಸಂನ್ಯಾಸಿಗಳಿಗೆ ಜ್ಞಾನರತ್ನ ಸಾಕು.
ದ್ಯಾನಸೂತ್ರ ಬೇಕು.

ಅರಿವನ್ನು ಹರವಿ ಹೋದ ಬುದ್ಧ, ಬಸವಾದಿ ಪ್ರಮಥರು ಹಾಗೂ ದಾರ್ಶನಿಕರು ಪ್ರಶಸ್ತಿಗಳನ್ನು ಮೀರಿ ಇನ್ನೂ ಜೀವಂತವಾಗಿದ್ದಾರೆ.

ಕೆಲವರು ಆರಂಭದಲ್ಲಿ ಸದ್ದು ಮಾಡಿ ಬೆಳೆದ ಮೇಲೆ ಅಥವಾ ತಮ್ಮ ಕೊನೆಯ ದಿನಗಳಲ್ಲಿ ತಮ್ಮ ಮೌಲ್ಯಗಳಿಗೆ ಅಪಚಾರವಾಗುವ ಕೆಲಸ ಮಾಡಿ ಪ್ರಶಸ್ತಿಗಳನ್ನು ಕಸಿದುಕೊಳ್ಳುವ ಪ್ರಸಂಗ ತಂದೊಡ್ಡುತ್ತಾರೆ.

ವ್ಯಕ್ತಿಯ ಇಡೀ ವ್ಯಕ್ತಿತ್ವದ ಹರವು ಕೊನೆಯ ಅಧ್ಯಾಯದಲ್ಲಿ ನಿರೂಪಿತವಾಗುತ್ತದೆ.

ಅದೇ ಕಾರಣಕ್ಕೆ ಐನ್ ಸ್ಟೀನ್ ಜೀವಂತವಾಗಿರುವಾಗ ತನ್ನ ಪ್ರತಿಮೆ ನಿಲ್ಲಿಸುವುದನ್ನು ವಿರೋಧಿಸುತ್ತಾನೆ.

ಅದೇ ಸಮರ್ಥ ನಿಲುವಿನ ಶ್ರೀಗಳ ನಿರ್ಧಾರ ನನಗಂತೂ ಖುಷಿ ಎನಿಸಿದೆ.

ಪೂಜ್ಯರಿಗೆ ಅನಂತ ಕೋಟಿ ಶರಣುಗಳು.

----ಸಿದ್ದು ಯಾಪಲಪರವಿ.

ಬಾ ಮನದಾಳದಿ ಜೋಪಾನವಾಗಿರಲು

*ಬಾ ಮನದಾಳದಿ ಜೋಪಾನವಾಗಿರಲು*

ಹೊಳೆವ ಕಂಗಳು ಹಿತವಾದ ನೋಟ
ಮುಗಿಯದ 'ಸವಿ' ಮಾತುಗಳು
ಅಗೋಚರ ಸೆಳೆತ
ಬಿದಿಗೆ ಚಂದ್ರನ ಬೆಳದಿಂಗಳು

ಅವ್ವನ ಅಕ್ಕರೆ
ಮಗಳ ಮಮತೆ
ಸಂಗಾತಿಯ ಸಂಭ್ರಮ
ಎಂದೋ ಎಲ್ಲೋ
ಕಳೆದು ಹೋದ ಮನದನ್ನೆ
ಸಿಕ್ಕ ಹರುಷ

ಸೌಂದರ್ಯ ರಾಶಿಯಲಡಗಿದ
ಸ್ನಿಗ್ದ ನಗುವಿನಲೆಗಳ ಜುಳು ಜುಳು ನಿನಾದ
ನೋಡುವ ನೋಟ ಕೀಳಲಾಗದ ಜಡಪಡಿಕೆ
ಹೇಳಲಾಗದ ಬಳಲಿಕೆ

ಒಮ್ಮೆ ಜೋರಾಗಿ ಕೂಗಿ ಹೇಳುವಾಸೆ
ಆದರೆ ಕಳೆದುಕೊಂಡರೆ ಹೇಗೆ ಎಂಬ ಭಯ

ಹೇಳಲಾರೆ ಏನನ್ನೂ ಕೇಳಲಾರೆ ನೀ
ಒಲಿಯುವತನಕ
ಮೌನದಿ ನಿನ್ನ ಹೃದಯದಲಿ
ಜೋಪಾನವಾಗಿ ಅಡಗಿ
ಅವಿತಿರುವೆ ಕಣ್ಣಿಗೆ ಕಾಣದ ಹಾಗೆ

