Saturday, December 31, 2016

ಕಾವಲುಗಾರ


ಕಾವಲುಗಾರ

ಬುದ್ಧ ಬಸವ ಅಲ್ಲಮರ
ವಾರಸುದಾರ ನಾನು
ನನ್ನಷ್ಟು ಶ್ರೀಮಂತ
ಬೇರೆ ಯಾರೂ ಇಲ್ಲವೇ
ಇಲ್ಲ.
ಬುದ್ಧ ಬಿಟ್ಟು ಹೋದ
ಶಾಂತಿ ಸರೋವರಕೆ ಬೆಲೆ
ಕಟ್ಟುವ ತಾಕತ್ತು ಯಾರಿಗಿದೆ?
ಬಸವ ಬಿತ್ತಿ ಬೆಳೆದ ಸೌಹಾರ್ದ
ಎಂಬ ವಿಶಾಲ  ತೋಟವ ಉತ್ತಿ
ಬಿತ್ತಿ ಸಾಗುವಳಿ ಮಾಡಲಾದೀತೆ?
ಅಲ್ಲಮನ ಜ್ಞಾನ ಭಂಡಾರದಲಿ
ತೆರೆದು ಕೈಮಾಡಿ ಕರೆಯುತಿರುವ
ಕೋಟಿ ಕೋಟಿ ಅಸಂಖ್ಯ ಶಬ್ದಗಳ
ಅಳೆದು ತೂಗಿ ಅರಿಯುವ ಅನನ್ಯ
ಜ್ಞಾನಿ ಎಲ್ಲಿದ್ದಾನೆ?
ನಾನೂ ಅಷ್ಟೇ
ಯಾರಾದರೂ ಅರ್ಹರು
ಬಂದರೆ ಅವರವರ
ಪಾಲಿನದು ಅವರಿಗೆ ನೀಡಿ
ಮುಂದೆ ಸಾಗಲು ಕಾಯುತ್ತಲಿರುವೆ.
ಬುದ್ಧ ಬಸವ ಅಲ್ಲಮರ ಮಹಾ
ಸಂಪತ್ತಿನ ಕೇವಲ  ಕಾವಲುಗಾರ
ನಾ...ನು...
----ಸಿದ್ದು ಯಾಪಲಪರವಿ

ಹೆಣ್ಣು

ಹೆಣ್ಣು ಎಲ್ಲವೂ ಹೌದು !

ಎಲ್ಲಿಲ್ಲದ ಅಕ್ಕರೆ
ಅನುಭವಿಸಿದರೆ
ಎಲ್ಲವೂ ಸಕ್ಕರೆ
ನೀ ಬರೀ ನಕ್ಕರೆ.
ಬಾಲ್ಯದ ಕೃಷ್ಣ
ಲೀಲೆಗೆ ತಾಯಾಗಿ
ಸಾಂಗ್ಯತ್ಯಕ್ಕೆ ಸೋದರಿ
ಏರು ಯೌವ್ವನಕೆ ಗೆಳತಿ
ಪ್ರೌಢಿಮೆಗೆ ಸತಿ
ದೌರ್ಬಲ್ಯಗಳ
ಇತಿ-ಮಿತಿಗಳ
ಕೆಣಕಿ ರಮಿಸಿ
ಕಾಡುವ ಸಂಗತಿಗಳ
ಸಂಗಾತಿ.
ಅಕ್ಕರೆಯ ಅನುಭವದ
ಮಗಳು
ಅನುಭಾವದ ರಸದೌತಣ
ಉಣಬಡಿಸುವ ಮೊಮ್ಮಗಳು...
ಹೀಗೆ ಏನೆಲ್ಲ ಸವಿಸುಖದ
ಘಮಲು ನೀ ಕೇವಲ
ಹೆಣ್ಣಲ್ಲ.. ಗಂಡಿಗೆ ಕಾಡುವ
ಮಾಯೆಯೂ ಅಲ್ಲ.
ಜೀವನೋತ್ಸಾಹದ
ಜೀವಜಲ
ಎಂದೂ ಮಾಸದ
ಮಾನಸ ಸರೋವರ.
ಬೇಡಿದ್ದನ್ನು ಬೇಕಾದಾಗ
ತಿಳಿಸಿ ತಿಳುವಳಿಕೆಯ
ಅರವಳಿಕೆಯ ನೀಡಿ
ಹರಸುವ ಚೈತನ್ಯ.
ಪುರುಷ ಪ್ರಧಾ ನ
ವ್ಯವಸ್ಥೆಯಲಿ
ದುರ್ಬಲಳೆಂಬ
ಪಟ್ಟ ಹೊತ್ತ
ಪ್ರಬಲೆ , ಸಬಲೆ
ಶಕ್ತಿಶಾಲಿ...
ಬತ್ತದ ಚಿಲುಮೆ...

