Wednesday, July 18, 2018

ಹೂಮಳೆಯಲೊಂದು ಪಯಣ

*ಲವ್ ಕಾಲ*

*ಹೂಮಳೆಯಲೊಂದು ಪಯಣ*

ಇಂದು‌‌ ರಾತ್ರಿ ಎಂದಿನಂತೆ ಒಂದು ರಾತ್ರಿ ಆಗಿರಲಿಲ್ಲ.
ನೀ ಹೀಗೇ ಮಾಡಬಹುದೆಂಬ ಊಹೆ ಇರದ ಹೊತ್ತು.

ನಿದ್ರೆ ಗಾಢ ಆದರೆ ನಿಗೂಢ ಅಲ್ಲವಲ್ಲ. ಸಾವಿರಾರು ರಾತ್ರಿಗಳ‌ ಪಯಣದಲಿ ತರೇ ವಾರೀ ನಿದ್ದೆಯ ಕಂಡವಳು ನೀ.
ಗೊರಕೆ, ಸಣ್ಣನೆ ಮುಲುಕಾಟ, ಬರೀ‌ ನಿಚ್ಚಳ, ಎಚ್ಚರ, ಅರನಿದ್ರೆ, ಮಬ್ಬು, ಇನ್ನೂ ಬಗೆ ಬಗೆಯ ನಿದ್ದೆಯ ಸಹಿಸಿಕೊಂಡವಳೂ ನೀನೇ.

ಬೇರೆ ದೇಶದಲ್ಲಾದರೆ ಡೈವೊರ್ಸ ಮಾಡಿಬಿಡುತಿದ್ದರೇನೋ‌ ಈ ವಿಪರೀತ ನಿದ್ದೆಯ ಕಂಡು. ಆದರಿದು ಇಂಡಿಯಾ ಎಲ್ಲವನ್ನೂ ತಾಳಿಕೊಳ್ಳುವ ಗುಣ, ಅದಕೆ ಕೊರಳಲೊಂದು ತಾಳಿ ಬೇರೆ.

ನಿನಗೂ ಒಮ್ಮೊಮ್ಮೆ ನನ್ನ ಹುರಿದುಂಬಿಸಬೇಕೆಂಬುದು ಸಹಜ. ಆದರೆ ಈ ಪರಿ…

ಮಬ್ಬುಗತ್ತಲಲಿ ಎಚ್ಚರಾದಾಗ ಬರೀ ಬಯಲು ಮೈಯಲ್ಲ ಬಟಾ ಬಯಲು. ಖಾಸಗಿ ಲೋಕವೇ ಹಾಗೆ ಫುಲ್ ಆಫ್ ಪ್ರೀಡಮ್. ಅದರಲ್ಲೂ ಸಂಗಾತಿಗಳ ಏಕಾಂತಕೆ ಯಾವ ಹಂಗು, ಸಂಕೋಚವೂ ಸುಳಿಯುವುದಿಲ್ಲ.

ಪ್ರತಿಯೊಬ್ಬ ಸಂಗಾತಿಗಳ ರಾತ್ರಿ ಒಂದೊಂದು ಬಗೆ. ಭಿನ್ನ, ವಿಭನ್ನ.
ನಿಸ್ಸಂಕೋಚ, ನಿರ್ಲಜ್ಯ, ನಿರ್ವಿಕಾರ, ಮುಕ್ತ, ಬಟ್ಟೆ, ಬರೆ, ರೀತಿ-ನೀತಿಗಳ ಹಂಗಿಲ್ಲದ ಸಾಮ್ರಾಜ್ಯ.
*ಇದು ಕೇವಲ ಸಂಗಾತಿಗಳೊಂದಿಗೆ ಮಾತ್ರ*.

ಇಂದು ಅಂತಹ ವಿಸ್ಮಯ ನೀ ಕೊಟ್ಟೆ, ನಾ ಅನುಭವಿಸಿದೆ.
ಮೊದಲ ರಾತ್ರಿಯ ನೆನಪಾಗಿರಬೇಕು.