ಕೊಡಲು ಏನೂ ಇಲ್ಲ ಪ್ರೀತಿಯ ಬಿಟ್ಟು
ಈಗ
ನಾ ವನವಾಸಿ ರಾಮ ಕೇವಲ
ಹನುಮನಾಲಿಂಗನವ ಬಿಟ್ಟು

ಬಿಗಿದಪ್ಪಿ ಮುದ್ದು ಮಾಡಿ ರಮಿಸಿ
ಸಂತೈಸಿ ಸಂತಸವ
ಹಂಚಿ ಹಗುರಾಗಬಲ್ಲೆ
ಆದರೆ ಈಗ ಅದಕೂ ಒಂದು
ಅಲ್ಪ ವಿರಾಮ !

ಸಾಗರದಾಚೆ ಬೆಟ್ಟದ ಮೇಲಿರುವ
ಗಮ್ಯ
ತಲುಪುವತನಕ ಮನದ ಸುತ್ತಲೂ
ನಿಯಂತ್ರಣದ ಕೋಟಿ ಬೇಲಿ
ತುಡುಗರು ನುಗ್ಗದ ಹಾಗೆ !!

ಕಾಯುವೆ ಕಾಲ ಮಾಗಿ
ಹಣ್ಣಾಗುವತನಕ
ಕಣ್ಣ ರೆಪ್ಪೆಯ ಪಿಳುಕಿಸದೇ

ಅಲ್ಲಿಯತನಕ ಬಾ ಮನದಾಳದಲಿ
ಜೋಪಾನವಾಗಿರಲು !!!

---ಸಿದ್ದು ಯಾಪಲಪರವಿ

Wednesday, January 24, 2018

ನಾನು ಮತ್ತು ಅಪ್ಪ

ನಾನು ಮತ್ತು ಎಂದೂ ಮರೆಯಾಗದೆ ಅಪ್ಪ

ಕಳೆದುಕೊಂಡವರ ಕುರಿತು ಬರೆಯುವಾಗ ತುಂಬಾ ನೋವಾಗುತ್ತೆ . ಅದರಲ್ಲೂ ಬದುಕು ಹಾಗೂ ಅಸ್ತಿತ್ವ ಕೊಟ್ಟ ' ಅಪ್ಪ ' .

ನಾವು ಸಹಜವಾಗಿ ಈ ಭೂಮಿಗೆ ಬಂದಿದ್ದೇವೆ ಅಪ್ಪ ಬರೀ ನೆಪ ಎಂಬ ವಾಸ್ತವದ ಸಿದ್ಧಾಂತ ಅಪ್ಪನ ವಿಚಾರವಾಗಿ ಸರಿಹೊಂದುವುದಿಲ್ಲ.

ಅಪ್ಪನನ್ನೂ ಬೇರೆಯವರಿಗಿಂತ ಸರಿಯಾಗಿ ಗ್ರಹಿಸಿದ್ದೇನೆ ಎಂಬ ಗರ್ವ.  ಸರಿಸುಮಾರು ಐವತ್ತು ವರ್ಷ ಕಳೆದರೂ ನಾಲ್ವತ್ತು ವರುಷಗಳ ಒಡನಾಟ ಒಡಲೊಳಿದೆ.

ಬಾಯಲ್ಲಿ ಬಂಗಾರದ ಚಮಚೆ ಇಟ್ಟುಕೊಂಡು ಹುಟ್ಟಿದ್ದರೂ ಮುಂದೆ ಅನುಭವಿಸಿದ್ದು ಬರೀ ನೋವು-ಸಂಕಷ್ಟ. ವ್ಯಾಪಾರದಲ್ಲಿನ ಹಾನಿ , ಕುಟುಂಬದ ಆಸ್ತಿ ವಿಭವಿಜನೆಯ ಅಸಮಾನತೆ ಹೀಗೆ ಹತ್ತಾರು ಸವಾಲುಗಳನ್ನು ತುಂಬಾ ಸಮಾಧಾನದಿಂದಲೇ ನಿಭಾಯಿಸಿದ.

ಬಾಲ್ಯದ ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ನನಗೆ ಪಾಲಕರ ಒಡನಾಟ ಕಡಿಮೆ ಆದರೂ ನಂತರದ ಕಾಲೇಜು ದಿನಗಳಲ್ಲಿ he became my best friend ಮುಂದಿನ ಎಲ್ಲ ಆರ್ಥಿಕ ಸಂಕಷ್ಟಕ್ಕೆ ನಾನು ನೆರವಾಗಲಿಲ್ಲ ಅದೂ ಸಾಧ್ಯವಾಗಲಿಲ್ಲ ಎಂಬ ನೋವು ಈಗಲೂ  ನನ್ನಲಿ ಉಳಿದಿದೆ.

