Tuesday, March 15, 2011

ಕಂಠೀರವ ಸ್ಟುಡೀಯೋ ಚಿತ್ರಿಕರಣದ ಅನುಭವ


ಒಮ್ಮೆ ಬೆಂಗಳೂರು ನೋಡಿದ ಸಣ್ಣ ಅನುಭವ ಬೆನ್ನಿಗಿತ್ತು. ಮತ್ತೊಮ್ಮೆ ಸಿನೆಮಾ ಹುಚ್ಚಿನಿಂದ ಬೆಂಗಳೂರಿನತ್ತ ಪಯಣ. ಬಂಧು ಬಪ್ಪುರ ಮಲ್ಕಾ ಜಪ್ಪ ಮಾವು ಭತ್ತದ ವ್ಯಾಪಾರಕ್ಕೆಂದು ಬೆಂಗಳೂರಿಗೆ ಹೋಗುತ್ತಿದ್ದ.
ಅವರ ಲಾರಿ ಹಿಡಿದು ಹೋದರೆ ಪುಕ್ಕಟೆ ಬೆಂಗಳೂರು ತಲುಪುವ ವಿಚಾರ ಆರಂಭವಾಯಿತು.
ಬೆಂಗಳೂರಿಗೆ ಹೋಗಿ, ಒಂದೆರಡು ದಿನ ಇದ್ದು ಶೂಟಿಂಗ್ ನೋಡಿ ಬರಲು ಒಟ್ಟು ಮುನ್ನೂರು ರೂಪಾಯಿ ಬೇಕಾಗಬಹುದೆಂದು ಗೆಳೆಯ ಹೇಳಿದ. ಅಷ್ಟೊಂದು ಹಣ ಮನೆಯಲ್ಲಿ ಕೊಡುತ್ತಿರಲಿಲ್ಲ ನನ್ನ ಓರಿಗೆಯ ಗೆಳೆಯ ಕಿರಾಣಿ ವ್ಯಾಪಾರ ಮಾಡುತ್ತಿದ್ದ, ಅವನು ಸಾಲದ ರೂಪದಲ್ಲಿ ಹಣ ಕೊಡುವುದಾಗಿ ಒಪ್ಪಿದ. ಭತ್ತ ತುಂಬಿದ ಲಾರಿಯಲಿ ಮಲ್ಕಾಜಪ್ಪ ಮಾವನೊಂದಿಗೆ ಬೆಂಗಳೂರು ಟೋಲ್ ನಾಕಾಗಳ ಬಳಿ ಹಣ ನೀಡುತ್ತ ಬೆಂಗಳೂರು ತಲುಪಿದ ನೆನಪು.
ಮಾರ್ಕೆಟ್ನಲ್ಲಿದ್ದ ತಮಿಳು ಏಜೆಂಟರ ಅಂಗಡಿಯಲ್ಲಿ ವಾಸ ಅದರ ಹಿಂದಿದ್ದ ಲಾಜನಲ್ಲಿಯೂ ವಾಸಕ್ಕೆ ವ್ಯವಸ್ಥೆ ಗದ್ದಲದಿಂದ ಕೂಡಿದ ಮಾರುಕಟ್ಟೆ, ಧೂಳು ಎಲ್ಲದು ಹೊಸದೆನಿಸಿದರೂ ಸಹಿಸಿಕೊಂಡೆ.

