Monday, December 18, 2017

ಓಲೆ-17

ಕನಸಿಗೊಂದು ಓಲೆ

ಓಲೆ-17

ಹಲೋ ಚಿನ್ನು ,

ನಿನ್ನ ಆಧ್ಯಾತ್ಮದ ಕುರಿತು ಮಾತನಾಡಿದ ಗೆಳೆಯರು ಈಶ್ವರಿ ವಿಶ್ವವಿದ್ಯಾಲಯದ ಮೌಲ್ಯಗಳ ಬಗ್ಗೆ ವಿವರಿಸುವಾಗ detachment ಮಹತ್ವ ವಿವರಿಸಿ ಮನದ ಮಾತುಗಳ ಹೊಗಳಿದರು.

ಅವರ ಹೊಗಳಿಕೆಯಿಂದ ನಾನೇನು ಪುಳಕಗೊಳ್ಳಲಿಲ್ಲ. I'm detached towards appreciation.

''ನಾವು ನಮ್ಮ ಸಂಬಂಧಗಳು ಹಾಗೂ ಅವರಿಗೆ ಬರುವ ಕಷ್ಟಗಳ ಕುರಿತು ವೃಥಾ ಚಿಂತಿಸುವ ಅಗತ್ಯವಿಲ್ಲ ಅದೂ ಕರ್ಮ' ಎಂಬ ಅವರ ವಿವರಗಳನ್ನು ಆಲಿಸಿದೆ.

ಆದರೆ ಯಾವುದೇ ನೋವುಗಳು ವೈಯಕ್ತಿಕ ನೆಲೆಯಲ್ಲಿ ದಾಳಿ ಮಾಡಿದಾಗ ನಮ್ಮ ಎಲ್ಲ ಸಿದ್ಧಾಂತ ಹಾಗೂ ಮೌಲ್ಯಗಳು ಮಂಕಾಗಿ ಚಿಂತೆ ಮಾಡುವುದು ಮನುಷ್ಯನ ಮಿತಿ ಆದರೆ ನಾವು ಆ ಮಿತಿಯನ್ನು ಇಟ್ಟುಕೊಂಡೇ ಬಂದದ್ದುನ್ನು ಸಹನೆಯಿಂದ ಎದೆಗುಂದದೆ ಎದುರಿಸಲೇಬೇಕು.

ಆ ನೋವಿಗೆ ಪರೋಕ್ಷವಾಗಿ ನಮ್ಮ ಕೆಲವು ತಪ್ಪು ನಿರ್ಧಾರಗಳು ಕಾರಣವಾಗಿರುತ್ತವೆ ಎಂಬುದನ್ನು ನೆನಪಿಸಿಕೊಂಡು ನಮ್ಮನ್ನು ನಾವೇ ಸಂತೈಸಿಕೊಳ್ಳಬೇಕು.

Detachment ಎಲ್ಲ ಘಟನೆಗಳ ನೋವು ನಿವಾರಣೆಗೆ ಮೂಲ ಮಂತ್ರ ಆದರೆ ಕೇವಲ ಸಾಧನೆಯಿಂದ ಮಾತ್ರ ಈ ನಿರ್ಲಿಪ್ತತೆಯನ್ನು ರೂಢಿಸಿಕೊಳ್ಳಬಹುದು.

ನಾವು ಅಂದುಕೊಂಡಂತೆ ನಮಗೆ ಬೇಕಾದವರು ಇರಲಿ ಎಂದು ಬಯಸುವದೇ ವ್ಯಾಮೋಹ , ಆ ವ್ಯಾಮೋಹ ಹಾಗೂ ಭಿನ್ನಾಭಿಪ್ರಾಯ �ನಮ್ಮ ನೋವಿನ ಮೂಲ.

ಮೂಲ ಗೊತ್ತಾದ ಮೇಲಾದರೂ ಖುಷಿಯಾಗಿ ಇರಬೇಕು.

ಆ ಹಂತವನ್ನು ನಿಧಾನವಾಗಿ ತಲುಪೋಣ.