ನನಗೆ ಆರ್ಥಿಕವಾಗಿ ಹೆಚ್ಚು ನೆರವು ನೀಡದೇ strict ಆಗಿ ಬೆಳೆಸಲು ಇದ್ದ ಅನೇಕ ಕಾರಣಗಳನ್ನು ಕೊಂಚ ಸಿಟ್ಟಿನಿಂದ ಸಕಾರಾತ್ಮಕವಾಗಿ ಸ್ವೀಕರಿಸಿದೆ . ಅದು ದೊಡ್ಡ ಪಾಠವಾದರೂ finance management ನಲ್ಲಿ ನಾನು ಎಚ್ಚತ್ತುಕೊಳ್ಳದೇ ತುಂಬಾ ಆರ್ಥಿಕ ಸಂಕಷ್ಟಗಳನ್ನು ಎದುರಿಸುವಂತಾಯಿತು. 

I have my own reservations about finance management even today. ನನಗೆ ಬದುಕು ಸಾಗಬೇಕು ಅಷ್ಟೇ. ತುಂಬಾ plan ಅಗತ್ಯವಿಲ್ಲ ಎಂಬ ಕೆಟ್ಟ ಧೋರಣೆ. I may be wrong also.

ಆದರೆ ಅಪ್ಪ ಹಾಗಲ್ಲ ದೇವರಿಗೆ ಹಾಕುವ ಹಣವನ್ನು ಕಟ್ಟಿ ಇಡುತ್ತಿದ್ದ ಯಾವುದೇ ಕಾರಣಕ್ಕೂ ಬೇರೆ ಕೆಲಸಕ್ಕೆ ಬಳಸುತ್ತಿರಲಿಲ್ಲ. ಎಂತಹ ಕಠಿಣ ಸಂದರ್ಭದಲ್ಲಿಯೂ ನನಗೆ ಹೆಚ್ಚು ಹಣ ಕಳಿಸಲೇ ಇಲ್ಲ ಹೀಗಾಗಿ ವಿದ್ಯಾರ್ಥಿಯಾಗಿದ್ದಾಗ ತುಂಬಾ ಎಚ್ಚರಿಕೆಯಿಂದ ಖರ್ಚು ಮಾಡುತ್ತಿದ್ದೆ even  tour ಹೋಗಲಿಲ್ಲ.

ಉದ್ಯೋಗ ಸೇರಿದ ಮೇಲೆ ಹಣ ಗಳಿಸುವ ವೃತ್ತಿ ಹಾಗೂ ಪ್ರವೃತ್ತಿ ನನಗೆ ಬರಲಿಲ್ಲ I totally neglected and accepted the suffering.
ಈ ಕುರಿತು ಇದ್ದ ಸಿಟ್ಟನ್ನು ಅಪ್ಪ ಆತ್ಮೀಯರ ಮೂಲಕ ಹೇಳಿಸಿದರೂ ಕೇಳಿಸಿಕೊಳ್ಳುವ ಸ್ಥಿತಿಯನ್ನು ನಾನು ದಾಟಿದ್ದೆ.

ತುಂಬಾ ಸಂಕಷ್ಟಗಳ ಸಂದರ್ಭದಲ್ಲಿ ಒಮ್ಮೆ ಕೇಳಿದೆ  ನೇರವಾಗಿ impossible ಅಂದ. ನನಗೆ ದುಃಖವಾಯಿತಾದರೂ positive ಆಗಿ ಸ್ವೀಕರಿಸಿ ಅದೇ ಸ್ನೇಹವನ್ನು ಮುಂದುವರೆಸಿ ಪಾಠ ಕಲಿತುಕೊಂಡೆ.

'ನಿಮ್ಮದು ಪೂರ್ವಜರ ಆಸ್ತಿ  ಅಪ್ಪನ ಮೇಲೆ ಕೇಸು ಹಾಕಿ ನಿನ್ನ ಪಾಲು ಕೇಳು ' ಅಂದ ಕೆಲವರ ಸಲಹೆಯನ್ನು ತಿರಸ್ಕರಿಸಿದೆ. ನನ್ನ ಸಹನೆ ಹಾಗೂ ವಿವೇಚನೆಗೆ ನಾನು ಸದಾ ಋಣಿ .