ಮರುದಿನ ಅಲ್ಲಿದ್ದವನು ವಿಚಾರಿಸಿ ಕಂಠಿರವ ಸ್ಟುಡಿಯೋ ಎಲ್ಲಿದೆ ಎಂದು ಪತ್ತೆ ಹಚ್ಚಿದೆ. ಆಟೋಕ್ಕೆ ಹೋದರೆ ಹತ್ತು ರೂಪಾಯಿ ಆಗುತ್ತ ಅಂದಾಗ ಅಲ್ಲಿಗೆ ಹೋಗುವ ಯೋಜನೆ ರೂಪಿಸಿದೆ.
ಆಟೋದಿಂದ ಇಳಿದು ಹೋದದ್ದಕ್ಕೆ ಏನೋ, ವಾಚಮ್ಯಾನ್ ತಕರಾರು ತೆಗೆಯಲಿಲ್ಲ. ಸೆಲ್ಯೂಟ ಹೊಡೆದು ನಕ್ಕಿದ್ದಕ್ಕೆ ಐದು ರೂಪಾಯಿ ಕೊಟ್ಟೆ.
ಒಳಗೆ ಹೋದಾಗ ನನಗೆ ಇಷ್ಟವಾದ ವಿಸ್ಮಯ ಲೋಕವೊಂದು ತೆರೆದುಕೊಂಡಿತು.
ಪ್ರಭಾಕರ, ಶ್ರೀಪ್ರಿಯಾ, ರಾಜೇಶ್, ಆರತಿ, ಹೀಗೆ ರಜತ ಪರದೆಯ ಮೇಲೆ ಮಹಿಮಾ ಪುರುಷರಂತೆ ಕಂಗೊಳಿಸುತ್ತಿದ್ದ ನಟರೆಲ್ಲ ಎದುರಿಗೆ ಓಡಾಡಿದಾಗ ಗಾಭರಿಯಾದೆ. ನನ್ನನ್ನು ಯಾರು ವಿಚಾರಿಸಲಿಲ್ಲ. ನನ್ನ ಪಾಡಿಗೆ ನಾನು ಶೂಟಿಂಗ್ ನೋಡುತ್ತಾ ಸಾಗಿದೆ.
ಕೋರ್ಟ ಸನ್ನಿವೇಶದ ಚಿತ್ರಿಕರಣ ನಡೆದಿತ್ತು. ಪ್ರಭಾಕರ, ಲೋಕೇಶ ಇದ್ದರು. ಪದೇ, ಪದೇ ರೀ-ಟೇಕ್ ನೋಡಿ ಸಿನೆಮಾ ಬಗ್ಗೆ ಇದ್ದ ಕುತೂಹಲ ಮಾಯವಾಯಿತು. ನಟಿಸಲು ಅವಕಾಶ ನೀಡಿ ಎಂದು ಕೇಳಲು ಹೋದ ನನ್ನ ಆಸೆ ಕಮರಿಹೋಯಿತು.

ರಾಜೇಶ, ಆರತಿ, ಅಭಿನಯಿಸಿದ ಕಲಿಯುಗ ಚಿತ್ರಿಕರಣ ಸಾಗಿತ್ತು. ಒಂದು ಸನ್ನಿವೇಶವನ್ನು ಒಂದು ತಾಸಿನ ತನಕ ಚಿತ್ರಿಕರಿಸಿ ಓ.ಕೆ. ಮಾಡಲಾಯಿತು. ಸಿನೆಮಾ ಬಂದ ಮೇಲೆ ನೋಡಿದರೆ ಅರ್ಧ ನಿಮಿಷದಲ್ಲಿ ಆ ಸನ್ನಿವೇಶ ಮುಗಿದು ಹೋಯಿತು.