---ಸಿದ್ದು ಯಾಪಲಪರವಿ

Friday, December 30, 2016

ಬೇಡಲಾರೆ ಯಾರನೂ

ಬೇಡಲಾರೆ ನಾನಿನ್ನು ಬೇಡಿದರೆ
ವರವ ಯಾರೂ ಕೊಡುವುದಿಲ್ಲ
ಇವರು ನಮ್ಮವರು ಕೈ ಬಿಡ
ಲಾರರು ಎಂಬ ಭ್ರಮೆಯ
ಬದುಕಲಿ ನೂರೆಂಟು ಆಸೆ
ಭರವಸೆಗಳ ಲೆಕ್ಕಾಚಾರ.

ಯಾರೂ ನಮ್ಮವರಲ್ಲದಿರೆಯೂ
ನಮ್ಮವರು ನಮಗೆ ಏನೆಲ್ಲ
ಆಗುತ್ತಾರೆಂಬ ಗಾಳಿ ಗೋಪುರದ
ಮೇಲೆ ಕಳಸವಿಟ್ಟು ಜಾತ್ರೆ
ಮಾಡಿ ತೇರನೆಳೆಯುವ ಹುಚ್ಚು.

ನಮ್ಮವರೆನಿಸಿಕೊಂಡವರು ಒಮ್ಮೆ
ಮೇಲೆ ಹಾರಿದರೆ ಗಾಳಿಪಟ ಹಾರಿದ್ದೇ
ಹಾರಿದ್ದು ಪಾಪ ಪಟಕ್ಕೇನು ಗೊತ್ತು
ಪಟ ಹಾರಿಸುವವನ ಕೈ ಸೋತರೆ
ಎಳೆದಾನೆಂದು.

ನಿನ್ಪಷ್ಟಕೆ ನೀ ನಡೆ ನಿನ್ನಿಷ್ಟದ ಹಾಗೆ
ಯಾರೂ ಇಲ್ಲಿ ಇಲ್ಲ ನಿನಗೆ ನೆರವಾಗಿ
ನೆರಳಾಗಿ ಕೈ ಹಿಡಿದು ಮುನ್ನಡೆಸಲು

ಏಳು ಎದ್ದೇಳು ಸಾಗು ನಿಧಾನದಿ ನಿನ್ನ
ವೇಗವ ನೀ ಅರಿತು ಅಲ್ಲಿರಲಿ ಒಂದು
ಗುರಿ ಅದ ತಲುಪಲು ನೀ ತೆವಳುತ್ತ
ಏಳುತ್ತ ಒಮ್ಮೊಮ್ಮೆ ಬೀಳುತ್ತಲಾದರೂ
ನಡೆಯುವದ ಬಿಡಬೇಡ

ದಣಿವು ಹಸಿವು ಬಾಯಾರಿಕೆಯ
ಸಂಕಷ್ಟದಲಿಯೂ ಮಾಸದ
ನಗುವಿರಲಿ ಮೊಗದಲಿ

ಗಂಟು ಮುಖದ ಕಗ್ಗಂಟು ಕಳಚ
ಬಹುದು ಸುತ್ತಲಿನವರ ನಂಟು

ಬೇರೆಯವರ ನಂಟಿನ ಗಂಟನು
ನೆಚ್ಚದೆ ಬಿಚ್ಚದೆ ಬೆಚ್ಚದೆ ನಡೆ ನಿನ್ನ
ಕಾಲುಗಳ ಮೇಲೆ ನಿನ್ನದೇ ಕಾಲ
ಕೂಡಿ ಬರುವವರೆಗೆ....