ನಿನ್ನೆ ಅಚಾನಕ್ ಆಗಿ ಒಬ್ಬರು ಹೋಗಿದ್ದರಿಂದ ಈ ಮಾತು ಹೆಚ್ಚು ಪೂರಕವೆನಿಸಿತು.

ನಿನ್ನ ಪ್ರೀತಿಯ

ಅಲೆಮಾರಿ

( ಸಿದ್ದು ಯಾಪಲಪರವಿ )

18-12-2017

Saturday, December 16, 2017

ಹುಸಿ ಮುನಿಸು ಇರಲಿ‌ ಆದರೆ...

*ಲವ್ ಕಾಲ*

*ಹುಸಿ ಮುನಿಸು ಇರಲಿ ಆದರೆ...*

ತುಂಬ ಪ್ರಯಾಸ ಹಾಗೂ ಪ್ರಯತ್ನದ ಪ್ರತಿಫಲವಾಗಿ ಈ ಸಂಬಂಧ.
ಬದುಕಿನ ಆಶಯ-ಆಲೋಚನೆ ಒಟ್ಟಾರೆ ಖುಷಿಯಾಗಿರೋದು ಅದಕ್ಕಾಗಿ ನಾವು ಪರಸ್ಪರ ಸಹಿಸಿಕೊಂಡಿರುತ್ತೇವೆ.

ಪ್ರೀತಿ ಬದುಕಿನ ಜೀವಧಾತು. ಅತಿಯಾದ ಪ್ರೀತಿಯಲಿ ಎಲ್ಲವೂ ಕೊಂಚ ಅತಿರೇಕ.
ಅತಿಯಾದಾಗ possessiveness , ಅದು ಮುಂದೆ ಕೊಂಚ ಅನುಮಾನ- ಎಲ್ಲಿ ಕಳೆದುಕೊಂಡು ಬಿಡುತ್ತೇನೋ ಎಂಬ ತಲ್ಲಣ-ಚಡಪಡಿಕೆ.

ಪ್ರೀತಿ ಬಯಸುವ ಜೀವ ಇದನ್ನು ಅರ್ಥಮಾಡಿಕೊಂಡು ಸಹಿಸಿಕೊಳ್ಳಬೇಕು. ಮನಸು ಮಾತು ಒರಟಾಗಬಾರದು ಒಗಟಾಗಬೇಕು.

*ಬಿಸಿಯಪ್ಪುಗೆ , ಪಿಸುಮಾತುಗಳ ಮಿಲನಕೆ ಬಯಸುವ ಮನಸು ಕೊಂಚ ದೂರಾದಾಗ ವಿಚಲಿತವಾಗಿ ಚಡಪಡಿಸುವುದು ಸಹಜ*.

ಜಗಳ,ಹಟ,ಹುಸಿಮುನಿಸು,ಸಂಶಯ,ಕಾಳಜಿ,ಕಿರಿಕಿರಿ,
ಅಳು,ನಗು,ರಮಿಸಿ ಮುದ್ದಾಡೋದು  ಎಲ್ಲಾ ಒಟ್ಟಿಗೆ ಕಟ್ಟೆ ಒಡೆದ ಭಾವ ಕೆರೆ.

ಅದರಲ್ಲೂ ಇನ್ನಿಲ್ಲದ ಹಿತ.

ಭಾರವಾಗಿ ಭಯಭೀತಗೊಂಡ ಮನಸಿಗೆ ಮತ್ತೆ ಮರುಕಿಸುವ ನಿರಾಳ.
ಯಾವುದು ಖರೆ ಪ್ರೀತಿಯೋ,ಜಗಳವೋ, ಸಂಶಯವೋ.

ಎಲ್ಲವೂ ಖರೆ:ಎಲ್ಲವೂ ಸುಳ್ಳು.

ಅತ್ತು ರಮಿಸಲು ನಮ್ಮನ್ನು ಬಿಟ್ಟು ಬೇರೆ ಯಾರೂ ಇಲ್ಲ ಬಾ ಅಂದಾಗ
*ಮೆಲ್ಲುಸಿರೇ ಸವಿಗಾನ*.

