Tuesday, March 15, 2011

ಮೌಢ್ಯತೆಗೆ ಉತ್ತರವಿಲ್ಲ - ಪ್ರೀತಿ ತೋರಿದ ಹಡಪದ ಸ್ನೇಹಿತರು

ಹಳ್ಳಿಗಳಲ್ಲಿ ನೂರೆಂಟು ನಂಬಿಕೆಗಳು, ಅಂದರೆ ಮೂಢನಂಬಿಕೆಗಳು. ಈ ರೀತಿಯ ಅನುಮಾನಗಳಿಗೆ ಪ್ರಶ್ನಿಸುವಂತೆಯೇ ಇಲ್ಲ.
ಅಮ್ಮ, ಅವ್ವ, ಅತ್ತೆಯರು ಶಾವಗಿ ಹೊಸೆಯುವಾಗ ಒಂದು ರೀತಿಯ ಕುತೂಹಲ ಶಾವಗಿ ಹಿಟ್ಟಿನಲ್ಲಿ ಉಳ್ಳಾಗಡ್ಡಿ ಇಟ್ಟಿರುತ್ತಿದ್ದರು. ಯಾಕೆ ಎಂದು ಕೇಳಿದೆ ? ಹಾಗೆಲ್ಲ ಕೇಳಬಾರದು ಎಂಬ ತಾಕೀತು. ಈ ಪ್ರಶ್ನೆಗೆ ಇಂದಿಗೂ ಉತ್ತರವಿಲ್ಲ ಬಿಡಿ.
ಬೆಳಿಗ್ಗೆ ಎದ್ದ ಕೂಡಲೆ ಹಡಪದ ಜನಾಂಗದವರ ಮುಖ ನೋಡಬಾರದು ಎಂದು ಹೇಳಿದಾಗ ನನಗೆ ಬೇಸರವಾಗುತ್ತಿತ್ತು.
ಇದೆಂತಹ ವಿಪರ್ಯಾಸ ನಾದರ ಶಿವಪ್ಪ ತಲೆ ಕೂದಲು ತೆಗೆಯಲು ಬರುತ್ತಿದ್ದುದೇ ನಸುಕಿನಲ್ಲಿ ಅಷ್ಟರೊಳಗೆ ಎದ್ದು ದೇವರ ಫೋಟೋಗೆ ವಂದಸಿ ಕಟಿಂಗ್ ಮಾಡಿಸಲು ಕೂಡಬೇಕಾಗುತ್ತಿತ್ತು.
ಅತ್ಯಂತ ಸರಳವಾಗಿ ನಾನು ಒಮ್ಮೆ ಶಿವಪ್ಪನಿಗೆ ಕೇಳಿದೆ. ಯಾಕೆ ಶಿವಪ್ಪ ಮುಂಜಾನೆದ್ದ ಕೂಡಲೇ ಯಾಕ ನಿನ್ನ ಮಕ ನೋಡಬಾರದು ಅಂದೆ. ಏನ ಅಂತಾರಪ ದಣಿ, ನೋಡಿದ್ರೇನ ದರಿದ್ರ ಹತ್ತತೈತಂತೆ ಅಂದ. ಹಿಂಗ ಅನ್ನೋದರಿಂದ ಬ್ಯಾಸರ ಆಗಂಗಿಲ್ಲೇನು ಅಂದೆ. ಇಲ್ಲ ಬಿಡು ಧಣಿ ಅಂಗೇನಿಲ್ಲ ಎಂದ.
ನಾನು ಒಮ್ಮೆ ಹಟಕ್ಕೆ ಬಿದ್ದಂತೆ ಬೆಳಿಗ್ಗೆ ಎದ್ದು ದೇವರಿಗೆ ನಮಸ್ಕರಿಸಿದೇ ನಾದರ ಶಿವಪ್ಪನ ಮುಖ ನೋಡಿ ಇಡೀ ದಿನ ಏನು ಕಾಡುತ್ತೋ ನೋಡಿಯೇ ಬಿಡೋಣ ಅಂತ ತೀರ್ಮಾನಿಸಿದೆ.
