Thursday, October 21, 2010

ಬಟ್ಟೆ ಶೋಕಿ - ಓದುವ ಹುಚ್ಚು ಕಲಿಸಿದ ಟೇಲರ್ ರಾಮಣ್ಣ

ಸಿನಿಮಾ ನೋಡುವ ಹವ್ಯಾಸದಿಂದ ಸುಂದರವಾಗಿ ಬಟ್ಟೆ ಉಡುವ ಪ್ಯಾಶನ್ ಶುರು ಆಗಿದ್ದು ಏಳನೇ ತರಗತಿಯಲ್ಲಿ. ಅಗ ಪ್ರೈಮರಿ ಸ್ಕೂಲ್‌ನಲ್ಲಿ ಓದುವವರಿಗೆ ನಿಕ್ಕರ್ ತೊಡುವ ಅನಿವಾರ್ಯವಿತ್ತು. ಪ್ಯಾಂಟ್ ಹೊಲಿಸುತ್ತಿರಲಿಲ್ಲ. ಆದರೆ ನಾನು ತುಂಬಾ ಹಟ ಮಾಡಿ ಬೆಲ್ ಬಾಟಂ ಫ್ಯಾಂಟ್ ಹೊಲಿಸಿದೆ. ತಲೆ ತುಂಬಾ ದಟ್ಟ ಕೂದಲು, ಸೊಂಟಕ್ಕೆ ದಪ್ಪನೆ ಬೆಲ್ಟ್ ಬಿಗಿದು ನನಗಿಂತ ಮುಂದೆ ನಡೆಯುವ ಬಾಟಂ ನೋಡಿ ಸಂಭ್ರಮಿಸಿದ್ದೆ, ದಿನಾಂಕ : ೭-೭-೭೭ ರಂದು ಒಂದು ಫೋಟೋ ತೆಗೆಸಿ ಅದರ ಕೆಳಗೆ ಮೇಲಿನ ದಿನಾಂಕ ಬರೆದು ಖುಷಿ ಪಡುವ ಕನಸು ಕೂಡಾ ನನಸಾಯಿತು. ಇದೆಲ್ಲ ನನಗೆ ನೆನಪಾದದ್ದು ೧೦-೧೦-೧೦ ರಂದು ಎಂಬುದು ಅಷ್ಟೇ ವಿಸ್ಮಯ.
ನನಗೆ ಮೊಟ್ಟ ಮೊದಲ ಪ್ಯಾಂಟ್ ಹೊಲಿದುಕೊಟ್ಟ ರಾಮು ಟೇಲರ್ ರಾಮಣ್ಣ ಮಡಿವಾಳರ ಬಟ್ಟೆ ಶೋಕಿಯೊಂದಿಗೆ ಓದುವ ಹವ್ಯಾಸವನ್ನು ಕಲಿಸಿದ. ನನಗಿಂತ ವಯಸ್ಸಿನಲ್ಲಿ ಹಿರಿಯನಾದ ರಾಮಣ್ಣನಿಗೆ ನನ್ನ ಮೇಲೆ ಎಲ್ಲಿಲ್ಲದ ಪ್ರೀತಿ. ಪ್ರತಿ ದೀಪಾವಳಿ, ದಸರಾ ಹಬ್ಬಗಳನ್ನು ಸುಂದರವಾಗಿ ಪ್ಯಾಂಟ್ ಸ್ಟಿಚ್ ಮಾಡಿ ಕೊಡುತ್ತಿದ್ದ. ಜಗಳಾಡಿದರೂ ಸೌಮ್ಯವಾಗಿ ಉತ್ತರಿಸಿ ಸಾಗ ಹಾಕುತ್ತಿದ್ದ ಆತನ ಸಹನೆ ಇಂದಿಗೂ ಹಸಿರಾಗಿದೆ.
ಆತ ನೀಟಾಗಿ ಬಟ್ಟೆ ಕಟ್ ಮಾಡುತ್ತಾ ಸಾಹಿತ್ಯ, ಶಿಕ್ಷಣ, ರಾಜಕೀಯದ ಕುರಿತು ಚರ್ಚೆ ಮಾಡುತ್ತಿದ್ದ. ವಿದ್ಯಾವಂತನಾದ ರಾಮಣ್ಣನೊಂದಿಗೆ ಚರ್ಚಿಸಲು ನಮ್ಮೂರಲ್ಲಿ ಯಾರೂ ಸಿಗುತ್ತಿದ್ದಿಲ್ಲ. ಕಲಿಯುವ ನನ್ನ ಆಸಕ್ತಿ ಆತನಿಗೆ ತುಂಬಾ ಖುಷಿ ಕೊಡುತ್ತಿತ್ತು. ಕುತೂಹಲದಿಂದ ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದೆ. ಅವೆಲ್ಲ ವಯಸ್ಸಿಗೆ ಮೀರಿದ ಪ್ರಶ್ನೆಗಳೇ ಆಗಿರುತ್ತಿದ್ದವು ಎಂದು ಈಗ ಅನಿಸುತ್ತದೆ.