---ಸಿದ್ದು ಯಾಪಲಪರವಿ

Friday, December 8, 2017

ವಾಸ್ತವದಲೆ

ವಾಸ್ತವದಲೆ

ಮೈತುಂಬಾ ಹರಿದಾಡಿ ಸಣ್ಣಪುಟ್ಟ
ಹಿತಕರ ಗಾಯ ಮಾಡಿ ಮನದಾಳದಲಿ
ತಳ ಹೂಡಿ ನೀ
ಹೀಗೆ ಮಾಯವಾಗಬಹುದು ಎಂದು
ನಿನಗೆ ಮಾತ್ರ ಗೊತ್ತು

ನಾ
ಕತ್ತಲಲಿ ಧ್ವನಿ ಹಿಡಿದು , ಬೆಳಕಲಿ
ವಾಸನೆ ಹಿಡಿದು ಕನವರಿಸುತ್ತ ನೀ
ಬರುವೆ ಎಂಬ ಚಿತ್ತದಲಿ ಮತ್ತೆ
ಮತ್ತೆ ಕೆರೆದ ಗಾಯವ ಕೆರೆಯುತ್ತ
ಗಾಯ ಮಾಯಲಿಲ್ಲ ಎಂದು ಹಲುಬುತ್ತೇನೆ

ವಾಸ್ತವ ಲೋಕದಿ ಒಮ್ಮೊಮ್ಮೆ ಬದುಕೇ
ಹೀಗೆ ಕೊಳೆಯಾದ ಬಟ್ಟೆ ಕಳಚಿ ಬಿಸಾಡಿದ
ಹಾಗೆ
ಒಗೆದು ಗಂಜಿ ಹಾಕಿ  ಇಸ್ತ್ರೀ ಮಾಡಿ ಮತ್ತೆ
ನೀ ತೊಡಬಹುದು ಎಂಬ ಭ್ರಮಾಲೋಕ

ನೀ ಒಗೆದದ್ದು ಕೊಳೆಯಾದುದಕೆ ಅಲ್ಲ
ಬಣ್ಣ ಮಾಸಿದೆ ಎಂದು ಸಾಕಾಗಿ

ಹೋಗಲಿ ಬಿಡು ಜಗದ ಮಾರುಕಟ್ಟೆಯಲಿ
ಈಗ ನೂರಾರು ಹೊಸ ಮಾಲುಗಳು ಕೊಂಡು
ಧರಿಸುವ ನಿನ್ನಾಸೆಗೆ ನೀರೆರೆಯಲಾರೆ

ನನದು ನನಗೆ ಸರಿ ನಿನದು ನಿನಗೆ ಸರಿ
ಒಟ್ಟಿನಲಿ ಇದೇ ಈ ಬಾಳಿನ ಪರಿ

ನೋವು , ಹತಾಶೆ , ನಿರಾಸೆಯ ಮನಕೆ
ನೂರೆಂಟು ಗಲಿಬಿಲಿ ಕರಡಿಯ ಬಿಗಿ ಹಿಡಿತವ
ಬಿಡಿಸಿಕೊಳಲು ಒಂದಷ್ಟು ಕಚಗುಳಿ

ಬಾಳ ಹಾದಿಯಲಿ ಬಿಸಿಲಿಗೆ ದಣಿದವರು
ಪಯಣ ಮೊಟುಕುಗೊಳಿಸಿದರೆ
ನಿನಗೇಕೆ ಧಾವಂತ  ಬಿಡು
ಚಿಂತೆ

ನಿನ್ನ ಹಾದಿ ನೀ ಹಿಡಿದು ಮತ್ತೆ ಸಿಗುವ
ದಾರಿ ಹೋಕರ ಮಾತಿಗೆಳೆಯದೆ
ಮಾತಿಗಿಳಿಯದೇ ಮೌನದೀ ಸಾಗು

ಇಲ್ಲದಿರೆ ತಲುಪುವ ಗುರಿ ದೂರಾದೀತು ಜೋಕೆ
ಭ್ರಮೆಯನೊಮ್ಮೆ ಕೊಡವಿ ಹಗುರಾಗಿ
ಕಾಲು ಜಾಡಿಸಿ ಕೊಂಚ ದಣಿವಾರಿಸಿಕೊಂಡು
ನಡೆ ನಡೆ ಮುಂದೆ ಮುಂದೆ...

