ಹಬ್ಬದೂಟ 
ಹೊಸ ವರುಷದ ಹರುಷ ಮನೆ ಮಾಡಲು ಮನಸು ಹದವಾಗಿರಲಿ ಭಾವನೆಗಳ ಏರಿತದಲಿ ಲಯಗಾರಿಕೆ ಹೊರಹೊಮ್ಮಲಿ ಕದಡಿದ ನೀರಲಿ ಮುಖವ ನೋಡದೆ ಸಮಾಧಾನದಿ  ಸಾಗೋಣ.
ಹಬ್ಬಗಳು ಬಾಲ್ಯದ ನೆನಪುಗಳ ಸರಮಾಲೆ ಕಳೆದುಕೊಂಡುದ ಹಿಡಿಯುವ ಹಗ್ಗದಾಟ 
ಅಪ್ಪ ಕೊಡಿಸಿದ್ದ ಅರಿವೆ , ಅವ್ವ ಮಾಡಿದ್ದ ಹೋಳಿಗೆ , ಗುರು ಕೊಟ್ಟ ಅರಿವು , ಗೆಳೆಯರ ತಂದಿದ್ದ ಹುಮ್ಮಸ್ಸು ಈಗ ಬರೀ ಹಚ್ಚ ಹಸಿರು ಬೆಚ್ಚನೆಯ ನೆನಪು. 
ಹೊಲ , ಕಾಲುವೆ , ಈಜಾಟ , ಮಾವಿನ ಕಾಯಿ ,ಕಳ್ಳ ನೋಟದ ಕಣ್ಣಾಟ , ರತ್ನ ಪಕ್ಷಿಯ ಮುಖ ನೋಡುವ ಚಡಪಡಿಕೆ , ಕರಗದ ಬೆರಗು ಮೂಡಿಸಿದ ಹಗಲುಗನಸುಗಳು , ಮೈಮನಗಳಲಿ ಪುಟಿದೇಳುತ್ತಿದ್ದ ಕಾಮನೆಗಳು , ನಿಲುಕದ ನಕ್ಷತ್ರಗಳ ಹಿಡಿಯುವ ಹಟ ಈಗ ಈ ನೆನಪುಗಳ ದಾಳಿ...
 
ಬೇವು , ಬೆಲ್ಲ ಎಲ್ಲವೂ ಫೇಸ್ಬುಕ್ಕಿನಲಿ , 
ಆ್ಯಪುಗಳಲಿ ಹರಿದಾಟ. 
ಮಾತಿಲ್ಲ , ಕತೆಯಿಲ್ಲದ ಕತ್ತಲೆಯ ಕತ್ತೆ ಬದುಕು.
ಸಾಲದ ಕಂತುಗಳು , ಇಲ್ಲದ ಭ್ರಾಂತುಗಳು , ಈಡೇರದ ವ್ಯಾಮೋಹಗಳು , ಲೆಕ್ಕವಿಲ್ಲದ ಲೆಕ್ಕಾಚಾರಗಳು , ಸಂಗಾತಿಗಳು ಈಗ ಬರೀ ಒಂದು ಸಂಗತಿ.
ಪ್ರೀತಿ- ರೀತಿ -ನೀತಿಗಿರಲಿ ಜಗಳಕೂ ಇಲ್ಲ ಸಮಯ.
ಗೆಳೆಯರು ಅಳೆಯುತ್ತಾರೆ , ತೂಗಿ ನೋಡುತ್ತಾರೆ ಏರಿಳಿಯುವ ಮೈಮನಗಳ ತಾಪ-ಮಾನ.
ಎಲ್ಲರೂ ಅವರವರ ಯೋಜನೆಗಳಲಿ , ಯೋಚನೆಗಳ ಗಾಳದಲಿ ಸ್ಮಾರ್ಟ್ ಫೋನುಗಳಲಿ ಕಳೆದು ಹುಡುಕಾಟ  ಅಲ್ಲಿ ಸಿಕ್ಕರೂ ಸಿಗಬಹುದಾದ ಹೊಸ ಸಂಗತಿ-ಸಂಗಾತಿಗಳ.
ಹಲ್ಕಿರಿದು ಸಿಕ್ಕವರು ವಾಕರಿಕೆಯಾಗಿ ಕೈಗೆ ಸಿಗದೇ ಬ್ಲಾಕ್ ಆಗಿ ಮಂಗಾಟವಾಡಿ ಮಾಯವಾಗುತ್ತಾರೆ. 
ಮತ್ತೆ ಜೊತೆಗಿದ್ದವರ ಅಸ್ತಿತ್ವ ನೆನಪಿಸುತ್ತಾರೆ.
Reality show ಗಳ ಹಾಡು-ಕುಣಿತ , ಬಾಬಾಗಳ ಏದುಸಿರು ಬಿಡುವ ಯೋಗಾಯೋಗ.  
ಪತಂಜಲಿಯ , ಸಿರಿಧಾನ್ಯಗಳ ಸಿಹಿರಹಿತ ಆಹಾರ-ವಿಹಾರಗಳ ತಡಕಾಟ.
ಉಸಿರು ನಿಂತು , ಜೀವದ ಹಸಿರು ಮಾಯವಾಗುವದ ಮರೆತ ಅವಾಸ್ತವ ಭ್ರಮಾಲೋಕ.
ನೆಮ್ಮದಿ , ಶಾಂತಿ , ಸಂಭ್ರಮ ಹಾಗೂ ಸುಖ ಬಿಟ್ಟು ಎಲ್ಲ ಹುಡುಕುವ ಹುಚ್ಚಾಟ ಬಿಟ್ಟು ಆರೋಗ್ಯ -ನೆಮ್ಮದಿಗೆ ಹಂಬಲಿಸೋಣ.
ಯುಗಾದಿಯ ಹರುಷವ ಸವಿಯೋಣ.
ಎಲ್ಲರಿಗೂ ಹಾರ್ದಿಕ ಶುಭಾಶಯಗಳು.
---ಸಿದ್ದು ಯಾಪಲಪರವಿ