Tuesday, March 15, 2011

ತಿರುಗಿ ನೋಡುವ ಸಂಭ್ರಮದಲಿ . . . .


ಕೋಟಿ, ಕೊಟಿ ಕೊಟ್ಟರು ನೀನು ಕಳೆದುಹೋದ ಇತಿಹಾಸವನ್ನು ಕೊಳ್ಳಲಾರೆ ಎಂಬ ಮಾತು ಕಳೆದು ಹೋದ ಇತಿಹಾಸ ವನ್ನ್ಗುನೆನಪಿಸುತ್ತದೆ.
ನಾಡಿಗೆ ಸುಧೀರ್ಘ ಇತಿಹಾಸವಿರುತ್ತದೆ. ಆ ಇತಿಹಾಸದಲ್ಲಿ ಮನುಷ್ಯ ಒಂದು ಸಣ್ಣ ಭಾಗ ವ್ಯಕ್ತಿಯ ಪುಟ್ಟ ಇತಿಹಾಸದಲ್ಲಿಯೂ ಹುಡುಕಿದರೆ ಏನೆಲ್ಲ ಸಿಗುತ್ತದೆ.
ಆದರೆ ಆ ಹುಡುಕಾಟ ಗಂಭೀರವಾಗಿರಬೇಕು ಎನ್ನುವುದಕ್ಕಿಂತ ಪ್ರಾಮಾಣಿಕವಾಗಿರಬೇಕು. ಮುಗ್ಧವಾಗಿರಬೇಕು.
ಎಲ್ಲಿಯವರೆಗೆ ನಮ್ಮಲ್ಲಿ ಮುಗ್ಧತೆಯಿರುತ್ತದೆಯೋ ಅಲ್ಲಿಯವರೆಗೆ ಬಾಲ್ಯವಿರುತ್ತದೆ.
ಮುಗ್ಧತೆಯಲ್ಲಿ ಬಾಲ್ಯವಿದೆಯೋ ಬಾಲ್ಯದಲ್ಲಿ ಮುಗ್ಧತೆಯಿದೆಯೋ ಎಂದು ಹುಡುಕಾಡುವಾಗಲೇ, ಬೆಳೆದ ವಯಸ್ಸು, ಜ್ಞಾನವೃದ್ಧಿ ಮುಗ್ಧತೆಯನ್ನು ಕಳಿಸಿದುಕೊಳ್ಳುತ್ತದೆ.
ಜ್ಞಾನಕ್ಕಾಗಿ ಹಂಬಲಿಸುವ ಮನಸು, ಜ್ಞಾನ ಕಸಿದುಕೊಳ್ಳುವ ಮುಗ್ಧತೆಗಾಗಿ ಪರಿತಪಿಸುತ್ತದೆ. ಕಳೆದು ಹೋದ ಬಾಲ್ಯದೊಂದಿಗೆ, ಅಳಿದು ಹೋದ ಮುಗ್ಧತೆಯ ಹುಡುಕಾಟ ಆರಂಭವಾದ ಹೊತ್ತಿನಲ್ಲಿ ಹೆಕ್ಕಿ ಹೆಕ್ಕಿ ತೆಗೆದು ಬಾಲ್ಯವನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದೇನೆ.

ಬಾಲ್ಯದಲ್ಲಿ ಶಾಲೆಗೆ ಸೇರಿದಾಗಿನಿಂದ ಕಾಲೇಜು ಮೆಟ್ಟಿಲೇರುವರೆಗಿನ ಘಟನೆಗಳನ್ನು ಮಾತ್ರ ಇಲ್ಲಿ ದಾಖಲಿಸಿದ್ದೇನೆ. ಹದಿನೈದು ವರ್ಷಗಳವರೆಗಿನ ಸಿಹಿ-ಕಹಿ ನೆನಪುಗಳನ್ನು ಸಕಾರಾತ್ಮಕವಾಗಿ, ಪ್ರಾಮಾಣಿಕವಾಗಿ ಹಂಚಿಕೊಂಡಿದ್ದೇನೆ.
ಈ ಹಂತದಲ್ಲಿ ಒಮ್ಮೆ ನಿಂತು ಇಪ್ಪತ್ತು ವರ್ಷಗಳ ಹಿಂದೆ ತಿರುಗಿ ನೋಡಿದಾಗ ಸಂಭ್ರಮವಾಯಿತು.

ಬಾಲ್ಯದಲ್ಲಿನ ಸಂಗತಿಗಳನ್ನು ವ್ಯಕ್ತಿಗಳನ್ನು ನಕಾರಾತ್ಮಕವಾಗಿ ಚಿತ್ರಿಸಲು ಮನಸಾಗಲಿಲ್ಲ. ಹತ್ತು ಹಲವು ಸಂದರ್ಭ ಕಾರಣವಾಗಿರಬಹುದು. ಅದಕ್ಕೆ ಯಾರೂ ಕಾರಣರಲ್ಲ. ಒಳ್ಳೆಯದು, ಕೆಟ್ಟದು ಎಂದು ವಿಂಗಡಿಸುವುದರಲ್ಲಿ ಏನರ್ಥ ?

