Sunday, October 21, 2018

ಮುಚ್ಚಿಟ್ಟ ಕಾಮ...

*ಮುಚ್ಚಿಟ್ಟ ಕಾಮ ಹಾವಿನ ಹೆಡೆಯಾಗಿ ಕಾಡಿತ್ತು*

ಈಗ #metoo , ಈ ಹಿಂದೆ ನಿರಂತರ ಅತ್ಯಾಚಾರಗಳು.
ವಿವಿಧ ಕ್ಷೇತ್ರಗಳಲ್ಲಿ ದುಡಿಯುವ ಮಹಿಳೆಯರ ಲೈಂಗಿಕ ಶೋಷಣೆ ಬಯಲಿಗೆ ಬರುವುದೇ ಇಲ್ಲ.

ಈಗ ತಾರಾಮಣಿಗಳು, ಸಾಮಾಜಿಕ ಜಾಲತಾಣಗಳಲಿ ವೈರಲ್ ಆಗುವ ಸಾಮರ್ಥ್ಯ ಇದ್ದವರು, ಮುಂದೆ ದುಡಿಯುವ ಅನಿವಾರ್ಯತೆ ಇಲ್ಲದೆ ಬದುಕುವ ಸಾಮರ್ಥ್ಯ ಇದ್ದವರು ದನಿ ಎತ್ತಿದ್ದು ಸ್ವಾಗತಾರ್ಹ.

ಅತಿಯಾದ ಮಹತ್ವಾಕಾಂಕ್ಷೆ ಇಟ್ಟುಕೊಂಡು,  ಹೇಗಾದರೂ ಆಗಲಿ ಹಣ, ಖ್ಯಾತಿ ಗಳಿಸಲು give and take ತಂತ್ರ ಬಳಸಿರುವುದು ಕೂಡ open secret.

ಆದರೂ ಬಳಸುವ ಪ್ರಕ್ರಿಯೆಯಲ್ಲಿ ಹೆಣ್ಣೇ ಬಲಿಪಶು.
‘ ನಿನ್ನ ಅವಕಾಶಕ್ಕಾಗಿ ಅವನಿಗೆ ದಕ್ಕಿದ್ದೀಯಾ ನಾನೂ ಯಾಕೆ ಒಂದು ಕೈ ನೋಡಬಾರದು ‘ ಎಂಬ ಮನೋಧರ್ಮದ ವಿಕೃತ ಮನಸ್ಥಿತಿಯಿಂದಾಗಿ ಶೋಷಣೆ ಈಗಲೂ  ಸಾಗಿಯೇ ಇದೆ.

ಈಗ ನಡೆದಿರುವ ವಾದ ವಿವಾದ ಸರಣಿಯಲಿ ಎಲ್ಲರೂ ಕಳ್ಳರೆಂಬ ಪಾಪಪ್ರಜ್ಞೆಯ ರುದ್ರನರ್ತನ.‌ ಸರಿ-ತಪ್ಪು, ಗಂಡು-ಹೆಣ್ಣು ಎಂಬ ಭಾವದಾಚೆಗಿನ ಅನುಸಂಧಾನ ಇದಾಗಬೇಕು.

ತುಂಬಾ ಪರಿಶ್ರಮ ಪಡದೆ ಮೇಲೆ ಬರಬೇಕೆಂದು ಬಯಸುವವರು ಮಾತ್ರ #metoo ಸುಳಿಗೆ ಸಿಕ್ಕಿ ಬಿದ್ದಿದ್ದಾರೆ‌. ಬೇಡ ಎಂದು ತಿರಸ್ಕರಿಸಿದವರು ತಮ್ಮ ಸ್ವಯಂ ಪ್ರಭೆಯಿಂದ ಕೊಂಚ ನಿಧಾನವಾಗಿ ಮೇಲೇರಿದ್ದಾರೆ.

Godfather ಎಂಬ white collar ವ್ಯಕ್ತಿಗಳ ತೆವಲಿಗೆ ಮನಸಿರದಿದ್ದರೂ ಮಹತ್ವಾಕಾಂಕ್ಷೆ ಬಲಿತೆಗೆದುಕೊಳ್ಳುತ್ತದೆ.

*ಹೆಣ್ಣು ಮಾಯೆಯಲ್ಲ, ಹೊನ್ನು ಮಾಯೆಯಲ್ಲ, ಮಣ್ಣೂ ಮಾಯೆಯಲ್ಲ, ಮನದ ಮುಂದಣ ಆಸೆಯೇ ಮಾಯೆ* ಎಂಬ ಶರಣರ, ಸಂತರ ಮಾತುಗಳ ಅರ್ಥ ಮಾಡಿಕೊಳ್ಳಲಾರದಷ್ಟು ನಾವು ಮೂರ್ಖರಲ್ಲ. ನಮ್ಮ ಪುರಾತನರು ಗುರುತಿಸಿದ ಮೊದಲ ಮಾಯೆಯೇ ಗಂಡಿಗೆ ಹೆಣ್ಣು, ಹೆಣ್ಣಿಗೆ ಗಂಡು. ಅರ್ಥಾತ್‌ ಕಾಮ.

