Tuesday, March 15, 2011

ಕುಷ್ಟಗಿ ಅಜ್ಜನ ಪ್ರೀತಿ ರಾಯಲ್ ಜೀವನ


ಕಾರಟಗಿ ಯಲ್ಲಾದರೆ ಅಮರಣ್ಣ ತಾತ, ಕುಷ್ಟಗಿಯಲ್ಲಿ ಅವ್ವಳ ಅಪ್ಪ ಅಜ್ಜನಾಗಿದ್ದ. ಈ ಭಾಷಾ ಭಿನ್ನತೆಯೊಂದಿಗೆ ಸಾಂಸ್ಕೃತಿಕ ಭಿನ್ನತೆಯನ್ನು ಕುಷ್ಟಗಿಯಲ್ಲಿ ಅನುಭವಿಸುತ್ತಿದ್ದೆ.
ವೃತ್ತಿಯಿಂದ ವಕೀಲರಾಗಿದ್ದ ಗುರುಸಿದ್ದಪ್ಪ ಅಜ್ಜನಿಗೆ ನಾನು ಅತ್ಯಂತ ಪ್ರೀತಿಯ ಮೊಮ್ಮಗ ಅದಕ್ಕೆ ಕಾರಣ ನನ್ನ ವಾಚಾಳಿತನ. ನಿರಂತರ ಕೇಳುವ ಪ್ರಶ್ನೇಗಳಿಂದಾಗಿ ನಾನು ಆತನಿಗೆ ಪ್ರತಿವಾದಿ ವಕೀಲನಂತೆ ಕಾಣುತ್ತಿದ್ದೆ.
ಕುಷ್ಟಗಿ ಸಣ್ಣ ಹಳ್ಳಿಯಾದರೂ ತಾಲೂಕ ಕೇಂದ್ರ. ಹೈದ್ರಾಬಾದಿನಲ್ಲಿ ಲಾ ಪದವಿ ಪಡೆದಿದ್ದ ಅಜ್ಜ ಕುಷ್ಟಗಿಯಲ್ಲಿ ವೃತ್ತಿ ಮುಂದುವರೆಸಿದ್ದರು.
ವಕೀಲಿ ವೃತ್ತಿಯನ್ನು ನ್ಯಾಯಸಮ್ಮತವಾಗಿ ಮಾಡುವುದರೊಂದಿಗೆ ಹಳ್ಳಿ ಜನರೊಂದಿಗೆ ಪ್ರೀತಿಯಿಂದ, ಶೋಷಣೆ ಮಾಡದೇ ನ್ಯಾಯ ಒದಗಿಸುತ್ತಿದ್ದ ಅಜ್ಜ ಹಲವಾರು ಕಾರಣಗಳಿಂದ ಪ್ರಭಾವ ಬೀರಿದರು.
ನಾಲ್ಕು ಜನ ಹೆಣ್ಣು ಮಕ್ಕಳು, ಒಬ್ಬ ಮಗ ಹತ್ತಾರು ಜನ ಮೊಮ್ಮಕ್ಕಳ ತುಂಬು ಸಂಸಾರ. ಗದುಗಿನ ಮೇಲಗಿರಿ ಮನೆತನದ ಅಮ್ಮ ಕಾಶಮ್ಮ ಅಜ್ಜನಿಗಿಂತಲೂ ಬೋಲ್ದ. ಹಟಮಾರಿ ಕೂಡಾ. ಅಮ್ಮನ ಹಟಮಾರಿತನವನ್ನು ತುಂಬಾ ಪೋಸಿಟಿವ್ ಸ್ವೀಕರಿಸುತ್ತಿದ್ದ ಅಜ್ಜ ಸದಾ ಹಸನ್ಮುಖಿ. ಮುಂಜಾನೆ ಯೋಗಾಸನ, ಮಿತ ಆಹಾರ, ಓದು, ಅಧ್ಯಯನದೊಮದಿಗೆ ದಿನಚರಿ ಇಟ್ಟುಕೊಂಡಿದ್ದ ಅಜ್ಜನ ಸೆಳೆತದಿಂದಲೂ ಬಹುಪಾಲು ನನ್ನ ಬಾಲ್ಯವನ್ನು ಕುಷ್ಟಗಿಯಲ್ಲಿ ಕಳೆದೆ.
ಶಾಲೆ ತಪ್ಪಿಸಿ ಕುಷ್ಟಗಿಯಲ್ಲಿ ಕಾಲ ಕಳೆಯುತ್ತಿದ್ದಕ್ಕೆ ನನ್ನ ಬಗ್ಗೆ ಅಜ್ಜ ಅಂತಹ ದೊಡ್ಡ ತಕರಾರು ತೆಗೆಯುತ್ತಿದ್ದಿಲ್ಲ. ಸಿದ್ದನ ಸಾಲಿ ಪಡಸಾಲಿ ಎಂದು ತಮಾಷೆ ಮಾಡುತ್ತಿದ್ದ.
ಅಜ್ಜನ ಕೈ ಹಿಡಿದು ಅನಾಹುತ ಪ್ರಶ್ನೆಗಳನ್ನು ಕೇಳುತ್ತಾ ನಡೆದುಕೊಂಡು ಕೋರ್ಟಿಗೆ ಹೋಗುತ್ತಿದ್ದೆ.
ಅಲ್ಲಿ ಪೋಲಿಸರು, ಕಕ್ಷಿದಾರರು ನೀಡುತ್ತಿದ್ದ ಗೌರವ ಖುಷಿ ತರುತ್ತಿತ್ತು. ಕರಿ ಕೋಟಿನ ವಕೀಲರಿಗೆ ಗೌರವ ಅಪಾರ ಅನಿಸಿತು.
ಇಡೀ ಕೋರ್ಟಿನ ಗೌರವಪೂರ್ವಕ ನಡಾವಳಿಗಳು ವಕೀಲನಾಗಬೇಕು ಎಂದು ಪ್ರೇರೆಪಿಸುತ್ತಿದ್ದವು. ಆದರೆ ಅದು ಸಾಧ್ಯವಾಗಬೇಕಾದರೆ ಶಾಲೆಗೆ ಹೋಗಬೇಕು, ಹೆಚ್ಚು ಓದಬೇಕು ಎಂದು ಹೇಳಿದ ಕೂಡಲೇ ಬ್ಯಾಡಪ್ಪ ಶಾಲೆ ಸಹವಾಸ ಅನಿಸುತ್ತಿತ್ತು. ಅಜ್ಜ ಖಾಸಗಿ ಬದುಕಿನಲ್ಲಿ ಭಾವುಕರಾಗಿದ್ದರು.
ನಾಲ್ಕು ಜನ ಅಳಿಯಂದರ ಬಗ್ಗೆ ಅಭಿಮಾನ ಪ್ರೀತಿ ಗೌರವಗಳಿದ್ದವು. ಹೆಣ್ಣು ಮಕ್ಕಳ ಮೇಲಿನ ಪ್ರೇಮ, ಮೊಮ್ಮಕ್ಕಳ ಮೇಲಿನ ಮಮಕಾರದಲ್ಲಿ ಸಹಜತೆಯಿತ್ತು.

