Friday, July 27, 2018

ಗುರು ಪೂರ್ಣಿಮ

ನಿತ್ಯ ನೆನಪಾಗುವ ಗುರು ಪರಿಪೂರ್ಣ

ಇಂದು ಗುರುಪೂರ್ಣಿಮೆ.‌ ಯಾರ‌್ಯಾರ ನೆನೆಯೋದು, ನೆನೆಯೋದ ಇರೋದು‌. ಮುಂದೆ ಗುರಿಯೇ ಇಲ್ಲದ ಕಾಲದಲ್ಲಿ ಗುರುವೊಬ್ಬ ಉದಯಿಸಿ ಗುರಿ ತೋರಿರುತ್ತಾನೆ‌.
ಅಷ್ಟಾದರೂ ಮನಸಿಗೆ ಬಂದಂತೆ ನಡೆದುಕೊಂಡು ನರಕಾನುಭವ ಎದುರಿಸಿರುತ್ತೇವೆ.

ಬರೀ ಸುಖ ಕೊಟ್ಟವರು ಗುರುಗಳಾಗುವುದಿಲ್ಲ, ದುಃಖ ಕೊಟ್ಟು ಪಾಠ ಕಲಿಸಿದವರೂ ಮಹಾಗುರುಗಳು. ಅವರನ್ನು ಮರೆಯಲಾಗದು.

ಇಂದು ಗುರು-ಶಿಷ್ಯ ಪರಂಪರೆ ಭಾರತೀಯ ನಾಟ್ಯಶಾಸ್ತ್ರ ಹಾಗೂ ಶಾಸ್ತ್ರೀಯ ಸಂಗೀತದಲ್ಲಿ ಮಾತ್ರ ಉಳಿದು ತನ್ನ ಪಾವಿತ್ರ್ಯತೆ ಕಾಪಾಡಿಕೊಂಡಿದೆ.
ಉಳಿದ ರಂಗಗಳಲ್ಲಿ ಗುರು ನಿಧಾನ‌ ಮಾಯವಾಗಿಬಿಡುತ್ತಾನೆ. ಗುರುಸ್ಮರಣೆಯ ಮಾತೇ ಬರುವುದಿಲ್ಲ.

ಕಾಲೇಜು ಶಿಕ್ಷಕನಾಗಿ ದುಡಿದದ್ದು ಹೊಟ್ಟೆಪಾಡು. ಕಾಲನ ಪ್ರವಾಹದಲಿ ಸಿಕ್ಕವರೆಲ್ಲ ವಿದ್ಯಾರ್ಥಿಗಳು. ಕಲಿತದ್ದು, ಕಲಿಸಿದ ಹೆಗ್ಗಳಿಕೆ. ಆದರೆ ನನ್ನ ಕರ್ನಾಟಕ ಕಾಲೇಜಿನ ಕಲಿಕೆಯಲ್ಲಿ ಎಲ್ಲರೂ ಅಪ್ಪಟ ಗುರುಗಳೇ. 

ಒಬ್ಬರಿಗಿಂತ ಒಬ್ಬರು ಅದ್ಭುತ. ಮರೆಯಲಸಾಧ್ಯ. ಆದರೆ ನಾ‌‌ ಹಾಗಾಗಲಿಲ್ಲವೆಂಬ ಸಣ್ಣ ಕೊರಗು.
ಹೈಸ್ಕೂಲ್ ಶಿಕ್ಷಕರು ಮತ್ತವರ ಬದ್ಧತೆ, ಆ ಕಾಲಘಟ್ಟದ ಹಿರಿಮೆ. ಈಗ ಶಿಕ್ಷಣ ಸಂಪೂರ್ಣ ವ್ಯವಹಾರದ ವ್ಯವಸಾಯ.
ಆಧ್ಯಾತ್ಮ ಜ್ಞಾನದ ವಿಸ್ತಾರದಲೂ ಅನೇಕ ಗುರುಗಳು ನೆನಪಾಗುತ್ತಾರೆ.
ಜಗತ್ತಿನ ಮೊದಲ ಗುರುವಾದ ಕೃಷ್ಣ ಗೀತೆಯ ಬೋಧಿಸಿ ಬದುಕಿನ ವಾಸ್ತವ ಕಟ್ಟಿಕೊಟ್ಟ.

ನಂತರ ಬುದ್ಧ ಮನಸು ಮತ್ತದರ ಸುತ್ತಲಡಗಿದ ಹುತ್ತವ ಬಿಡಿಸಿದ. ಮನೋನಿಗ್ರಹದ ಜಾದೂ ಕಲಿಸಿದ. ಬಸವಾದಿ ಶರಣರ ಕಾಲದ‌ ಅಲ್ಲಮ ಬಯಲಲಿ ಬಯಲನು ಬಿತ್ತಿ ಭಾವನೆಗಳ ಬೆಳಗಿದ.

ನಂತರ ಸಾವಿರಾರು ಸಂತರು, ಸಾಧುಗಳು ಹಿಮಾಲಯದಲಿ‌ ಮತ್ತೆಲ್ಲೋ ಇದ್ದು ಜಗದೊಳಿತಿಗಾಗಿ ತಪೋಗೈದರು.
ಹೀಗೆ ಅಪಾರ ಲೋಕಜ್ಞಾನ ನೀಡಿದ ಕವಿಪುಂಗವರ ನೆನೆಯಿದಿರಲಾದೀತೆ?

