Monday, January 27, 2014

ಮಹಾದಾನಿ




ದಾನದಿಂ ಮೆರೆದು ಮರೆಯಾಗದೇ
ಸುಳಿದು ಸೂಸುವ ಗಾಳಿಯಲಿ
ಅರಳುವ ಪ್ರತಿಭೆಗಳಲಿ
ನಿತ್ಯ ನೂತನವಾಗಿ ಕಂಗೊಳಿಸುವ
ದಿವ್ಯ ಚೇತನಕೆ ಸದಾನಮನಗಳು
.

ಜಗದಣ್ಣ



ಗೋಮುಖ ವ್ಯಾಘ್ರರು ಒಲೆ-ಧರೆ ಹತ್ತಿಸಿ
ಉರಿವಾಗ-ಉರಿಯಲಿ ಮೈಕಾಸಿಕೊಂಡಾಗ
ಜ್ಞಾನದ ಬಲದಿಂದ ಹೊತ್ತಿಕೊಂಡ ಚಿಜ್ಯೋತಿ.
ಉಳ್ಳವರ ಶಿವಾಲಯಗಳ ಉರುಳಿಸಿ ಇಷ್ಟ
ದೇವರ ಅಂಗೈಗಿಟ್ಟವ, ಗುಡಿಗೋಪುರ ಮಂಟಪ
ಗಳ ಗಾಳದಿ ಸಿಕ್ಕವರ 'ಅನುಭವ' ಮಂಟಪದಿ ಪ್ರತಿಷ್ಠಾಪಿಸಿದವ.
ಅಕ್ಕ, ಅಲ್ಲಮರ ವಚನ ಗಾನಕೆ ತಪ್ಪದೇ
ತಾಳ ಹಾಕಿದವ, ಎಲ್ಲರನು ಇವ ನಮ್ಮವ
ಎಂದೆನಿಸಿದರೂ ದುಷ್ಟ ದುರುಳರಿಗೆ ದುರಾಚಾರಿಗಳಿಗೆ
ಇವನಾರವ-ಎನಿಸಿದರೂ ಲೆಕ್ಕಿಸದೆ ತಲೆದಂಡ
ಹಿಡಿದು ರಾಜಮಾರ್ಗ ಸೃಷ್ಠಿಸಿದವ.
ಸಾವಿರ ವರುಷಗಳುರುಳಿದರೂ ಸಾವಿರದ ಸರದಾರ
ಸುಳಿದು ಸೂಸುವ ಗಾಳಿಯಲಿ ಪಡೆದು ಧನ್ಯವಾಗುವ
ಉಸಿರಿನಲಿ ಸದಾ ನೀನೇ ಅಣ್ಣ ಬಸವಣ್ಣ-ಜಗದಕಣ್ಣಣ್ಣ

ನನ್ನ ಸರ್



ಬದುಕು ಮಕ್ಕಳಾಟವಲ್ಲ ಖರೆ
ನಾವೇ ಮಕ್ಕಳಾಗಿ ಸಿಕ್ಕ ಸಿಕ್ಕವರು ಆಟ
ಆಡಿದರೆ ಹೇಗೆ ಸರ್? ಕಣ್ಣ ತುಂಬ ಕನಸು
ಮುಖದ ತುಂಬ ಮಾಸದ ಯಾರೂ
ಕಸಿಯದ ನಗೆ. ನಗೆ ಕೊಂಡವರು
ಖುಷಿಮತ್ತರಾಗಿ ತಿರುಗಿ ತೋರಲಿಲ್ಲ
ಸೌಜನ್ಯ ಪ್ರೀತಿ-ಹಣ. ಆದರೂ
ಮುನಿಸಿಕೊಳ್ಳಲಿಲ್ಲ ಜೀವ-ತುಂಬೆಲ್ಲ ಭಾವ
ಪ್ರೀತಿ-ಪ್ರೀತಿ ನಿಟ್ಟುಸಿರು. ನಿಮ್ಮನರಿಯದ
ಸಂಗಾತಿಗಳು ಎಲ್ಲಿ ಕಳೆದಿದ್ದಾರೆ ತಮ್ಮ ತಮ್ಮ
ಅಮೂಲ್ಯ ಸಮಯವ? ಸಿಕ್ಕರೆ ತಿರುಗಿ
ಕೊಡಲಿ ಪಡೆದ ಪ್ರೀತಿ ವಿಶ್ವಾಸ ನಗೆ ಸಂಭ್ರಮವ
ಕಾಲನ ಹಾದಿಯಲಿ ತೊಡರಿಗೆ ಸಿಕ್ಕವರ ಎಬ್ಬಿಸಿ ತಟ್ಟುವ
ಸಾಗಲಿ ಜೀವ ಪಯಣ


ಪಂಡಿತ




ನಡೆಗಿಂತ ನಗೆ ಗಂಭೀರ
ಮೌನದಲಿ ಸಾವಿರಾರು ಭಾವಗಳ
ಸರದಾರ
ಪಾಂಡಿತ್ಯ-ಅಧ್ಯಯನ ಹೂಂಕಾರ
ಝೇಂಕಾರಗಳ ಗ್ರಹಿಸಿ ಗಮನಿಸುವ
ಕಾವಲುಗಾರ
ಬ್ರಹ್ಮಾನುಭವದ ಬ್ರಾಹ್ಮಣ್ಯ
ಸಂಸ್ಕೃ-ಸಂಸ್ಕೃತಿಗಳ ಮಂಥನದಿ
ಬೀಗುವ ಛಲಗಾರ
ಟೀಕೆ-ಟಿಪ್ಪಣಿಗೆಲ್ಲ ಇಲ್ಲಿ
ಇಲ್ಲ ಉತ್ತರ
ಜ್ಞಾನದಾಗರದ ಕನ್ನಡಕದ ಹಿಂದಿನ ಕಂಗಳ ಮಿಂಚು
ತುಟಿ ಮೇಲಿನ ಕಿರುನಗೆ ಸಾಗಿಯೇ
ಇರಲಿ ಹೀಗೆ ನಡೆದದೆಲ್ಲ ರಾಜಮಾರ್ಗ