ಆದರೆ ಸಂಜೆಯವರೆಗೆ ಅಲ್ಲ ನನಗೆ ಎಂದೂ ಏನೂ ತೊಂದರೆಯಾಗಲಿಲ್ಲ. ಅಯ್ಯೋ ಇದೊಂದು ಸುಳ್ಳು ಕಂತೆ ಎಂದುಕೊಂಡೆ.
ಇದನ್ನ ನಾನೊಮ್ಮೆ ಅಮರಣ್ಣ ತಾತನಿಗೆ ಹೇಳಿಯೇ ಬಿಟ್ಟೆ. ತಾತ ನಿನ್ನೆ ನಾನು ನಾದರ ಶಿವಪ್ಪನ ಮುಖ ನೋಡಿದೆ. ನನಗೇನು ಕೆಟ್ಟದಾಗಲಿಲ್ಲ. ಹೌದು ಬಿಡಪ ಖೋಡಿ ಸುಮ್ಮನೆ ಅಂತಾರೆ ಅಂದಾಗ ಸಮಾಧಾನವಾಯಿತು. ಹೀಗೆ ಒಂದೊಂದೇ ಮೌಢ್ಯ ಅಭಿಪ್ರಾಯಗಳಿಗೆ ಉತ್ತರ ನನ್ನಲ್ಲಿ ಕಾಣುತ್ತಾ ಹೋದೆ.
ಕಟಿಂಗ್ ಮಾಡಿಸಿಕೊಳ್ಳುವಾಗಲೆಲ್ಲ ಆಪ್ತವಾಗಿ ಮಾತನಾಡುತ್ತಾ ಶಿವಪ್ಪನಿಗೆ ಆತ್ಮೀಯನಾದೆ .
ಪಾಪ, ನಮ್ಮ ಸಲುವಾಗಿ ನಸಗಿನಾಗ ಕಷ್ಟ ಮಾಡಾಕ ಬರ್ತಿಯಪ, ಆದ್ರ ಇವರು ನಿನ್ನ ಮಕ ನೋಡಬಾರದು ಅಂತಾರಲ್ಲಪ ಅಂದಾಗ ಇರ‍ಲಿ ಬಿಡಪ ಧಣಿ ಮದ್ಲಿಂದ ನಂಬ್ಯಾರ, ಅಂತಾರ ಬುಡು ಅಂತಿದ್ದ.
ಪ್ರತಿನಿತ್ಯ ಶೇವ್ ಮಾಡಿಕೊಳ್ಳುವಾಗ ಅನುಭವಿಸುವ ಕಿರಿಕಿರಿಯಲ್ಲಿ ನಮ್ಮೂರ ಹಡಪದ ಮಹದೇವನನ್ನು ಜ್ಞಾಪಿಸಿಕೊಳ್ಳುತ್ತೇನೆ. ಹೈದ್ರಾಬಾದ್ ಕರ್ನಾಟಕದ ಹಳ್ಳಿಗಳಲ್ಲಿ ಹುಡುಗರಿಗೆ ತಮಗೂ ವಯಸ್ಸಾಯಿತು. ಹರೆಯದ ಪ್ರಾಯ ಬಂದಿದೆ ಎಂದು ತೋರಿಸುವ ಉತ್ಸಾಹ - ಚಪಲವೂ ಇರುತ್ತಿತ್ತು.
ಸಣ್ಣವರಂತೆ ಇರುವುದಕ್ಕಿಂತ ದೊಡ್ಡವರಾಗಬೇಕು. ಮದುವೆ ಎಂಬ ತೊಡರಿಗೆ ಸಿಕ್ಕು ಹಿರೆತನ ಮಾಡಬೇಕು ಎಂಬ ಸುಪರಫಿಸಿಯಲ್ ಭಾವನೆಗಳಿರುತ್ತಿದ್ದವು.