ರಾಮಣ್ಣನ ಮೂಲ ಊರು ಈಗಿನ ಗದಗ ಜಿಲ್ಲೆಯ ಸೂಡಿ. ದುಡಿಯಲು ನಮ್ಮೂರಿಗೆ ಬಾಲ್ಯದಲ್ಲಿಯೇ ಬಂದಿದ್ದ. ಕಾರಟಗಿ ಪ್ರದೇಶಗಳಲ್ಲಿ ಧಾರವಾಡ ಜಿಲ್ಲೆಯ ಜನರನ್ನು ಮ್ಯಾಗಡೆಯವರು (ಮೇಲಿನ ಪ್ರದೇಶದವರು) ಎನ್ನುತ್ತಿದ್ದರು.
' ಅಬಾಬಾ ಮ್ಯಾಗಡೆಯವರ ಕೂಡಾ ಬಾರಿ ದೋಸ್ತಿ ಬಿಡಪಾ ನಿಂದು' , ಎಂದು ಎಲ್ಲರೂ ತಮಾಷೆ ಮಾಡುತ್ತಿದ್ದರು.
ಸ್ನೇಹ ಮಾಡಲು ವಯಸ್ಸು, ಅಂತಸ್ತು ಬೇಕಿಲ್ಲ ಎಂಬ ಸತ್ಯ ರಾಮಣ್ಣ ಕಲಿಸಿ ಕೊಟ್ಟ. ಹೈಸ್ಕೂಲ್‌ನಲ್ಲಿ ಓದುವಾಗಲೂ ರಾಮಣ್ಣ ಗೆಳೆಯನಾಗಿ ಇದ್ದ. ನಾನು ಶೈಕ್ಷಣಿಕವಾಗಿ ನಿರೀಕ್ಷಿಸಿದ ಯಶಗಳಿಸಲಿಲ್ಲ. ಆದರೆ ಸಾಹಿತ್ಯ, ಸಿನಿಮಾ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ನನಗಿದ್ದ ಆಸಕ್ತಿಯನ್ನು ಆತ ಗುರುತಿಸಿದ್ದ. ಇಲ್ಲ ಸಿದ್ದು ನೀನು ಧಾರವಾಡಕ್ಕೆ ಹೋಗು ಹೆಂಗೂ ಶ್ಯಾಣಾ ಆಗತಿ ಅಂತ ಧಾರವಾಡಕ್ಕೆ ಹೋಗಲು ಪ್ರೇರೆಪಿಸಿದ.
ಮುಂದೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಓದುವಾಗಲೂ ರಜೆಯಲ್ಲಿ ರಾಮಣ್ಣನ ಅಂಗಡಿಯಲ್ಲಿಯೇ ಇರುತ್ತಿದ್ದೆ. ಎಲ್ಲರಿಗೂ ಅಚ್ಚರಿ. ನನ್ನ ತಿಳುವಳಿಕೆ ಹೆಚ್ಚಾದದ್ದನ್ನು ಕಂಡು ಹಿರಿಯ ಸೋದರನಂತೆ ಖುಷಿ ಪಡುತ್ತಿದ್ದ. ಧಾರವಾಡದ ವ್ಯಾಸಂಗದ ಸಮಯದಲ್ಲಿ ಪ್ರಕಾಶ ನಾಜರೆ ಗೆಳೆತನವಾಗಿ ನನ್ನ ಸ್ಟಿಚಿಂಗ್ ನಾಜರೆ ಟೇಲರ್‍ ಗೆ ಶಿಪ್ಟ್ ಆದಾಗಲೂ ರಾಮಣ್ಣನ ಗೆಳೆತನ ಬಿಡಲಿಲ್ಲ. ಧಾರವಾಡದಲ್ಲಿ ಹೊಲಿದ ಪ್ಯಾಂಟ್ ನೊಂದಿಗೆ ಕಂಪೇರ್ ಮಾಡಿ ಹೊಸ ಪ್ರಯೋಗ ಮಾಡುತ್ತಿದ್ದ.
ನನ್ನ ವ್ಯಾಸಂಗ ಮುಗಿದ ಮೇಲೆ ಗದುಗಿನಲ್ಲಿ ಲೆಕ್ಚರ್ ಆದಾಗ ರಾಮಣ್ಣಗೆ ಎಲ್ಲಿಲ್ಲದ ಸಂಭ್ರಮ. ನೋಡಪಾ ಹೇಗಿದ್ದಾತ ಹೇಗಾದೆ ಅಂದಿದ್ದ. ಮುಂದ ತುಂಬಾ ಬ್ಯುಸಿ ಆಗಿ ಊರಿಗೆ ಹೆಚ್ಚು ಹೋಗಲಾಗಲಿಲ್ಲ.