ಈ ನನ್ನ ನಿರ್ಧಾರ ಅಪ್ಪನಿಗೆ ಗೊತ್ತಾಯಿತಾದರೂ ಈ ಕುರಿತು ನಾವಿಬ್ಬರೂ ಚರ್ಚಿಸಲೇ ಇಲ್ಲ.

'ಒಂದು ಬಿರುಗಾಳಿಯ ಕಥೆ' ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಉದ್ಯಮಿ ವಿಜಯ್ ಸಂಕೇಶ್ವರ ಅವರು ನನ್ನ ಕುರಿತು ವ್ಯಕ್ತಪಡಿಸಿದ ಮೆಚ್ಚುಗೆ ಕಂಡು ಬೆರಗಾದರು. ನನ್ನ ಮಗ ಲಕ್ಷ್ಮಿ ಪುತ್ರನಾಗದಿದ್ದರೂ ಸರಸ್ವತಿಯ ಮೂಲಕ ಹೆಸರು ಮಾಡಿದ್ದಾನೆ ಎಂದು ಅವರಿಗೆ convince ಆಯಿತು.

He was very friendly with my mother. ಅವ್ವ ಹೋದ ಮೇಲೆ ತುಂಬಾ ಒಂಟಿತನದಿಂದ ಒದ್ದಾಡಿದ್ದು ನನಗೆ ಅರ್ಥವಾಯ್ತಾದರೂ ಇಷ್ಟು ಬೇಗನೆ ಹೋಗಬಹುದು ಅಂದುಕೊಂಡಿರಲಿಲ್ಲ.

He was very normal and healthy but he decided to go away. ವಿದೇಶಕ್ಕೆ ಹೋಗಲು passport ಬಂದಿತ್ತು  ಆದರೆ ಹೋಗಲಾಗಲಿಲ್ಲ . ಹೆಣ್ಣು ಮಕ್ಕಳ ಬಗ್ಗೆ ಚಿಂತೆಯೂ ಇತ್ತು ಆ ಜವಾಬ್ದಾರಿಯನ್ನು ತುಂಬಾ balance ಮಾಡಿದ ಒದ್ದಾಟ ಈಗ ಅರ್ಥವಾಗಿದೆ but I fulfill all his  incomplete desires without sharing with others , it's my strong promise to him.

I totally miss you ಅಪ್ಪ.

You have left so many values and valuable things with me...

