Monday, January 27, 2014



ಏನು ಬರೆಯಲಿ
ಹೇಗೆ ಹಾಡಲಿ
ನಿನ್ನ ಅನುರೂಪ ಸೌಂದರ್ಯ
ರಾಶಿಯೆದುರು ನಿಂತ ಬಳಿಕ
ನಿನ್ನರಳಿದ ಕಂಗಳು
ಕಸಿದಿವೆ ಅಕ್ಷರಗಳ
ಮರೆಸಿವೆ ಭಾವನೆಗಳ
ಅವ್ಯಕ್ತ ಆಸೆ ಹುಡುಕುತಲಿದೆ
ಎಲ್ಲಿಯಾದರೂ ಸಿಗಬಹುದೆ ನೆಮ್ಮದಿ
ದಿನವು ಈ ದೇಶದ ನಾಗರಿಕರು
ಕಲೆದುಕೊಳ್ಳುತ್ತಿರುವ ಹಕ್ಕುಗಳು
ಹಗಲುಗಳ್ಳರು ಹುಟ್ಟಿಸುತಿರುವ
ಸಮಸ್ಯಗಳ ಸುಳಿಗೆ ಸಿಕ್ಕ ಮನುಷ್ಯರು
ಫೈಲು ಹೊತ್ತು ಅಲೆದಾಡುವ ಪದವೀಧರರಿಗೆ
ನೌಕರಿ ಎಲ್ಲಿ?
ಕಾಡುಗಳ್ಳರ ಬಂಧಿಸಲು ಯತ್ನಿಸುವ
ಪೋಲಿಸರು
ದೇಶ ರಕ್ಷಿಸಲು ಪರದಾಡುತಿರುವ
ರಾಜಕಾರಣಿ
ಇಲ್ಲ,ಇಲ್ಲ, ಇದೆಲ್ಲ ಶುದ್ಧ
ಭ್ರಮೆ, ಕನಸು
ಹೇಗೆ ಸಿಕ್ಕೀತು ತಿರುಗಿ ಬಾರದ
ಎಂದೋ ಕಳೆದುಹೋಗಿರುವ ಕುಸಿಯುತ್ತಿರುವ
ಮೌಲ್ಯ ಈ ಭ್ರಷ್ಟ ದೇಶದಲಿ
ಎಲ್ಲ ಆಸೆಗಳು ಮಣ್ಣು
ಗೂಡಿದರೂ ನಲ್ಲೆ
ನಿನ್ನ ಕಣ್ಣ ಸೆಳೆತ ಕೆಲ
ಕ್ಷಣಕಾದರೂ ಮರೆಸಿದೆ ಎಲ್ಲವ
ಅಸ್ಥಿರ ಬದುಕಿನ ದಿವಾಳಿತನವ

ಹೋಳಿಹಬ್ಬ



ಹೊಲಸು ಹಾಡ ಹಾಡುತಾ
ಲಬೋ,ಲಬೋ, ಬೈಗುಳ
ವರ್ಷದುದ್ದಕ್ಕೂ ತಡೆದಿಟ್ಟ
ಭಾವನೆಗಳ ಆಸ್ಫೋಟ.
ಏರುವ ಬೆಲೆಗಳ ಕಂಡು,
ದೊರಕದ ರೇಶನ್ ಗೆ ಕ್ಯೂ ಹಚ್ಚಿ
ಸಿಕ್ಕಾಪಟ್ಟೆ ಹಣ ತೆತ್ತರೂ ನಿಂತೋ
ಬಸ್ಸಿನ ಮೇಲೆಯೋ ಪ್ರಯಾಣಿಸಿ,
ಉರುಳಿ ಉರುಳಿ ಮತ್ತೆ ಅಧಿಕಾರ
ಕೇರಲು ಓಟ ಕೇಳಲು ಬರುವ
ರಾಜಕಾರಣಿಗಳ ಕಂಡು.
ನಿತ್ಯ ಹೋಳಿ ಹಬ್ಬ ಬದುಕಿನಲಿ
ಆದರೆ ಹೊಯ್ಕೊಳ್ಳುತ ಅಸಭ್ಯತೆಯ
ತೋರದ ಮನ ಕಾಯ್ದು ಕುಳಿತಿತ್ತೆ?
ಎಲ್ಲ ಒಮ್ಮೆಲೆ ಸೇರಿಸಿ ಆಚರಿಸುವ
ಹೋಳಿಯ ರಂಗು ರಂಗಿನಲಿ
ಅಂತೂ, ಇಂತೂ ವರ್ಷಕ್ಕೊಮ್ಮೆಯಾದರೂ
ಹಗುರವಾಗಬಹುದು ಹೋಳಿಯ
ನೆಪದಲಿ