ಆದರೆ ನಮಗೆ ಕಾಮದ ಕುರಿತು ಸಾರ್ವಜನಿಕ ಮಾತುಕತೆ, ಸಂವಾದ, ಚರ್ಚೆ, ಜನಜಾಗೃತಿ ಏನೂ ಬೇಡ. ಏನಿದ್ದರೂ ಎಲ್ಲ ಗುಟ್ಟಾಗಿಯೇ ನಡೆಯಬೇಕು.

ಯಾಕೆಂದರೆ ನಮ್ಮದು ಶೀಲವಂತ ಸಂಸ್ಕೃತಿ.  ಕಾಮದ ಕುರಿತ ಮಡಿವಂತಿಕೆ, ಲೈಂಗಿಕ ಶಿಕ್ಷಣದ ಕೊರತೆ ನಮ್ಮನ್ನು ಈ ಕಾಮ ಕೂಪಕೆ ದೂಡಿದೆ.

ನೀರಡಡಿಕೆ-ಊಟ-ನಿದ್ದೆಯಂತೆ ಕಾಮವೂ ಮನುಷ್ಯನ ಅಗತ್ಯ, ಇದನ್ನು ಉಳಿದ ಅಗತ್ಯಗಳಂತೆ ಹೇಗೆ ಮಿತವಾಗಿ ಜಾಗರೂಕತೆಯಿಂದ ಬಳಸಬೇಕೆಂದು ಹೇಳುವ ಸಂಕೋಚದಿಂದಾಗಿ *ಕಾಮ* ಭಯ, ಕುತೂಹಲ ಹಾಗೂ ಮನೋರೋಗವಾಗಿ ನಮ್ಮನ್ನು ಕಾಡಿ ಮೆತ್ತಗೆ ಮಾಡಿದೆ.

ಅದು ತಾನಾಗಿಯೇ ಅರ್ಥವಾಗುವ ವಿದ್ಯೆ ಎಂಬ ನಂಬಿಕೆ ಇಂದಿನ ಈ ಸ್ಥಿತಿಗೆ ಕಾರಣ. ಆಹಾರ, ವಿಹಾರ ಕ್ರಮಗಳಲಿ ಗಂಟೆ ಗಟ್ಟಲೆ ಮಾತನಾಡುವ ನಾವು ಕಾಮದ ವಿಷಯ ಬಂದ ಕೂಡಲೇ ಗಪ್ ಚುಪ್. ಶ್ ! ಎಂಬ ಸನ್ನೆ ಸೂಕ್ಷ್ಮತೆ.

ಜಗತ್ತಿನ ಯಾವುದೇ ಮುಂದುವರೆದ  ರಾಷ್ಟ್ರಗಳ ಬಹು ದೊಡ್ಡ ಸಂಗತಿ ಕಾಮವಾಗಿ ಉಳಿದಿಲ್ಲ.
ಆದರೆ ನಾವದನ್ನು ವ್ಯಾಖ್ಯಾನಿಸುವ ರೀತಿಯೇ ವಿಪರೀತ. ಅವರದು ಸ್ವೇಚ್ಛಾಚಾರ, ಸಂಸ್ಕೃತಿ‌ ಹೀನ ಎಂಬ ಹೀಗಳಿಕೆ. ಮುಚ್ಚಿಡಬೇಕಾದ ಕಾಮ ಹೀಗೆ ಬಟಾ ಬಯಲಾಗಬಾರದೆಂಬ ಮಡಿವಂತ ಮಾತು ಆದರೆ ಮನಸಿನ ತುಂಬ ಹೀನ ಆಲೋಚನೆಗಳ ಹಾದರ.

*ಕಂಡವರ ಖಾಸಗಿ ಕಾಮುಕ ಬದುಕಿನ ಬಗ್ಗೆ ಟೀಕೆ ಮಾಡಿ ಕಾಲಹರಣ ಮಾಡುವ ಬಾಯಿಚಪಲ, ಒಣ ವೇದಾಂತ*.

