Monday, February 20, 2017

ಇಷ್ಟೇ ಅಲ್ಲ

ಇಷ್ಟೇ ಅಲ್ಲ

ಬದುಕು ಎಂದರೆ ಇಷ್ಟೇ ಅಲ್ಲ
ಹೊಟ್ಟೆ ತುಂಬಾ ತಿಂದು
ಕಣ್ಣು ತುಂಬಾ ಮಲಗಿ
ಕಾಮನೆಗಳ ತಣಿಸಲು ಒಂದಿಷ್ಟು ಮುಲುಗಿ
ಬದುಕಿನ ಬವಣೆಗಳಲಿ ನಲುಗುವದಲ್ಲ
ಇನ್ನೂ ಏನೇನೋ ಇದೆ

ಓಡುವ ವಾಹನದ ಹಿಂದೆ ಜೋರಾಗಿ
ಬೆಂಬತ್ತಿ ಅಸಹಾಕತೆಯಿಂದ
ಏದುಸಿರು ಬಿಡುವ ಹಡಬೆ
'ನಾಯಿ ಪಾಡು ' ಅಲ್ಲ

ಕಂಗಳ ನೋಟಕೆ ಮಾತಿನ ಮಾಟಕೆ
ಮರುಳಾಗಿ ಜೊಲ್ಲು ಸುರಿಸಿ ಕಾಲಹರಣ
ಮಾಡುವುದೂ ಅಲ್ಲ

ಹಾಗೆ ಮಾಡಿದ್ದರೆ
ಗೌತಮ ಬುದ್ಧನಾಗುತ್ತಿರಲಿಲ್ಲ
ಅಲ್ಲಮ ಪ್ರಭುವಾಗುತ್ತಿರಲಿಲ್ಲ
ಬಸವಣ್ಣ ಅಣ್ಣನಾಗುತ್ತಿರಲಿಲ್ಲ
ಅಕ್ಕ ಮಹಾದೇವಿಯಾಗುತ್ತಿರಲಿಲ್ಲ
ಗಾಂಧಿ ಮಹಾತ್ಮನಾಗುತ್ತಿರಲಿಲ್ಲ

ಸಾವಿರ ವರುಷಗಳು ಉರುಳಿದರೂ
ಸಾವಿರದೆ ಬದುಕುತ್ತಿರಲಿಲ್ಲ
ನಮ್ಮ ಹಾಗೆ ಇದ್ದು ಸಾಯುತ್ತಿರಲಿಲ್ಲ

ನಿತ್ಯವೂ ಉದಯಿಸುವ ರವಿ
ನಗುವ ಚಂದಿರ ಹೊಳೆಯುವ
ಚುಕ್ಕಿಗಳಿಗೆ ದಣಿವೂ ಇಲ್ಲ
ಸಾವು ನೋವುಗಳ ಹಂಗಿಲ್ಲ

ಧ್ಯಾನಸ್ಥ ಸ್ಥಿತಿಯಲಿ ಒಳಗಿಳಿದಾಗ
ಕಾಡುವ ಎಚ್ಚರಿಸಿ ಕೆನ್ನೆಗೆ ಬಾರಿಸುವ
ಮಹನೀಯರಿಗೆ
ನಮೊ ನಮಃ
---ಸಿದ್ದು ಯಾಪಲಪರವಿ

Sunday, February 19, 2017

ಕಳೆದು ಹೋಗತೀವಿ

ಕಳೆದು ಹೋಗತೀವಿ ಒಮ್ಮೊಮ್ಮೆ ತಪ್ಪು
ಲೆಕ್ಕ-ಆಚಾರಗಳಿಂದ ನಮಗೆ
ಅರಿವಿಲ್ಲದಂಗ  ಮನದಾಟದ
ಮಹಿಮೆಯ ನಂಬಿ ಜೋಲಿ ಹೊಡೆಯುತೀವಿ

ಹಸಿವು ತಾಳಲಾರದೇ ಜೋಳಿಗೆ ಒಡ್ಡುತೀವಿ
ಜಿಡ್ಡು ಜನರ ಮುಂದ
ಹಾಲು ಹಿಂಡುತೀವಿ ಗೊಡ್ಡು ಎಮ್ಮಿಯಿಂದ

ನಂಬಿ ಕೆಟ್ಟವರಿಲ್ಲ ಎಂದು ಕೆಟ್ಟವರ ನಂಬಿ
ಕೆಡುತೀವ ಅವರಲ್ಲ ಕೆಟ್ಟವರು ನಾವೆಂಬುದ
ಮರೆತು ಹಲುಬಿ ಮನದಲಿ ಮರುಗತೀವ