---ಸಿದ್ದು ಯಾಪಲಪರವಿ

ಹುಡುಗಿಯರೇ ಹೀಗೆ

*ಹುಡುಗಿಯರೇ ಹೀಗೆ*

ಆಕರ್ಷಣೆಯ ಚಿಲುಮೆ
ಬತ್ತದ ಜೀವನೋತ್ಸಾಹ

ಬರೀ ಮಾಯೆಯೆಂಬ
ಭ್ರಾಂತು

ಅವ್ವ ಗೆಳತಿ ತಂಗಿ
ಹೆಂಡತಿಯಾಗಿ
ಹಿತವಾಗಿ ಕಾಡುವ
ಹೆಣ್ಣು ಮಾಯೆ ಅಲ್ಲ

ಮಗಳ ರೂಪದ
ವಾತ್ಸಲ್ಯದ ಖಣಿ

ಮುತ್ತಿನ ಮಹಿಮೆಯ
ಬಿಸಿಯಪ್ಪುಗೆಯ
ಬೆರಗಿನಲಿ ಕರಗಿಸಿ

ಮನವನಾವರಿಸಿದ
ಬೆಡಗಿ

*ಮಗಳು*
ಅಭಿವ್ಯಕ್ತಿಗೆ
ಜನುಮ ದಿನದ
*ಶುಭಾಶಯಗಳು*

*ಸದಾ ಖುಷಿಯಾಗಿರು*

---ಸಿದ್ದು ಯಾಪಲಪರವಿ

ಮುನ್ನುಡಿಗೊಂದು ಬೆನ್ನುಡಿ

*ಮುನ್ನುಡಿಗೊಂದು ಬೆನ್ನುಡಿ*

ಬದುಕೆಂಬ ಪುಸ್ತಕದ ಮೊದಲ
ಬರಹ

ಬಣ್ಣದ ಚಿತ್ತಾರಗಳು‌ ಮೈಮನದ
ತುಂಬ

ಆಟ ನೋಟ ಮೊಂಡಾಟಕೆ
ಸಾವಿರದ ನೆನಪು

ಅವ್ವನ‌ ಪಡಿಯಚ್ಚ ಹೆಗ್ಗಳಿಕೆ
ಹೇಗೋ ಕಳೆದ ಬಾಲ್ಯ

ಈಗ

ಹಲವು ಕನಸುಗಳ ಹರವಿ
ಭವಿತವ್ಯದ ಜಪ

ಬಂದುದನೆದುರಿಸುವ ಎದೆಗಾರಿಕೆ
ಸಾಕು
ನೋವ ನಲಿವಾಗಿಸಲು

ದುಃಖ-ದುಮ್ಮಾನ ಬರದಿರಲಿ
ಅದರೆ
ತಿಳಿದೋ ತಿಳಿಯದೋ ಕಾಡದಿರಲಿ

ಬೆಳೆದಂತೆ ಬದುಕು ಜಡ ಕಳೆದು
ಹೋದ
ಮುಗ್ಧತೆ ಹುಡುಕಿದರೂ ಸಿಗದು

ಮತ್ತೆ ಮಗುವಾಗಲು
ಮಾಗಬೇಕು ಮೈಮನ

ಹೀಗೆ ನೂರಾರು ಭರವಸೆಗಳ
ಹೊತ್ತು ನೇರ ಹಾದಿಯಲಿ
ಸಾಗಿರಲಿ ಜಾಣನಡೆ ಜೋಲಿ
ಹೊಡೆಯದೆ

ಕಾಪಿಟ್ಟು‌ ಕಾಯಲಿ‌‌ ಎಚ್ಚರ
ಒಳಗೂ-ಹೊರಗೂ

ಹಡೆದರೂ ಹಣೆಬರಹ
ಬರೆಯಲಾಗದ
ಅಸಹಾಯಕತೆಯಲೂ
ನೂರೆಂಟು ಆಸೆಗಳು

ಕಾಯ್ದು ಕಾಪಾಡಲು ಕಾಲದಾಟದಲಿ
ಅವನುಂಟು

ಹರಕೆಯ ಬುತ್ತಿ ಹಳಸದಿರಲಿ
ಕೂಸೆ
ಬಾಳ ಪಯಣದ ಹಾದಿಯಲಿ.

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

----ಸಿದ್ದು ಯಾಪಲಪರವಿ.

ಹೀಗೊಂದು ಸಹಸ್ಪಂದನೆ

*ಹೀಗೊಂದು ಸಹಸ್ಪಂದನೆ*

*ಪರಮ ಗುರುವಿನೊಂದಿಗೆ ಜುಗಲ್ ಬಂದಿ*

ಗುರು-ಶಿಷ್ಯ ಪರಂಪರೆ ಸಂಗೀತ ಕ್ಷೇತ್ರದಲ್ಲಿ ತನ್ನ ದಿವ್ಯತೆಯನ್ನು ಕಾಪಾಡಿಕೊಂಡಿದೆ.

ಅದೇ ಪರಂಪರೆ ಕಾವ್ಯಲೋಕದಲ್ಲೂ ಸಾಧ್ಯ ಎಂದು ನಿರೂಪಿಸಲು ನನ್ನಿಂದ ಕಾವ್ಯ ಜುಗಲ್ ಬಂದಿ ಬರೆಯಲು ಪ್ರೇರೇಪಿಸಿದ ಸೃಜನಶೀಲ ಬರಹಗಾರ, ಸಹೃದಯಿ ಮನಸ್ಸುಳ್ಳ ಪ್ರೊ.ಸಿದ್ದು ಯಾಪಲಪರವಿ ಅವರಿಗೆ ಅಭಿವಂದಿಸುವೆ.

*ಪಿಸುಮಾತುಗಳ ಜುಗಲ್* ಅವರ ಕನಸಿನ ಕೂಸು.
ಕಾವ್ಯ ಲೋಕದ ಎಲ್ಲ ಸಾಧ್ಯತೆಗಳನ್ನು ದೂರವಿದ್ದೂ ಕಲಿಸಿದ *ಅಪ್ಪಟ ಗುರು*

ನಮ್ಮ ಕನಸನ್ನು ನನಸಾಗುವ ಬಗೆಯಲ್ಲಿ ವಿನ್ಯಾಸಗೊಳಿಸಿ, ಗೆರೆಗಳಿಗೆ ಭಾವ ತುಂಬಿ ವಿನೂತನವೆನಿಸುವ ಸಂಕಲನ ಪ್ರಕಟಿಸಿದ ಲೇಖಕ, ಕಲಾವಿದ,ಒನ್ ವ್ಹೀಲರ್ ಪ್ರಕಾಶನದ  ವಿ.ಎಂ.ಮಂಜುನಾಥ ಅವರ ಆಸ್ಥೆಗೆ ಶರಣು.