----ಸಿದ್ದು ಯಾಪಲಪರವಿ

Monday, December 4, 2017

ಕೈ ಹಿಡಿದು ನಡೆಸು ತಂದೆ

*ಕೈ ಹಿಡಿದು ನಡೆಸು ತಂದೆ*

ಹುಟ್ಟಿದಾಗ ಬಾಯಲ್ಲಿ ಇಟ್ಟ
ಬಂಗಾರದ ಚಮಚೆ ಹಾಲು ತುಂಬಿದ 
ಬೆಳ್ಳಿಯ ಬಟ್ಟಲು ಕಲಸಿದ ಗೋಡಂಬಿ
ಸಕ್ಕರೆಯ ತುಂಬ ಬರೀ ಅಕ್ಕರೆ

ನಸುನಗುತ ಬೆಳೆದ ಬಾಲ್ಯದ ಸಿರಿಸಂಪದ
ಈಗೊಂದು ಹೀಗೊಂದು ಬರೀ ನೆನಪು

ಮುಂದೆ ಸಿರಿಯೊಳಡಗಿದ ಬಡತನ
ಹೇಳಲು ತೋರಲು ಎಲ್ಲವೂ ಉಂಟು
ಆದರೆ ಬರಿಗೈ ದಾಸನಾಗಿ ಅಲೆಯುವ
ಖಾಲಿ ಕೈ ಫಕೀರ

ಹೋರಾಟ ನೋವ ನುಂಗುತ ಸಾಗಿದ
ಪಯಣದಲಿ ದಣಿವರಿಯದ ಧಣಿತನದ
ಮೆರುಗಿನ ಮುಸುಕು

ಆರ್ಧ ಹಾದಿ ಸಾಗಿದರೂ ನಿಲ್ಲದ ಹೋ
ರಾಟ ಒಂಟಿ ದುಃಖಕೆ ಇಲ್ಲ ಯಾರ ಸಾಧ್

ಹಾಡಬೇಕು ನಲಿಯಬೇಕು ಅಪ್ಪ
ಹೊರಿಸಿದ ನೊಗ ಹೊರಬೇಕು
ಹೊಲ ಹರಗಬೇಕು ಕಳೆ ತೆಗೀಬೇಕು
ಬೆಳಿ ಬೆಳೀಬೇಕು

ಸಾಕೀ ಧಣಿತನದ ಮುಖವಾಡ ಅಂಗಲಾಚಿ
ಬೇಡಬೇಕು ಮಹಾ ದೇವನ
ಕೊಡು ತಂದೆ ಹಿಡಿ ತುಂಬ ಹಿಡಿ
ಹಿಡಿ ರೊಕ್ಕ ಕರಗಿ ನೀರಾಗಲು
ಈ
ದುಃಖ-ದುಮ್ಮಾನ  ದುಗುಡ

ಇನ್ನೆಷ್ಟು ದಿನ ಈ ಅಗ್ನಿಪರೀಕ್ಷೆ ಸೋತು
ಕರಕಲಾಗದೇ ಎದ್ದು ಹೋದರು ನಮ್ಮ
ಹಿರಿಯರು ಸೋಲನೊಪ್ಪದೇ ಅಪ್ಪದೇ
ಕೊಟ್ಟ ಮಾತು ತಪ್ಪದೇ

ಕೈಕಾಲು ದಣಿದಿರಲು ದಾರಿ ಸಾಗೀತು
ಹೇಗೆ ? ನಗು ಅರಳುವದಾದರೂ ಹೇಗೆ ?