ನಡೆದದ್ದು ನಡೆದು ಹೋಗಿದೆ. ಕಳೆದು ಹೋದದ್ದು ಹುಡುಕಿದರೂ ಸಿಗುವುದಿಲ್ಲ.
ಅಂದಿನ ಶಿಕ್ಷಣ ವ್ಯವಸ್ಥೆ, ಸಾಮಾಜಿಕ ಜೀವನ ಕುಟುಂಬದ ಮೌಲ್ಯಗಳು ಇಂದು ನಮ್ಮೂರಲ್ಲಿ ಅಲ್ಲ ಎಲ್ಲಿಯೂ ಸಿಗುತ್ತಿಲ್ಲ. ಮರದ ಮೇಲೆ ಕುಳಿತ ಮನಸ್ಸು ಬೇರುಗಳ ಸೆಳೆತಕ್ಕೆ ಸಿಕ್ಕ ಅನುಭವ

ಪ್ರೀತಿ, ವಿಶ್ವಾಸ, ಅವಿಭಕ್ತ ಕುಟುಂಬ ವ್ಯವಸ್ಥೆ, ಅಲ್ಲಿನ ನಿಸ್ವಾರ್ಥ ಜೀವಿಗಳು ಪ್ರೀತಿಯಿಂದ ಬೆಳೆಸಿದ ವ್ಯಕ್ತಿಗಳು ಯಾವುದೇ ಕಾರಣಕ್ಕೆ ದ್ವೇಷಿಸಿದರೂ, ಆ ದ್ವೇಷದಲ್ಲಿಯೂ ಬದುಕಿಗೊಂದು ಅರ್ಥ ಒದಗಿಸಿದ ಅನೇಕರು ನನ್ನನ್ನು ನಿತ್ಯ ಕಾಡುತ್ತಾರೆ.

ಅಂದಿನ ಗ್ರಾಮೀಣ ಬದುಕು, ಅಲ್ಲಿನ ರಂಗು ರಂಗಿನ ಕ್ಷಣಗಳು ಇಂದು ಜಾಗತೀಕರಣ ನಗರೀಕರಣದಿಂದಾಗಿ ಮಾಯವಾಗಿವೆ.
ಊರಿಗೆ ಹೋದಾಗ ಹಳೆಯ ಗೆಳೆಯರನ್ನು, ಹಳೆಯ ಸ್ಥಳಗಳನ್ನು ಹುಡುಕಬೇಕೆನಿಸುತ್ತದೆ. ವಾಸ್ತವವಾಗಿ ಅದು ಸಾಧ್ಯವಾಗದೇ ಹೋದಾಗ, ನೆನಪಿನಾಳಕ್ಕೆ ಇಳಿದು ನನ್ನಲ್ಲಿಯೇ ಹೆಕ್ಕಿ ತೆಗೆದಿದ್ದೇನೆ.

ನನ್ನ ಸ್ಮರಣ ಶಕ್ತಿ ಈಗ ಬರೆಯುವ ಕಾಲಕ್ಕೆ ತುಂಬಾ ಶಾರ್ಪ ಆದದ್ದು ಖುಷಿ ತಂದಿದೆ. ಒಮ್ಮೊಮ್ಮೆ ಮಧ್ಯ ರಾತ್ರಿ ಎದ್ದು ಕುಳಿತು ಹಳೆಯ ಸಂಗತಿಗಳನ್ನು ಮನದ ಪರದೆಯ ಮೇಲೆ ಮೂಡಿಸಿಕೊಂಡು ಅಕ್ಷರಕ್ಕಿಳಿಸಿದ್ದೇನೆ.

ಅದನ್ನು ಬ್ಲಾಗನಲ್ಲಿ ಒದಿದ ಗೆಳೆಯರು, ಬಂಧುಗಳು ಅಬ್ಬಾ ! ಭಾರಿ ನೆನಪಲೇ ನಿಂದು, ಎಂದು ಬೆನ್ನುತಟ್ಟಿದ್ದಾರೆ. ಕೈಕೂಡದ ನೆನಪಿನಾಳಕ್ಕೆ ಕೃತಜ್ಞತೆ ಹೇಳಿದರೆ ಕೃತಕವಾಗುತ್ತದೆ.