ಅಂದು ಶೂಟಿಂಗ್ ನೋಡಿದ ಮೂರು ಸಿನೆಮಾಗಳನ್ನು ಮತ್ತೆ, ಮತ್ತೆ ಕುತೂಹಲದಿಂದ ನೋಡಿದೆ. ನಾನು ಆರಾಧಿಸುತ್ತಿದ್ದ ಹತ್ತಾರು ಕಲಾವಿದರು ಅಲ್ಲಿ ಸಿಕ್ಕರು. ಅವರನ್ನೆಲ್ಲ ಮಾತನಾಡಿಸಿದೆ. ಚೀಲದಲ್ಲಿ ಇಟ್ಟುಕೊಂಡಿದ್ದ ನೋಟಬುಕ್ ತೆಗೆದು ಸಹಿ ಹಾಕಿಸಿಕೊಂಡೆ. ಏನಪ್ಪ ನೋಟ ಬುಕ್ ತಂದಿದ್ದಿಯಾ ಆಟೋಗ್ರಾಫ್ ಇಲ್ಲವಾ ಅಂದರು.
ಸಂಜೆಯವರೆಗೆ ಇದ್ದೆ. ಸಿನೆಮಾ ಯುನಿಟಗಳಲ್ಲಿಯೇ ಊಟ ಮಾಡಿದೆ. ಯಾರೂ ತಕರಾರು ತೆಗೆಯಲಿಲ್ಲ.
ಸಿನೆಮಾದವರ ಸಹನೆ, ಚಿತ್ರೀಕರಣದ ಬೇಸರ, ಕಲಾವಿದರ ಖಾಸಗಿ ಬದುಕಿನ ಭಿನ್ನ ವರ್ತನೆ ಅಚ್ಚರಿ ಮೂಡಿಸಿತು. ಹೇಗಾದರೂ ಮಾಡಿ ನಟಿಸಲು ಅವಕಾಶ ಕೇಳಬೇಕೆಂದು ಹೋಗಿದ್ದೆ. ಸಹ ಕಲಾವಿದರ ಗೋಳಿನ ಕತೆ, ಚಿತ್ರಿರಂಗದ ಕಷ್ಟಗಳನ್ನು ಕೇಳಿ ಸಿನೆಮಾ ಸಹವಾಸವೇ ಬೇಡ ಎನಿಸಿತು.
ಸಿನೆಮಾ ವ್ಯಾಮೋಹ ಮಾತ್ರ ಕಡಿಮೆ ಆಗಲಿಲ್ಲ ಅವಕಾಶ ಸಿಕ್ಕರೆ ನಟಿಸಬೇಕು ಎನಿಸುತ್ತಿತ್ತು. ಹೈಸ್ಕೂಲಿನಲ್ಲಿ ನಾಟಕದಲ್ಲಿ ಅಭಿನಯಿಸಿದೆ. ಬಣ್ಣದ ಗೀಳು ಕಡಿಮೆ ಆಗಲಿಲ್ಲ. ಮುಂದೆ ಕಾಲೇಜಿನಲ್ಲಿಯೂ ಅಭಿನಯಿಸಿದೆ.
ಗದ್ದಲದ ಬೆಂಗಳೂರನ್ನು ಈಗ ನೋಡಿದಾಗಲೆಲ್ಲ. ನನ್ನ ಬಾಲ್ಯದ ಭಂಡ ಧೈರ್ಯ ನೆನಪಾಗಿ ಬೆರಗು ಉಂಟಾಗುತ್ತದೆ. ಆಕಸ್ಮಾತ ಅವಕಾಶ ಸಿಕ್ಕಿದ್ದರೆ ಏನಾಗುತ್ತಿತ್ತೋ ಏನೋ?
ಅಥವಾ ಗದ್ದಲದ ಬೆಂಗಳೂರಿನಲ್ಲಿ ಕಳೆದು ಹೋಗಿದ್ದರೆ ಹೇಗೆ ಎಂಬ ಆತಂಕ ಈಗ. ಸಿನೆಮಾ ಶೂಟಿಂಗ್ ನೋಡಿದ ವಿಷಯ ಯಾರಿಗೂ ಸ್ವಲ್ಪ ದಿನ ಹೇಳಲಿಲ್ಲ. ಹೇಳಿದರೆ ನಂಬುವುದಿಲ್ಲ ಅನಿಸುತ್ತಿತ್ತು. ಮೊನ್ನೆ ಧಾರವಾಹಿಯಲ್ಲಿ ನಟಿಸಲು ಬಣ್ಣ ಹಚ್ಚಿದಾಗ ಬಾಲ್ಯದ ಈ ಘಟನೆ ನೆನಪಾಯಿತು.

No comments:

Post a Comment