---ಸಿದ್ದು ಯಾಪಲಪರವಿ

Wednesday, December 28, 2016

ಇಂಗದ ದಾಹ

ಆಕಾಶ ಭೂಮಿ ಒಂದಾಗಿ ನಿಂತು
ಉರಿವ ಅಗ್ನಿಯ ಅಂಗೈಯಲಿ
ಹಿಡಿದು ಸಪ್ತ ಸರೋವರಗಳ
ನೀರ ಗಟ ಗಟನೆ ಕುಡಿದರೂ
ಇಂಗದ ದಾಹ
ಬತ್ತದ ತಳಮಳ

ಮನದಾಳದಲಿ ಭೋರ್ಗರೆಯುವ
ಬಯಕಗಳ ಹಂಗು ತೀರಿಸಿ
ಹಗುರಾಗಿ ಬೆತ್ತಲಾಗಿ ಬಯಲಲಿ
ಬಯಲಾಗಲು
ಬಂದು ಸೇರಬಾರದೇ ಬೇಗ

---ಸಿದ್ದು ಯಾಪಲಪರವಿ

ಪಂಚಮಹಾಭೂತಗಳು

ಪಂಚ ಮಹಾಭೂತಗಳು
ಪಂಚ ಮಹಾನದಿಗಳ
ಸ್ವರೂಪದಲಿ ಎದುರು
ಕಂಗೊಳಿಸುವ ಅನನ್ಯ ಪರಿಗೆ
ಬೆರಗಾಗಿದೆ ಎನ್ನ ಮನ

ರಂಭೆ-ರಂಭೆ-ಊರ್ವಶಿಯರನೂ
ಮೀರಿಸುವ ಅಪ್ರತಿಮ ಸೌಂದರ್ಯ
ರಾಶಿಯ ಕಂಡು
ಮೈಮನಗಳ ತಲ್ಲಣಗಳ
ಸಹಿಸಲಾರೆ...

---ಸಿದ್ದು ಯಾಪಲಪರವಿ

Tuesday, December 27, 2016

ಹನಿಗಳು

1
ಬಾನಂಗಳದ ಕಾರ್ಗತ್ತಲಲಿ ಚಕ ಚಕನೆ ಹೊಳೆಯುವ
ನಕ್ಷತ್ರಗಳ ಮಧ್ಯೆ ಮಿನುಗುವ ಚಂದಿರ.

2
ಉರಿ ಬಿಸಿಲಲಿ ಬಳಲಿದ ಭೂಮಿ ತಣ್ಣಗಾಗಲು ಚಡಪಡಿಸುತಿರೆ  ಒಮ್ಮೆಲೇ ಜೋರಾಗಿ ಸುರಿವ ಮುಂಗಾರು.

3
ಹರಿವ ನದಿಗೆ ಒಮ್ಮೆಲೇ  ಉನ್ಮಾದವ ಹೆಚ್ಚಿಸಿ ವೇಗವಾಗಿ ಹರಿದು ಸಮುದ್ರ ಸೇರಿ ನಲಿಯಲು ದೊರೆಯುವ ತಿರುವು.

4
ಹೂ ಬಿಸಿಲಲಿ ಅರಳಿದ ಕೆಂದಾವರೆ ಮಿಲನೋತ್ಸವದ ಸ್ಪರ್ಷಕೆ ಹಾರುವ ದುಂಬಿ.

5
ಬೆಳದಿಂಗಳಲಿ ಮೈದುಂಬಿ ನರ್ತಿಸುತ ಮಿಲನದೊಳಿರುವ
ಸರ್ಪಗಳ ಕಂಡು ಬೆಚ್ಚಿ ಚಡಪಡಿಸಿದ ಹಾವಾಡಿಗ.

    ----ಸಿದ್ದು ಯಾಪಲಪರವಿ

ಬೀಜ

ಕಲ್ಲಲಿ ಅಡಗಿರುವ ಬೆಂಕಿಯ
ನೀರಲಿ ಅಡಗಿರುವ ಪ್ರವಾಹವ

ಮರದೊಳು ಅಡಗಿರುವ ಜೀವವ
ಗಾಳಿಯೊಳು ಅಡಗಿರುವ ಉಸಿರ

ಬೀಜದೊಳು ಅಡಗಿರುವ ಮರವ
ಮೊಟ್ಟೆಯಲಿ ಅಡಗಿರುವ ಕೋಳಿಯ

ಮಣ್ಣಲಿ ಅಡಗಿರುವ ಚಿನ್ನವ
ಈ ಮನುಷ್ಯನ ಆಳದಲಿ
ಅಡಗಿರುವ ದಿವ್ಯ ಪ್ರಭೆಯ

ಮಹಿಮೆಯ ಬರಿಗಣ್ಣಲಿ
ಅಳೆಯಲಾಗದು
ಕಣ್ಣರಿಯದನು ಕರಳು ಮಾತ್ರ
ಅರಿಯಬಹುದು ದೊರೆ.

----ಸಿದ್ದು ಯಾಪಲಪರವಿ