Sunday, October 28, 2018

ಮೌನ ಅನಿವಾರ್ಯ

*ಮೌನ ಅನಿವಾರ್ಯ: ಕಾಲನಿಗಾಗಿ ಕಾಯೋಣ*

ಸುತ್ತಲೂ ನಡೆಯುವ ಘಟನೆಗಳ ಕುರಿತು ಮಾತನಾಡಬೇಕೆನಿಸುತ್ತದೆ. ಆದರೆ ಮಾತನಾಡಲಾಗದು, ಮಾತನಾಡಬಾರದು ಕೂಡ!

ಲೈಕ್ ಮೈಂಡೆಡ್ ಸಂಗಾತಿಗಳು ಎಂದು ಯಾರನ್ನು ಕರೆಯಬೇಕು, ಯಾಕೆ ಕರೆಯಬೇಕೆಂಬ ಅಪನಂಬಿಕೆ.

ಪರಿಸ್ಥಿತಿ ಒತ್ತಡಕ್ಕನುಗುಣವಾಗಿ ಮತ್ತು ಒಮ್ಮೊಮ್ಮೆ ವಿವೇಚನೆಗೆ ಮಂಕು ಬಡಿದಾಗ ಅನ್ಯಾಯದ ವಿರುದ್ಧ ದನಿ ಎತ್ತಲಾಗದ ಅಸಹಾಯಕತೆ.

ಮನುಷ್ಯನ ಸ್ವಾರ್ಥ, ಅವಕಾಶವಾದಿ ನಿಲುವು ಮತ್ತು ಅರ್ಥವಾಗದ ಅರ್ಧಸತ್ಯ ನಮ್ಮನ್ನು ಕಟ್ಟಿ ಹಾಕಿ ಬಾಯಿ ಮುಚ್ಚಿಸಿಬಿಡುತ್ತವೆ.

ಕಳೆದ ವಾರದಿಂದ ಹೊಟ್ಟೆಯಲಿ ವಿಪರೀತ ಸಂಕಟ. ಕಾರಣ ಗೊತ್ತಿದೆಯಾದರೂ ಮನಸು ಅನ್ಯಾಯ‌ ಸಹಿಸುವ ಅಸಹಾಕತೆಯಿಂದಾಗಿ ರೋಸಿ ಕುದಿಯುತ್ತಲಿದೆ.

ಒಂದು ಸುಳ್ಳನ್ನ ನೂರಲ್ಲ ಸಾವಿರ ಸಲ ಹೇಳಿ ಸತ್ಯವಾಗಿಸುವ ಹರಾಮಖೋರರ ನಡೆಯನ್ನು ಬೆಂಬಲಿಸುವ ಜನರೂ  ಇರುತ್ತಾರಲ್ಲ.

ನಮ್ಮನ್ನು ನಂಬಿದ ವ್ಯಕ್ತಿಗಳಿಗೆ ನಾವು ಅವರು ಜೀವಂತ ನಮ್ಮ ಜೊತೆಗಿದ್ದಾಗ ಮೋಸ ಮಾಡುತ್ತೇವೆ.‌ ನಮ್ಮ ಮುಖವಾಡದ ಸೋಗಲಾಡಿ ಮಾತುಗಳಿಂದಾಗಿ ಅವರು ಮೋಸ ಹೋಗಿದ್ದಾರೆಂಬ ಸತ್ಯ ನಮಗೂ ಗೊತ್ತಿರುತ್ತದೆ.
ಆದ್ದರಿಂದ ತಪ್ಪು ಒಪ್ಪಿಕೊಳ್ಳದೇ ಮೋಸ ಮಾಡುತ್ತಲೇ ಹೋಗುತ್ತೇವೆ.

ಅವರು ನಮ್ಮ ಮೋಸವನರಿಯದೇ ಒಂದು ದಿನ ಹೋಗಿಯೇ ಬಿಡುತ್ತಾರೆ.
ಇದ್ದಾಗ ನಮ್ಮ ಮೋಸವನರಿಯದೇ ಹೋದವರು, ಹೋದ ಮೇಲೆ ಖಂಡಿತ ತಮಗಾದ ಮೋಸವನ್ನು ಅರ್ಥಮಾಡಿಕೊಳ್ಳುತ್ತಾರೆ ಎಂಬುದು ಆಧ್ಯಾತ್ಮ ಹಾಗೂ ಆತ್ಮಾನುಸಂಧಾನದ ನಂಬಿಗೆ.

*ಮ್ಯಾಕಬೆತ್ ನಾಟಕದಲ್ಲಿ ರಾಜನನ್ನು ಕೊಂದ ಮ್ಯಾಕಬೆತ್ ಪಶ್ಚಾತ್ತಾಪದಲಿ ನರಳಿ ನರಳಿ ಸಾಯುತ್ತಾನೆ*.

ಸತ್ತ ಆತ್ಮ ತನಗಾದ ಮೋಸವನ್ನು ಅರ್ಥ ಮಾಡಿಕೊಂಡಿರುತ್ತದೆ. ಇದ್ದಾಗ ಅರಿಯದ ಸಂಗತಿಯನ್ನು ಹೋದ ಮೇಲೆ ಸಹಿಸಿಕೊಳ್ಳದ ಪ್ರೇತಾತ್ಮದ ಪ್ರತಿರೂಪವಾಗಿ, ಮನಸಾಕ್ಷಿಯ ಮೂಲಕ ಕಾಡುತ್ತದೆ ಎಂಬ ನಂಬಿಕೆ.
ನಂತರ ಪಾಪಿ ಪಶ್ಚಾತ್ತಾಪದಿಂದ ಕೊನೆಯಾಗುವುದನ್ನು ಮಹಾಕವಿ ವಿಲಿಯಂ ಶೇಕ್ಸ್‌ಪಿಯರ್ Poetic Justice ಎಂದು ವ್ಯಾಖ್ಯಾನಿಸುತ್ತಾನೆ.

