Monday, October 29, 2018

ಬಿಸಿಲೂರಿನ ಕಥೆ

*ಬಿಸಿಲೂರಿನ ವ್ಯಥೆಯ ಕಥೆ*

ಇದನ್ನು ಹೇಳುವಾಗ ಇನ್ನಿಲ್ಲದ ಸಂಕಟ.
ಮನುಷ್ಯರ ಆಲೋಚನ ಕ್ರಮ ಹಾಗೂ ಸಾಮಾಜಿಕ ವ್ಯವಸ್ಥೆ ಬಗ್ಗೆ ಬೇಸರ.

ಕೆಲ ದಿನಗಳ ಹಿಂದೆ ಗೆಳೆಯರು ಮಾತನಾಡುತ್ತ ತಮ್ಮೂರಲಿ ನಡೆದ ಘಟನೆ ಹೇಳಿದರು , ನಿಮಗೂ ಹೇಳ್ತೇನೆ ಆದರೆ ನಾವು ಕೊಂಚ ಭಿನ್ನ ಆಯಾಮದಿಂದ , ಮುಕ್ತ ಮನಸಿನಿಂದ ಆಲೋಚಿಸೋಣ.

ಇಬ್ಬರಿಗೂ ಮದುವೆ ಆಗಿತ್ತು , ಒಳ್ಳೆಯ ಉದ್ಯೋಗ , ಆದರೂ ಪರಸ್ಪರ ಅನುರಾಗ ಉಂಟಾಯಿತು.

ಲೋಕದ ನಿಂದನೆಯಂತೆ ವಿವಾಹಯೇತರ ಸಂಬಂಧ ಅನ್ನೋಣ .

ಈ ಸುದ್ದಿ ಮೊದಲು ಎಲ್ಲಿಯೂ  ಹರಡಿರಲಿಲ್ಲ ಆದರೆ  ಒಮ್ಮೊಮ್ಮೆ ಹುಚ್ಚು ಮನಸಿನ ವಿಪರೀತ ಹುಚ್ಚಾಟಗಳು ಇಂತಹ ಅನಾಹುತ ಮಾಡಿಬಿಡುತ್ತವೆ .

ಇವರೂ ಅಂತಹ ಅನಾಹುತಕ್ಕೆ ಅವರೇ ಕೈ ಹಾಕಿದ್ದಾರೆ.

ತಮ್ಮ ಪ್ರೀತಿ-ಪ್ರೇಮ-ಪ್ರಣಯದ ದೃಶ್ಯಗಳನ್ನು ತಾವೇ shoot ಮಾಡಿ ನೋಡಿಕೊಂಡು ಸಂಭ್ರಮಿಸಿದ್ದರೆ ಸಾಕಾಗಿತ್ತು ಆದರೆ ಅದನ್ನು ಕಂಪ್ಯೂಟರ್ ಗೆ ಲೋಡ್ ಮಾಡಿದ್ದಾರೆ .

ದುರಾದೃಷ್ಟ ಕಂಪ್ಯೂಟರ್ ಕೆಟ್ಟು ಹೋಗಿದೆ , ಮೈಮರೆತ ಎಡವಟ್ಟು ಇನ್ನಿಲ್ಲದ ಅಪಾಯ ತಂದಿದೆ.

ರಿಪೇರಿ ಮಾಡುವವನ ವಿಕೃತ , ಅಮಾನವೀಯ ಮನಸ್ಸು ದುರಾಸೆಗೆ ದೂಡಿದೆ .

ಅವನು ಬ್ಲ್ಯಾಕ್ ಮೇಲ್ ಮಾಡಿ ದೊಡ್ಡ ಮೊತ್ತದ ಹಣಕ್ಕೆ ಪೀಡಿಸಿದ್ದಾನೆ.

ಹೊಂದಿಸುವುದು ವಿಳಂಬವಾದ ಕೂಡಲೇ ವಿಡಿಯೋ ವೈರಲ್ ಆಗಿ ಇಬ್ಬರ ಮಾನ , ಬದುಕು ಬಯಲಾಗಿದೆ.

ಸಮಾಜದ ನಿಂದನೆಗೆ ಪ್ರೇಮಿಗಳು ತಲ್ಲಣಿಸಿ ಬೆಂದು ಹೋಗಿದ್ದಾರೆ , ಸಂಸಾರದಲ್ಲಿ ಬಿರುಕು.

ನೊಂದ ವ್ಯಕ್ತಿ ತೀವ್ರ ಅನಾರೋಗ್ಯದಿಂದ ತೀರಿದ್ದು ಸಣ್ಣ ದುರಂತವಲ್ಲ.

ನಂತರ ತನ್ನ ಹೆಂಡತಿಯ ತಪ್ಪನ್ನು ಮನ್ನಿಸಿ ಮನೆಗೆ ಕರೆದುಕೊಂಡ ಗಂಡ ಆದರ್ಶ ಮೆರೆದಿದ್ದು ಅಭಿನಂದನೀಯ ಹಾಗೂ ಆದರಣೀಯ: ಆ ದಿವ್ಯ ಮನಸಿಗೆ ನೂರಾರು ನಮನಗಳು.

ಮಾನಸಿಕ ಒತ್ತಡದಿಂದ ತೀರಿ ಬದುಕು ಅಪೂರ್ಣಗೊಳಿಸಿದ ಗೆಳೆಯನಿಗಾಗಿ ವಿಷಾದಿಸೋಣ.

                              ***

ಮೇಲಿನ ಘಟನೆಯಲ್ಲಿ ಸಮಾಜ ಆ ಪ್ರೇಮಿಗಳ ಸಂಬಂಧವನ್ನು ಅಕ್ಷಮ್ಯ ಎಂದು ತೀರ್ಮಾನಿಸಿದ್ದು ಸರೀನಾ ?