ನಮ್ಮ ರಕ್ತ ಹಂಚಿಕೊಂಡು
ಹುಟ್ಟಯೂ ದೂರ ತಳ್ಳಲ್ಪಟ್ಟ
ನತದೃಷ್ಟರಿವರು
ಓಟಗಿಟ್ಟಿಸಲು ಪುಂಡರು
ಇವರನು ಛಿದ್ರವಾಗಿಸಲು ಹೊರಟಿದ್ದಾರೆ
ಜಾತಿಯ ಪಟ್ಟ ಕಟ್ಟಿ
ದೂರ, ದೂರ ಸರಿಯುತಲಿಹರು
ಭಿನ್ನ ಭೇದಗಳ ಸೃಷ್ಟಿಸಿದವರ ಮಾತ ನಂಬಿ
ಯಾರಿಲ್ಲ ಇವರ ಸುತ್ತ
ಶೋಷಣೆಗೊಳಗಾದಾಗಲೆಲ್ಲ
ಪೇಪರಿನಲ್ಲಿ ಬರೆಸಿಕೊಳ್ಳಲು, ಶಬ್ಬಾಸಗಿರಿ
ಗಿಟ್ಟಿಸಲು ಎಲ್ಲರೂ ಹೋಗೋಗಿ ಬರುತಾರೆ
ಕೇರಿಗೆ, ತಕ್ಷಣ ತಪ್ಪದೆ ಸ್ನಾನ ಮಾಡು ತಾರೆ
ಮೈಲಿಗೆ ಆಯಿತೆಂದು ಬಡಬಡಿಸಿ
ಗಾಂಧಿ, ಬಸವ, ಅಂಬೇಡ್ಕರ ಸಿಕ್ಕು
ನರಳುತಿರುವರು ಪುಢಾರಿಗಳ ಬಾಯಲಿ
ದಲಿತೋದ್ಧಾರ ನೆಪದಲಿ
ಇನ್ನೂ ಮಲ ತಿನ್ನುವ, ಚಾಟಿಗೆ ಮೈ
ಒಡ್ಡುವ ಕಣ್ಣಲಿ ನೋವ ರಕ್ತ ಸುರಿಸುವರ
ಕಣ್ಣೊರೆಸಲು ಆಗೀಗ ಬರುವರೆಲ್ಲ
ಯಾರಿಗೂ ಬೇಕಿಲ್ಲ ಮನಸಾರೆ ಕೊಡುವದು
'ರಿಜರ್ವೇಶನ್' ತಮ್ಮ ಹೃದಯದಲಿ

ನನ್ನ ಹಾಡು

ಮಾತೆಲ್ಲ ಹಾಡಾಗಹತ್ತಿದೆ
ಭಾವವಿಲ್ಲದೆ, ಓದುವರಿಲ್ಲ
ಕೇಳುವರಿಲ್ಲ ನಾ ಹಾಡಿದ
ಹಾಡುಗಳ
ಆದರೂ ಹುಟ್ಟುತಿವೆ ಲೆಕ್ಕವಿಲ್ಲದೆ
ಯಾರು ಆಲಿಸುವದು, ಕಣ್ಣರಳಿಸುವದು
ಬೇಡ ಈ ಹಾಡಿಗೆ
ಕೆರಳಿದ ಭಾವ ತಳಮಳಿಸಿದ
ಜೀವ
ನನ್ನ ನಾ ರಮಿಸಲು ಹಗುರ
ಪೋಣಿಸಿದರೆ ಈ ಹಾಡು ನುಡಿಯ
ನೋವೆಲ್ಲ ಮಂಗ ಮಾಯ
ಹಂಚಿಕೊಂಡಾಗ
ಭಾವಕೂ ಪದಕೂ ತಾಳ ಬೇಕೇ?
ಬೇಕೆ ಏನಾದರೂ ಕಟ್ಟಿ ಹಾಡಲು
ಕವಿಯಾಗುವದು ಬೇಡೆನಗೆ
ಶಬ್ದಗಳು ಹದಗೊಳ್ಳಲಿ
ಮಾತು ಮತಿಯಾಗಿಸಲಿ
ನನ್ನೆತ್ತರಕೊಯ್ಯಲಿ ನನ್ನ ಬದುಕ
ಹಸನಾಗಿಸಿ ಜೀವ ಉಳಿಸಲಿ
ಈ ಹಾಡು ಯಾರಿಗೂ ಹಾಡಾಗದಿದ್ದರೂ
ಕೇಳುವದು ಬೇಡವಾದರೂ