ಬಾಲ್ಯದಿಂದಲೇ ನೀಡದ ಲೈಂಗಿಕ ಶಿಕ್ಷಣದ ಅರಿವು ಈ ಎಲ್ಲ ದುರಂತಗಳ ಆಗರ.
ಶಾಲಾ ಕಾಲೇಜುಗಳಲ್ಲಿ ಶಿಕ್ಷಕರಿಗೆ, ಪಾಲಕರಿಗೆ ಸಂಕೋಚವಾದರೆ ಸೂಕ್ತ ವೈದ್ಯರು ಹಾಗೂ ಮನೋವಿಜ್ಞಾನದ ಆಪ್ತಸಮಾಲೋಚಕರ ಮೂಲಕ ಹೇಳಿಸುವ ಔದಾರ್ಯವೂ ಕಾಣದಾಗಿದೆ.

*ಧರ್ಮದ ಹೆಸರಿನಲ್ಲಿ, ಮಡಿವಂತಿಕೆ ನೆಪದಲ್ಲಿ ಮುಚ್ಚಿಟ್ಟ ಕಾಮ ಬೆಳೆದಾದ ಮೇಲೆ ತೊಡೆಯ ಮೇಲೆ ಸುಳಿದಾಡುವ ಘಟಸರ್ಪವಾಗಿ ಬುಸುಗುಟ್ಟು ಯುವಕರನ್ನು ಕಚ್ಚಿ ಸಾಯಿಸುತ್ತಿದೆ*.

ಮೊನ್ನಿನ ನನ್ನ #metoo ಲೇಖನ ಓದಿ ಪ್ರತಿಕ್ರಿಯಿಸಿದ  ಅಮೆರಿಕಾ ನಿವಾಸಿ ಕನ್ನಡಿಗ ಸ್ನೇಹಿತೆ ವೃತ್ತಿಯಿಂದ ವೈದ್ಯರು.
ಇದೇ ವಿಷಯ ಚರ್ಚಿಸಿದರು. ನಮ್ಮ ಕುಟುಂಬ ಹಾಗೂ ಶಿಕ್ಷಣ ವ್ಯವಸ್ಥೆ ಕುರಿತು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

ಆರಂಭದಲ್ಲಿ ಅಲ್ಲಿನ ಮುಕ್ತ ಕಾಮದ ಬಗ್ಗೆ ಹೇಸಿ ಭಾವ ಇತ್ತಂತೆ. ಇಲ್ಲಿ ತಮ್ಮ ಮಕ್ಕಳು ಹಾಳಾದರೆ ಹೇಗೆಂಬ ಆತಂಕವೂ ಇತ್ತಂತೆ. ಆದರೆ ಅಲ್ಲಿನ ಶಾಲೆಗಳಲ್ಲಿ ನೀಡುವ ಲೈಂಗಿಕ ಶಿಕ್ಷಣದ ವಿಧಾನದಿಂದಾಗಿ ಅವರ ಆತಂಕ ದೂರಾದ ಬಗೆ ವಿವರಿಸಿದರು.

ನಮ್ಮದೇನಿದ್ದರೂ ಅಪೂರ್ಣ ವಿಧಾನ. ಯಾವುದರಲ್ಲೂ ಆಳ, ತಲಸ್ಪರ್ಶಿ ಅಧ್ಯಯನ ಇರುವುದಿಲ್ಲ. ಧೈರ್ಯದಿಂದ, ಆತ್ಮವಿಶ್ವಾಸ ಮೂಡುವ ರೀತಿಯ ಆಳ ನಿರೂಪಣೆ ಇರದ superficial ಗೌಪ್ಯ ನೀತಿಯಿಂದ ಪರಿಪೂರ್ಣ ಶಿಕ್ಷಣ ದಕ್ಕುವುದಿಲ್ಲ. ಕೆಲವೊಮ್ಮೆ ಇದರಿಂದಾಗಿ ಅದನ್ನು ನೀಡುವ ಜನರೇ ಶೋಷಕರಾಗುವ ಅಪಾಯ ಉಂಟಾಗುತ್ತದೆ.

ಮುಕ್ತ ಮಾತುಗಳ ಸಹಿಸುವ ಮನೋಧರ್ಮ ನಮ್ಮದಲ್ಲ. *ಏ ಹಾಗೆ ಮಾತಾಡಬೇಡ, ಮಕ್ಕಳು ಮಹಿಳೆಯರಿದ್ದಾರೆ* ಎಂಬ ಎಚ್ಚೆರದ ಹಿಂಜರಿತ.

ಆಧ್ಯಾತ್ಮದ ಕೆಲವು ಭಾಗವಾಗಿ ಕಾಮದ ಕುರಿತು ಮಾತನಾಡಿದ ಆಧ್ಯಾತ್ಮ ಚಿಂತಕ  ಓಶೋನನ್ನು ಸೆಕ್ಸ್ ಗುರು ಎಂದು ಹೀಯಾಳಿಸಲಾಯಿತು.  ಅನುಭವ ಚಿತ್ರಕ್ಕೆ ಎ ಸರ್ಟಿಫಿಕೇಟ್ ನೀಡಲಾಯಿತು.

