Tuesday, March 30, 2010

ತೇರನೆಳೆಯುತ್ತಾರೆ ತಂಗಿ ನೋಡಲಿಕ್ಕೆ ಹೋಗೋಣ ಬಾರೆ
ತೋಂಟದಾರ್ಯ ಜಾತ್ರೆ


ಸಂತ ಶಿಶುನಾಳ ಶರೀಫರ ಈ ಹಾಡು ನಮ್ಮ ನಾಡಿನ ಹಲವಾರು ಜಾತ್ರೆಗಳಿಗೆ ನಮ್ಮನ್ನು ಕೈ ಮಾಡಿ ಕರೆಯುತ್ತದೆ.
ಜಾತ್ರೆಗಳು ಎಂದರೆ ಗದ್ದಲು, ಜನಸಾಗರ. ಜಾತ್ರೆಯ ಸಾಮರ್ಥ್ಯಕ್ಕನುಗುಣವಾಗಿ ಜನ ಸೇರುತ್ತಾರೆ. ಸಾವಿರ, ಎರೆಡು ಸಾವಿರ, ಹತ್ತಾರು ಸಾವಿರ ಹೀಗೆ ಒಮ್ಮೊಮ್ಮೆ ಲಕ್ಷಾಂತರ ಜನರೂ ಸೇರುತ್ತಾರೆ.
ಜನಸೇರುವ ಈ ನೆಪದಲ್ಲಿ ನೂರಾರು ಪೂರಕ ಚಟುವಟಿಕೆಗಳು ಜರಗುತ್ತವೆ.
ಬಳೆ ವ್ಯಾಪಾರ, ಸಿಹಿ-ತಿಂಡಿ ವ್ಯಾಪಾರ, ಬಟ್ಟೆ-ಬರೆ ಹೀಗೆ ಜಾತ್ರೆಯಲ್ಲಿ ನೂರಾರು ಅಂಗಡಿಗಳು ಝಗಮಗಿಸುತ್ತವೆ. ಖರೀದಿಗಾಗಿ ಜನ ಸೇರುತ್ತಾರೋ, ಜನ ಸೇರಿದ್ದಕ್ಕಾಗಿ ಅಂಗಡಿಗಳು ಇರುತ್ತವೆಯೋ ಎಂಬಂತೆ ಜನ ಮರುಳೋ, ಜಾತ್ರೆ ಮರುಳೋ ಎಂಬ ವ್ಯಂಗ್ಯಾರ್ಥದ ನುಡಿಗಟ್ಟೂ ಇದೆ.
ಜಾಗತಿಕರಣದ ಜಗದಲ್ಲಿ ಈಗ ಜಾತ್ರೆಗಳು ದೇವರು ಧರ್ಮದ ಹೆಸರಿನಲ್ಲಿ ಜೀವಂತವಾಗಿರುವುದು ಏಷಿಯಾದಲ್ಲಿ ಮಾತ್ರ.