ಸ್ನೇಹ




ಜಗದ ಮಾರುಕಟ್ಟೆಯಲೆಲ್ಲೂ ಲಭ್ಯವಿರದ
ಮಂದಹಾಸ
ಪ್ರೀತಿ-ವಿಶ್ವಾಸ ನಿತ್ಯ ಶ್ವಾಸಕೋಶ
ಕನಸ ಕಾಣುವದು ಕಂಡ ಕನುಸುಗಳಿಗೆ
ಬಣ್ಣ ತುಂಬಲು ಹೆಣಗುವದು
ಚಿತ್ತಾರ ಸುಂದರವಾದಾಗ ಮಕ್ಕಳ ಹಾಗೆ
ನಗು ಕೇಕೆ ಯಾರಿಗೆ ಬೇಕಿತ್ತು ಸದಾ ಗಡಿಬಿಡಿ
ಕ್ರಿಯಾಶೀಲತೆಗೆ ಒಂಚೂರು ವಿರಾಮ ಕೊಡಿ
ಟೋಪಿ ಹಾಕಲು ಯಾವ ಗೂಟವಾದರೇನು?
ಗರಿಗರಿ ಇಸ್ತ್ರಿ ಕೆಡದಿದ್ದರೆ ಸಾಕು - ತಲೆ
ಮಾಸದಿರಲು ಟೋಪಿಯೂ ಬೇಕು, ಗೂಟವೂ ಬೇಕು
ಸುಂದರ ಕನಸುಗಳಿಗೆ ಬಣ್ಣ ತುಂಬುವದಿದ್ದರೆ ಹಗಲು
ಬರುವದೇ ಬೇಡ ಬಾಳಿನ ಪಯಣ ಮುಗಿಯದೇ
ಸಾಗಿರಲಿ ಸ್ನೇಹ ಬಂಡಿ.

ಜಡದ ಹಾಡು

ಬದುಕು ಸುತ್ತೆಲ್ಲ ಜಂಜಡದ ಗಂಟು
ಗಳ ನಂಟು
ಹೊರಬರಲೆತ್ನಿಸಿದಂತೆ ಸಿಕ್ಕುವೆವು
ಸಿಂಬಳದ ನೊಣದಂತೆ
ಅಂತೆ-ಕಂತೆಗಳ ಬದುಕಿಗೆ
ನೂರೆಂಟು ಜಡತೆಯ ಗಂಟು
ಬಿಚ್ಚಲೆತ್ನಿಸಿದಂತೆಲ್ಲ ಬೀಳುವದು
ಮತ್ತೆ ಕಗ್ಗಂಟು
ಹಸಿದ ಹೊಟ್ಟೆ ಹಿಟ್ಟ ಪಡೆದರೆ,
ಬಟ್ಟೆಗೆ ಪರದಾಟ
ಒಂದಿದ್ದರೆ, ಇನ್ನೊಂದರ ಕೈ ಬಿಡುವ
ನಿತ್ಯ ಬದುಕಿನ ಹೋರಾಟ
ಹಸನದ ಬಾಳು ಕನಸಿನ ಹಾಡಾಗಿ
ಕರ್ಕಶದಿ ಹಾಡುವ ಪಕ್ಷಿ
ಚೀರುತಿದೆ ಹಾಹಾಕಾರದಿ
ನಿತ್ಯ ಸಮಸ್ಯೆಯ ಸುತ್ತ
ನಳನಳಿಸುವ ಜೀವಕೆ-
ತ್ಯಾಗ, ಪ್ರೀತಿ, ವಿಶ್ವಾಸಗಳೆಲ್ಲ ಸವಕಲುನಾಣ್ಯ
ಜಣ, ಜಣ,ಜಾರಿ ಹೋಗಿವೆ
ಹೊಟ್ಟೆ ಬಟ್ಟೆಗಳ ಚಿಂತೆಯಲೂ
ಜುಟ್ಟಿಗೆ ಹೂವ ಸಿಗಿಸುವ ಕೃತಕತೆಯಲಿ
ಸೋರಿಹೋಗಿದೆ ಬದುಕ ಬೆಲೆ
ಬಾಳಿಗಿಲ್ಲ ನೀತಿ, ಬದುಕಿಗಿಲ್ಲ ರೀತಿ
ಹೊಂದಿಯೂ ಹೊಂದದಂತೆ
ಪಡೆದೂ ಪಡೆಯದಂತೆ
ದೂರಾಗಿವೆ ಸಂಗತಿ-ಸಂಗಾತಿಗಳೆಲ್ಲ
ಮನದ ಮೂಲೆಯಿಂದ ಎಲ್ಲವೂ ಯಾಂತ್ರಿಕ, ತಾಂತ್ರಿಕ,
ವೇಗದ ಬದುಕು ನಿರ್ಜೀವ ಯಂತ್ರ?
ಇದಕೆ ಬೇಕಿಲ್ಲ ಚಾಲಕನ ತಂತ್ರ
ಕೊನೆಯಿಲ್ಲ
ಈ ತಾಳ ತಪ್ಪಿದ ಬಾಳ ಹಾಡಿಗೆ

ಸಿಟ್ಟು


ನುಂಗಿದರೆ
ವಿಷ
ಕಾರಿದರೆ
ಬೆಂಕಿ