ದುಃಖದಿ ಮಂದ್ಯಾಗ ಅತ್ತು ಮಂಗ್ಯಾ ಆಗಿ
ಹಾರಿ ಹೋಗುತೇವ
ರೆಂಬಿ ಮ್ಯಾಲ ಕುಂತ ಹಕ್ಕಿಗೂ ಗೊತ್ತು
ನಂಬಬಾರದು ರೆಂಬಿಯನೆಂದು
ಹಾರತೈತಿ ಮ್ಯಾಲ ತನ್ನ ರೆಕ್ಕಿಯ ನಂಬಿ

ಮೂರು ದಿನದ ಸಂತೀವಳಗ ನಾವ ದಾರಿ
ತಪ್ಪಿ ಅಡ್ಡ ದಾರಿ ಹಿಡೀತೀವ ನೋಡದ
ಹಿಂದ ಮುಂದ...
---ಸಿದ್ದು ಯಾಪಲಪರವಿ

Saturday, February 18, 2017

ಪೂರ್ಣ ಮಿಲನ

ಪೂರ್ಣ ಮಿಲನ

ನಗುತಿರುವ 'ಪೂರ್ಣ 'ಚಂದಿರ
ಮೋಸ ಮಾಡಲಾರ ನಗುವಲಡಗಿರುವ
ಆಳದ ಮುಗ್ಧತೆಯ ಸಿರಿಯ ಕದಿಯಲಾಗದು

ಉಕ್ಕಿ ಹರಿಯುವ ಅಲೆಗಳ ದಕ್ಕಿಸಿಕೊಳುವ ತವಕ
ಬಿದಿಗೆ ಚಂದಿರೆಗೆ

ಮೇಲಿರುವ ಆಗಸಕೆ ಧರೆಗಿಳಿದು
ಭುವಿಯ ಸೇರುವಾಸೆ
ಭುವಿಗೂ ಬಾನೆತ್ತರಕೆ ಹಾರುವಾಸೆ

ಮಿಲನ ಸುಖಕೆ ತುಡಿಯುವ ಜೀವಗಳ
ಹಿಡಿದು ತಡೆಯುವವರು ಯಾರಿಹರು
ಈ ಜಗದಲಿ

ಭಾನು-ಭೂಮಿ
ಚಂದ್ರ-ಕಡಲಲೆಗಳ ಮಿಲನಮಹೋತ್ಸವಕೆ
ಮೂಕಸಾಕ್ಷಿ ನೀನೇ ದೇವಾ

ದೇಹಮೀರಿದ ಆತ್ಮಗಳ ಸಚ್ಛಿದಾನಂದವ
ಸವಿಯುವ ಎನ್ನಳಲ ಕೇಳು ದೊರೆಯೇ
ನೀನೊಲಿಯದೆ ಸವಿಯಲಾರೆ ಕಬ್ಬಲಡಗಿರುವ
ಸವಿಯ , ಹೂವಲವಿತಿರುವ ಮಧುವ.

ಭಾವ-ಜೀವಗಳ ತಳಮಳಕೆ ತೋರು
ಗುರುವೆ ಹೊಸದೊಂದು ಹೊಳೆವ ಬೆಳಕ.
---ಸಿದ್ದು ಯಾಪಲಪರವಿ

ಸ್ಪೂರ್ತಿಯ ಸೆಲೆ

ಸ್ಪೂರ್ತಿಯ ಸೆಲೆ

ಸಾವಿರಾರು ಭಾವನೆಗಳಿಗೆ ಗಾಳ
ಹಾಕಿ ಹಿಡಿದಿಡುವ ಸೆಳೆತ
ಕಣ್ಣು ಮಿಟುಕಿಸದ ತೀಕ್ಣ ಸವಿ ನೋಟ

ಚಿನ್ನದಲಿ ಕೆತ್ತಿ ಸಿಂಗರಿಸಿದ ಮೈ-ಮಾಟ
ಒಡೆವೆಗಳ ಹಂಗಿಲ್ಲ ಚಿತ್ತಾರದ ಚಲುವಿಗೆ

ಅಲ್ಲೆಲ್ಲೋ ಹುಡುಕುತಿದ್ದೆ ಚುಕ್ಕಿ-ಚಂದ್ರಮರ
ಬಾನಲಿ
ಆದರೆ ನೀ ಇಲ್ಲೇ ಹೊಳೆಯುತಿರುವೆ ಅಂಗೈ
ಕನ್ನಡಿಯಲಿ