ದೊಡ್ಡವರಾಗಿದ್ದಕ್ಕೆ ಸಾಕ್ಷಿಯಾದ ಗಡ್ಡ-ಮೀಸೆಗಳು ಚಿಗಿಯಲಿ ಎಂಬ ತುಡಿತ ಬೇರೆ. ಹದಿನಾಲ್ಕರ ಪ್ರಾಯದಲ್ಲಿ ಗೆಳೆಯ ಹಡಪದ ಮಹದೇವನ ಹತ್ತಿರ ಕಟಿಂಗ್‌ಗೆ ಹೋಗಿದ್ದಾಗ ಮಹದೇವ ಗಡ್ಡ-ಮಿಸೆ ಮೇಲೆ ಕತ್ತಿ ಆಡಿಸಿಲಾ ಧಣಿ ಎಂದ. ಅಲ್ಲ ಬಂದೇ ಇಲ್ಲಲ್ಲ ಅಂದೆ. ಇಲ್ಲಪ ಒಂದೆರಡು ಬಾರಿ ಕತ್ತಿ ಆಡಿಸಿದ್ರ ಜಲ್ದಿ ಬರ‍್ತಾವಪಾ ಅನ್ನಬೇಕೆ.
ಎಲ್ಲರಿಗೂ ಇರುವ ಹಾಗೆ ನನಗೂ ತುಡಿತವಿತ್ತು ಒಪ್ಪಿಗೆ ನೀಡಿದೆ. ಎಳೆಯ ಚರ್ಮದ ಮೇಲೆ ಹರಿತ ಕತ್ತಿ ಹರಿದಾಡಿ ಮುಖ ರಕ್ತಸಿಕ್ತವಾದರೂ ಮೀಸೆ ಬರುತ್ತಿವೆ ಎಂಬ ಸಂಭ್ರಮದಲ್ಲಿ ನಗುತ ಸುಮ್ಮನಾದೆ. ಇದರ ಅಪಾಯವನ್ನು ಈಗ ಅನುಭವಿಸುತ್ತಿದ್ದೇನೆ. ಮುಖದ ತುಂಬೆಲ್ಲ ಆವರಿಸಿರುವ ಬಿಳಿ ಗಡ್ಡಗಳ ಕಾರಣಕ್ಕೆ ನಿತ್ಯ ಶೇವ್ ಮಾಡುವುದು ಅನಿವಾರ್ಯ. ಇಷ್ಟೊಂದು ತೀವ್ರವಾಗಿ ಆವರಿಸಲು ಬಾಲ್ಯದಲ್ಲಿನ ಬೇಗ ಕತ್ತಿ ಹಚ್ಚಿದ್ದೇ ಕಾರಣ. ಉಪನ್ಯಾಸಕ ವೃತ್ತಿಗೆ ಸೇರಿದ ಮೇಲೆ ಶೇವಿಂಗ್ ಕಡ್ಡಾಯವಾಯಿತು.
ಕನ್ನಡಿಯಲ್ಲಿ ಮುಖ ನೋಡಿಕೊಂಡಾಗಲೆಲ್ಲ ಹೆಮ್ಮೆಯಿಂದ ಮಹದೇವನ ಅಂಗಡಿಗೆ ಹೋಗಿ ಕತ್ತಿ ಹಚ್ಚಲು ಒತ್ತಾಯಿಸುತ್ತಿದ್ದೆ. ಗಡ್ಡ ಮೀಸೆ ಬೆಳೆಯಲಿ, ಧ್ವನಿ ಗಡಸಾಗಲಿ, ಮುಖದ ಮೇಲೆ ಮೊಡವೆಗಳು ಕಾಣಿಸಲಿ ಎಂದು ಬಯಸುವ ಅಂದಿನ ಮನೋಸ್ಥಿತಿ ನೆನಸಿಕೊಂಡರೆ ವಿಚಿತ್ರವೆನಿಸುತ್ತದೆ.
ಬಾಲ್ಯದ ಮುಗ್ಧತೆಯನ್ನು ಕಳೆದುಕೊಳ್ಳುವ ಧಾವಂತ ಅಜ್ಞಾನದ ಸಂಕೇತವೆನಿಸುತ್ತದೆ. ನಾಲ್ಕು ವರ್ಷಕ್ಕೆ ಒಂದನೇ ವರ್ಗಕ್ಕೆ ಪ್ರವೇಶ ಪಡೆದ ಕಾರಣಕ್ಕೆ ಹೈಸ್ಕೂಲಿನಲ್ಲಿ ನಾನೇ ಅತೀ ಚಿಕ್ಕ ಹುಡುಗ. ಹತ್ತನೇ ಕ್ಲಾಸಿನ ನನ್ನ ಗೆಳೆಯರೆಲ್ಲ ವಯಸ್ಸಿನಲ್ಲಿ ನನಗಿಂತ ಎರಡು ವರ್ಷ ಹಿರಿಯರಿದ್ದರು. ಅವರ ಹಾಗೆ ಗಡ್ಡ-ಮೀಸೆ ಇರಲಿ ಎಂಬ ಅತಿಯಾಸೆ ನಿತ್ಯ ಕಾಡುತ್ತಿತ್ತು. ಮೀಸೆ ದಾಡಿ ಗೋಳು ಅನಿಸಿದಾಗಲೆಲ್ಲ ಹಡಪದ ಶಿವಪ್ಪ ಮಹದೇವ ಬೆಳಿಗ್ಗೆಯೇ ನೆನಪಾಗಿ ನನ್ನ ಪಾಲಿನ ಸುದೈವಿಗಳೆನಿಸುತ್ತಾರೆ ಅಪಶಕುನ ಅಲ್ಲ.

No comments:

Post a Comment