Tuesday, July 24, 2018

ಪ್ರೀತಿ-ಪೊಸೆಸ್ಸಿವ್

ಲವ್ ಕಾಲ

*ಪ್ರೀತಿ‌ ಪೊಸೆಸ್ಸಿವ್ ಎಂಬ ಹಿಂಸೆಯಾದಾಗ…*

“ಗಾಢವಾಗಿ ಪ್ರೀತಿಸುತ್ತೀ ನಿಜ, ವಿಪರೀತ ಜೀವ ತಿಂದ್ರೆ ಏನು ಪ್ರಯೋಜನ” ಹೀಗೆ ಅನಿಸಿಕೊಂಡು ಕಳೆದು ಹೋದವರು ಅಸಂಖ್ಯ.

ಹೌದಲ್ಲ ಈ ಭಯಂಕರ ಪ್ರೀತಿ ಅದೆಂತ ಕೆಟ್ಟ ಅಲ್ಲ.
ಸೂಕ್ಷ್ಮವಾಗಿ ಹಚ್ಚಿಕೊಳ್ಳುವ ಈ ಹುಚ್ಚು ಮನಸಿಗೆ ಬೇರೇನೂ ಕೆಲಸ ಇರೋದಿಲ್ಲ. ಬರೀ ಅದೇ ಧ್ಯಾನ. ಆ ಧ್ಯಾನ ಹುಚ್ಚಾಗಬಾರದು.

ಸಾಗರದಷ್ಟು ಪ್ರೀತಿ, ಬೆಟ್ಟದಷ್ಟು ಕಾಳಜಿ ಇದ್ದರೂ ಈ ಪೊಸೆಸ್ಸಿವ್ ಎಂಬ ಕಿರಿ ಕಿರಿ ಜೀವ ಹಿಂಡೋದು ಖರೆ.
ಈ ಸಂಕಷ್ಟ ಅನುಭವಿಸುವ ಜೀವಕೆ ಮಾತ್ರ ಗೊತ್ತು.

ಕಾಳಜಿ ನೆಪದಲಿ ಸದಾ ಕಾಲೆಳೆದು ಕಾಡುವ ಹಿಂಸೆ ಯಾರಿಗೂ ಬೇಡವೆಂಬ ಆಲಾಪ. ಈ ಒಲವ ರಾಗದಲಿ.

ನಿಜವಾದ ಪ್ರೀತಿ ಕೇವಲ ಖುಷಿ ಮತ್ತು ಸ್ವಾತಂತ್ರ್ಯ ಕೊಡಬೇಕು. ಈ ಸುಡುಗಾಡು ಅತಿರೇಕದ ಕರಡಿ ಪ್ರೀತಿಯ ಹಿಂಸೆ ಬೇಡವೇ ಬೇಡವೆಂಬ ತಲೆಸಿಡಿತ, ನಿಲ್ಲದ ಎದೆ ಬಡಿತ.

ಎಲ್ಲಿಗೂ ಹೋಗದಂತೆ, ಯಾರೊಂದಿಗೂ ಮಾತಾಡಬೇಡ ಎಂಬ ನಿನ್ನ ಕರಾರು ನಿಜವಾದ ಪ್ರೀತಿ ಹೇಗಾದೀತು?
ಹಾಗಂತ ಕೇಳಲಾಗುವುದಿಲ್ಲ, ಕೇಳಿದರೆ ನೀ ಕಳೆದು ಹೋಗ್ತಿ ಎಂಬ ತಲ್ಲಣ.

ನನಗೂ ಈ ಪ್ರೀತಿಯೆಂಬ ಜೇನು ಯಾಕೋ ಕಹಿಯಾಗಿ ವಯ್ಕ್ ಅನಿಸಿದೆ.
ನನ್ನ ಕೈಬಿಡು ಮಾರಾಯ, ನೀನು ಬೇಡ ನಿನ್ನ ಈ ಪ್ರೀತೀನೂ ಬೇಡ.
*ನಾ ನನ್ನ ಪಾಡಿಗೆ ನಾ ಆರಾಮ ಅಗಿದ್ದು ಬಿಡುವೆ* ಅನ್ನೋ ಮೊದಲೇ ನನ್ನ ಕೈಬಿಡು ಮಾರಾಯ.

ಹೌದು ನಿನ್ನ ಪ್ರೀತಿ ಅಗಮ್ಯ, ಅಪ್ರತಿಮ ಆದರೆ ನಿನ್ನ ವ್ಯಾಮೋಹ ನನ್ನ ಸ್ವಾತಂತ್ರ್ಯ ಕಿತ್ತುಕೊಂಡಿದ್ದಂತು ಅಪ್ಪಟ ಸತ್ಯ.