ವಿಷವ್ರಕ್ಷ

ಚಿತ್ತಾಕರ್ಷಕ ಹೂ-ಎಲೆಗಳ
ಬಲಿತು ಕೊಬ್ಬಿದ ರೆಂಬೆ-ಕೊಂಬೆಗಳ
ಫಲಭರಿತ ಮಾವಿನ ಹಣ್ಣುಗಳ
ಬಲಿತ ಬಡ್ಡೆಯ ವೃಕ್ಷ
ಬೇಡ ಬೇಡವೆಂದರು ಸೆಳೆಯಿತಲ್ಲ ನನ್ನ ಕಣ್ಣು
ಪಾಪ! ಗೆಳೆಯ ಕಷ್ಟದಿ ನಿಟ್ಟುಸಿರನುಣಿಸಿ
ಕಣ್ಣೀರ ಕೋಡಿ ಹರಿಸಿ ಹಗಲು-ರಾತ್ರಿ
ಕಣ್ಣಲಿ-ಕಣ್ಣಿಟ್ಟು ಬೆಳೆಸಿಯೇ ಬಿಟ್ಟನಲ್ಲ
ತನ್ನ ಮನೆಯಂಗಳದಲಿ
ನಗುಮೊಗದ ಮಾವಿನ
ರುಚಿಯ ಗೆಳೆಯನಳೆಯದೆ
ತಪ್ಪಿಸಿಕೊಳ್ಳಲಿಲ್ಲ ಧೃತ ಆಲಿಂಗನದಿ
ಬಾನಂಗಳದ ಚುಕ್ಕೆಗಳ ಬೊಗಸೆಯಲಿ ಹಿಡಿದು
ಕಡಲನೇ ಮುಕ್ಕಳಿಸಿ ಕುಣಿಯುವ ನಾ
ಯಾರು ನನಗೆ ತಿಳಿಯಲೆ ಇಲ್ಲ.
ಮಾತುಗಳ ಸಿಂಚನದ ಸೆರಗ ಹಾಸಿ
ಅಡವಿಟ್ಟ ಮನದಾದರಗಳ ಚಾದರ ಹೊದ್ದು, ಬೇಸಿಗೆಯಲಿ
ತಣ್ಣಗೆ ಚಳಿಯಲಿ ಬೆಚ್ಚಗೆ ಮುದನೀಡುವ
ಗೆಳೆಯನ ಆರೈಕೆಯಲಿ ಆಳೆತ್ತರ ಬೆಳೆದ ಮರ
ನಿತ್ಯಾಕರ್ಷಕ-ಚಿತ್ತಾಕರ್ಷಕ ನನ್ನಂತೆ, ಒಮ್ಮೊಮ್ಮೆ
ಅವನಂತೆ
ಕುತೂಹಲ ವಿಶ್ವಾಸ ಅಗಮ್ಯ-ಅಗೋಚರ
ಸೆಳೆತ ನನ್ನನೆಳೆಯಿತು ವೃಕ್ಷದೆಡೆಗೆ
ಮೊದಲ ಪಾಪದ ಹಣ್ಣು
ತೆರೆಸಲಿಲ್ಲ ನನ್ನ ಒಳಗಣ್ಣು
ಮನದಾಳದ ಹಸಿವ ನೀಗಿಸಲು
ಇಳಿಸಿದೆ ಸಿಹಿ ಆಳದೊಳಗೆ
ಹುತ್ತ ಸೇರುವ ಹಾವಂತೆ ನುಸು-ನುಸುಳಿ
ಸಳ-ಸಳನೆ ಸರ-ಸರನೆ ಕಾಳ್ಗಿಚ್ಚಿನಂತೆ
ಇಳಿಯಿತು ಕರುಳಿನಾಳಕೆ
ಅಧರಕ್ಕೆ ಸಿಹಿ, ಉದರಕ್ಕೆ ಹೆಬ್ಬಾವು
ತಾಂಡವ ನೃತ್ಯ ಕತ್ತರಿಸಿತು ಕರುಳ ಬಳ್ಳಿಯನೆ
ಯತ್ನಿಸಿತು ಹೊರಬರಲು ನನ್ನ ತಿರುತಿರುಗಿ
ಒಗೆಯುತಲಿ
ಗಂಟಲಲಿ ಸಿಕ್ಕ ಉಸಿರು ಕೊಸರುತಲಿರುವಾಗ
ನೆನಪಾಯಿತು ಗೆಳೆಯನ ನಗು-ಮೊಗ
ನನ್ನನ್ನಿಲ್ಲಾಗಿಸಿದ, ಇಲ್ಲಾಗಿಸಿದ ಮಾವಿನ ಫಲ.
Read more...