ನನ್ನ ಹಾಗೆ ಸಾಹಿತ್ಯ ಓದಿಕೊಂಡ ಮಾಧ್ಯಮದ ಗೆಳೆಯನ ಮುಂದೆ ನನ್ನ ಅಳಲು ತೋಡಿಕೊಂಡೆ.

“ ಅಯ್ಯೋ ಬಿಡಿ ಈಗ *ಪೊಯಟಿಕ್ ಜಸ್ಟಿಸ್* ಕೇವಲ ಕಾವ್ಯದಲ್ಲಿ ಉಳಿದುಕೊಂಡಿದೆ, ಈಗ ಏನಿದ್ದರೂ ಪಾಪಿಗಳೇ ಬದುಕೋದು, ಇಂದು ಅಷ್ಟು ಬೇಗ ಕೊನೆಗೊಳ್ಳುವ ಕಾಲ ಹೋಯಿತು” ಅಂದು ನಕ್ಕಾಗ ಪೆಚ್ಚಾಗಿ ಹೋದೆ.

ವಾಸ್ತವವಾಗಿ ಅವಕಾಶವಾದಿಗಳು ಯೋಗ್ಯತೆ ಇರದಿದ್ದರೂ ತಮ್ಮ ಮುಖವಾಡದ ಮೂಲಕ ಮೇಲೇರುತ್ತಲೇ ಹೊಗುತ್ತಾರೆ. ಆದರ್ಶ ಹಾಗೂ ಸಿದ್ಧಾಂತದ ಮುಖವಾಡ  ಇಟ್ಟುಕೊಂಡು ಜನರನ್ನು ನಂಬಿಸಲು ಯಶಸ್ವಿಯಾಗುತ್ತಾರೆ.

ಅವನು ಹೇಳುವುದು ಶುದ್ಧ ಸುಳ್ಳು ಎಂದು ಗೊತ್ತಿದ್ದರೂ ಸತ್ಯದಂತೆ ಕೇಳಿಸಿಕೊಂಡು ಅವನಷ್ಟೇ ಅವಕಾಶವಾದಿಗಳು ಸುಮ್ಮನಾಗಿಬಿಡುತ್ತಾರೆ.

ಇಂತಹ ನೂರಾರು ಘಟನೆಗಳನ್ನು ನೋಡಿರುತ್ತೇವೆ, ಕೇಳಿರುತ್ತೇವೆ. ಕಾಲನ ಪ್ರವಾಹದಲ್ಲಿ ಕೊಚ್ಚಿ ಹೋದವರ ಕತೆ ಗೊತ್ತಿದ್ದರೂ ಸಹನೆ ಕಳೆದುಕೊಂಡು ಅಸಹಾಯಕರಾಗುವುದು ಯಾಕೋ ನಾ ಕಾಣೆ.

ಸತ್ಯಕ್ಕೆ ಹಲವು ಮುಖಗಳ ವಿಶ್ಲೇಷಣೆಯಿದ್ದರೂ, ಸತ್ಯಕ್ಕೆ ಒಂದೇ ಮುಖವಿರುತ್ತದೆ. ಅದು ಕಾಣುವ ತನಕ ಅಷ್ಟೇ ಸಹನೆಯಿಂದ ಕಾಯಬೇಕು.

ಅನೇಕ ಸಂದರ್ಭಗಳಲ್ಲಿ “ಕಾಲನಿಗಾಗಿ ಕಾಯಬೇಕು, ಅದು ಸತ್ಯವನ್ನು ಮಾತ್ರ ಪ್ರತಿಪಾದಿಸುತ್ತದೆ” ಎಂಬ ಗುರುಗಳ ಮಾತು ಅವರ ಅನುಪಸ್ಥಿತಿಯಲ್ಲಿಯೂ ರಿಂಗಣಿಸುತ್ತಿರುವಾಗ ಅದೇನೋ ಗುಂಗು.

ನಿಲ್ಲದ ಸತ್ಯಾನ್ವೇಷಣೆಯ ಹುಡುಕಾಟ.
ಪೊಯಟಿಕ್ ಜಸ್ಟಿಸ್ ಕಾವ್ಯದಲ್ಲಷ್ಟೇ ಅಲ್ಲ ಬದುಕಿನಲ್ಲಿ ಬದುಕಿದೆಯೆಂಬ ಭರವಸೆ.

ಆ ಭರವಸೆ ಕಳೆದುಕೊಳ್ಳುವ ಸಿನಿಕತನ ಬೇಡ. ‌
ಬದುಕೆಂಬ ಕಾದಂಬರಿಯಲ್ಲಿ ಕೊನೇ ಅಧ್ಯಾಯದವರೆಗೆ ಕಾಯ್ದು ನೋಡಬೇಕು.

ಮಧ್ಯದ ಪುಟಗಳಲ್ಲಿ ಸತ್ಯದ ಹುಡುಕಾಟ ಸಲ್ಲದು.
ಕೊನೇ ಪುಟದ ಕೊನೆಯಾಟಕೆ ಕಾತುರದಿಂದ ಕಾಯುತ ಮೌನವಾಗಿ ಧೇನಿಸುವೆ.
 
  *ಸಿದ್ದು ಯಾಪಲಪರವಿ*

No comments:

Post a Comment