ಹೋದಾಗಲೆಲ್ಲ ಆತನನ್ನು ಕಂಡು ಬರುತ್ತಿದ್ದೆ. ಮದುವೆಯಾಗಿ ಆತನಿಗೆ ಮೂರು ಮಕ್ಕಳು ಹುಟ್ಟಿ ಸಂಸಾರ ಹೊರೆಯಾಯಿತು, ದುಡಿಮೆ ಸಾಲುವುದಿಲ್ಲ ಅಂತ ಪೇಚಾಡಿದ ನೆನಪು.
ಮುಂದೆ ಆತ ತೀವ್ರ ಅನಾರೋಗ್ಯಕ್ಕೆ ಗುರಿ ಆದದ್ದನ್ನು ತಮ್ಮ ಜಗದೀಶ ಹೇಳಿದ. ಆದರೆ ರಾಮಣ್ಣನನ್ನು ನೋಡಲು ಸಾಧ್ಯವಾಗಲಿಲ್ಲ. ದುಡಿಮೆ ಸಾಲದು ಎನಿಸಿ ಸಾಲ ಮಾಡಿ ಊರು ಬಿಟ್ಟು ಸೂಡಿಗೆ ಬಂದದ್ದನ್ನು ಗೆಳೆಯರು ಹೇಳಿದರು. ನನಗೆ ಆತನ ಭೇಟಿ ಸಾಧ್ಯವಾಗಲೇ ಇಲ್ಲ. ೧೯೯೦ ರಲ್ಲಿ ನನಗೊಂದು ಜೊತೆ ಡ್ರೆಸ್ ತಯಾರಿಸಿದ್ದ ಅನಿವಾರ್ಯವಾಗಿ ಆ ಹಣ ನೀಡಿರಲಿಲ್ಲ. ಆ ಕೊರಗು ನನ್ನನ್ನು ಕಾಡುತ್ತಲೇ ಇತ್ತು.
೨೦೦೦ ನೇ ಇಸ್ವಿಯಲ್ಲಿ ರಾಮಣ್ಣ ಸೂಡಿಯಲ್ಲಿ ನಿಧನರಾದ ವಿಷಯ ತಿಳಿದು ಬೇಸರವಾಗಿ ದುಃಖವಾಯಿತು. ಆತನ ಸಹನೆ, ಜಾಣತನ ಯಾವಾಗಲಾದರೊಮ್ಮೆ ಕಾಡುತ್ತಿತ್ತು. ಗೆಳೆಯ ಬಿದರೂರ ಅವರೊಂದಿಗೆ ಸೂಡಿಗೆ ಹೋದಾಗ ಆತನ ಫ್ಯಾಮಿಲಿ ಕುರಿತು ವಿಚಾರಿಸಿದ್ದೆ. ಮಕ್ಕಳು ದೊಡ್ಡವರಾಗಿದ್ದಾರೆ, ಸಂಸಾರ ಕಷ್ಟದಲ್ಲಿದೆ ಎಂದು ಗೊತ್ತಾಯಿತು. ಇಂದು ಅಚಾನಕಾಗಿ ಆತನ ಮಗ, ಹೆಂಡತಿ ನನ್ನನ್ನು ಹುಡುಕಿಕೊಂಡು ಬಂದರು, ಬಿ.ಎ. ಪ್ರಥಮ ಶ್ರೇಣಿಯಲ್ಲಿ ಪಾಸ್ ಆಗಿದ್ದೇನೆ ಎಂದು ಮಗ ಹೇಳಿದಾಗ ರಾಮಣ್ಣನನ್ನು ನೋಡಿದಷ್ಟೇ ಸಂತೋಷವಾದರೂ, ತಂದೆಯನ್ನು ಕಳೆದುಕೊಂಡ ಅವನ ಅನಾಥ ಪ್ರಜ್ಞೆಗೆ ದುಃಖವಾತು. ಆತನಿಗೆ ಬಿ ಎಡ್ ಮಾಡಲು ಸೂಚಿಸಿದೆ. ಚಹಾ ಕುಡಿದು ಶ್ರೀಧರ ರಾಮಣ್ಣ ಮಡಿವಾಳರ ಹೊರಟು ನಿಂತಾಗ ಅವರಪ್ಪನಿಗೆ ಕೊಡಬೇಕಾಗಿದ್ದ ೨೦ ವರ್ಷದ ಹಿಂದಿನ ಬಾಕಿ ಕೊಟ್ಟೆ. ಹುಡುಗ ಹಣ ಪಡೆದುಕೊಳ್ಳಲು ನಿರಾಕರಿಸಿದ. ಇಲ್ಲ ನಿಮ್ಮಪ್ಪನ ಬಾಕಿ ಹಾಗೆ ಉಳಿದು, ನನ್ನ ಮನಸ್ಸನ್ನು ಕೊರೆಯುತ್ತಿತ್ತು, ದಯವಿಟ್ಟು ಸ್ವೀಕರಿಸು ಎಂದು ಬಾಕಿ ತೀರಿಸಿದೆ. ಆದರೆ ರಾಮಣ್ಣನ ಸ್ನೇಹದ ಬಾಕಿ ಹೇಗೆ ತೀರಿಸಲು ಸಾಧ್ಯ.?

No comments:

Post a Comment