Friday, March 26, 2010


ಅಚ್ಚುಕಟ್ಟು ನಿರೂಪಣೆಯ ಯಶಸ್ಸು ತಂದ ಕುತ್ತು


76ನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿನ ನನ್ನ ಪಾಲ್ಗೊಳ್ಳುವಿಕೆಯನ್ನು ಈ ಹಿಂದೆ ವಿವರಿಸಿದ್ದೇನೆ. ಸಮ್ಮೇಳನವನ್ನು ಕಾಡಿಬೇಡಿ ತರುವಲ್ಲಿ ಯಶಸ್ವಿಯಾದವರಲ್ಲಿ ನಾನು ಒಬ್ಬ. ಆದರೆ ನಂತರದ ಬೆಳವಣಿಗೆಗಳು ಬೇಸರವನ್ನುಂಟು ಮಾಡಿದ್ದರೂ ಸಕಾರಾತ್ಮಕವಾಗಿ ಕನಸು ಕಾಣುವ ನಮಗೆ ಪ್ರತಿಫಲ ಸಿಕ್ಕಿದೆ.
ಆ ಮಾತು ಬೇರೆ.
ಕಾರ್ಯಕ್ರಮಗಳ ರೂಪರೇಷೆ, ಗಣ್ಯ ಮಹನೀಯರಿಗೆ ವಸತಿ ವ್ಯವಸ್ಥೆ, ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಸಾಹಿತಿಗಳೊಂದಿಗಿನ ಸಾಮರಸ್ಯದ ಜವಾಬ್ದಾರಿಯೊಂದಿಗೆ ಆರಂಭದ ಹಾಗೂ ಸಮಾರೋಪದ ನಿರೂಪಣೆಯೂ ನನ್ನ ಪಾಲಿಗೆ ಲಭ್ಯವಾದದ್ದು ಅನಿರೀಕ್ಷಿತ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ನಿರ್ವಹಿಸಿ ಎಲ್ಲರ ಮೆಚ್ಚುಗೆಯನ್ನು ಗಳಿಸಿದ್ದು ವೈಯಕ್ತಿಕವಾಗಿ ಖುಷಿ ತಂದದ್ದು ಸಹಜ ಅಲ್ಲವೆ?
ಸಮ್ಮೇಳನಕ್ಕೆ ಒಂದು ವಾರ ಮೊದಲು ಇಬ್ಬರು ಮಹನೀಯರು ನಾಲ್ಕಾರು ಜನರನ್ನು ಕಟ್ಟಿಕೊಂಡು ಬಂದು ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾದ ಶಾಸಕ ಬಿದರೂರ ಹಾಗೂ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಪ್ರೊ.ಎ.ಬಿ. ಹಿರೇಮಠ ಅವರನ್ನು ಭೇಟಿ ಆಗಿ ಯಾವುದೇ ಕಾರಣಕ್ಕೂ ಸಿದ್ದು ಯಾಪಲಪರವಿ ಅವರಿಗೆ ನಿರೂಪಣೆ ಮಾಡಲು ಅವಕಾಶ ನೀಡಬಾರದು ಎಂಬ ಹುಸಿ ಬಾಂಬ್ ಹಾಕಿದ ಸುದ್ದಿ ನನಗೆ ತಲುಪಿತ್ತು. ಅದನ್ನು ಮನಸ್ಸಿನಲ್ಲಿಟ್ಟುಕೊಂಡೇ ತುಂಬಾ ಎಚ್ಚರಿಕೆಯಿಂದ ಎಲ್ಲರೂ ಮೆಚ್ಚುವ ಹಾಗೆ ನಿರೂಪಣೆ ಮಾಡಿ ಅವರ ಹುಸಿ ಬಾಂಬನ್ನು ಎದುರಿಸಿದ್ದು ನನ್ನ ಹೆಗ್ಗಳಿಕೆ. ಅನೇಕ ಗೆಳೆಯರು ಒತ್ತಾಯಿಸಿದರೂ ನಾನವರನ್ನು ಇಲ್ಲಿಯವರೆಗೆ ಅವರ ವಿರೋಧಕ್ಕೆ ಕಾರಣ ಏನೆಂದು ಕೇಳಿಲ್ಲ, ಕೇಳುವುದು ಇಲ್ಲಾ!. ಅದನ್ನು ಆ ಮಹನೀಯರೆ ಆತ್ಮಾವಲೋಕನ ಮಾಡಿಕೊಳ್ಳಲಿ. ಅವರಿಗೆ ಬೇಡ ಎನ್ನಲು ನೂರು ಕಾರಣಗಳಿದ್ದರೆ, ನನಗೆ ನಿರೂಪಣೆಯನ್ನು ಅರ್ಥಪೂರ್ಣವಾಗಿ ಮಾಡಲು ಸಾವಿರ ಕಾರಣಗಳಿವೆ. ನಂತರ ಕೊನೆ ದಿನ ಮುಖ್ಯ ಮಂತ್ರಿಗಳು ಭಾಗವಹಿಸಿದ ಕಾರ್ಯಕ್ರಮ ನಿರೂಪಣೆಯ ಜವಾಬ್ದಾರಿ ನನ್ನ ಹೆಗಲಿಗೆ ಬಿದ್ದಾಗ ಕೊಂಚ ದಿಗಿಲುಕೊಂಡೆ. ಲಕ್ಷಾಂತರ ಜನ ಸಾಗರದ ಮಧ್ಯ, ಅನೇಕ ಗಣ್ಯ ಮಹನೀಯರೆದುರು ಐತಿಹಾಸಿಕ ಸಾಹಿತ್ಯ ಸಮ್ಮೇಳನದಲ್ಲಿ ಮತ್ತೊಮ್ಮೆ ನಿರೂಪಣೆಯಂತಹ ಕ್ಲಿಷ್ಟ ಜವಾಬ್ದಾರಿ ಹೊರುವುದೊಂದು ಸವಾಲೆಂದು ಸ್ವೀಕರಿಸಿ ಎರಡನೇ ಇನ್ನಿಂಗ್ಸ ಹೊಡೆದು ಎಲ್ಲರ ಮೆಚ್ಚುಗೆ ಗಳಿಸಿದೆ. ಪತ್ರಿಕೆಯವರು, ಸ್ಥಾನಿಕ ಸಿಟಿ ಕೇಬಲ್ ಗೆಳೆಯರು, ಸುವರ್ಣ ಹಾಗೂ ವಿವಿಧ ಚಾನೆಲ್ಲುಗಳ ಸ್ನೇಹಿತರು ನಂತರ ಖುದ್ದಾಗಿ ಅಭಿನಂದಿಸಿದಾಗ ಖುಷಿ ಅಗದಿರಲು ಸಾಧ್ಯವೇ?
ಆದರೆ ನನ್ನ ಅಚ್ಚುಕಟ್ಟು ನಿರೂಪಣೆ ಕೆಲವರಿಗೆ ವಿಪರೀತ ಕಿರಿ-ಕಿರಿ ಎನಿಸಿದೆ ಅಂತ ನಂತರ ಅವರು ಕೆಂಡ ಕಾರಿದಾಗಲೇ ತಿಳಿಯಿತು. ತುಂಬಾ ಸಹನೆಯಿಂದ ಅವರ ಅಟ್ಯಾಕನ್ನು ಎದುರಿಸಿದೆ. ಆದರೆ ಮನಸ್ಸಿಗೆ ತುಂಬಾ ಬೇಸರವಾಯಿತು. ಸಣ್ಣ ಪುಟ್ಟ ದೋಷಗಳನ್ನು ದೊಡ್ಡದು ಮಾಡುವವರ ಸಣ್ಣತನಕ್ಕೆ ಹೇಸಿಗೆಯೆನಿಸಿತು. ಸಾಕಪ್ಪ ಈ ಸಾರ್ವಜನಿಕ ಬದುಕು ಅನಿಸಿದರೂ, ಅದು ಕೇವಲ ಸ್ಮಶಾನ ವೈರಾಗ್ಯ ಎಂದು ಗೊತ್ತಲ್ಲವೆ?
ಕೆಲವರು ಶಾಸಕರನ್ನು ಓಲೈಸಲೆಂದೇ, ಅವರ ಎದುರಿಗೆ ನನ್ನನ್ನು ಟೀಕಿಸಿದಾಗ ಸುಮ್ಮನೆ ಸಹಿಸಿಕೊಂಡು ನಿರ್ಣಯ ಅವರಿಗೆ ಬಿಟ್ಟು ಬಿಟ್ಟೆ. ರಾಜಕೀಯ ಹಿಂಬಾಲಕರ ನಿರೀಕ್ಷೆಗಳು ವಿಚಿತ್ರವಾಗಿರುತ್ತವೆ. ಪ್ರತಿಯೊಬ್ಬರೂ ತಮ್ಮ ನಾಯಕರನ್ನೇ ಹೊಗಳಲಿ ಎಂದರೆ ಹೇಗೆ ಸಾಧ್ಯ? ನಿರೂಪಕರಿಗೂ ಕೆಲವೊಂದು ಮಿತಿಗಳು, ಅನಿವಾರ್ಯತೆಗಳು ಇರುತ್ತವೆ ಎಂಬ ಸೌಜನ್ಯ ಗೊತ್ತಿರದವರಿಗೆ ಏನು ಮಾಡಲು ಸಾಧ್ಯ. ಇಂತಹ ಕಹಿ ಅನುಭವಗಳಿಂದ ಪಾಠ ಕಲಿಯಬೇಕಾಗುತ್ತದೆ. ರಾಜಕೀಯ ಹಿಂಬಾಲಕರಿಂದ ಭಾಷೆ ಕಲಿಯುವ ದುಸ್ಥಿತಿಗಾಗಿ ನನ್ನ ಬಗ್ಗೆ ನನಗೆ ಮರುಕ ಉಂಟಾಯಿತು. ಇದು ಸಾರ್ವಜನಿಕ ವ್ಯಂಗ್ಯ ಕೂಡಾ! ನಂತರ ಸಾವಿರಾರು ಜನ ಮುಕ್ತ ಕಂಠದಿಂದ ಅಭಿನಂದಿಸಿದಾಗ ನೂರಾರು ಜನ ಫೋನ್ ಮೂಲಕ ಹೊಗಳಿದಾಗ ಈ ಕಹಿ ಈಗ ಮಾಯವಾಗಿದೆ. 'ನಗಬೇಕು, ಅಳಬೇಕು ಸಮತೆಯ ಶಮದಲಿ ಎಂಬ ಕವಿವಾಣಿ ನೆನಪಾಗಿ ನನ್ನನ್ನು ನಾನೇ ಸಮಾಧಾನಿಸಿಕೊಂಡೆ.

No comments:

Post a Comment