ಒಮ್ಮೆ ದೀರ್ಘವಾಗಿ ಆಸ್ವಾದಿಸಲು
ಚಡಪಡಿಸುವ ಪಂಚೇಂದ್ರಿಯಗಳ
ಕಾತುರಕೆ ಬೇಕು ಸಣ್ಣ ಕಡಿವಾಣ

ಇಲ್ಲದಿರೆ ಅರಿವಿಲ್ಲದೆ ಅಳಿದು ಲೀನನಾಗಿ
ಕಳೆದು ಹೋಗುವೆ ಕಂಗಳ ಸರೋವರದಲಿ
ಜಾರಿ ಇಳಿಯುವ ಮುನ್ನ ಅರಿಯುವುದು
ಒಳಿತು ದೇವನಿತ್ತ ಭಾಗ್ಯವ ಸ್ವೀಕರಿಸುವ
ಪರಿಯ

ಸಾಕು ಮನವ ತಡೆದುಕೋ ತಲ್ಲಣವ
ಅನುಮತಿಯಿಲ್ಲದೆ ಅಪ್ಪಿಕೊಳಬೇಡ ದೇವ
ನೀಡಿದ ಸಿರಿಯ

ಒಲಿಯುವ ಯೋಗಾಯೋಗದಲಿ
ಇರಲಿ ಸ್ಪೂರ್ತಿಯ ಸೆಲೆಯಾಗಿ ನಿತ್ಯ
ನೂತನ

ಕಾಯು ಮನವೆ ಅಂಗೈಯಲಿ ಹಿಡಿದು
ಜೀವನೋತ್ಸಾಹದ ಈ ಚಲುವ...

---ಸಿದ್ದು ಯಾಪಲಪರವಿ

Monday, February 13, 2017

ಪ್ರೇಮಿಗಳ ದಿನ

ಉಕ್ಕಿ ಹರಿಯುವ ಭಾವನೆಗಳಿಗೆ
ಲೆಕ್ಕ ಕೊಡುವವರು ಯಾರು ?

ಕನಸಲಿ ಕಂಡವಳು ಮನದಲಿ ಮೂಡಿದವಳು
ನನ್ನ ಹೆಸರಲಿ ಹೂ ಮುಡಿದು ಕಾಡಿದವಳು
ಬೀದಿ ಬದಿಯಲಿ ಹಾಯ್ದು ಹೋಗುವಾಗ
ಕ್ಷಣ ಹೊತ್ತು ಕದಡಿದವಳು

ಪ್ರೇಮವೆಂಬುದೊಂದು ಬಿಕ್ಷೆ ಬೇಡಿದರೆ ನೀಡಬಹುದು ಶಿಕ್ಷೆ
ಬೇಡದಿರೆ ಸಿಗಬಹುದಿತ್ತೇನೋ ಎಂಬ ಬಡಬಡಿಕೆ

ರಾಮನ ನಿಷ್ಟೆಯದುರು , ರಾವಣನೂ ಅಷ್ಟೇ
ಎದುರಿಗಿದ್ದರೂ ಮನಗೆದ್ದು ವರಿಸಲು ಹೆಣಗಿ ಹೆಣವಾದ
ಪಡೆದ ಚಡಪಡಿಕೆಯಲಿ ರಾಮ ಜೀವಂತ ಬಲಿಯಾದ

ಹೆಣ್ಣು-ಹೊನ್ನು-ಮಣ್ಣು ಬೇಡ ಯಾರಿಗೆ ಹೇಳಿ
ಮನದಲಿ ತಿಂದ ಮಂಡಿಗೆಗೆ ಗೋದಿ ಕೊಡುವವರು ಯಾರು ?

ಈ ಬದುಕೇ ಹೀಗೆ ಇರುವುದ ಬಿಟ್ಟು ಇಲ್ಲದಕೆ ಹಾರುವ ಮಂಗ ಸುಮ್ಮನೇ ಬಿಟ್ಟುಕೊಂಡ ಇರುವೆ

ನಕ್ಕು ಮಾಯವಾದವಳು
ಅತ್ತು ಎದೆಯೇರಿದವಳು
ಪಕ್ಕದಲಿ ನಿಶ್ಯಬ್ದ ಮಲಗಿದವಳು
ಯಾರು ಮನಕೆ ಸನಿಹವೋ ನಾ ಕಾಣೆ

ಹುಡುಕುವೆ ಕಳೆದು ಕೈಗೆ ಸಿಗದವಳ ಸಂತೆಯಲಿ ಸಿಕ್ಕರೂ ಸಿಗಬಹುದು ಎಂಬ ಲಂಪಟ ಮನಸಿಗೆ ಇಲ್ಲ ಕಡಿವಾಣ

ನೆನಪುಗಳ ಬಗೆದರೆ ಅಸಂಖ್ಯ ವಾಂಛೆಯಲಿ ಕಳೆದು ಹೋದವರ ಲೆಕ್ಕ ಕೊಡುವುದಾದರೂ ಯಾರಿಗೆ

ಇಂದು ಈ ರಾತ್ರಿಯ ಬೆಳದಿಂಗಳಲಿ  ನನ್ನ ನೆನಪು ಮಾಡಿಕೊಂಡವಳು ಚಂದ್ರನ ಕಂಡು ನಸು ನಕ್ಕರೆ ಸಾಕು
ಹಾಲು ಬೆಳದಿಂಗಳು ನನ್ನ ಎದೆ ಮೇಲೆ ಎಲ್ಲ

ಕಣ್ಣು ಮುಚ್ಚಿ ಹುಡುಕುವೆ ಧ್ಯಾನಸ್ಥನಾಗಿ ಮರೆಯಾದವಳು ಮತ್ತೆ ಸಿಗಬಹುದು ಪ್ರೇಮಿಗಳ ದಿನದಂದು ಇಂದು ಎಂದೆಂದು ಮುಂದೆಂದು.

