Friday, October 12, 2018

ಮನಸು ಖಾಲಿ ಕೊಡ

*ಮನಸು  ಖಾಲಿ ಕೊಡ ಖಾಲಿ*

ಮನಸು ತುಂಬಿದ ಕೊಡವಾಗಲೆಂಬ
ಬಯಕೆಯಲಿ ಎಲ್ಲವೂ ಖಾಲಿ ಖಾಲಿ
ಖಾಲಿಯಾಗದೇ ತುಂಬುವುದಾದರೂ
ಹೇಗೆ ?

ತುಂಬದ ಪೂರ ಖಾಲಿಯೂ
ಆಗದ ಕೊಡದ ಗತಿ ಏನು ?

ಬೇಕೆನಿಸಿದ್ದು ಬೇಕಾದಾಗ
ಪಡೆಯುತ ಸಾಗಿದರೂ ಮುಗಿಯದ
ಆಸೆಯ ಹಂಗು

ಬೇಡುವ ಭರದಲಿ ಕೊಟ್ಟವರು
ಕಳೆದು ಹೋದ ಪರಿವೇ ಇಲ್ಲ !

ಕೋಡಂಗಿಯಾದ ಕೊಟ್ಟವ ಆಸೆಗಣ್ಣಿಂದ ಇಸಗೊಂಡವನ ಬಾಗಿಲ
ಕಾಯ್ದರೆ ಒಳಗೆ ಬಿಡುವ
ಭರವಸೆಯೂ ಇಲ್ಲ

ಕಾಯುವ , ಬೇಡುವ ತೊಳಲಾಟದಿ
ಬತ್ತದ ಬಯಕೆಗಳ ಬೆಂಬತ್ತಿ
ಬೆಟ್ಟಕ್ಕೆ ಬೊಗಳುವ ನಾಯಿ
ಕುಂಯ್ ಗುಟ್ಟು ಬಾಲ ಮುದುರಿ
ಓಡಿ ಹೋಗುವಾಗ ಬೀಳುವ
ಕಲ್ಲುಗಳ ಲೆಕ್ಕ ಬೇಡ

ಮನಸು ಮಾಡಿ ಸಿಗದುದ ಪಡೆಯಲು ಚಡಪಡಿಸದೆ ನಡೆದರೆ ಕೊಡ
ತುಂಬೀತು , ಬದುಕು ಬದುಕೀತು.

---ಸಿದ್ದು ಯಾಪಲಪರವಿ

No comments:

Post a Comment