ಇಂತಹ ವಿನೂತನ ಪ್ರಯೋಗವನ್ನು ಪ್ರಬುದ್ಧ ಕನ್ನಡಿಗರು ಒಲವಿನಿಂದ ಸ್ವೀಕರಿಸುತ್ತಾರೆ ಎಂಬ ಭರವಸೆಯೂ ಇದೆ.

ದಯವಿಟ್ಟು ಓದಿ ಅಭಿಪ್ರಾಯ ತಿಳಿಸಿರಿ.

---ಸಿಕಾ

*ಸಾಹಿತ್ಯಸಂಗಾತಿಗಳಾದರೆ ಸಾಕು*

ನನ್ನೊಂದಿಗೆ ಜುಗಲ್ ಬರೆದ ಹುಮ್ಮಸ್ಸಿನಲ್ಲಿ ಗುರು ಎಂಬ ಭಾರ ಹೊರಿಸಿದ್ದೀರಿ.

*ಗುರು* ತುಂಬಾ ಭಾರವಾದ ಸ್ಥಾನ.

ಆಧ್ಯಾತ್ಮ ಹಾಗೂ ಸಂಗೀತ ರಂಗಗಳಲ್ಲಿ ಮಾತ್ರ ಗುರು ಅನಿವಾರ್ಯ.

ಸಾಹಿತ್ಯದಲ್ಲಿ ಅಲ್ಲವಾದರೂ ಮಾತಿನ ಕೃತಜ್ಞತೆಗಾಗಿ ಹೇಳುವ ಸೌಜನ್ಯ.

ಈ ಕುರಿತು ನಿಷ್ಠುರವಾದ ಅನಿಸಿಕೆ ಹಂಚಿಕೊಳ್ಳುವೆ.

ನನ್ನ ಉಪನ್ಯಾಸಕ ವೃತ್ತಿಗೀಗ ಮೂವತ್ತರ ಹರೆಯ.

ಸಾವಿರಾರು ವಿದ್ಯಾರ್ಥಿಗಳು ಬಂದು ಹೋಗಿದ್ದಾರೆ, ಹೋಗುತ್ತಲೇ ಇದ್ದಾರೆ.

ಈ ವೃತ್ತಿಗೆ ಹಣ ತೆಗೆದುಕೊಳ್ಳುವ ಕಾರಣದಿಂದಲೋ ಏನೋ ಕೇವಲ ಅವರು ವಿದ್ಯಾರ್ಥಿಗಳಾಗುತ್ತಾರೆ ಶಿಷ್ಯರಾಗುವ ಪ್ರಮೇಯ ಬರುವುದಿಲ್ಲ.

ನಾವೂ ಅಷ್ಟೇ ಇಡೀ ಅವರ ಬದುಕು ಪರಿವರ್ತನೆ ಮಾಡುವ ತಾಕತ್ತನ್ನೂ ಹೊಂದಿರುವುದಿಲ್ಲ.

ಆದರೆ ಆಧ್ಯಾತ್ಮ-ಸಂಗೀತ ಲೋಕದಲ್ಲಿ ತುಂಬಾ ಭಿನ್ನ.

*ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ* ಎಂಬುದು ಸರ್ವಕಾಲಿಕ.

*ಧ್ಯಾನ-ರಾಗ* ಒಲಿಯಲು *ಭಕ್ತಿ-ಸಮರ್ಪಣೆ* ಅತ್ಯಗತ್ಯ.

ಬರಹದಲ್ಲಿ ವೈಯಕ್ತಿಕ ಶ್ರದ್ಧೆ ಸಾಕು. ಬೇರೆಯವರನ್ನು ದ್ರೋಣರನ್ನಾಗಿಟ್ಟುಕೊಂಡು ಬೆಳೆಯಬಹುದು.

ಆದ್ದರಿಂದ ದಯವಿಟ್ಟು ನನಗೆ ನಿರಾಯಾಸವಾಗಿ ಗುರುವಾಗುವ ಯೋಗ್ಯತೆಯಾಗಲಿ ಮನಸ್ಥಿತಿಯಾಗಲೀ ಇಲ್ಲ.

