Thursday, July 12, 2018

ಬಸು ಮೇಗಳಕೇರಿ

*ಲಂಕೇಶರ  ವಾರಸುದಾರ ಬಸು ಮೇಗಳಕೇರಿ*

ಕನ್ನಡ ನಾಡನ್ನು ಎರಡು ದಶಕಗಳ ಕಾಲ ಆಳಿದ ಅಕ್ಷರ ಲೋಕದ ಮಾಂತ್ರಿಕ ಲಂಕೇಶ್ ಮತ್ತವರ ಪತ್ರಿಕೆ ಹುಟ್ಟು ಹಾಕಿದ ಬರಹಗಾರರು ಅಸಂಖ್ಯ.
ಅದೇ ಗರಡಿಯಲ್ಲಿ ಬೆಳೆದ ಅನೇಕರು ಮೇಷ್ಟ್ರ ಹೆಸರೇಳಲು ಯಾಕೋ ಹಿಂಜರಿಯುತ್ತಾರೆ.

ವರ್ತಮಾನದ ಹದೆಗೆಟ್ಟ ಮಾಧ್ಯಮದಲಿ ಬದುಕಲು ಈಗ ಮೇಷ್ಟ್ರು ಹೆಸರು ಅಪಥ್ಯ. ಆದರೆ ಒಳಗೊಳಗೆ ಅವರ ಗುರುತ್ವದ ಮಹಿಮೆ ಆರಾಧಿಸುತ್ತಾರೆ.

ಇಷ್ಟರ ಮಧ್ಯೆ ನಮ್ಮ ಪ್ರೀತಿಯ ಬಸು, ಬಸವರಾಜು ಮೇಗಳಕೇರಿ ಅವರ ಪಕ್ಕಾ ಆರಾಧಕ. ಲಂಕೇಶರು ಹೋದ ಮೇಲೆ ತಬ್ಬಲಿತನದ ತಲ್ಲಣಗಳಲಿಯೂ ತಮ್ಮ ಮೌಲ್ಯ ಕಾಪಾಡಿಕೊಂಡಿದ್ದಾರೆ.

ನಂತರ ರವೀಂದ್ರ ರೇಶ್ಮೆ ಅವರ ಸಾರಥ್ಯದ *ವಿಕ್ರಾಂತ ಕರ್ನಾಟಕದಲ್ಲಿ* ಆ ಸ್ವಾತಂತ್ರ್ಯ ಅನುಭವಿಸಿ ತಮ್ಮತನ ಸಾಬೀತು ಮಾಡಿದರು.

ಬಸು ಬರೀ ಬರಹಗಾರ ಅಲ್ಲ, ಎಲ್ಲ ಏನೆಲ್ಲ. ಒಂದು ಪತ್ರಿಕೆ ಸುಂದರವೂ, ಮೌಲಿಕವೂ ಆಗಿರಲು ಬೇಕಾದ ಗುಣಾತ್ಮಕ ಲೇ ಔಟ್ ಇಟ್ಟುಕೊಂಡು ವಿಕ್ರಾಂತ ರೂಪಿಸುತ್ತಿದ್ದರು. ಕಾರಣಾಂತರಗಳಿಂದ ಪತ್ರಿಕೆ ನಿಂತು ಹೋಯಿತು.

ಆಗ ನಾವೆಲ್ಲ ಅನಾಥರಾದೆವು. ಬರೆಯುವ ತುಡಿತಕೆ ಅರ್ಥಪೂರ್ಣ ಅಭಿವ್ಯಕ್ತಿ ಕಲಿಸಿದ್ದ ರೇಶ್ಮೆ ಹಾಗೂ ಬಸು ಅವರ ಸಂಪರ್ಕವಿಲ್ಲದೆ ಒದ್ದಾಡುವಂತಾಯಿತು.

*ಅಕಸ್ಮಾತ್ ಸಾಮಾಜಿಕ ಜಾಲತಾಣ ಇರದಿದ್ದರೆ ನನ್ನಂತವರು ಸತ್ತೇ ಹೋಗುತ್ತಿದ್ದೆವು*.
ನಂತರ ಬಂದ ಬ್ಲಾಗ್, ಫೇಸ್ ಬುಕ್ ನಂತಹ ಮಾಧ್ಯಮ ನಮ್ಮ ಕೈ ಹಿಡಿಯತು.