ಜಾಗತಿಕ ಧರ್ಮದ ಕ್ರಿಶ್ಚಿಯನ್ ಮುಖ್ಯಸ್ಥ ಪೋಪ್ ಅಧಿಕಾರ ಸ್ವೀಕರಿಸುವಾಗ, ಇಸ್ಲಾಂ ಧಾರ್ಮಿಕ ಕೇಂದ್ರ ಮೆಕ್ಕಾದಲ್ಲಿ ವರ್ಷಕ್ಕೊಮ್ಮೆ ಜನ ಸೇರುವುದು ಸಾಮಾನ್ಯ.
ಆದರೆ ಇಂಡಿಯಾ ದೇಶದಲ್ಲಿ ಪ್ರತಿ ಹಬ್ಬ-ಹುಣ್ಣಿಮೆಗಳಂದು ಲಕ್ಷಗಟ್ಟಲೆ ಜನ ಸೇರುತ್ತಾರೆ. ಜನರನ್ನು ಒಂದೆಡೆ ಸೇರಿಸಲು ಧರ್ಮ-ದೇವರು ಎಂಬ ಒಂದೇ ಅಸ್ತ್ರ ಸಾಕು!
ಕರ್ನಾಟಕದಲ್ಲಿ ಬಾದಾಮಿ, ಮೈಲಾರ, ಅಂಬಾಮಠ, ಕೊಪ್ಪಳ ಗವಿಮಠ, ಸುತ್ತೂರು ಹಾಗೂ ಗದುಗಿನ ಜಗದ್ಗುರು ತೋಂಟದಾರ್ಯ ಮಠಗಳ ಜಾತ್ರೆಗಳಲ್ಲಿ ಇಂದಿಗೂ ಲಕ್ಷಾಂತರ ಜನ ಸಂಭ್ರಮದಿಂದ ಸೇರಿ ಖುಷಿ ಪಡುತ್ತಾರೆ.
ಇಂದು ಸಾಮೂಹಿಕ ಭೋಜನ, ಪ್ರೀತಿ ಭೋಜನ, ಅದರಲ್ಲೂ ವಿಶೇಷವಾಗಿ ಲಕ್ಷಾಂತರ ಜನ ಸಾಮೂಹಿಕವಾಗಿ ಬಟಾ ಬಯಲಿನಲ್ಲಿ ಜಾತಿ ಭೇದ ಮರೆತು ಪ್ರಸಾದ ಸ್ವೀಕರಿಸುವ ಶ್ರೇಷ್ಠ ಪದ್ದತಿ ನಮ್ಮ ಗ್ರಾಮೀಣ ಜಾತ್ರೆಗಳಲ್ಲಿದೆ. ಅದಕ್ಕೆ ಶರೀಫರು ಹಾಡಿದ್ದು "ತೇರನೆಳೆಯುತಾರೆ ತಂಗಿ ತೇರನೆಳೆಯುತಾರೆ, ನೋಡಲಿಕ್ಕೆ ಹೋಗೋಣ ಬಾರೆ ಎಂದು ಹಾಡುತ್ತ ಜನಸೇರುವ ಜಾತ್ರೆಯನ್ನು ಆಧ್ಯಾತ್ಮದೊಂದಿಗೆ ಸಮೀಕರಿಸಿ ಈ ದೇಹವನ್ನು ಜಾತ್ರೆಯ ತೇರಿಗೆ ಹೋಲಿಸಿದ್ದಾರೆ.