ಗಂಡು-ಹೆಣ್ಣಿನ ಸಂಬಂಧಗಳಲ್ಲಿ ನಾವೆಷ್ಟು ಸಣ್ಣವರು ಎಂಬ ಎಚ್ಚರಿಕೆಯಿಂದ ಒಮ್ಮೊಮ್ಮೆ ನಮ್ಮ ಸಂಬಂಧಗಳ declare ಮಾಡುವುದು ಅನಿವಾರ್ಯವೆನಿಸಿ ಏನೋ ಸಂಬಂಧ ಟ್ಯಾಗಿಸುತ್ತೇವೆ.

ಅಪರಿಚಿತ ಹಣ್ಮಕ್ಕಳನ್ನ *ಅಕ್ಕಾ ಅವರೇ*
ಎಂದು ಕರೆದು ಸುಂದರವಾಗಿದ್ದರೆ ಒಳಗೊಳಗೆ ಜೊಲ್ಲು ಸುರಿಸಿ ಸಂಭ್ರಮಿಸುವ ಪರಿ ತಮಾಷೆ ಅಲ್ದೇ ಇನ್ನೇನೂ?

ಇಷ್ಟೊಂದು ಮುಂದುವರೆದರೂ ಹೆಣ್ಗಂಡಿನ ವಿಷಯದಲ್ಲಿ ವೈಶಾಲ್ಯತೆ,ಸಹನೆ ಕಷ್ಟ.
ಸಿಗಲಿಲ್ಲ ಎಂದ ಕೂಡಲೇ ಚಾರಿತ್ಯಕ್ಕೆ ಕೈ ಹಾಕುವ ಮನಸ್ಥಿತಿ.

ಆದ್ದರಿಂದ ನಾನು ಆ ಸಣ್ಣ ಎಚ್ಚರಿಕೆ ಇಟ್ಟುಕೊಂಡು ವ್ಯವಹರಿಸಿದರೂ ಮೋಸ ಹೋಗಿದ್ದೇನೆ.

ಮುಖವಾಡ, ಬಳಸುವ ಪದಗಳು ನನ್ನನ್ನು ದಿಕ್ಕು ತಪ್ಪಸಿವೆ. ಹಾಗೆ ದಿಕ್ಕು ತಪ್ಪಿಸಿ ಯಾಮಾರಿಸಿಕೊಳ್ಳುವುದಕ್ಕೆ ಲಿಂಗ ಭೇದ-ಭಾವ ಇಲ್ಲ.

ಮಾತಿಗೆ ಮರುಳಾಗುವ *ಅಯೋಗ್ಯತೆ* ಸಾಕು.

ಅದರಲ್ಲೂ ವಿಶೇಷವಾಗಿ ಸಾರ್ವಜನಿಕ ಬದುಕಿನಲ್ಲಿ ಹೇರಳ ಮುಖವಾಡಗಳು.

ನಿಮ್ಮನ್ನು ವೃತ್ತಿಯಿಂದ *ಗೃಹಿಣಿ* ಎಂದು ಯಾರೋ ಪರಿಚಯಿಸಿದ್ದರಿಂದ ಇಷ್ಟೆಲ್ಲ‌ ಹೇಳಿದೇ ಅಂದುಕೋಬೇಡಿ.

ಬರಹದ ಶ್ರದ್ಧೆಯಲ್ಲಿ ನೀವು ಅಪ್ಪಟ ಅಕ್ಯಡೆಮಿಶಿಯನ್ ಎಂಬುದನ್ನು ಜುಗಲ್ ಬರೆಯುವಾಗ ಕಂಡುಕೊಂಡಿದ್ದೇನೆ.

ಅರ್ಹತೆಗೆ ಹುದ್ದೆ ಹಾಗೂ ಶಿಕ್ಷಣ ಮಾನದಂಡವಲ್ಲ. ಗುಣಸ್ವಭಾವ ಮುಖ್ಯ I mean *attitude*.

ನಮ್ಮಿಬ್ಬರ ಮಧ್ಯೆ ಭಕ್ತಿ-ಸಮರ್ಪಣೆಗಳ ಅಗತ್ಯವಿಲ್ಲವಾದ್ದರಿಂದ ಕೇವಲ ಒಳ್ಳೆಯ ಸಾಹಿತ್ಯ ಸಂಗಾತಿಗಳಾಗಬಹುದು.

ಫೇಸ್ಬುಕ್ಕಿನ ಗೆಳೆಯರನೇಕರು ನಿಮ್ಮ ಜುಗಲ್ ಪಯಣವನ್ನು ಅಭಿನಂದಿಸಲು *ಗುರುತ್ವಾಕರ್ಷಣೆ* ಕಾರಣವಾಗಿರಬಹುದು.