ನಂತರ ಇದೇ ಖಾಸಗಿ ಪ್ರಕರಣ ಇಟ್ಟುಕೊಂಡು ಕೆಲಸದಿಂದ ತೆಗೆದದ್ದು ಮಾನವ ಹಕ್ಕಿನ ಉಲ್ಲಂಘನೆಯಲ್ಲವೆ  ?

ಸಮಾಜ ಅವರನ್ನು ಮಹಾ ಪಾಪಿಗಳು ಎಂದು ಆಡಿಕೊಂಡಿದ್ದು ಯಾವ ನ್ಯಾಯ  ?

ನೈತಿಕ ಬೆಂಬಲ ನೀಡಿ ಸಾಂತ್ವನದ ಮಾತುಗಳನ್ನು ಆಡಿದ್ದರೆ ಆ ವ್ಯಕ್ತಿ ಬದುಕುತ್ತಿರಲಿಲ್ಲವೆ ?

*ಇವೆಲ್ಲಕ್ಕಿಂತ ಮುಖ್ಯ ವಿಡಿಯೋ ಇಟ್ಟುಕೊಂಡು ಅವಮಾನಿಸಿದ ಕಂಪ್ಯೂಟರ್ ರಿಪೇರಿ ಮಾಡುವವ ಮುಖ್ಯ ಆರೋಪಿ* ಎಂದು ಯಾಕೆ ಪರಿಗಣಿಸಲಿಲ್ಲ ?

ಮತ್ತೊಬ್ಬರ ಖಾಸಗಿ ಸಂಗತಿಗಳು ಸರಿ ತಪ್ಪು ಎಂದು ನಿರ್ಣಯಿಸುವ ಅಧಿಕಾರ ನಮಗೆ ಕೊಟ್ಟವರು ಯಾರು ?

*ನಿಜವಾದ ಶಿಕ್ಷೆ ಆಗಬೇಕಾದದ್ದು ಅದನ್ನು ಹಬ್ಬಿಸಿದ ದೂರ್ತನಿಗೆ*

ಈ ನಿಟ್ಟಿನಲ್ಲಿ ಪ್ರಗತಿಪರ ಮನಸುಗಳು ಆಲೋಚನೆ ಮಾಡಿ ಅವನನ್ನು ಶಿಕ್ಷಿಸಬೇಕಿತ್ತು ಆದರೆ ಈ ಇಡೀ ಪ್ರಕರಣದಲ್ಲಿ ಮುಖ್ಯ ಆರೋಪಿ ಬಚಾವಾಗಿದ್ದು ವಿಪರ್ಯಾಸ.

                               ***

ಪ್ರೀತಿ-ಪ್ರೇಮ-ಪ್ರಣಯ , ಧರ್ಮ ಹಾಗೂ ಆಹಾರ ಪದ್ಧತಿ ವೈಯಕ್ತಿಕ ಅಭಿರುಚಿ. ಮಾನವನ ಹಕ್ಕು ಕೂಡಾ !

ಅಮೇರಿಕ ಹಾಗೂ ಇತರ ಮುಂದುವರೆದ ದೇಶಗಳ ಮಾದರಿಯಲ್ಲಿ *ಮಾನವ ಹಕ್ಕುಗಳ* ರಕ್ಷಣೆ ಗೊತ್ತಿದ್ದರೆ ಇಂತಹ ಅಪಾಯಗಳು ನಡೆಯುತ್ತಿರಲಿಲ್ಲ.

ನಮ್ಮ ಮನಸ್ಥಿತಿ ತುಂಬ ಬದಲಾಗಬೇಕಿದೆ.

ಮನುಷ್ಯ ಖಾಸಗಿ ಬದುಕಿನಲ್ಲಿ ತನಗೆ ಸರಿಕಂಡಂತೆ ಖುಷಿಯಿಂದ ಬದುಕುವ ವಾತಾವರಣ ರೂಪಿಸುವ ಜವಾಬ್ದಾರಿ ನಾಗರಿಕ ಸಮಾಜದ ಮೇಲಿದೆ .

                            ***

ಇಂತಹ ಘಟನೆಗಳು ನಮ್ಮ ಸುತ್ತಲೂ ನಡೆದಾಗ  ಅವಮಾನ ಮಾಡಿ ಅನುಕಂಪ ತೋರದೇ ಅನುಭೂತಿಯಿಂದ ( emphatically )
ನೋಡಬೇಕು.

ಇಂತ ತಪ್ಪು ನಮ್ಮಿಂದ  ಅಥವಾ ನಮ್ಮ ಬಂಧುಗಳಿಂದ ನಡೆದರೆ ನಮ್ಮ ಸ್ಥಿತಿ ಏನಾಗಬಹುದು ಎಂಬ ವಿವೇಚನೆಯಿಂದ  ಸಮರ್ಪಕ  ತೀರ್ಮಾನ ತೆಗೆದುಕೊಂಡು , ಮನುಷ್ಯರನ್ನು ಬದುಕಿಸುವ ಪುಣ್ಯದ ಕೆಲಸ ಮಾಡಬೇಕು.

*ನೈತಿಕತೆ , ಅನೈತಿಕತೆ ಎಂಬುದೊಂದು ಭ್ರಾಂತು*

ಈ ಭ್ರಮೆಯಿಂದ ಹೊರಬಂದು ಹೊಸ *ಮನುಷ್ಯರಾಗೋಣ, ಮಾನವರಾಗೋಣ*

( Joyful living in personal and professional life )

---ಸಿದ್ದು ಯಾಪಲಪರವಿ.

No comments:

Post a Comment