ಕಣ್ಣು ಬಿಟ್ಟಾಗ ಮೈ ತಣ್ಣಗೆನಿಸಿತು, ಇದೇನಿದು ಹಸಿ ಅಂದುಕೊಂಡೆ. ಮೆತ್ತನಾನುಭವ, ಸುಮಧುರ ವಾಸನೆ.
ಕೈಯಾಡಿಸಿದಾಗ ಹೂ ಸ್ಪರ್ಶ.

ನಾನು ಹೂ ರಾಶಿಯಲಿ ಮುಳುಗಿ ಹೋಗಿದ್ದು ಕೊಂಚ ತಡವಾಗಿ ಅರಿತೆ.

ಮೈಮೇಲೆ ಹೂಗಳ ಹಾವು ಹರಿದಾಟ. ಹಿಂದೆ ಧಾವಿಸಿದ ನೆನಪ ಹರೆಯ.

ಮುಂದೆ ಆಗುವುದೆಲ್ಲ ಅಂದುಕೊಂಡುದುಕಿಂತ ಭಿನ್ನ ನಡೆದ ಸಂಭ್ರಮದ ಸುಮಧುರ ಕ್ಷಣಗಳ ಸುರಿಮಳೆ…

ಬದುಕಿಗೊಂದು ಹೊಸತನ ತುಂಬಲು ನೀ ಮಾಡಿದ ಹೊಸತನಕೆ ಖುಷಿಯಾಯಿತು.

ಭಾವ ತೀವ್ರತೆ ಕಳಕೊಂಡರೆ ಬದುಕು‌ ಜಡ, ನೀರಸ. ‘ಅಯ್ಯೋ‌ ನಮಗೆ ವಯಸ್ಸಾಯ್ತು ಮಂಡಿ ನೋವು, ಬಿ.ಪಿ., ಶುಗರ್’ ಎಂದು ಗೋಳಿಡುತ್ತ ಸ್ವಯಂ ಮುದುಕರೆಂದು ಸಾರಿಕೊಂಡು ಸುಖ ಮುಂದೂಡುವ ಹುನ್ನಾರ.

ಕಾಮಕೂ ಮೀರಿದ ಸುಖ ಅನುಭವಿಸುವ ಅವಕಾಶ ಸಿಗುವುದೇ ಮಧ್ಯೆ ವಯಸಲಿ. ದೇಹ ಉದ್ರೇಕಗೊಳ್ಳದಿದ್ದರೂ ಮನಸು ಯಾಕೆ ಮುದುಡಬೇಕು.

ಪ್ರೀತಿ-ಪ್ರೇಮ-ಪ್ರಣಯದ ಮಾತುಗಳ ಮೂಲಕ ಜೀವಚೈತನ್ಯ ಅರಳಿಸಿಕೊಳ್ಳಬೇಕು. ಮುಖ ಸಿಂಡರಿಸಿಕೊಂಡು ಅಪರಿಚಿತರಾಗಿ ಬಾಳುವ ಕರ್ಮ ಯಾಕೆ?

ದಕ್ಕಿದಷ್ಟು ಪಡೆದುಕೊಂಡು ಮಜ ಮಾಡಬೇಕೆಂಬ ಸತ್ಯವ ನೀ ನೆನಪಿಸಿದೆ.‌

ಹರೆಯಕೆ ಮುಪ್ಪಿಲ್ಲ, ಸಾವೂ ಇಲ್ಲ. ನಾವೂ ಅಷ್ಟೇ  ಜೀವಂತವಾಗಿರಲು ಹೊಸ ರೀತಿ ಬದುಕಿ ಸದಾ ಸಂಭ್ರಮಿಸೋಣ…

*ಸಿದ್ದು ಯಾಪಲಪರವಿ*

No comments:

Post a Comment