ಮಾತು ಮೌನವಾಗುವ ಮುನ್ನ
ಉಸಿರು ನಿಟ್ಟುಸಿರಾಗಿ ನಿಲುವ
ಮೊದಲೇ ಕೃಪೆ ಮಾಡು
ತಂದೆ ನಾ ಕಾಲನ ಹೊಡೆತಕೆ ಸಿಕ್ಕು
ನಲುಗಿ ನರಳುವ ಮುನ್ನ.

---ಸಿದ್ದು ಯಾಪಲಪರವಿ

Sunday, November 26, 2017

ವಿದಾಯದ ಮಿಲನ

*ವಿದಾಯದ ಮಿಲನ*

ಎರಡೂ ಅಷ್ಟೇ ಪೂರಕ
ಪ್ರತಿ ಮಿಲನಕೂ ಇರಲೇಬೇಕು
ವಿದಾಯ ವಿದಾಯವಿಲ್ಲದೆ ಮಿಲನಿಸುವು-
ದಾದರೂ ಹೇಗೆ ?

ಹೋಗುವೆ ಅಲ್ಲ ಹೋಗಿ-
ಬರುವೆ ಮತ್ತೆ ಮತ್ತೆ ನಾ-
ನೀ

ಹತ್ತಿರವಿದ್ದವರು ಸದಾ ದೂರ ನೀ
ದೂರವಿದ್ದರೂ ಇಲ್ಲೇ ಹತ್ತಿರ
ಹಾಗಂತ ಬೇಡವೇ ಬೇಡ ಸದಾ  ನಾ
ಹತ್ತಿರ

ದೂರದೂರಿನ ಮಿಲನಕೆ ಸಾವಿರದ
ಸಾವೇ ಇರದ ಸವಿಸುಖ ಚಿಮ್ಮಿ
ಪುಟಿಯುವ ಜೀವತಾರುಣ್ಯ ವಯ
ಮಾನಕೂ ಮೀರಿದ ತೀವ್ರತೆ

ಇದು ಬರೀ ಕೂಡುವಿಕೆಯಲ್ಲ ನಾವೇ
ಕಳೆದುಹೋಗುವ ಪರಿ ಪರಿ
ಏದುರಿಸ ಸಂಚಲನಕೆ ಅಪರಿಮಿತ
ಲಯ-ರಾಗ-ತಾಳ-ಮೇಳಗಳ
ಮಹಾಸಮ್ಮೇಳನ

ಮತ್ತೆ ಮತ್ತೆ ಸೇರೋಣ ಆಗೊಮ್ಮೆ
ಈಗೊಮ್ಮೆ ಮಗದೊಮ್ಮೆ ನಿತ್ಯ ಬರೀ
ಮಾತಾಡೋಣ
ಸೇರಿದಾಗ ಎಲ್ಲ ಕೂಡಿ ಕಳೆಯೋಣ

ವಿದಾಯ-ಮಿಲನ ಎರಡೂ ಅವನೇ
ಹೊಣೆಗಾರ ಬಾ ಎಂದಾಗ ಬರೋಣ
ಹೋಗು ಎಂದಾಗ ಸುಮ್ಮನೇ ನಡೆದು
ಬಿಡೋಣ

ಮತ್ತೆ ಮಿಲನದ ಸಡಗರವ
ನೆನಪಿನಲಿ ನೆನೆಯುತ್ತ ನೆನೆಯುತ.

---ಸಿದ್ದು ಯಾಪಲಪರವಿ.

Sunday, November 12, 2017

ಮಾಯವಾದ ಪ್ರೇಮ

*ಲವ್ ಕಾಲ*

*ಮಾಯವಾದ ಪ್ರೇಮ ಏನಿದ್ದರೂ ಡೇಟಿಂಗ್*

ನನ್ನ ಬ್ಲಾಗಿನ ಜನಪ್ರಿಯ ಅಂಕಣ *ಲವ್ ಕಾಲ* .