ಗುರುಸ್ಥಾನದ ಒಜ್ಜವನ್ನು ಕೆಳಗಿಳಿಸಿ ನಮ್ಮನ್ನು ನಾವೂ ಗೆಳೆಯರಂತೆ ಪರಸ್ಪರ ಅಭಿವಂದಿಸೋಣ.

ಏಕೆಂದರೆ *ಪಿಸುಮಾತುಗಳ ಜುಗಲ್* ನಲ್ಲಿನ ಪಾತ್ರಧಾರಿಗಳು ನಾವು.

---ಸಿದ್ದು ಯಾಪಲಪರವಿ.

Sunday, January 21, 2018

ಎದೆಯ ಗುಡಿಯ ಗೂಡಲಿ

*ಎದೆಯ ಗುಡಿಯ ಗೂಡಲಿ*

ನೀ
ಬರೀ ಮುದ್ದು ಮಾಡಲು‌
ಮಾತ್ರ ಸಾಕು

ಚರ್ಚೆ ಉಸಾಬರಿ ಸಾಕು

ಪಟ್ಟು ಹಿಡಿದು ಕುಳಿತು
ಬರೆದರೆ ಪಾವನ ಸರಸ್ವತಿ

ಯಾವುದೋ ಋಣಾನುಬಂಧ
ಬೆಸೆಯಿತು ನಮ್ಮ
ಈ ಅನುಬಂಧ

ಅಗ್ನಿ ಪರೀಕ್ಷೆಯನು
ನಿರ್ವಿಕಾರವಾಗಿ
ಎದುರಿಸಿದ ಧೀರೆ

ಕ್ಷಮಿಸು ಸಖಿ ನಾ
ತಿರುಚಿದ ಗಾಯಕೆ

ಹಚ್ಚುವೆ ಗುಟುಕಿನ ಸವಿ
ಮುಲಾಮು

ನಿತ್ಯ ನಸುನಗುತ ಮುದ್ದು
ಅಕ್ಷರಗಳಲಿ ಬಂಧಿಸು

ಹೃದಯ ಸಿಂಹಾಸನದಲಿ
ಬೆಚ್ಚಗೆ ಮಲಗಿ

ಹಾಯಾಗಿ ಹೊಸಲೋಕದಿ
ಹಾರಾಡುವೆ

ಎಂದೋ ಕಂಡ ಕನಸ
ನನಸಾಗಿಸಿ ಬಣ್ಣ ತುಂಬಿ
ಬಾಳ ರಂಗೇರಿಸಿದ ರಾಣಿ

ಈಗ ನೀ ಮಹಾರಾಣಿ
ಮನದರಮನೆಯಲಿ

ಬರೆಯುತ ಬೆರೆಯುತ
ಹಾಡುತ ನಲಿಯುತ
ಕುಣಿದು ಕುಪ್ಪಳಿಸಿ
ಧರೆಗಿಳಿಸು
ಸ್ವರ್ಗ ಸಂಭ್ರಮ

ನೀ ನಿಲ್ಲದ ನೀ ಇಲ್ಲದ
ಈ‌ ಒಲವಲೋಕದಲಿ
ಇಲ್ಲ ನನಗೆ ಬೇರೇನೂ
ಕೆಲಸ

ಬಾ ಅರಗಿಣಿ ನೀ
ಬಂಧಿಯಾಗು ಮುಕ್ತವಾಗಿ
ನನ್ನ ಎದೆಯ
ಗುಡಿಯ ಗೂಡಲಿ

ದೊರಕಿದೆ ದೊರೆಯ ಅಪ್ಪಣೆ
ಬೇಕಿಲ್ಲ ಬೇರೇನೂ
ನಾ
ನೀ
ಸದಾ ಖುಷಿಯಾಗಿರಲು

ನೀ ನಕ್ಕರೆ ಅದೇ ಸಕ್ಕರೆ
ನಾ ಹಾಲಾಗಿ‌ ಕರಗಿ
ಲೀನವಾಗಿ

ಅವನ
ಗಂಟಲ ಸವಿಯಾಗಿ
ಆಳಕಿಳಿದು ಅಮರ

ಅಜರಾಮರ ನಿನ್ನ
ನೆನಪ‌ ಹಸಿರ ಉಸಿರಲಿ...

---ಸಿದ್ದು ಯಾಪಲಪರವಿ.