ಭರವಸೆಯ ಬೆಳಕ ಭರದ ನಡಿಗೆ ಬಾಡದಿರಲಿ ಎಂದೆಂದೂ...

ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು.

---ಸಿದ್ದು ಯಾಪಲಪರವಿ

Tuesday, February 7, 2017

ನಿದಿರೆ

Sleep is temporary death
Death is permanent sleep

ಅನ್ನ ನೀರು ಕಾಮ ದಾಹ
ತೀರಿಸಲು ಸಂಗಾತಿ ಬೇಕು
ಆದರೆ ನಿದಿರೆಯ ಬಾಚಿ
ಅಪ್ಪಿ ಮುದ್ದಾಡಲು
ಬರೀ  ಏಕಾಂತ
ಸಾಕು.
---ಸಿದ್ದು ಯಾಪಲಪರವಿ

ಎಚ್ಚರಿಸು

ಕಿವಿ ಹಿಂಡಿ ಎಚ್ಚರಿಸು

ಆಸೆಗಳಿಗೆ ಮಿತಿಯಂಬುದೇ ಇಲ್ಲ
ಕಂಡದ್ದೆಲ್ಲ ನನಗಿರಲಿ ಅಲ್ಲ

ಹೆಣ್ಣು-ಹೊನ್ನು-ಮಣ್ಣು ಎಂಬ
ಜಗದ ಜಂಜಡದ
ಕೈಗೂಸು ನಾ
ಎಂದರಿತರೂ ಇನ್ನಿಲ್ಲದ
ಸೆಳೆತ ಸೆಳೆತ ಸೆಳೆತ

ಆಸೆಯ ಅರುಹಿದರೆ ಕಳೆದುಕೊಳ್ಳುವ ಭೀತಿ
ಬಿಟ್ಟು ಸದಾ ಕೊರಗಿದರೆ ಇನ್ನಿಲ್ಲದ ತವಕ

ಹಿಡಿ ಅನ್ನಕೆ ತುಂಬುವ ಹೊಟ್ಟೆ
ಬೊಗಸೆ ನೀರಿಗೆ ತಣಿಯುವ ದಾಹ
ಸಮ-ಭೋಗದಿ ಕರಗುವ ಚಪಲ

ಆದರೂ
ಬೇಕು ಬೇಕು ಬೇಕು
ಕಂಡದ್ದು ಕಣ್ಣಿಗೆ

ಬೇಡಲಾರೆ ಎಂಬ ಧ್ಯಾನಸ್ಥ ತಪವ
ಮನಕೆ ದೀಕ್ಷೆ ಕೊಡುವವರು ಯಾರು ?

ಉಸಿರು ನಿಂತ ಮರುಕ್ಷಣ ಇದು ಕೇವಲ
ದೇಹ ಎಂಬ ಒಣ ವೇದಾಂತದ ವಾದ

ಹೂತಿಟ್ಟ ಆಸೆಗಳು ಕೊಳೆತು ನಾರಿ ಮೂಗು
ಮುಚ್ಚಿಕೊಳ್ಳುವ ಹೇಸಿಗೆಯಲು ಸವಿ ಸುಖದ
ತೀರದ ಚಪಲ

ಕಳೆದು , ನಿರಾಕರಿಸಿ , ನಿರ್ಲಿಪ್ತ
ಹಂತವನೇರಲು ಉಸಿರು ಬಿಗಿಹಿಡಿದು
ಚಡಪಡಿಸುವ ಸಾಧನೆಯ ಹಾದಿಗೆ ಮಂಕು
ಕವಿದಾಗ ಕೈಹಿಡಿದು ನಡೆಸಿ ಕಿವಿ ಹಿಂಡಿ
ಎಚ್ಚರಿಸು ಗುರುವೆ.

ಹರ ಮುನಿದರೂ
ಕಾಯುವ ಗುರುವಿನ ಗುರು ನೀ
ನಾ ಹಿಡಿದ ಗುರಿ ತಲುಪುವ ತನಕ...
---ಸಿದ್ದು ಯಾಪಲಪರವಿ