Tuesday, March 23, 2010



ಉರಿಬಿಸಿಲಿನಲಿ ತಂಪ ಕೊಡುವ ಇಂಗ್ಲೆಂಡ್ ಪ್ರವಾಸ ನೆನಪು

ಬರುವ ಮೇ ತಿಂಗಳಿಗೆ ಇಂಗ್ಲೆಂಡ್ ಪ್ರವಾಸ ಮುಗಿಸಿ 2 ವರ್ಷಗಳಾದವು. ದಿನಗಳು ಉರುಳುತ್ತವೆ, ನೆನಪು ಮಸುಕಾಗುತ್ತವೆ. ಮರೆವು ಒಮ್ಮೊಮ್ಮೆ ವರದಂತೆ ಮತ್ತೊಮ್ಮೆ ಶಾಪದಂತೆ ಗೋಚರವಾಗುತ್ತದೆ.
ಮರೆಯಲಾರದ , ಮರೆಯಬಾರದ ಸಂಗತಿಗಳನ್ನು ಅಕ್ಷರ ರೂಪದಲ್ಲಿ ದಾಖಲಿಸುವುದು ಅನಿವಾರ್ಯ. ವೈಯಕ್ತಿಕ ತೀರಾ ಲೇಜಿಯಾಗಿರುವ ನನಗೆ ಅಂತಹ ಆತ್ಮವಿಶ್ವಾಸವಿರಲಿಲ್ಲ. ಒಂದು ತಿಂಗಳ ಇಂಗ್ಲೆಂಡ್ ಪ್ರವಾಸವನ್ನು ಕರಾರುವಕ್ಕಾಗಿ ದಾಖಲಿಸುವ, ಪ್ರವಾಸ ಕಥನ ಪ್ರಕಟಿಸುವ ಇರಾದೆ ಇತ್ತು. ವಾಪಾಸಾದ ಒಂದೆರೆಡು ತಿಂಗಳಲ್ಲಿ ಅಂತಹ ಎಲ್ಲ ಲಕ್ಷಣಗಳು ಮಾಯವಾದವು. ಮನಸ್ಸಿಗೆ ಕಿರಿ,ಕಿರಿಯೆನಿಸಿತು.
ವಿಕ್ರಾಂತ ಕರ್ನಾಟಕ ಗೌರವ ಸಂಪಾದಕ ಪ್ರೊ.ರವೀಂದ್ರ ರೇಷ್ಮೆ ವಿಕ್ರಾಂತಕ್ಕೆ ಅನುಭವ ಹಂಚಿಕೊಳ್ಳಲು ಒತ್ತಾಯಿಸಿದರು. ನಾಲ್ಕಾರು ವಾರ ಬರೆದರಾಯಿತು ಅಂದುಕೊಂಡು ಪ್ರಾರಂಭಿಸಿದೆ.
ರೆಗ್ಯೂಲಾರಿಟಿ ವಿಷಯಕ್ಕೆ ಹೊಂದಿಕೊಳ್ಳದ ನನಗೆ ನಾಲ್ಕಾರು ವಾರಕ್ಕೆ ಸುಸ್ತಾಗಿ ಹೋಯಿತು. ರೇಷ್ಮೆಯವರು ಮುಂದುವರೆಸಲು ಒತ್ತಾಯಿಸಿದ್ದರಿಂದ ಹುಮ್ಮಸ್ಸಿನಿಂದ ಬರೆಯಲಾರಂಭಿಸಿದೆ. ಅಚ್ಚರಿ ಎನಿಸುವಂತೆ 35 ವಾರಗಳವರೆಗೆ ನಿರಾತಂಕವಾಗಿ ಬರೆದು ಹಗುರಾದೆ. ಹೊಸತನ, ತಾಜಾತನದೊಂದಿಗೆ ತುಂಬಾ ಪ್ರಾಮಾಣಿಕವಾಗಿ ಬರೆದಿದ್ದರಿಂದ ಅಂಕಣ ಹೆಚ್ಚು ಜನಪ್ರಿಯವಾಯಿತು.
ಸುಂದರವಾಗಿ ಸಂಪಾದಿಸಿ, ಫೋಟೊ ಸಮೇತ ಪುಸ್ತಕ ಪ್ರಕಟಿಸಲು ನಿರ್ಧರಿಸಿದೆ. ಹತ್ತಾರು ಪ್ರಕಾಶಕರು ಕೇಳಿದರೂ ಕೊಡುವ ಮನಸ್ಸಾಗಲಿಲ್ಲ. ನಾನೇ ಪ್ರಕಟಿಸಲು ನಿರ್ಧರಿಸಿದೆ. ಬಸವರಾಜು, ಮುರಳೀಧರ ರಾಠೋಡ ನೆರವು-ಮಾರ್ಗದರ್ಶನ ನೀಡಿದ ಪ್ರತಿಫಲ 'ಸಾಂಗತ್ಯ' ಪ್ರಕಾಶನ ಪ್ರಾರಂಭವಾಯಿತು. ಅಚ್ಚುಕಟ್ಟಾಗಿ 'ಎತ್ತಣ ಮಾಮರ,ಎತ್ತಣ ಕೋಗಿಲೆ' ಪ್ರವಾಸ ಕಥನ ಮುದ್ರಣಗೊಂಡಿತು.
