Saturday, July 14, 2018

ಹೀಗೊಂದು ರಾಧೆಯ ಸ್ವಗತ

ಹೀಗೊಂದು ರಾಧೆಯ ಸ್ವಗತ

ಈ ನಿನ್ನ ಮನದನ್ನೆಗೆ ಲೆಕ್ಕವಿಲ್ಲದಷ್ಟು
ಆಸೆಗಳು ಹೇಳಲಾಗದ ಬಿಗುಮಾನ
ಹೇಳಿದರೆ ಬಿಡಲಾರದ ಮೊಂಡು
ತುಂಟ ತುಡುಗ ಕೃಷ್ಣ ನೀ

ಎಲ್ಲಿ ಅಡಗಿದ್ದೆ ಇಷ್ಟು ದಿನ ನನ್ನ
ಮದವೇರಿದ ಮನದರಸ

ಮನಸಿಲ್ಲದೆ ಮನಸಿಂದ ಮೈಮಾಟವ
ನಲುಗಿಸಿದೆ ಒಲ್ಲದ ಒಲವಿಲ್ಲದ ಗಂಡಂಗೆ

ನೂರೆಂಟು ಕಳ್ಳ ಕಾಕರ ಕೆಂಗೆಣ್ಣಿಂದ
ತಪ್ಪಿಸಿಕೊಂಡು ಕಾಪಾಡಿರುವೆ ಪುಟಿದೇಳುವ
ಬಯಕೆಗಳ ಯಾರಿಗೂ ಬಲಿಯಾಗದೆ

ಎಲ್ಲಿಂದಲೋ ಸುರಿದ  ನಿನ್ನ ಪದಪುಂಜಗಳ
ಹೂಮಳೆಯಲಿ ತೊಯ್ದು
ನಡುಗಿ ನಲುಗಿ ಹೋದೆ

ಮೈಮುಟ್ಟದೆ ಆಳದೊಳು ಇಳಿದುಬಿಟ್ಟೆ
ಶಬ್ದ ಬಾಣಗಳ ಬಿಟ್ಟು
ಸೋತಿರದವಳ ಹಾಗೆ ಹುಸಿ ಮುನಿಸಿಂದ
ದೂರದೂಡಲು ಹೋಗಿ ನಾ ಜಾರಿಬಿದ್ದೆ

ಮಹಾ ಚತುರ ನೀ ಹೇಗೋ ಅರಿವಿಲ್ಲದೆ 
ಮೊಂಡಾಟದ ದಾಳಿಯಲಿ ಸೋಲಿಸಿಬಿಟ್ಟೆ

ಆದರೆ ಸೋತನೆನ್ನಲು ಇನ್ನಿಲ್ಲದ ಭೀತಿ
ಸಾವಿರ ಕಂಗಳ ಬಿಗಿ ಕೋಟೆಯ
ಹಾರಿಬಂದು ಸೇರಲಾದೀತೆ ?

ಸಂಸಾರ ಸಾಗರದಲಿ ಎಲ್ಲ ನೋವುಗಳ
ನಸುನಗುತ ನುಂಗಿ ನಲುಗಿರುವ
ಈ ಜೀವಕೆ ಬೇಕು ನಿನ್ನೊಲವಿನಾಸರೆ

ಬಿಟ್ಟು ಬರಲಾರೆ ಈ ಅನರ್ಥ ಬಂಧನಗಳ
ಜಂಜಡವ ಈ ಜನುಮದ ಕರ್ಮ
ಬೇಡವಾದರೂ ಅನುಭವಿಸಿ
ಒಳಗೊಳಗೇ ಬೇಯುವೆ
ನಗುವಿನ ಮುಖವಾಡವ ಹೊತ್ತು

ನನ್ನ ಮಾನ ಪ್ರಾಣದ ಹಂಗು ಹರಿದು
ಬಿಚ್ಚಿ ಬಯಲಲಿ ಕೇವಲ ಶಬ್ದಗಳ
ಭಾವಲೋಕದಲಿ ಬಯಲಾಗಿ
ಅರ್ಪಿಸಿಕೊಂಡಿರುವೆ ನಿನಗೆ

ಆದರೆ ಹೇಳಲಾಗದ ಅಸಹಾಯಕ
ಪರಿಗೆ ಇರಲಿ ಅನುಕಂಪ
ಹೇಳಿದರೆ ಬೆಂಬಿಡದು ನಿನ್ನ
ಕರಡಿಯ ಹಿಡಿತ

ನಿನ್ನ ನೆನಪಲಿ ಶಬ್ದಗಳು ನಿಶಬ್ದವಾಗಿ
ಮಾತುಗಳು ಗಂಟಲೊಳು ಬಿಗಿಯಾಗಿ
ಅವಿತು ಜೋರಾಗಿ ಕೂಗುತಿವೆ

ಪ್ರೀತಿಯ ಮಾತುಗಳಿಗೆ ಸೋತು
ಶರಣಾಗಿ ಹೇಳಲಾಗದ ಬೇಗುದಿಯಲಿ
ಬೆಂದು ನೊಂದು ಕುಂದದೇ
ಒಂಟಿಯಾಗಿ ಕನವರಿಸುವೆ ನನ್ನ
ಇನಿಯನ ಕೂಡಲು ಕೂಡದಂತೆ

ಮಾಡಿದರೂ ಮಾಡದಂತೆ
ಕೊಡಲಾಗದೆ ಕೊಡುವಂತೆ

ಕೇವಲ ಪಡೆದುಕೊಳುವ
ಕೇಡಿಲ್ಲದ ಈ ಇನಿಯಳ
ಎದೆಯಾಳದಿ ಬಚ್ಚಿಟ್ಟುಕೋ
ಯಾರಿಗೂ ಕಾಣದ ಹಾಗೆ.

---ಸಿದ್ದು ಯಾಪಲಪರವಿ

No comments:

Post a Comment