'ಇ' ಜಗತ್ತಿನಲ್ಲಿ ನಿಮ್ಮೊಂದಿಗೆ ಸದಾ 'ನಾ' ಇಲ್ಲಿನ ಈ ಜಗತ್ತಿನಲ್ಲಿ ನನ್ನ ಬರಹ ತಿರಸ್ಕಾರಗೊಳ್ಳುವ ಪ್ರಶ್ನೆಯೇ ಇಲ್ಲ. ಸಂಪಾದಕರು ಪ್ರಕಟಿಸುತ್ತಾರೋ ಇಲ್ಲವೋ? ಓದುಗರಿಗೆ ತಲುಪಿಸುವುದು ಹೇಗೆ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ 'ಇ' ಬ್ಲಾಗ್ ಲೋಕದಲ್ಲಿದೆ. ಇಂತಹದೊಂದು ಜಾಗತಿಕ ಮಾಧ್ಯಮಕ್ಕೆ ಪ್ರವೇಶಿಸುವುದಕ್ಕೆ ಖುಷಿ ಆಗಿದೆ. ಯಾರಿಗೂ ಹೇಳಿಕೊಳ್ಳಲಾಗದ ಅನೇಕ ಖಾಸಗಿ ಸಂಗತಿಗಳನ್ನು ನಿಮ್ಮೊಂದಿಗೆ ಯಾವ ಮುಲಾಜಿಲ್ಲದೆ ಹಂಚಿಕೊಳ್ಳುತ್ತೇನೆ. ಮಾತು ಲೆಕ್ಕಾಚಾರದಿಂದ ಕೂಡಿರಬೇಕು. ಆದರೆ ಬರಹ ಮುಕ್ತವಾಗಿರಬೇಕು.ಇಲ್ಲಿ ಆತ್ಮವಂಚನೆ ಸಲ್ಲದು. ಹಾಗಂತ ನಾವು ಅನೇಕ ಸಾರಿ ಅಂದುಕೊಳ್ಳುತ್ತೇವೆ.ಆದರೆ ಅನೇಕ ಕಾರಣಗಳಿಂದ ಹೇಳಬೇಕಾದ ಅನೇಕ ಸಂಗತಿಗಳನ್ನು ಬೇರೆಯವರಿಗೆ ಹೇಳಲಾಗುವುದಿಲ್ಲ. ಒಳಗಿರುವುದನ್ನು ಬಚ್ಚಿಡದೆ, ಬೇರೆ,ಬೇರೆ ವಿಧಾನಗಳನ್ನು ಬಳಸಿ ಬಿಚ್ಚಿಡಲು ಖಂಡಿತಾ ಬ್ಲಾಗ್ ಲೋಕವನ್ನು ಪ್ರಾಮಾಣಿಕವಾಗಿ ಪ್ರವೇಶಿಸುತ್ತೇನೆ. ನಮ್ಮ ಈ ಸೋಗಲಾಡಿ ಬದುಕಿನಲ್ಲಿ ಎಷ್ಟೊಂದು ಅಪ್ರಾಮಾಣಿಕವಾಗಿ ಬದುಕುತ್ತೇವಲ್ಲ? ಈ ಹಿಪೋಕ್ರಸಿಗೆ ಅಂತ್ಯವಿಲ್ಲವೆ? ಒಳಗಿರುವುದನ್ನು ನಯವಾಗಿ ಅದುಮಿ, ಅನೇಕ ಬಣ್ಣ,ಬಣ್ಣದ ಸುಂದರ ಮುಖವಾಡಗಳನ್ನು ಧರಿಸಿ ನಯವಂಚಕರಾಗಿರುವ ನಮಗೆ ಎಂದೂ ನಮ್ಮ ಬಗ್ಗೆ ಅಸಹ್ಯವೆನಿಸುವುದಿಲ್ಲ. ಸುಂದರವಾಗಿ ಕಾಣಲು ಬಳಸುವ ಸೌಂದರ್ಯ ಸಾಧನಗಳು, ಘಮಘಮಿಸುವ ಪರ್ಫ್ಯೋಗಳು ನಮ್ಮನ್ನು ಸಭ್ಯರನ್ನಾಗಿಸಿವೆ. ನಾವು ಈಗ ಸ್ವಚ್ಛಗೊಳಿಸಬೇಕಾದದ್ದು ಕೇವಲ ದೇಹವನ್ನಲ್ಲ, ನಮ್ಮ ಮನದ ಕೊಳೆಯನ್ನು ಕೂಡಾ! ಅಳಿಸಲಾಗದ ಮನದ ಕೊಳೆಯನ್ನು ಅಳಿಸಲು ಹಂತಹಂತವಾಗಿ ಪ್ರಯತ್ನಿಸಬೇಕು. ಹೀಗೆ ನಿಮ್ಮೊಂದಿಗೆ ಪರಸ್ಪರ ಮುಖಾಮುಖಿಗೊಂಡು ಎಲ್ಲವನ್ನು ಹೇಳಿಕೊಂಡು ಹಗುರಾಗುವುದರಲ್ಲಿನ ಸುಖ ಎಲ್ಲಿದೆ ಹೇಳಿ? ಸಾರ್ವಜನಿಕವಾಗಿ ಮುಖವಾಡ ಕಳಚುವುದು ಸುಲಭವಾದ ಮಾತಲ್ಲ. ಏನೇನೋ 'ಇಸಂ'ಗಳು 'ಅಹಂ' ನಮ್ಮನ್ನು ಬೆಂಬತ್ತಿರುತ್ತವೆ. ಈ ಎಲ್ಲಾ ಮಿತಿಗಳನ್ನು ಕಳೆದು ತೊಳೆದುಕೊಳ್ಳಲು ಸ್ನೇಹ-ಪ್ರೀತಿ ನಮಗೆ ನೆರವಾಗುವುದರಲ್ಲಿ ಸಂಶಯವೇ ಇಲ್ಲ. ಅದಕ್ಕೆ ಅಲ್ಲವೇ " ಸ್ನೇಹವೆಂದರೆ ಅದ್ಭುತ ರಸಾಯನ, ಅದು ದು:ಖವನ್ನು ಕರಗಿಸುತ್ತದೆ. ಚಿಂತೆಗಳನ್ನು ಆವಿಯಾಗಿಸುತ್ತದೆ. ದೋಷಗಳನ್ನು ಶುದ್ಧೀಕರಿಸುತ್ತದೆ. ಅದರೊಂದಿಗೆ ಸ್ನೇಹ, ಪ್ರೀತಿ, ಸಂಭ್ರಮವನ್ನು ಹೆಚ್ಚಿಸುತ್ತದೆ." ಎಂದು ಸಂದೇಶ ನೀಡಿದ್ದು ಅದಕ್ಕಾಗಿಯೇ ಸ್ನೇಹದಿಂದ ಪ್ರೀತಿಯನ್ನು ಗಳಿಸೋಣ, ಪ್ರೀತಿಯಿಂದ ದು:ಖವನ್ನು ಮರೆಯೋಣ. ಪರಸ್ಪರರ ದೋಷಗಳು ಗೋಚರವಾದಾಗ ಅಷ್ಟೇ ಸಂತೋಷದಿಂದ ಸ್ವೀಕರಿಸಿ ವಾಸ್ತವದಲ್ಲಿಯೂ ಖುಷಿಯಿಂದ ಬದುಕೋಣ. 'ಕಾಲ' ಯಾರಿಗಾಗಿ ಕಾಯುವುದಿಲ್ಲ ಅಲ್ಲವೆ? ಬ್ಲಾಗ್ ವಿನ್ಯಾಸಕ್ಕೆ ಕಾರಣವಾದ ಕೊಪ್ಪಳದ ಗೆಳೆಯ ಸಿರಾಜಗೆ ಕೃತಜ್ಞತೆಗಳು.
Subscribe to:
Post Comments (Atom)
No comments:
Post a Comment