ಮನದ ಮುಂದಣ ಆಸೆಯ ನಿಯಂತ್ರಿಸುವ ಕಲೆಯನ್ನು ನಮ್ಮ ಧಾರ್ಮಿಕ ಮುಖಂಡರು ಹೇಳಿ ಕೊಡಲೇ ಇಲ್ಲ.

ಅವರು ಕೂಡ “ *ಹೆಣ್ಣು-ಹೊನ್ನು-ಮಣ್ಣು* ಮಾಯೆ ನೀವು ಅವುಗಳಿಂದ ದೂರ ಸರಿಯಿರಿ” ಎಂಬ ಅವಾಸ್ತವ, ಅಸಾಧ್ಯ ಹಿತವಚನಗಳ ಹೇಳುತ್ತ ಅವರೇ ಅವುಗಳ ದಾಸರಾಗಿ ಒದ್ದಾಡುತ್ತಾರೆ. ನಾವು ಅಂತಹ impractical ಸಂತರ ಕಾಲು ನೆಕ್ಕಿ ಕೃತಾರ್ಥರಾಗುತ್ತೇವೆ.

ಮುಚ್ಚಿಡ ಬಯಸುವ ಕಾಮದ ಕುರಿತು ಮುಕ್ತವಾಗಿ ಮಾತಾನಾಡಿ ಬರೆಯುವವರ ಮೇಲೆ ಸಂಸ್ಕೃತಿಯ ಹೆಸರಿನ ನೈತಿಕ ಪೋಲಿಸಗಿರಿ.

ಕೃಷಿ ಮಹಿಳೆಯರು, ಗಾರ್ಮೆಂಟ್ ಫ್ಯಾಕ್ಟರಿಗಳಲಿ ಹೊಟ್ಟೆ ಪಾಡಿಗಾಗಿ ದುಡಿಯುವ ಮಹಿಳೆಯರು ಮೇಸ್ತ್ರಿಗಳ ಕಾಮತೃಷೆಗಾಗಿ ಬಲಿಯಾಗುವವರ ಕಣ್ಣೀರು ಒರೆಸುವರಾರು?

ಸಾಮಾಜಿಕ ಜಾಲತಾಣದ ಗಂಧ ಗಾಳಿ ಗೊತ್ತಿರದ ಲಕ್ಷಾಂತರ ಮಹಿಳೆಯರಿಗೂ #metoo ಚಳುವಳಿ ನ್ಯಾಯ ಒದಗಿಸಲಿ.
ಇದು ಕೇವಲ ತಾರಾಮಣಿಗಳ ತಳಮಳ ಎಂಬ ನೆಪ ಮಾಡಿ  ಹತ್ತಿಕ್ಕುವ ಹುನ್ನಾರ ಸರಿಯಲ್ಲ.

*ಬಾಯಿ ಬಿಟ್ಟರೆ ಬಣ್ಣಗೇಡು*  ಎಂಬಂತಾಗಿ ಎಲ್ಲರೂ ಕಂಗಾಲಾಗದೇ ಧೈರ್ಯದಿಂದ ಎದುರಿಸಿ ಹೋರಾಟಕ್ಕೆ ಪರಿಹಾರ ಕಂಡು ಕೊಳ್ಳಬೇಕು.

ಹಿಂದಿನ  ವ್ಯವಸ್ಥೆಯ ತಪ್ಪಿನಿಂದಾಗಿ ನಾವು ತಪ್ಪು ಮಾಡಿದ್ದೇವೆ ಆದರೆ ಮುಂದೆ ಹೀಗಾಗುವುದನ್ನು ತಡೆಯಬೇಕೆಂಬ ಸಂಕಲ್ಪ ಮಾಡಬೇಕು.
ಈ ಚಳುವಳಿ ದುರುಪಯೋಗ ಮಾಡಿಕೊಂಡು ಸೆಲೆಬ್ರಿಟಿ ಪುರುಷರ ಮಾನ ಕಳೆಯುವ ಸಣ್ಣತನ ಬಿಡಬೇಕು.

ಶಿಕ್ಷಣ, ಮಾಧ್ಯಮ, ಹಾಗೂ ಧಾರ್ಮಿಕ ಮುಖಂಡರು ಸಕಾರಾತ್ಮಕ ಬೆಂಬಲ ನೀಡಬೇಕು.

ಎಷ್ಟೇ ಪರ-ವಿರೋಧ ಚರ್ಚೆಯಾದರೂ ಚಳುವಳಿ‌ಯನ್ನು ಹತ್ತಿಕ್ಕಬಾರದು.

#metoo #wetoo ಘೋಷವೂ ಮೊಳಗಲಿ…

*ಸಿದ್ದು ಯಾಪಲಪರವಿ*

No comments:

Post a Comment