ಇದನ್ನು ಬಾಯಿ ಬಿಟ್ಟು ಪ್ರಾಣ ಹೋದರೂ ನಾ ಹೇಳಲ್ಲ , ಹೇಳೋಕು ಆಗಲ್ಲ.
*ನಾನು ಕಣ್ಣು ತಪ್ಪಿಸಿ, ಸುಳ್ಳು ಹೇಳಿ ಓಡಿ ಹೋಗುವ ಮುನ್ನ ನೀನೇ ನನ್ನ ಅರ್ಥಮಾಡಿಕೋ*.

ನನಗೆ ನೀ ಬೇಕು, ನಿನ್ನ ಪ್ರೀತೀನೂ ಬೇಕು ಆದ್ರೆ ಈ ಕಂಡೀಶನ್ ಬೇಡ. ಪ್ರೀತಿ ಕರಾರು ಹಾಕಬಾರದೆಂದು ಗೊತ್ತಿದ್ದರೂ ಯಾಕೆ ಹಿಂಗ್ ಕರಾರು ಹಾಕ್ತಿ. ನಾ ಕಳೆದು ಹೋಗುವ ಮುನ್ನ ನಿನ್ನಷ್ಟಕ್ಕೆ ನೀನೇ ತಿಳಕೋ.

ನಾನು ನಿನಗಾಗಿ ಪುಟ್ಟಾ ಪುರಾ ನಿಯತ್ತಿಲೇ ಅದೀನಿ. ಅದರೂ ನಿನ್ನ ಕರಾರುಗಳು ಬೆಳೀತನ ಹೊಕ್ಕಾವು ಹನುಮನ ಬಾಲದ ಹಾಗೆ.

ನಿನಗಿಷ್ಟ ಆಗೋದು ಮಾಡಲು ನಾನೇನು ಕೀ ಕೊಡೋ ಗೊಂಬೆಯಲ್ಲ. ನನಗೇನಿಷ್ಟ ಅಂತ ನಿನಗೇನು ಗೊತ್ತು?

ಇಷ್ಟಾನಿಷ್ಟಗಳ ಗೋಜು ಬಿಟ್ಟು ಆರಾಮಾಗಿರು. ಓದು,ಬರೀ ನನ್ನ ಉಸಾಬರಿ ಬಿಟ್ಟು ಸ್ವಲ್ಪ ದಿವಸ ನಿನ್ನ ಪಾಡಿಗೆ ನೀನಿರು, ನನ್ನ ಪಾಡಿಗೆ ನಾ ಇರ್ತೀನಿ.

ಮೊದಲು ನಿನ್ನ ಫೋನೆಂದರೆ ಮಧುರ ಮಂಜುಳ ಗಾನ ಆದರೀಗ ಕರ್ಕಶ ಕಿರುಚಾಟದ ಬೋರ್ಗರೆತ.

*ಪ್ರೀತಿ ಎಂಬ ಹಿಂಸೆಯ ಪಂಜರದಿಂದ ಹಾರಿ ಬಿಡು, ಹಾಯಾಗಿ ಹಾರುತಲಿರುವೆ*

ಹರಿಯೋ ನದಿಯೊಳಗ ಈ ಫೋನ್ ಜೋರಾಗಿ ಬೀಸಿ ಒಗೆದು ಹೊರಗ ಓಡಬೇಕೆನಿಸಿದೆ.

*ಸಾಸಿವೆಯಷ್ಟು ಸುಖ ಕೊಟ್ಟು ಸಾಗರದಷ್ಟು ದುಃಖ ಕೊಟ್ಟೆ*.

*ಜುಳು ಜುಳು ಹರಿಯೋ ನದಿ, ಕಿಲ ಕಿಲ ನಗುವ ಮಗುವಿನ ನಗು, ಸಂಜೆ ಮುಂದ ಕೈ ಹಿಡಿದು ನಡೆಯೋ ಹಸಿ ಮದುಮಕ್ಕಳ ನೋಡುತ, ಚಿಲಿ ಪಿಲಿಗುಡುವ ಪಕ್ಷಿಗಳ ಕಲರವ ಕೇಳುತ, ತಣ್ಣನೇ ಬೀಸುವ ಗಾಳಿಗೆ ಮೈಯೊಡ್ಡಿ ಹಾಯಾಗಿ ಇರಬೇಕೆನಿಸಿದೆ.
ಅಂತಹ ಸ್ವಾತಂತ್ರ್ಯದರಮನೆಯಲಿ ಸುಖವಾಗಿರುವೆ ನಿನ್ನ ಪ್ರೀತಿಯ ಸಂಗ ತೊರೆದು, ವ್ಯಾಮೋಹದ ಹಂಗ ಹರಿದು…*

    *ಸಿದ್ದು ಯಾಪಲಪರವಿ*

No comments:

Post a Comment