ನೀ ನಿಲ್ಲಲಾರೆ ನಾ ಬಿಡಲಾರೆ.
ಹರಿದಾಡುವ ನಿನ್ನ ಹಿಡಿದು ಹಾಕುವುದು ಕಡು ಕಷ್ಟ
ಹಾಗಂತ ಸುಮ್ಮನೇ ಬಿಡಲಾದತೇ?
ಸುಪ್ತ , ಜಾಗೃತ , ಶವಾವಸ್ಥೆಯಲೂ ನೀನು
ಸದಾ ಎಚ್ಚರ
ನಿರಂತರ ಬೆಂಬತ್ತುವ
ನಿನ್ನ
ಬಿಟ್ಟರೆ ಅವಿವೇಕಿ
ಹಿಡಿದರೆ ಹುಚ್ಚ
ಹೆಣ್ಣು-ಹೊನ್ನು-ಮಣ್ಣು
ಮಾಯೆಯಂಬ ಭ್ರಮೆ ಹುಟ್ಟಿಸುತ್ತ
ನೀ ಪಾರಾಗುವ ಜಾದೂಗಾರ
ಮಾಯೆಯ ಕೂಪದಲಿ ಅರಿವಿಲ್ಲದೆ ನೂಕಿ
ಸಾಯದೆ ಬದುಕಿಸದೇ ಜೀವಂತ ಹೆಣವಾಗಿಸಿ
ಅಂತ್ಯಕ್ರಿಯೆಯಿಲ್ಲದೆ ಪ್ರೇತಾತ್ಮವಾಗಿಸುವ
ಹುನ್ನಾರ
ಆಸೆ ಹುಟ್ಟಿಸಿ ಅಂಡಲೆಯುವಂತೆ
ಮಾಡುವ ಮಾಟಗಾರ
ಬಾಲ ಅಲ್ಲಾಡಿಸುತ್ತ , ಜೊಲ್ಲು ಸುರಿಸುತ್ತ
ತಿರುಗುವುದ ಕಂಡು ಕೇಕೆ ಹಾಕುವ ಖದೀಮ
ಪಂಚಮಹಾಭೂತಗಳಲಿ , ಪಂಚೇಂದ್ರಿಯಗಳಲಿ
ನಿತ್ಯ ವಾಸಿಯಾದರೂ ಕಣ್ಣಿಗೆ ಕಾಣದ ಮಾಯಾವಿ
ಬಯಲಲಿ ಹುಟ್ಟಿ ಬಯಲಲಿ ಬೆಳೆದು
ಬಯಲಲಿ ಅಡಗಿ ಅಣಕಿಸುವ ಮಂಗ
ಹಿಡಿಯಲೆತ್ನಿಸಿದಂತೆ ಮೇಲಕೆ ಹಾರುವ ಗೂಬೆ
ರಣಹದ್ದಿನ ಹಾಗೆ ಅರಿವಿಲ್ಲದೆ ಅಪ್ಪಳಿಸುವ
ನೀ
ಮಹಾ ಚತುರ
ನೀ ನಿಲ್ಲದೇ
ನೀ ಇಲ್ಲದೆ
ಯಾರೂ ಬದುಕಲಾರರು
ಯಾರೂ ಸಾಯಲಾರರು
ಎಂದರಿತ ನೀ
ಆಡುವ ಆಟಕೆ ಎಲ್ಲರೂ ಬಲಿ
ಬಲ್ಲಿದವರ ಬೆಲ್ಲದ ಮಾತಿಗೂ
ವಿಷ ಸವರುವ ಕುಟಿಲ
ಎಷ್ಟು ಜರಿದರೂ ನಕ್ಕು ನಿನ್ನ ಪಾಡಿಗೆ ನೀ
ನಿದ್ದು ಎಲ್ಲವ ನಿನಗೆ ಸರಿಕಂಡಂತೆ
ಅಳೆದು ತೂಗುವ ಜಾಣ ಶೆಟ್ಟಿ
ಆದರೆ
ಆ
ದ
ರೆ
ನಿನ್ನ ಹಿಡಿದು ಕಟ್ಟಿ ಆಳಿದ ಧೀರರು
ಮೆರೆದಿಹರು
ಸಾಧು-ಸಂತ-ಮುನಿಗಳಾಗಿ
ನಿನ್ನ ಕಳ್ಳಾಟ ಮಳ್ಳಾಟ ಅರಿತವರೇ
ಮಹಾನುಭಾವರು
ಕಟ್ಟಿ ಹಾಕಿ ನಿಗ್ರಹಿಸಿ ಧ್ಯಾನಸ್ಥ ಸ್ಥಿತಿಯಲಿ
ಸಮತೆಯ ಶಮದಲಿ ನಿನ್ನನೇ ದಿಟ್ಟಿಸಿ
ಉಸಿರು ಬಿಗಿ ಹಿಡಿದು ಒಳಗಣ್ಣ ಇಳಿಬಿಟ್ಟು
ನನ್ನಷ್ಟಕೆ ನಾನೇ ಬೇಟೆಯಾಡಿ ನಾಲ್ಕು ಬಾರಿಸಿ
ಐವರು ಕಾವಲುಗಾರರ ಕೈಗೊಪ್ಪಿಸಿ ನವ
ದ್ವಾರಗಳ ಮುಚ್ಚಿ ಕೂಡಿಟ್ಟು ಕೂಳಿಲ್ಲದೆ
ಕೆಡವಿದರೆ
ನೀ ಒಲಿದೇ ಒಲಿಯುವ ಜೀತದಾಳು
ಹಿಡಿದು ಆಳಿದರೆ ನಮ್ರ ಸೇವಕ
ಕೈ ಬಿಟ್ಟರೆ ದುಷ್ಟ ಒಡೆಯ
ಈಗ ನಿನ್ನಾಟವ ಮೆಲ್ಲಗೆ ಅರಿತು
ಉಸಿರ ಬಿಗಿ ಹಿಡಿದು ನಿಧಾನ
ನಿಧಾನವಾಗಿ ಹಿಡಿತ ಸಾಧಿಸಲೆತ್ನಿಸುತ್ತಿರುವೆ
ನಿನ್ನ ಮಾಯಾ ಪಾಶವ
ಕಳಚುತ.
----ಸಿದ್ದು ಯಾಪಲಪರವಿ
No comments:
Post a Comment