ಮನದ ಮುಂದಣ ಆಸೆ
ಮುತ್ತಿಕ್ಕುವ ಬಯಕೆಗಳಿಗೆ ಲೆಕ್ಕವಿಲ್ಲ
ಮೈಮನಗಳ ಸುಳಿಯಲಿ ಅದಮ್ಯ
ಆಸೆಗಳು
ಹೆಣ್ಣು ಗಂಡೊಲುಮಿಯ ಬಿಸಿ ಹಸಿ
ಭಾವನೆಗಳ ಕೇವಲ ರಮಿಸಲಾದೀತೆ ?
ಈಡೇರದ ಆಸೆಗಳ ಹುಲಿ ಸವಾರಿಯ
ಭ್ರಮಾಲೋಕ
ನಡೆಯುವುದು ರಾಜಮಾರ್ಗ
ಅಲ್ಲವಾದರೂ ಮಹಾರಾಜನೆಂಬ
ಜಂಬ
ಕಾಣದಾಗಿದೆ ಸ್ಪಷ್ಟ
ಬಿಂಬ
ರಮ್ಯ ಪರಿಸರದಿ ಮಗುವಾಗಿ ಮಲಗುವ
ಇರಾದೆಯನು ಲೆಕ್ಕಿಸದ ಮನಕೆ ನೂರೆಂಟು
ತಾಕಲಾಟ
ಕಂಡದ್ದೆಲ್ಲ ದಕ್ಕಿಸಿಕೊಳ್ಳುವ ಹಪಾಹಪಿಯ
ಹಳವಂಡದ ಹಳೇ ಚಾಳಿ
ಬಿಡಬೇಕೆಂದರೂ ಬಿಡದ ಮಾಯೆ
ಕೂಳುಬಾಕ ಕೊಳ್ಳುಬಾಕ ಮನಕೆ ಇಂಗದ
ದಾಹ
ಸಿಗದಿದ್ದರ ಬೆಂಬತ್ತುವ ಮೊಂಡು ಹಟ
ಇತಿಹಾಸದ ಪಾಠಗಳು ಮರೆಯಾಗಿ
ಮತ್ತದೇ ಇತಿಹಾಸವಾಗುವ ಜಾಣಮರೆವು
ಅರಿತವರ ಅನುಭವಗಳ ಆಲಿಸದ
ಜಾಣಕಿವುಡು
ಮನದೊಳಗಣ ವಿಕಾರ ವಿನಿಮಯಕೆ
ನಿರಂತರ ಬಲಿಯಾಗುವ ಹಗಲುಗನಸಿನ
ಹಾಸಿಗೆ ಮೇಲೆ ಎಚ್ಚರಾಗದ ನಿದ್ರೆ
ಮಲಗದ ಮನವ ಎಬ್ಬಿಸುವ ಇಬ್ಬಗೆಯ
ನಿಲುವಿನ ಜೀವಜಾತ್ರೆಯ ಕೇವಲ
ಪಾತ್ರದಾರಿ
ಮೇಲಿನ ಸೂತ್ರದಾರನ
ಆಟದಲಿ...
----ಸಿದ್ದು ಯಾಪಲಪರವಿ
No comments:
Post a Comment