Tuesday, July 31, 2018

ನೋವು ಸಂಭ್ರಮವೆಂಬ ಸೂತಕ

*ನೋವು ಸಂಭ್ರಮವೆಂಬ ಸೂತಕ*

ಜೋರಾಗಿ ಕೂಗಿ ಅಳಲಾರಂಬಿಸಿದ ಕೂಡಲೇ ಸಿಡಿಲು ಹೊಡೆದಂತೆ, ನೀರವ ಮೌನ. ಬೋರ್ಗರೆದ ದುಃಖ, ನೀನಾದರೂ ಎಷ್ಟೂ ಅಂತ ಸಹಿಸುತ್ತೀ.

ಸಹನೆಗೂ ಒಂದು ಮಿತಿಯಿದೆ. ಸಂಸಾರ ನಿರ್ವಹಣೆಯ ನೆಪದಲಿ, ಎಲ್ಲವನೂ ನುಂಗಿದ ಮಾಗಿದ ಜೀವಕೆ ನಾ ಹೆಚ್ಚು ಹೇರಬಾರದಿತ್ತು, ನೀ ಸಹಿಸಲೂ ಬಾರದಿತ್ತು.

ನೀ ಸಹಿಸಿದೆ, ನಾ ಹೇರಿದೆ, ಹೇರುತ್ತಲೇ ಹೋದೆ.
ಈ ಸಾಮಾಜಿಕ ವ್ಯವಸ್ಥೆಯ ನಡುವೆ ನಾವು ಗುಟ್ಟಾಗಿ ಬದುಕುವ ಮಾನಸಿಕ ವೇದನೆ ತುಂಬಾ ಸೂಕ್ಷ್ಮ.

ಬಿಸಿತುಪ್ಪದ ಸವಿ. ಸಕ್ಕರೆ ರೋಗದವರು ಸಿಹಿ‌ ತಿಂದಂತೆ, ತಿನಬೇಕೆನಿಸುತ್ತೆ ಆದರೆ ತಿನಬಾರದು, ತಿನದಿರಲಾಗದು.
ಭಾವಗಾನಯಾನದ ಪ್ರಪಂಚದಲ್ಲಿ ಎಲ್ಲವೂ ಹೀಗೆ. ಕಾದಂಬರಿಯ ಹಾಗೆ. ತೇಲಾಡುತಲೇ ಇರಬೇಕು, ವಾಸ್ತವ ಲೋಕಕಿಳಿದರೆ ಖುಷಿ ಸಿಗಲಾರದು.

ಹೆಚ್ಚು ಕಾಲ ಆಕಾಶದಲ್ಲಿ ತೇಲಾಡುತ ಇರಲಾಗದು. ಸಹಜ, ವಾಸ್ತವ ಲೋಕಕಿಳಿಯಲೇಬೇಕು.

ಆದರೂ ನಾವಿಬ್ಬರೂ ನಮಗಾಗಿ ಖುಷಿಯಿಂದ ಬಾಳುತ್ತಲಿದ್ದೇವೆ.ಬಾಳಬೇಕು ಕೂಡಾ!

ಈ ಮಧ್ಯೆ ಬರುವ ಭಿನ್ನಾಭಿಪ್ರಾಯಗಳನ್ನು ರಾಹುಗನ್ನಡಿಯಲ್ಲಿ ನೋಡಿದ್ದೇ ಎಡವಟ್ಟಾಯಿತು.‌
ಬೇರೆಯವರ ಐಡಿಯಾಲಜಿಗಳನ್ನು ಬದಲಿಸುವ ಭರದಲಿ ಆಗುವದೇ ಹೀಗೆ‌.

ನಮಗೆ ಪ್ರಿಯವಾದವರು ನಮ್ಮ ಸಿದ್ಧಾಂತ ನಂಬಿ ನಡೆಯಲಿ ಎಂದು ಭ್ರಮಿಸಬಾರದು. ಆ ನಿಖರ ಸತ್ಯ ‌ನಂಗೂ ಗೊತ್ತು. ಆದರೂ ವಿಪರೀತ ವ್ಯಾಮೋಹ ನನ್ನನು ಮೂರ್ಖನನ್ನಾಗಿಸಿತು.

ತುಂಬಾ ತಿಳಿದಿದೆ ಅಂದುಕೊಂಡವರು ಅನುಭವಿಸುವ  ಮಾನಸಿಕ ತಳಮಳ.