ಇತ್ತೀಚೆಗೆ ಫೇಸ್ ಬುಕ್ ಭರಾಟೆಯಲಿ ಸುದೀರ್ಘ ಬರಹ ಮಂಕಾಗಿದೆ. ಓದುವ ಪುರುಸೊತ್ತೇ ಇಲ್ಲ .

ಅಲ್ಲಲ್ಲಿ ಗಂಭೀರ ಓದುಗರು ಸಿಗುತ್ತಾರೆ ಎಂಬ ಕಾರಣಕ್ಕೆ ನಮ್ಮಂತವರು ಬರೆಯುತ್ತೇವೆ.

ಹೋಗಲಿ ಬಿಡಿ ವಿಷಯಕ್ಕೆ ಬರುತ್ತೇನೆ . ಸಾಹಿತ್ಯದ ವಿದ್ಯಾರ್ಥಿಯಾಗಿ ಅನೇಕ ಪ್ರೇಮ ಕಥೆಗಳನ್ನು ಓದಿದ್ದೇನೆ , ಕೇಳಿದ್ದೇನೆ ಹಾಗೆ ಹೇಳಿದ್ದೇನೆ .

ಆದರೆ ಈಗ ಅದಕ್ಕೆ *ಸಮಯವಿಲ್ಲ* ಎಂಬ ವಾತಾವರಣ . ಫಾಸ್ಟ್ ಫುಡ್ ಯುಗದಲ್ಲಿ ಫಾಸ್ಟ್ ಸಂಬಂಧಗಳು .
ಅಷ್ಟೇ ಬೇಗ ಹಳಸಿಬಿಡುತ್ತವೆ .

ಪ್ರೀತಿಸಿ ಮರ ಸುತ್ತಿ ಪ್ರೇಮ ಪತ್ರ ಬರೆಯುವುದು ಈಗ ಬಿಗ್ ಜೋಕ್ .

ಆಧುನಿಕ ದಿನಗಳ ಡೇಟಿಂಗ್ , ಲಿವ್ ಇನ್ ರಿಲೇಶನ್ , ವೀಕ್ ಎಂಡ್ ಸ್ಟೇ ಇತ್ಯಾದಿ ದೇಹಕೇಂದ್ರಿತ ಸಂಬಂಧಗಳು ತಲ್ಲಣವನುಂಟು ಮಾಡಿವೆ .

*ದೇಹವೇನು ಬಟ್ಟೆಯಾ ಬದಲಿಸಲು* ಎಂಬ ಕಾಲ ಹೋಗಿದೆ . ಕೊಳೆಯಾದ ಬಟ್ಟೆಯಂತೆ ಸಂಬಂಧಗಳು ಕೊಳೆತು ಕಳೆದು ಹೋಗುತ್ತವೆ , ಬದಲಾಗುತ್ತವೆ .

ಪ್ರೀತಿ-ಪ್ರೇಮ-ಪ್ರಣಯಗಳಲಿ ಹಿಂದೆ ಇದ್ದ ಥ್ರಿಲ್ ಈಗ ಇಲ್ಲವೇ ಇಲ್ಲ very practical and mechanical .

ನಾವು ವಿದ್ಯಾರ್ಥಿಗಳಾಗಿದ್ದಾಗ ಪ್ರತಿಶತಃ 80 ಪ್ರೇಮಿಗಳು ಇರುತ್ತಿದ್ದರು . ಎಲ್ಲವೂ ಬರೀ ತೇಲಾಡುವ ಅನುಭವ . ದೇಹಸಂಬಂಧ , ಮದುವೆ ಏನೂ ಇಲ್ಲ !

ಗಣ ಗಣ ತಿರುಗಿ , ಗಂಟೆಗಟ್ಟಲೆ ಮಾತಾಡಿ , ನೂರಾರು ಪುಟ ಪತ್ರ ಬರೆದು ಊರು ಸೇರೋದು ಅಷ್ಟೇ !!

ಈಗ ವಾತಾವರಣಕ್ಕೆ ತಕ್ಕಂತೆ ಪ್ರೀತಿ , ಅದರ ಸ್ಥಿತಿಯೂ ಭಿನ್ನ . ಭಾವುಕತೆ ಮಾಯ .