ಗಾಂಧಿ ಮಾರ್ಗ

ಅರೆಬಟ್ಟೆ ತೊಟ್ಟು
ಹಗಲಿರುಳು ಕಣ್ಣಲಿ ಕಣ್ಣಿಟ್ಟು
ಉಪವಾಸ ಸತ್ಯಾಗ್ರಹಗಳ ಪಟ್ಟನು ತೊಟ್ಟು
ನೀನಲೆದೆ ಈ ದೇಶದ ಮೂಲೆ
ಮೂಲೆಯಲಿ
ಕಟ್ಟಿದೆ ಮನಸು ಮನಸುಗಳ
ಬೆಳೆಸಿದೆ ಸ್ವಾಭಿಮಾನವ
ಕಂಡೆ ಹಗಲಿರುಳು ಸ್ವಾತಂತ್ರ್ಯದ ಕನಸು
ಅಳಿಸಿ ಹಾಕಿದೆ ಜಾತಿ ವಿಷಮತೆ
ಸ್ಥಾನಮಾನ ಕೊಟ್ಟು ಆತ್ಮಾಭಿಮಾನ
ಬೆಳೆಸಿದೆ ದೀನ ದಲಿತರಿಗೆ
ಒದ್ದೋಡಿಸಿದೆ ದಾಸ್ಯತೆ ಹಬ್ಬಿಸಿದ
ಬಿಳಿಯರನು ಶಾಂತಿಮಂತ್ರವ ಹಾಡಿ.
ಇದೆಲ್ಲ ನೀ ನಮಗೆ ಹಾಕಿಕೊಟ್ಟ
'ಶಾಂತಿಮಾರ್ಗ' 'ಗಾಂಧಿ ಮಾರ್ಗ'
ಆದರೆ ಈಗಲೂ ಬಿಟ್ಟಿಲ್ಲ
ನಿನ್ನ ಮಾರ್ಗ ಖಾದಿ ತೊಟ್ಟು
ದೇಶವಾಳುತಿರುವವರು.
ಬಾಯಲೆಲ್ಲ ನಿನ್ನ ಮಂತ್ರ
ಬಳಸುವರೆಲ್ಲ ತಮ್ಮದೇ ಹೊಲಸು ಕುತಂತ್ರ
ಇವರೆಲ್ಲ ನಡೆಯುತಲಿರುವದು
'ಗಾಂಧೀ ಮಾರ್ಗ'ದಲೇ
ಯಾಕೆಂದರೆ ದೊಡ್ಡ ನಗರದ ರಸ್ತೆಗಳೆಲ್ಲವೂ
'ಗಾಂಧೀ ಮಾರ್ಗ', 'ಶಾಂತಿ ಮಾರ್ಗ', 'ನೀತಿ ಮಾರ್ಗ'
ಖುಷಿಪಡು, ಸಮಾಧಾನ ಹೊದು
ಅಜ್ಜಾ! ಇನ್ನೂ ಇವರು ನೀ ಹಾಕಿಕೊಟ್ಟ
ಮಾರ್ಗದಲಿ ಕಾರು ಓಡಿಸಿ ಧೂಳು ಎಬ್ಬಿ
ಸಿರುವುದು ಕಂಡು.
Read more...