ನಾನು ತುಂಬ ಆರಾಧಿಸುವ ಓಶೋ ‘ ನಿಜವಾದ ಪ್ರೀತಿ ಸಂಪೂರ್ಣ ಸ್ವಾತಂತ್ರ್ಯ ನೀಡ ಬಯಸುತ್ತದೆ, ಕಸಿದುಕೊಳ್ಳುವುದಿಲ್ಲ.’
ಆದರೆ ನಾ ಕಸಿಯುವ ಸಂಕಷ್ಟಕ್ಕೆ ಸಿಕ್ಕು ಬಿದ್ದೆ. ಪ್ರೀತಿ ಪೊಸೆಸ್ಸಿವ್ ಆದರೆ ಫಿನಿಶ್. ನಮಗರಿವಿಲ್ಲದೆ ನಾವು ಮುಳುಗಿ ಹೋಗುತ್ತೇವೆ.

ಮೊದಲೇ ಸಂಕಷ್ಟದಲಿ ಬಳಲಿದ ನಿನ್ನ ಆಳವಾಗಿ *ಮೋಹಿಸಿ, ಪ್ರೀತಿಸಿದೆ. ಪ್ರೀತಿಗೇನು ಬರವಿರಲಿಲ್ಲ. ಬೆಟ್ಟ ಆಕಾಶ, ಸರೋವರಗಳೂ ಗೌಣ*  ಆದರೇನು ಪೊಸೆಸ್ಸಿವ್ ಎಲ್ಲ ತಿಂದುಹಾಕಿತು.

ಓದು-ಬರಹ-ಧ್ಯಾನಗಳಲಿ ವಿಕಸನಗೊಂಡ ಮನಸು ಅರಿವಿಲ್ಲದೆ ವ್ಯಗ್ರವಾಯಿತು.

ನನ್ನ ಪೊಸೆಸ್ಸಿವ್ ನೆಸ್ ನನಗೆ ಮುಳುವಾಯಿತು. ನಾ ಕಂಗಾಲಾಗಿ ಕನವರಿಸಿ, ಕಳೆದುಹೋದೆ. ಎಲ್ಲಿ ಕಳೆದುಕೊಂಡು ಬಿಡುವೆನೆಂಬ ಧಾವಂತ. ಮಗು ಅವ್ವನ ಹುಡುಕುವ ಹಾಗೆ ಹಾಸಿಗೆ ತುಂಬ ಉರುಳಾಡಿ ಹುಡುಕಾಡಿದೆ.

*ನೀ ನನ್ನ ಬಿಟ್ಟು ಎಲ್ಲೂ ಹೋಗಿಲ್ಲ, ಹೋಗುವುದೂ ಇಲ್ಲ*. ಅದೂ ಸೂರ‌್ಯ-ಚಂದ್ರರಷ್ಟೇ ಸತ್ಯ. ನನಗೆ ಆ ನಂಬಿಕೆಯೂ ಇದೆ. *ಸಹನೆ ಸಮರ್ಪಣೆಗೆ ಉಪಮೇಯ*. ಮಗುವಿನ ಮುದ್ದು ಮುಖದ ಹಾಗೆ, ಉಪಮಿಸಲಾಗದು.

ಆದರೂ ಕನಲಿದೆ, ಕಾಡಿದೆ, ಹಲುಬಿದೆ, ಕನವರಿಸಿ ರೋಧಿಸಿದೆ.

ಅದನ್ನೆಲ್ಲ‌ ಕಂಡ  ನೀ ಕುಪಿತಳಾಗಿ ಸಹನೆ ಕಳೆದುಕೊಂಡೆ.
ನಾ ಮೂಕ ಪ್ರೇಕ್ಷಕ್ಷನಂತೆ ಸುಮ್ಮನೇ ನೋಡಿದೆ.

ಈಗ ಮೌನಿ‌ ನಾ.
ನನ್ನ ನಾ ಆತ್ಮಾವಲೋಕನ ಮಾಡಿಕೊಳ್ಳಲು ಹಚ್ಚಿದ ಮಹಾಮಾತೆ‌ ನೀ.

ಈಗ ನಮ್ಮ ಪ್ರೀತಿ ಇಮ್ಮಡಿಸಿದೆ. ಆತಂಕ ದೂರಾಗಿದೆ. ಜವಾಬ್ದಾರಿ ಕಳೆದುಕೊಂಡು ಹಗುರಾಗಿದ್ದೇನೆ.
ನಾನೀಗ, ಅಳು ಮೊಂಡಾಟ ಹಟಮಾರಿತನ ನಿಲ್ಲಿಸಿದ ಮಗು.
ಅವ್ವನ ಮಡಿಲಲಿ ಬೆಚ್ಚಗೆ ಹಾಯಾಗಿ ಮಲಗಿ ನೋವ ಮರೆತುಬಿಡುವೆ.
ನಿನ್ನ ಒಲವ ಮಡಿಲಲಿ ಜೋಗುಳ ಹಾಡಿ ಮಲಗಿಸಿಬಿಡು.

     ಸಿದ್ದು ಯಾಪಲಪರವಿ

No comments:

Post a Comment