ಗದುಗಿನ ದೊಡ್ಡ ಮನೆತನದ ಅಳಿಯನಾಗಿದ್ದ ಅಜ್ಜ ಹೆಚ್ಚು ಗದುಗಿಗೆ ಹೋಗುತ್ತಿದ್ದಿಲ್ಲ ನಿಜಾಮ ಪ್ರಾಂತದ ಹೈದ್ರಾಬಾದ ಕರ್ನಾಟಕದ ಜನ, ಹಳೆ ಧಾರವಾಡ ಜಿಲ್ಲೆಯ ಜನತೆಗೆ ಹೋಲಿಸಿದರೆ ತುಂಬಾ ಭಾವುಕರು. ಮಹಾರಾಷ್ಟ್ರ ಹಾಗೂ ಇಂಗ್ಲೀಷರ ಪ್ರಭಾವದಲ್ಲಿ ಬೆಳೆದು ತಮ್ಮ ವ್ಯಕ್ತಿತ್ವ ರೂಪಿಸಿಕೊಂಡಿದ್ದ ಧಾರವಾಡಿಗರು ತುಂಬಾ ವಾಸ್ತವವಾದಿಗಳು. ಹಳೆ ಧಾರವಾಡ ಜಿಲ್ಲೆಯ ಜನ ಸೌಮ್ಯತೆಯೊಂದಿಗೆ ಕುಟುಂಬದ ಸದಸ್ಯರೊಂದಿಗೆ ಕೂಡಾ ಅಷ್ಟೇ ರಿಸರ್ವ ಆಗಿರುತ್ತಿದ್ದರು.ಅಳಿಯರೇ ಇರಲಿ, ಮಕ್ಕಳೆ ಇರಲಿ ಎಲ್ಲರೊಂದಿಗೂ ಅಷ್ಟಕ್ಕಷ್ಟೇ.