SMS , fb ,watsapp ಇತ್ಯಾದಿ ಬರಹಗಳ short ಸಂದೇಶಗಳಂತೆ ಅಷ್ಟೇ short ಆಗಿ ಮುಗಿದುಬಿಡುತ್ತವೆ .

ಕಾಲೇಜಿನ ಸಂಬಂಧಗಳು , ವೃತ್ತಿ ಬದುಕಿನ ಸಂಬಂಧಗಳು ಯಾವುದೇ ಇರಲಿ very short and hot no sweet .
ಭಾವ ತೀವ್ರತೆಯ ಕೊರತೆ .

*ಆದರೂ ಲಕ್ಷಕ್ಕೆ ಒಂದು ಜೋಡಿ ಹಕ್ಕಿಗಳು ಹಾರುತ್ತವೆ*

ಉರ್ದು ಹಾಗೂ ಹಿಂದಿ ಭಾಷೆಯಲ್ಲಿ ಬರೆದ *ಸಾಹಿರ್ ಲೂಧಿಯಾನ್ವಿ ಹಾಗೂ ಅಮೃತಾ ಪ್ರಿತಮ್* ನನ್ನನ್ನು ಈಗಲೂ ಕಾಡುತ್ತಾರೆ .

ಕೇವಲ 59 ವರ್ಷ ಬದುಕಿದ ಸಾಹಿರ್ ಎಂದಿಗೂ ಸಾಯುವದಿಲ್ಲ . ಪ್ರಿತಮ್ ತನಗೆ ಸಿಗದ ಸಾಹಿರ್ ನೆನಪಲಿ ಹೆಚ್ಚು ಕಾಲ ಬದುಕಿ ಅಷ್ಟೇ ತೀವ್ರವಾಗಿ ಬರೆದು ಅಮರಳಾಗಿದ್ದಾಳೆ .

ಅವನು ಸೇದಿ ಬಿಸಾಕಿದ ತುಂಡು ಸಿಗರೇಟ್ , ಅವಳು ಕುಡಿದಿಟ್ಟ ಚಹಾದ ಕಪ್ ಪ್ರೇಮ ಸಂಕೇತದ ಪ್ರತಿಮೆಗಳು .

ಅವನ ಹಾಡುಗಳನ್ನು ಗುನುಗುನಿಸುವ ಕಂಠದಲಿ ಸಾಹಿರ್ ಜೀವಂತವಾಗಿದ್ದಾನೆ .

ಇಂತಹ ಭಾವುಕ ಲೋಕದಲ್ಲಿ ತೇಲಾಡಿದ ಪ್ರೇಮ ಪ್ರಕರಣಗಳು ನಮ್ಮ ಯುವಕರಿಗೆ ತಮಾಷೆಯಾಗಿ ಕಾಣುವದು ಸಹಜ .

ದೇಹಯಜ್ಞ ಯುಗದಲ್ಲಿ ಬೆಂದು ಹೋಗುವ ಯುವಕರು ತಮ್ಮ ಜೀವನ ಶೈಲಿಯನ್ನು ಕೊಂಚ ಬದಲಾಯಿಸಿಕೊಳ್ಳಬೇಕು ಎಂದನಿಸುವುದು ಸಹಜ .

ನಾನು *ವಾಸ್ತವದಲೆಗಳ ಮೇಲೆ ಭಾವ ಪಯಣದಲಿ* ಇದ್ದೇನೆ ಬೇಕಾದರೆ ನೀವು ಬನ್ನಿ , ಕರೆದುಕೊಂಡು ಹೋಗುವೆ .

---ಸಿದ್ದು ಯಾಪಲಪರವಿ.

