Friday, August 12, 2016

ಕಳೆದು ಹೋದ ರಸಮಯ ಕ್ಷಣಗಳು

ಕಳೆದು ಹೋದ ರಸಮಯ...

ಮಬ್ಬುಗತ್ತಲ ಸಂಜೆ ಸಜೆಯಲಿ ಎಂತಹ
ಮಜವಿತ್ತು
ಎದುರಿಗಡೆ ಬಣ್ಣ ಬಣ್ಣದ ಗಾಜಿನ ಬಾಟಲಿಗಳ
ಗ್ಲಾಸುಗಳ ಸದ್ದಿನ ನಿಶ್ಯಬ್ದ

ಹರಡಿ ಅಸ್ತವ್ಯಸ್ತಗೊಂಡ ಸ್ನಾಕ್ಸುಗಳ
ಘಮಲು

ನೀರು - ಸೋಡಾಗಳ ಅವಿನಾಭಾವ
ಸಂ-ಬಂಧ
ಭಿನ್ನ - ಭಾವಗಳ ಬಿನ್ನಾಣವಿಲ್ಲದ
ಸೊಗಡು

ಬೇಸಿಗೆಯಾದರೆ ಸಾಕು ಬೀರ-ಬಲ್ಲರ
ಥಕ-ಥಕ ಕುಣಿತ
ಸೇಂಗಾ , ಬಜಿ ಆಮಲೆಟ್ಟುಗಳ
ಆಮೆಯ ನಡಿಗೆ

ಕೊರೆಯುವ ಛಳಿಯಾದರಂತೂ ಅಬ್ಬಾ
ಅದರ ಮಜವೇ ಬೇರೆ !

ಕಾಸಿದ್ದರೆ ಸ್ಕಾಚುಗಳ ರಮ್ಯತೆಯ ರಂಗು
ರಾತ್ರಿ ಕಳೆಯುವವರೆಗೆ ಅದೇ ಗುಂಗು
ಇಲ್ಲದಿರೆ ವಿಸ್ಕಿ ರಮ್ಮು ಜಿನ್ನು ಎಂಬ ಬೇದ
ಭಾವಗಳ ಹಂಗಿಲ್ಲದ ತೀರ್ಥ-ಯಾತ್ರೆ

ಮಬ್ಬುಗತ್ತಲಲಿ ಎಲ್ಲವೂ ಕುಲ್ಲಾ-ಖುಲ್ಲಾ
ಮುಚ್ಚು ಮರೆಯಿಲ್ಲದ ಭಾವನೆಗಳ ಹರಿದಾಟ
ಮಾತು ಮಂಥನ ಚಿಂತನಗಳದೇ ಕಾರುಬಾರು

ಎಲ್ಲವೂ . ಎಲ್ಲರೂ ಖುಷಿ ಎಲ್ಲಿಲ್ಲದ ಸಂಭ್ರಮ
ಹಳ್ಳಿಯಿಂದ ದಿಲ್ಲಿಗೆ , ಅಲ್ಲಿಂದ ಅಮೇರಿಕೆಗೆ
ಅಲೆದಾಟ
ಮೈ-ಮನಗಳಲಿ ಅದೆಂತದೋ ಪುಳಕ
ಮುಕ್ತ ಮಾತು-ಕತೆಗಳ ಚಲ್ಲಾಟ
ಅನೇಕಾನೇಕ ನಗ್ನಸತ್ಯಗಳ ಬಯಲಾಟ
ಅದುಮಿಡಲಾಗದ ಭಾವನಗಳ ಚಲ್ಲಾಟ

ಆಹಾ ! ಆ ಸಂಜೆಗಳು ರಾತ್ರಿಗಳಾಗಿ
ಬೆಳಕು ಹರಿದುದರ ಪರಿವೇ ಇಲ್ಲದ
ಜಾಗರಣೆ
ಅದೇನು ಖುಷಿ ! ಅದೇನೋ ಮಜಾ
ಮುಚ್ಚು ಮರೆಯಿಲ್ಲದ ನಿರ್ಮಲ ಮುಗಿಯದ
ಪಯಣ....

----ಸಿದ್ದು ಯಾಪಲಪರವಿ

No comments:

Post a Comment