ಪ್ರಗತಿಪರ ಆಲೋಚನೆ ಹೊಂದಿದ ಸ್ವಾಮಿಗಳು ಈ ಜಾತ್ರೆಗಳಿಗೆ ಸಾಂಸ್ಕೃತಿಕ ಸ್ವರೂಪ ನೀಡಿದ್ದಾರೆ. ಅದರಲ್ಲೂ ವಿಶೇಷವಾಗಿ ಗದುಗಿನ ತೋಂಟದಾರ್ಯ ಮಠದ ಇಂದಿನ ಪೀಠಾಧಿಪತಿಗಳಾದ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು 1975 ರಿಂದ ಶ್ರೀಮಠದ ಜಾತ್ರೆಯನ್ನು ಸಾಂಸ್ಕೃತಿಕ ಯಾತ್ರೆಯನ್ನಾಗಿಸಿದ್ದಾರೆ.
ಪಲ್ಲಕ್ಕಿಯಲ್ಲಿ ಕುಳಿತು ಮೆರವಣಿಗೆ ಮಾಡಿಸಿಕೊಳ್ಳುವುದನ್ನು, ತೇರಿನ ಗಾಲಿಗೆ ಅನ್ನ ಹಾಕುವುದನ್ನು ನಿಲ್ಲಿಸಿದ್ದಾರೆ. ಪರಮ ಪೂಜ್ಯರ ಈ ಪ್ರಗತಿಪರ ನಿಲುವು ಆರಂಭದಲ್ಲಿ ಕಂದಾಚಾರಿಗಳಿಗೆ shock ನೀಡಿತು. ಈಗ ಎಲ್ಲವೂ ಸರಳ. ವಿನೂತನ ಆಚರಣೆಯ ಗದುಗಿನ ತೋಂಟದಾರ್ಯಮಠದ ಜಾತ್ರೆಗೆ ಈಗ ಮೂವೈತ್ತದರ ಸಂಭ್ರಮ. ಪ್ರತಿ ವರ್ಷ ಜಾತ್ರೆಯ ನೆಪದಲಿ ಹತ್ತಾರು ಪುಸ್ತಕಗಳ ಬಿಡುಗಡೆ, ಗಣ್ಯ ಮಹನೀಯರಿಗೆ ಸಂಮಾನ, ಕೃಷಿಮೇಳ, ಹಾಲುಕರೆಯುವ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಸಾಹಿತ್ಯಾಸಕ್ತರು, ಸಾಂಸ್ಕೃತಿಕ ಪ್ರೇಮಿಗಳು ಸಾವಿರ ಸಂಖ್ಯೆಯಲಿ ನಿಶ್ಯಬ್ದವಾಗಿ ಕುಳಿತು ಮಠದ ಆವರಣದಲ್ಲಿ ಹಾಕಿರುವ ಭವ್ಯ ಮಂಟಪದಲ್ಲಿ ಕಾರ್ಯಕ್ರಮ ವೀಕ್ಷಿಸುತ್ತಾರೆ. ಹೊರಗಡೆ ಜನಸಾಮಾನ್ಯರು ಸಂಭ್ರಮದಿಂದ ಓಡಾಡುತ್ತ, ಮಿರ್ಚಿ, ಭಜಿ ತಿನ್ನುತ್ತಾ ಮುಂಬೈ ಮೂಲದ ಸಂಸ್ಥೆ ಹಾಕಿರುವ ಪ್ರದರ್ಶನ ವೀಕ್ಷಿಸುತ್ತಾ ಆಟ ಆಡುತ್ತಾರೆ. ಹೀಗೆ ಜನಸಾಮಾನ್ಯರನ್ನು ಹಾಗೂ ಪ್ರಜ್ಞಾವಂತರನ್ನು ಏಕಕಾಲಕ್ಕೆ ತಣಿಸುವ ಜಾತ್ರೆಯಲ್ಲಿ ಈ ವರ್ಷವೂ ಅನೇಕಾನೇಕ ಕಾರ್ಯಕ್ರಮಗಳಿವೆ.
ಇಂದು ನಡೆಯುವ ಸಾಮೂಹಿಕ ವಿವಾಹದಲ್ಲಿ ನಾಡಿನ ಹರ-ಗುರು-ಚರ-ಮೂರ್ತಿಗಳು, ಜನಪ್ರತಿನಿಧಿಗಳು ಪಾಲ್ಗೊಳ್ಳುತ್ತಾರೆ.
ಒಂದುವಾರ ಸಾಮೂಹಿಕ ರುಚಿಕಟ್ಟಾದ ಭೋಜನ ವ್ಯವಸ್ಥೆಯೂ ಇದೆ. ಹೀಗೆ ಎಲ್ಲರೀತಿಯಲ್ಲಿಯೂ ಗದುಗಿನ ಜಾತ್ರೆ ಜನಪರ, ಸಾಮೂಹಿಕ, ಸಾಂಸ್ಕೃತಿಕ, ಸಾಹಿತ್ಯದ ಯಾತ್ರೆಯಾಗಿದೆ.
ನಾನು ವಿವರಿಸಿದ ಮಾತುಗಳನ್ನು ಸ್ವತ: ಅನುಭವಿಸಲು ದಯವಿಟ್ಟು ಇಂದೇ ಗದುಗಿನ ಜಾತ್ರೆಗೆ ಬನ್ನಿರಿ
.

No comments:

Post a Comment