ಇಲ್ಲಿ ಭಾಷೆಗಿಂತ ಭಾವನೆಗಳಿಗೆ ಒತ್ತು ನೀಡಿದ್ದರಿಂದ ಭಾಷಾ ಅಲಂಕಾರ ಮುಖ್ಯ ಅನಿಸಲಿಲ್ಲ. ನೆನಪುಗಳು ಎಲ್ಲಿ ಕಳೆದು ಹೋಗುತ್ತವೆ ಎಂಬಂತೆ ಹೇಳಬಹುದಾದ ಎಲ್ಲ ಸಂಗತಿಗಳನ್ನು ಹೇಳಿದ್ದೇನೆ. ಸರಿ ಸುಮಾರು ಹನ್ನೆರಡು ವರ್ಷದ ಸಂಗತಿಗಳನ್ನು ಅಸ್ಪಷ್ಠವಾಗಿ ಹರಡಿಟ್ಟಿದ್ದೇನೆ. ಯಾಪಲಪರವಿ ಮನೆತನದ ಮೂರನೇ ತಲೆಮಾರಿನ ಎಲ್ಲ ಬಂಧುಗಳು ಬೆರಗಿನಿಂದ ಅಭಿನಂದಿಸಿದ್ದಾರೆ.
ಹಿಂದಿನ ಕಹಿಗಳೆಲ್ಲ ಕಳೆದು ಸಿಕ್ಕಿರುವ ಸಿಹಿಯನ್ನು ಹಂಚಿಕೊಳ್ಳುವಾಗ ಇದು ಪ್ರಸ್ತುತ ಬ್ಲಾಗ ಮೂಲಕ ಮೂಡಿ ಬಂದ ಲೇಖನಗಳನ್ನು ವಿಶ್ವದ ವಿವಿದೆಡೆ ನೆಲೆಸಿರುವ ಕನ್ನಡ ಸ್ನೇಹಿತರು ಓದಿ ಖುಷಿ ಪಟ್ಟು ಪ್ರೇರಕ ಮಾತುಗಳನ್ನಾಡಿದ್ದಾರೆ.
ಲಿಬಿಯಾದಲ್ಲಿದ್ಸ ಪರಶುರಾಮ ಕಳ್ಳಿ ಹಾಗೂ ಅನಿವಾಸಿ ಬಂಧುಗಳು ಸ್ನೇಹಿತರು ತೋರಿದ ಪ್ರೀತಿ ಅನನ್ಯ.
ಇಲ್ಲಿ ಚಿತ್ರಿತವಾಗಿರುವ ವ್ಯಕ್ತಿಗಳು ಕೇವಲ ನನ್ನ ಬಂದುಗಳಲ್ಲ, ಓದುವ ಎಲ್ಲರ ಬಂಧುಗಳು. ಇಲ್ಲಿನ ಅನುಭವಗಳು ಕೇವಲ ನನ್ನ ಅನುಭವಗಳಲ್ಲ. ನನ್ನಂತಹ ಲಕ್ಷಾಂತರ ಹಳ್ಳಿ ಹೈದರ ಅನುಭವಗಳು. ಖಾಸಗಿ ಅನುಭವಗಳ ಸಾರ್ವತ್ರಿಕರಣ ಇದು ಎಂದು ನಮ್ರವಾಗಿ ಹೇಳಬಯಸುತ್ತೇನೆ.
ಅಮ್ಮ, ಅಜ್ಜ, ಅತ್ತೆ, ಅವ್ವ, ದೊಡ್ಡಪ್ಪ, ಚಿಕ್ಕಪ್ಪಂದಿರು ಬಂಧು ಮಿತ್ರರು ನಮ್ಮ ಬದುಕನ್ನು ಕಟ್ಟಿಕೊಡುವಲ್ಲಿ ಹೇಗೆಲ್ಲ ಕಾರಣರಾಗಿದ್ದಾರಲ್ಲ ಎನಿಸುತ್ತದೆ.
ವ್ಯಕ್ತಿ ಕೇಂದ್ರಿತ ಬದುಕಿನಲ್ಲಿರುವ ಯುವಕರಿಗೆ ನನ್ನ ಅನುಭವಗಳು ಅಚ್ಚರಿ ಎನಿಸಿವೆ. ನನ್ನ ಬರಹಗಳಿಗೆ ಗಟ್ಟಿತನ ಒದಗಿಸಿದ ಹೊಸ ಮಾಧ್ಯಮ ಬ್ಲಾಗಗೆ ರುಣಿಯಾಗಿದ್ದೇನೆ ದೇಶಗಳಲ್ಲಿ ನೆಲೆಸಿರುವ ಅಂಗೈಯಲ್ಲಿನ ಕಂಪ್ಯೂಟರ ಮೂಲಕ ಲೇಖನಗಳನ್ನು ಓದಿ ತುಟಿಯಂಚಿನ ಮೇಲೆ ನಗೆಮೂಡಿಸಿ, ಕಣ್ಣಂಚಿನಲ್ಲಿ ನೀರು ಜಿನುಗಿಸಿದ್ದಕ್ಕಾಗಿ ಕೃತಜ್ಞತೆ ಹೇಳಿದ್ದಾರೆ.
ಅತಿರಂಚಿತವಲ್ಲದ, ವೈಭವೀಕರಣವಿಲ್ಲದ, ಪ್ರಾಮಾಣಿಕ ಅನುಭವಗಳನ್ನು ಪ್ರೀತಿಯಿಂದ ಓದುವ ನಿಮಗೆ ಸಾವಿರದ ಶರಣುಗಳು.

No comments:

Post a Comment