ಬಸು ಬರೆಸಿದ ಪ್ರವಾಸ ಕಥನ, ಇತರ ಲೇಖನಗಳ ಮೂಲಕ ನನ್ನೊಳಗಿದ್ದ ಬರಹಗಾರನಿಗೆ ಜೀವ ತುಂಬಿ ಇಡೀ ನಾಡಿಗೆ ಪರಿಚಯಿಸಿದರು.‌

ವಿಕ್ರಾಂತದಲ್ಲಿ ಸಂಪಾದಕರ ತಂಡದಲಿ ಇದ್ದ ನನಗೆ ಬರಹದ ಮಹತ್ವ ಹಾಗೂ ಪರಿಪೂರ್ಣತೆ ಪಾಠ ಹೇಳಿಕೊಟ್ಟರು.

ಸರಳತೆ, ನಿಖರತೆ, ಬದ್ಧತೆ, ಎಲ್ಲ ಕ್ಷೇತ್ರಗಳ ನಿಕಟ ಸಂಪರ್ಕ, ಸಾಹಿತ್ಯ, ಸಿನೆಮಾ, ರಾಜಕೀಯ ಹಾಗೂ ವಿನ್ಯಾಸವನ್ನೂ ಅರಿತ ಬಸು ಪತ್ರಿಕೆಯ ಜೀವಾಳವಾಗಿದ್ದರು.

ಕಲಿಯುವ, ಕಲಿಸುವ ವಿಧಾನದಲಿ ಒರಟುತನವಾಗಲಿ, ಅಹಮಿಕೆಯಾಗಲಿ ಇರಲಿಲ್ಲ. ತುಂಬ ನಾಜೂಕಿನ ಇರಿತ, ಬರೀ ಅನುಭವಿಸಬೇಕು. ತಪ್ಪಿಸಿಕೊಳ್ಳಲಾಗದು.

ಲಂಕೇಶ್ ಕುರಿತು ಇಂದು ಮತ್ತದೇ ಮಾತು. ಈ ಮಧ್ಯೆ ಮೇಷ್ಟ್ರ ಇನ್ನೊಬ್ಬ ಆರಾಧಕ, ಕಲಾವಿದ, ಬರಹಗಾರ ವಿ.ಎಂ.ಮಂಜುನಾಥ ಸೇರಿಕೊಂಡ ಮೇಲೆ ಲಂಕೇಶ್ ನೆನಪಿನ ಮಹಾಪುರ.

ಲಂಕೇಶ್ ಗುರುತಿಸಿದ ಲೇಖಕ, ಲೇಖಕಿಯರು ಮತ್ತವರ ಈಗಿನ ಗೋಸುಂಬೆ ನಿಲುವುಗಳ ಚರ್ಚೆಯಲಿ ಹೊತ್ತು ಹೋದದ್ದೇ ಗೊತ್ತಾಗಲಿಲ್ಲ.
ರೇಶ್ಮೆ, ಬಸು ಹಾಗೂ ಮಂಜು ಅಂತವರ  ಹಾದಿಯಲಿ ಮೇಷ್ಟ್ರು ಹೂ ಚೆಲ್ಲುತ್ತಲೇ ಇದ್ದಾರೆ.

ಲಂಕೇಶ್ ಪತ್ರಿಕೆ, ಬರೀ ಪತ್ರಿಕೆಯಲ್ಲ ಒಂದು ಚಳುವಳಿಯ ಬಳುವಳಿ. ಸೃಷ್ಟಿಸಿದ ಲಕ್ಷಾಂತರ ಓದುಗರು, ನೂರಾರು ಬರಹಗಾರರು ಲಂಕೇಶ್ ಅವರ ಉಪಕಾರವನ್ನು ಮರೆಯಬಾರದು.

ಹತ್ತು ವರ್ಷಗಳ ನಂತರ ಬಸು ಭೇಟಿ ಇಷ್ಟೆಲ್ಲ ಬರೆಯಲು ಪ್ರೇರೆಪಿಸಿತು. ಲಂಕೇಶ್ ಬಗ್ಗೆ ಬರೆದಂತೆಲ್ಲ ಬರೆಯಬೇಕೆನಿಸುತ್ತಲೇ ಇದೆ.
ಮೈಮೇಲೆ ದೇವರು ಬಂದ ಹಾಗೆ ಆಗಾಗ ಬರುತ್ತಲೇ
ಇರುತ್ತಾರೆ. ಪ್ರೇರೇಪಿಸಲು ಬರುತ್ತಲೇ ಇರಲಿ...

    *ಸಿದ್ದು ಯಾಪಲಪರವಿ*

No comments:

Post a Comment