Saturday, March 12, 2016
ಎಲ್ಲವೂ ಹೌದು !
ಎಲ್ಲಿಲ್ಲದ ಅಕ್ಕರೆ
ಅನುಭವಿಸಿದರೆ
ಎಲ್ಲವೂ ಸಕ್ಕರೆ
ನೀ ಬರೀ ನಕ್ಕರೆ.
ಬಾಲ್ಯದ ಕೃಷ್ಣ
ಲೀಲೆಗೆ ತಾಯಾಗಿ
ಸಾಂಗ್ಯತ್ಯಕ್ಕೆ ಸೋದರಿ
ಏರು ಯೌವ್ವನಕೆ ಗೆಳತಿ
ಪ್ರೌಢಿಮೆಗೆ ಸತಿ
ದೌರ್ಬಲ್ಯಗಳ
ಇತಿ-ಮಿತಿಗಳ
ಕೆಣಕಿ ರಮಿಸಿ
ಕಾಡುವ ಸಂಗತಿಗಳ
ಸಂಗಾತಿ.
ಅಕ್ಕರೆಯ ಅನುಭವದ
ಮಗಳು
ಅನುಭಾವದ ರಸದೌತಣ
ಉಣಬಡಿಸುವ ಮೊಮ್ಮಗಳು...
ಹೀಗೆ ಏನೆಲ್ಲ ಸವಿಸುಖದ
ಘಮಲು ನೀ ಕೇವಲ
ಹೆಣ್ಣಲ್ಲ.. ಗಂಡಿಗೆ ಕಾಡುವ
ಮಾಯೆಯೂ ಅಲ್ಲ.
ಜೀವನೋತ್ಸಾಹದ
ಜೀವಜಲ
ಎಂದೂ ಮಾಸದ
ಮಾನಸ ಸರೋವರ.
ಬೇಡಿದ್ದನ್ನು ಬೇಕಾದಾಗ
ತಿಳಿಸಿ ತಿಳುವಳಿಯ
ಅರವಳಿಕೆಯ ನೀಡಿ
ಹರಸುವ ಚೈತನ್ಯ.
ಪುರುಷ ಪ್ರಧಾನ
ವ್ಯವಸ್ಥೆಯಲಿ
ದುರ್ಬಲಳೆಂಬ
ಪಟ್ಟ ಹೊತ್ತ
ಪ್ರಬಲೆ , ಸಬಲೆ
ಶಕ್ತಿಶಾಲಿ...
ಬತ್ತದ ಚಿಲುಮೆ...
ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು
---ಸಿದ್ದು ಯಾಪಲಪರವಿ
ಕಳೆದು ಹೋಗಿದ್ದೇನೆ
ಮುಗ್ಧತೆ-ತವಕ--ತಲ್ಲಣ
ಗಳ ತೊಟ್ಟಿಲಲಿ
ತೂಗುಯ್ಯಾಲೆ
ಕಂಡ ಕನಸುಗಳಿಗೆ
ಲೆಕ್ಕವಿಲ್ಲ.
ಕಾಮಕುದುರೆಯನೇರಿ
ಪ್ರೇಮದಾಟದಲಿ
ಮೀಯುವ
ತವಕ
ಅಕ್ಷರ ಬಂಧನದ
ತಲ್ಲಣ
ಸೋಲು ನೋವು
ಹತಾಶೆಯ ಬೇಗುದಿ.
ಹಿಡಿದ ಹಾದಿಯ
ಅಂತ್ಯ ಅಯೋಮಯ
ಭಾವುಕ ಭ್ರಾಮಕ ಸುಳಿಯ
ಸೆಳೆತದ ಆಲಿಂಗನ.
ಸತ್ಯ - ಆದರ್ಶಗಳ
ಗಾಳದಿ ಸಿಕ್ಕ ಮೀನು.
ಕಂಡದ್ದೆಲ್ಲ ಕಸಿದು
ಹೊಸಕುವ ಹುಮ್ಮಸ್ಸು.
ತೋಳ ದಿಂಬಾಗಿಸಿ
ದಿಂಬಲಿ ಅವಳ
ಬಿಂಬವ ತಡಕಾಡಿದ
ಅನರ್ಥ ಬದುಕು.
ನಿಟ್ಟುಸಿರ ದಾಳಿ ಗೆ
ಏದುಸಿರಿ ಬೆವರಿಗೆ
ಥಟ್ಟನೆ ಜಾರಿ ಬಿದ್ದ
ಪುರುಷ ಹನಿ...
ಸಹಿಸುತ, ರಮಿಸುತ
ಸೋಲುತ ಗೆಲ್ಲುತ
ಅಗ್ನಿ ಪರೀಕ್ಷೆಗೊಳಗಾಗಿ
ಎಲ್ಲವನು ಎಲ್ಲರನು
ಸಹಿಸಿಕೊಂಡು
ನನ್ನನೇ ದಹಿಸಿಕೊಂಡು
ಪಾರಾದ ಏರು ಯೌವ್ವನ
ಈಗ ನೀ ಎಲ್ಲಿರುವೆ?!..
---ಸಿದ್ದು ಯಾಪಲಪರವಿ
Subscribe to:
Posts (Atom)



.jpg)