ಬೆನ್ನುಡಿ

ಪ್ರೊ. ಸಿದ್ದು ಯಾಪಲಪರವಿ ಸೊಗಸಾದ ಮಾತುಗಾರ. ಸಂಪರ್ಕಕ್ಕೆ ಬಂದ ಯಾವ ವ್ಯಕ್ತಿಯೂ ಸುಲಭವಾಗಿ ಮರೆಯಲಾರದ ವ್ಯಕ್ತಿತ್ವ. ನಾಡಿನ ಅನೇಕ ಮಠಾಧೀಶರು, ರಾಜಕಾರಣಿಗಳು, ಅಧಿಕಾರಿಗಳು, ಸಾಹಿತ್ಯ, ಸಾಂಸ್ಕೃತಿಕ ಲೋಕದ ಅನೇಕ ದಿಗ್ಗಜರ ಸಂಪರ್ಕ ಮತ್ತು ಒಡನಾಟ ಇವರಿಗೆ ಬಲು ಸರಳ. ಮಾತನಾಡುತ್ತ, ವಯಸ್ಸಿಗೆ ತಕ್ಕ, ಅನುಭವಕ್ಕೆ ಮೀರಿದ ಮಾತನಾಡುತ್ತಿರುವರೇನೋ ಅನಿಸುವಾಗಲೆ ತಮ್ಮ ಛಾಪನ್ನು ಎದುರಿಗಿರುವವರ ಮೇಲೆ ಒತ್ತಿಬಿಟ್ಟು ನೆನಪಿನಲ್ಲಿ ಉಳಿಯುತ್ತಾರೆ ಎಂಬುದು ಬಹಳ ಜನರ ಅನಿಸಿಕೆ. ನೇರ ಮತ್ತು ವಿಡಂಬನೆಯ ಮಾತುಗಳಿಂದ ಸ್ನೇಹಿತರನ್ನು ಪಡೆದಂತೆ ವಿರೋಧಿಸುವವರನ್ನು ಪಡೆದದ್ದು ಹೆಚ್ಚು.
ಆಳಕ್ಕಿಳಿಯದೆ ಸರಳವಾಗಿ ಅರ್ಥವಾಗದ ನೆಲದ ಮರೆಯ ನಿಧಾನದಂತಹ ವ್ಯಕ್ತಿತ್ವ - ಲೇಖಕ, ವಾಗ್ಮಿ, ಉತ್ತಮ ನಿರೂಪಕ, ಸಾಕ್ಷ್ಯಚಿತ್ರ ನಿರ್ಧೇಶಕ, ಸಂದರ್ಶಕ, ಆಕಾಶವಾಣಿ ಕಲಾವಿದ, ಕವಿ, ವಿಮರ್ಶಕ, ಅದ್ಭುತ ಸಾಂಸ್ಕೃತಿಕ ಸಂಘಟಕ, ರಂಗನಟ, ಹೀಗೆ ಹಲವಾರು ಪ್ರತಿಭೆಗಳನ್ನು ಮೇಳೈಸಿಕೊಂಡಿದ್ದು, ಎಲ್ಲದರಲ್ಲಿಯೂ ಹಿಡಿತ ಸಾಧಿಸಿದ್ದರೂ ಯಾವುದಾದರೂ ಕ್ಷೇತ್ರಕ್ಕೆ ಆದ್ಯತೆ ನೀಡಿ ಗಟ್ಟಿಗೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದೇ ವಿರಳ. ಅನೇಕ ಕವಿಗೋಷ್ಠಿಯಲ್ಲಿ, ಪತ್ರಿಕೆಗಳಲ್ಲಿ ಇವರ ಕವಿತೆಗಳು ಅಭಿವ್ಯಕ್ತವಾಗಿದ್ದರೂ ಕವನಸಂಕಲನ ಇಷ್ಟು ಕವನಗಳನ್ನು ಹೊಂದಿರುವ ಈ ಕವನ ಸಂಕಲನದಂತೆ ಇನ್ನೂ ಅನೇಕ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಪ್ರೊ. ಸಿದ್ದು ಯಾಪಲಪರವಿ ನೀಡಲಿ

-.ಡಾ.ಜಿ.ಬಿ.ಪಾಟೀಲ