Wednesday, October 10, 2018

ಭಕ್ತಿ ಮತ್ತು ಪ್ರೀತಿ

*ಭಕ್ತಿ ಮತ್ತು ಪ್ರೀತಿ: ಅಗೋಚರ ಅನಂತ*

ಪ್ರತಿಯೊಬ್ಬರೂ ಸಂಕಟ ಬಂದಾಗ ವೆಂಕಟರಮಣ ಎಂತಲೋ , ಆಸ್ತಿಕ   ಶೃದ್ಧೆಯಿಂದಲೋ ಭಕ್ತಿಯಿಂದ ತಾವು ಸಂಬಿದ ಕಾಣದ ಶಕ್ತಿಯನ್ನು ಆರಾಧಿಸುತ್ತಾರೆ, ಕೆಲವೊಮ್ಮೆ ಗುಟ್ಟಾಗಿ.

ದೇವರು , ಧರ್ಮ ಮತ್ತು ನಂಬಿಕೆ ತುಂಬ ವೈಯಕ್ತಿಕ ಸಂಗತಿಗಳು.
ತನ್ನಾಸೆಯ ರತಿ ಸುಖ , ತಾನುಂಬುವ ಊಟದಂತೆ ದೈವ ಭಕ್ತಿಯೂ ಖಾಸಗಿ ಸಂಗತಿ ಮತ್ತು ವೈಯುಕ್ತಿಕ ನಂಬಿಕೆ.

ಮೌಢ್ಯತೆ ಮತ್ತು ನಂಬಿಕೆಗೆ ತುಂಬ ಅಂತರ , ಆದರೆ ನಾವು ಎರಡನ್ನೂ ಕಲಸು ಮೇಲೋಗರ ಮಾಡಿ ಮಾತಾಡುವುದು ಅಸಮಂಜಸ.

ಭಕ್ತಿಯ ಇನ್ನೊಂದು ರೂಪವೇ *ಧ್ಯಾನ* .
ಧ್ಯಾನಾನುಭವಕ್ಕೆ ಕೊನೆಯೆಂಬ ದಣಿವಿಲ್ಲ.

ಮನಸನು ನಿಗ್ರಹಿಸಿ ಅಪ್ರತಿಮ ಲೋಕಕೆ ಕೊಂಡೊಯ್ಯುವ ಚೈತನ್ಯವೇ ಧ್ಯಾನ.

ನಾವು ಮಾಡುವ ಪ್ರತಿ ಕೆಲಸದಲ್ಲಿ ಆಸಕ್ತಿ ಹುಟ್ಟಿ , ಗಂಭೀರವಾಗಿ ಪೂರೈಸುವುದೇ ಧ್ಯಾನಸ್ಥ ಮನಸ್ಥಿತಿ.

*ಪ್ರೀತಿ ಮತ್ತು ಭಕ್ತಿ* ಪರಸ್ಪರ  ಪೂರಕ .
ಪ್ರೀತಿಯಿಲ್ಲದೆ ಭಕ್ತಿ ಅಸಾಧ್ಯ.

ಎರಡೂ ಅನನ್ಯ ಹಾಗೂ ಅಮೂರ್ತ. ವಿವರಿಸಲಾಗದ ಭಾವನೆಗಳು.

ತಾಯಿ-ಮಗು , ಪ್ರೇಮಿ-ಪ್ರಿಯಕರ , ಗುರು-ಶಿಷ್ಯ ಹೀಗೆ ತೀವ್ರವಾಗಿ ಬೆಸೆದುಕೊಂಡಿರುವ ಭಾವನೆಗಳಲಿ ಭಕ್ತಿ ಹುದುಗಿರುತ್ತದೆ.

*ಭಕ್ತಿ ಮತ್ತು ಪ್ರೀತಿ* ಸಂಪೂರ್ಣ ಬಯಸುವುದು  ಸಮರ್ಪಣೆ ಹಾಗೂ ಶೃದ್ದೆ.

ಈ ಪ್ರಕ್ರಿಯೆಯಲ್ಲಿ ಬೇಸರ ಹಾಗೂ ನಿರಾಸೆಯ ಸೋಂಕಿರುವುದಿಲ್ಲ.

ಪಡೆದಷ್ಟು ಬೇಕೆನಿಸುವ ಬತ್ತದ ಚಿಲುಮೆ.
ಬೇಡವೆನಿಸದ ಜೀವನೋತ್ಸಾಹ.

ಶೃದ್ಧೆಯಿಂದ ಪ್ರೀತಿಸೋಣ , ಆರಾಧಿಸೋಣ , ಬದುಕಿನ ಪ್ರತಿ ಕ್ಷಣ ಪ್ರೀತಿಯಿಂದ.

( Joyful living in personal and profession life )

---ಸಿದ್ದು ಯಾಪಲಪರವಿ

No comments:

Post a Comment