ಅದೇ ಹೈದ್ರಾಬಾದ ಕರ್ನಾಟಕದ ಊರುಗಳಲ್ಲಿ ಅಳಿಯಂದಿರ ಬಗ್ಗೆ ವಿಶೇಷ ಕಾಳಜಿ ಪ್ರೀತಿ, ಅಪಾರ ಗೌರವ ಬೇರೆ. ಕುಷ್ಟಗಿಯ ಅಜ್ಜನಿಗೆ ಗದುಗಿನಲ್ಲಿ ತನಗೆ ಸಿಗದ ಹೆಚ್ಚು ಪ್ರೀತಿಯನ್ನು ಅಳಿಯರಿಗೆ ತೋರಿಸಿದ ಅಂತ ಅನಿಸುತ್ತದೆ.
ಈಗಲೂ ನಾನದನ್ನು ಅನುಭವಿಸುತ್ತೇನೆ. ನಮ್ಮೂರ ಮೂಲ ಗುಣಗಳು ಇಂದಿಗೂ ನನ್ನಲ್ಲಿ ಉಳಿದುಕೊಂಡಿವೆ.

ಅನಗತ್ಯ ಔದಾರ್ಯ, ಭಾವುಕತೆ, ಅತಿಥಿ-ಬಂಧುಗಳಿಗೆ ನೀಡಬೇಕೆನಿಸುವ ರಾಯಲ್ ಟ್ರೀಟಮೆಂಟ್ ಎಷ್ಟೊಂದು ಬೇಡ ಎನಿಸಿ ಹತ್ತಿಕ್ಕಿದ್ದರೂ ಉಕ್ಕಿ ಬರುತ್ತವೆ.
ಅದನ್ನೆ ಧಾರವಾಡ ಸ್ನೇಹಿತರು, ಬಂಧುಗಳು ಹೇಳುವಂತೆ ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ ಅಲ್ಲವೇ ? ಶಿಸ್ತು ಸಂಯಮ, ಮಿತ ಆಹಾರ ಹಾಗೂ ಸಮಚಿತ್ತದಿಂದ ಬದುಕಿದ ಗುರುಸಿದ್ದಪ್ಪ ಅಜ್ಜ ತನ್ನ ಕೊನೆ ದಿನಗಳಲ್ಲಿ ಪಾರ್ಶ್ವವಾಯುವಿನಿಂದಾಗಿ ಅನಾರೋಗ್ಯದಿಂದ ನರಗಳಿದ್ದು ಯಾಕೆ ಎಂದು ಗೊಂದಲ ಉಂಟಾಗಿ ಬೇಸರವಾಯಿತು.
ಅಜ್ಜನ ಕೊನೆಯ ದಿನಗಳಲ್ಲಿ ಆರೈಕೆ ಮಾಡಿದ ಬೇಬಿಕಕ್ಕಿಯ ಬಗ್ಗೆಯೂ ನನ್ನ ಪ್ರೀತಿ ಹೆಚ್ಚಾಯಿತು. ಹಟಮಾರಿ ಸೋದರ ಮಾವ ಕುಷ್ಟಗಿ ಬಿಟ್ಟ ಮೇಲೆ ಅನಾಥ ಪ್ರಜ್ಞೆ ಉಂಟಾಯಿತು.
ಈಗ ಅಲ್ಲಿನ ಎಲ್ಲ ಬಂಧುಗಳು ಚದುರಿಹೋಗಿದ್ದರಿಂದ ವರ್ತಮಾನದಲ್ಲಿ ಕುಷ್ಟಗಿ ಇತಿಹಾಸವಾಗಿ ಉಳಿದಿದೆ. ಅಜ್ಜನ ಬದುಕಿನ ಹಾಗೆ !

No comments:

Post a Comment