ಮನಸೆಂಬ ಮಂಗದ ಬಲೆಯಲಿ ಬೀಳದೆ ಹಿಡಿತದಲಿಟ್ಟುಕೊಳ್ಳಲು ಧ್ಯಾನವೆಂಬ ಅಂಕುಶ ಹಾಕುವ ತುಡಿತ.

ಇರುವ ಸಣ್ಣ ಆಯುಷ್ಯದಲ್ಲಿ ಎಷ್ಟು ಅಂತ ಬರೀ ಪಾಠ ಕಲಿಯೋದು? ಬೇಸರ ಮಾಡಿಕೊಳ್ಳದೇ ಸಹನೆಯಿಂದ‌ ಕಲಿಯಬೇಕು.

ಇಂದು ಗುರುಪೂರ್ಣಿಮೆ ಗಜೇಂದ್ರಗಡ ಮಹಾವೀರ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳಿಗೆ ಲೆಜೆಂಡರಿ ಟಾಕ್ ಸಿರೀಸ್ ಉದ್ಘಾಟಿಸುವ ನೆಪದಲ್ಲಿ ಮೈಡ್‌ ಮ್ಯಾನೇಜ್ಮೆಂಟ್ ಕುರಿತು ಮಾತಾಡಿ ಭಾವಿ ವೈದ್ಯರುಗಳಿಗೆ ಉತ್ಸಾಹದ ಮಾತುಗಳನ್ನಾಡಲು ಮಿತ್ರ, ಪ್ರಾಚಾರ್ಯ ಡಾ.ಸಿದ್ಧಲಿಂಗೇಶ್ ಕುದರಿ ಕರೆದಾಗ‌ ಖುಷಿಯಿಂದ ಹೋದೆ.

ಓಶೋ ಶಿಷ್ಯತ್ವ ಸ್ವೀಕರಿಸಿರುವ ಡಾ.ಕುದರಿಯವರಿಗೆ ಇನ್ನರ್ ಜರ್ನಿ ಬಗ್ಗೆ ಚನ್ನಾಗಿ ಗೊತ್ತಿದೆ, ಇಬ್ಬರ ವೇವ್ ಲೆಂಗ್ತ್ ಸರಿ ಹೊಂದಿದ್ದು, ಆ ಕ್ರಮದಲ್ಲಿ ಕಾರ್ಯಕ್ರಮವೂ ಇತ್ತು. ನೂರಾರು ವಿದ್ಯಾರ್ಥಿಗಳು ಆಸ್ಥೆಯಿಂದ ಸಂಭ್ರಮಿಸಿದರು.
ನನಗೂ ಥ್ರಿಲ್ ಆಯಿತು. ಸಮಯ ಹೋದದ್ದೇ ಗೊತ್ತಾಗಲಿಲ್ಲ. ಮತ್ತದೇ ಸನ್ಮಾನವನು ಮೀರಿದ ಸಡಗರವದು.

ಬದುಕು ಕಲಿಸಿದ‌‌ ಪಾಠಗಳ ಆಧರಿಸಿ, ಅನುಭವಿಸಿದ ನೋವುಗಳ ಮೇಳೈವಿಸಿ ಲೈಫ್ ಸ್ಕಿಲ್ ಗೆ ಒಂದು ಸ್ವರೂಪ ಕಂಡುಕೊಂಡಿದ್ದೇನೆ.

ಜಾಯ್ ಫುಲ್ ಲಿವಿಂಗ್ ನಿರ್ಭಯ-ನಿರಾಕರಣೆ-ನಿರ್ಲಿಪ್ತ  ತ್ರಿಸೂತ್ರಗಳ ಜಾಡ ಹಿಡಿದು ನೀರಸವಾಗದಂತೆ ಕೇಳುಗರ ಹಿಡಿದಿಡುವ ಸಣ್ಣ ಪ್ರಯತ್ನ.

ಕಣ್ಣಿಗೆ ಕಾಣದ ಗುರುಗಳು ಬೋಧಿಸಿದ ಎಳೆ ಹಿಡಿದು, ನಿತ್ಯ ಹೊಸ ಪಾಠ ಕಲಿಯುತ್ತ ಸಾಗುವುದೇ ಜೀವನ.
ಹೊಸದನು ಕಲಿಯುವ ಉತ್ಸಾಹ ಜೀವಂತವಾಗಿರುವಾಗಲೇ ಬದುಕು ಮುಗಿದು‌ ಮತ್ತೆ ಹೊಸ ಕಲಿಕೆ ಹುಟ್ಟಿರುತ್ತೆ.
ಶ್ರೇಷ್ಟ ಗುರು ತನ್ನಷ್ಟೇ ಶ್ರೇಷ್ಟ ಶಿಷ್ಯನ ಹುಡುಕಾಟದಲಿರುತ್ತಾನೆ.
ಆಗ ಮತ್ತೆ ಈ‌‌ ಹುಡುಕಾಟದ ಪರಂಪರೆ ಮರುಹುಟ್ಟು ಪಡೆಯುತ್ತದೆ.

  *ಸಿದ್ದು ಯಾಪಲಪರವಿ*

No comments:

Post a Comment