ವಿಕ್ರಾಂತದ ಬಸವರಾಜು ಕಾಳಜಿ ವಹಿಸಿ ಅಚ್ಚುಹಾಕಿಸಿದರು. ಅವಸರದಲ್ಲಿ ಪುಸ್ತಕ ಶ್ರೀಮಠದ ಶಿವಾನುಭವದಲ್ಲಿ ಡಾ. ಗಿರೆಡ್ಡಿ ಅವರಿಂದ ಲೋಕಾರ್ಪಣೆ ಆಯಿತು. ಹಿರಿಯ ಸಾಹಿತಿಗಳಿಗೆ, ಸಾಹಿತ್ಯಾಸಕ್ತರಿಗೆ ಪುಸ್ತಕ ಕಳಿಸಿ, ಖುಷಿ ಅನ್ನಿಸುವ ಪ್ರತಿಕ್ರಿಯೆ ಗಳಿಸಿಕೊಂಡೆ.
ಬೆಳಗಾವಿ ಜಿಲ್ಲೆಯ ಹಾರೋಗೆರಿಯ ಆಜೂರಪ್ರತಿಷ್ಠಾನ 2009 ರ ಶ್ರೇಷ್ಠ ಪುಸ್ತಕ ಪ್ರಶಸ್ತಿಯನ್ನು ನೀಡಿದೆ. ಇಂಗ್ಲೆಂಡ್ ಪ್ರವಾಸ ಕಥನ ಅನೇಕರಿಗೆ ನನ್ನ ಬರಹವನ್ನು ಪರಿಚಯಿಸಿತು. ಸಾಂಗತ್ಯ ಪ್ರಕಾಶನ ನಿಧಾನವಾಗಿ ಬೆಳೆಯಲಾರಂಭಿಸಿದೆ. ವೀಣಾ ಕುಲಕರ್ಣಿಯವರ 'ಕನ್ಯಾದಾನ ನಾಟಕ', ಚಿದಾನಂದ ಕಮ್ಮಾರವರ 'ಒಲವ ಋಣ ಭಾರ ಹೊತ್ತು' ಕವನ ಸಂಕಲನವನ್ನು ಈಗ ಸಾಂಗತ್ಯ ಪ್ರಕಾಶಿಸಿದೆ. ಪ್ರತಿ ವರ್ಷ ಕನಿಷ್ಠ 5 ಪುಸ್ತಕಗಳನ್ನು ಪ್ರಕಟಿಸುವುದರೊಂದಿಗೆ,
ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಸಾಹಿತ್ಯ ಪುರಸ್ಕಾರವನ್ನು ನೀಡಲು ನಿರ್ಧರಿಸಲಾಗಿದೆ.
ಒಂದು ಶಕ್ತಿಶಾಲಿ ಬೀಜ ಉತ್ತಮ ನೆಲದಲ್ಲಿ ಬಿತ್ತಿದರೆ ಅದು ಚಿಗುರಿ ಬೆಳೆಯುವ ಸಂಭ್ರಮ ಅಚ್ಚರಿ ಎನಿಸುತ್ತದೆ. ಸಾಂಗತ್ಯ ಬೆಳೆಸುವ ಅದರೊಟ್ಟಿಗೆ ಬೆಳೆಯುವ ಕನಸು ನನ್ನದು. ಸಿದ್ಧಲಿಂಗ ಪಟ್ಟಣಶೆಟ್ಟಿ ಕಾವ್ಯ ಪುರಸ್ಕಾರಕ್ಕೆ ಸುಮಾರು 50 ಕವನ ಸಂಕಲನಗಳು ಬಂದಿವೆ. ಮೇ 26 ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು. ನನ್ನ ಪುಸ್ತಕಗಳು ಪ್ರಕಟಗೊಳ್ಳಲು ಸಾಂಗತ್ಯ ಉತ್ತೇಜನ ನೀಡುತ್ತದೆ. ಸಾಂಗತ್ಯ ಪ್ರಕಾಶನಕ್ಕೆ ನಿ,ಮ್ಮ ಮಾರ್ಗದರ್ಸನ ಸಲಹೆ ಬಯಸುತ್ತೇನೆ. ಪ್ರವಾಸ ಕಥನದ ಲೇಖನಗಳನ್ನು ಸುಂದರ ಫೋಟೊಗಳನ್ನು ನಿಮ್ಮ ಖುಷಿಗಾಗಿ ಬ್ಲಾಗ್ ನಲ್ಲಿ ಪ್ರಕಟಿಸುತ್ತೇನೆ. ದಯವಿಟ್ಟು ಸ್ಪಂದಿಸಿ ರವಾನಿಸಿರಿ.

No comments:

Post a Comment