Saturday, October 21, 2017

*ಕನಸಿಗೊಂದು ಓಲೆ-1*

*ಕನಸಿಗೊಂದು ಓಲೆ-1*

ಹಲೋ ಚಿನ್ನು ,

ಹೇಗಿದ್ದೀಯಾ ? ಮನಸು ಎಂತಹ ವಿಚಿತ್ರ ನೋಡು. ಹೊಸ , ಹೊಸ ವಿಚಾರಗಳು ಹೊಳೆಯುತ್ತವೆ. 

ದಿನವೀಡಿ ಕೆಲಸಗಳ ಒತ್ತಡಗಳ ಮಧ್ಯೆ *ಒಳಮನಸು* ಏನೇನೋ ಆಲೋಚನೆ ಮಾಡುತ್ತಾ ಇರುತ್ತದೆ.

ಅವುಗಳನ್ನೆಲ್ಲ ನಿನಗೆ ಹೇಳಲೇಬೇಕೆಂಬ subconscious mind ಮಾತನ್ನು ನಿರಾಕರಿಸಲಾಗುವುದಿಲ್ಲ . ಹಾಗಂತ phone ಮಾಡಿ ಗಂಟೆಗಟ್ಟಲೆ ಮಗುವಿನ ಹಾಗೆ ಹೇಳಲು ಸಮಯ ನನಗೂ ಇಲ್ಲ , ನಿನಗೂ ಇಲ್ಲ !

ಅದಕ್ಕೆ ನನ್ನ ಇಡೀ ದಿನದ ಒಟ್ಟು ಅನುಭವಗಳ ಕ್ರೋಢೀಕರಿಸಿ ಚುಟುಕಾಗಿ *ಪತ್ರ* ಬರೆಯುತ್ತೇನೆ : ನಿನಗೆ ಬಿಡುವಾದಾಗ ಆರಾಮಾಗಿ ಓದು ಚಿನ್ನ .

ಈ *ಕನಸಿಗೊಂದು ಓಲೆಯನ್ನ* ಬೇರೆಯವರೂ ಓದಲಿ ಬಿಡು ! ಒಂದು ಕಾಲಕ್ಕೆ ನಾವು ಬರೆದದ್ದು ಯಾರೂ ಓದಬಾರದೆಂದು ಗುಟ್ಟಾಗಿ *ಡೈರಿ* ಬರೆಯುತ್ತಿದ್ದೆವಲ್ಲ , ಆದರೆ ಈಗ ವಿಚಿತ್ರ ಎಂದರೆ ಗುಟ್ಟಾಗಿ ಬರೆದದ್ದು ಎಲ್ಲರೂ ಓದಿ *like* ಮಾಡಬೇಕು ಅಂತ ಬೇರೆ ಬಯಸುತ್ತಲ್ಲ ಮಂಗ ಮನಸು . 

ವೈಯುಕ್ತಿಕ ಸಂಗತಿಗಳು ಎಲ್ಲರಿಗೂ , ಎಲ್ಲ ಕಾಲಕ್ಕೆ , ಎಲ್ಲ ದೇಶಗಳಿಗೆ ಅನ್ವಯಿಸುವ universal quality ಹೊಂದಿದ impersonal ಗುಣ ಹೊಂದಿದರೆ ಮಾತ್ರ ಅದು ಬಹು ಕಾಲ ನಿಲ್ಲುತ್ತದೆ ಎಂಬ ಗುರುಗಳ ಮಾತನ್ನು ಗಮನದಲಿ ಇಟ್ಟುಕೊಂಡು ಬರೆಯುತ್ತೇನೆ , ಬೇಸರವಾದರೆ ಹೇಳು.

ಹೇಳುವ ರೀತಿ ಬದಲಿಸಿಕೊಳ್ಳುತ್ತೇನೆ.

ಹಬ್ಬಕ್ಕೆ ಈಗ ಊರಿಗೆ , ಬಂದ ಮೇಲೆ ಮತ್ತೆ ಬರೆಯುವೆ.

Bye bye 

ನಿನ್ನ ಪ್ರೀತಿಯ 

*ಅಲೆಮಾರಿ*

(  ಸಿದ್ದು ಯಾಪಲಪರವಿ )

18-10-2017