Monday, September 10, 2012

ಎರಡು ದಶಕಗಳ ಶಿಕ್ಷಕ ವೃತ್ತಿಯ ನೆನಪುಗಳು.


          ಈ ಬಾರಿ ಶಿಕ್ಷಕ ದಿನಾಚರಣೆಯನ್ನು ಆಚರಿಸುವಾಗ ಶಿಕ್ಷಕನಾಗಿರಲಿಲ್ಲವೆ?  ಈ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.

          1989 ರಿಂದ 2010ರ ಜೂನ್ ತನಕ ನಿರಂತರ ಶಿಕ್ಷಕ ವೃತ್ತಿಯ ಪಯಣ ನಿಜವಾಗಲೂ ಸ್ಮರಣೀಯ.  2010 ಜೂನ್ 9ರಂದು ಆದ ಅಪಘಾತ,  ಮುರಿದ ಎಡಗೈ ಶಿಕ್ಷಕ ವೃತ್ತಿಗೆ ತಾತ್ಕಾಲಿಕ ತಡೆ ಒಡ್ಡಿತು.  ಹಲವಾರು ಕಾರಣಗಳಿಗೆ ಅವಕಾಶಗಳಿದ್ದರೂ ಮರಳಲು ಸಾಧ್ಯವಾಗಲಿಲ್ಲ.  ಆದರೆ, ವೃತ್ತಿಯ ಹಚ್ಚ ಹಸಿರು ನನ್ನಿಂದ ಮರೆಯಾಗಲು ಅಸಾಧ್ಯ.

          ಇಂಗ್ಲಿಷ್ ಎಂದರೆ ಭಯದ ವಾತಾವರಣದಲ್ಲಿದ್ದ ನನಗೆ 1981ರಲ್ಲಿ ಪ್ರವೇಶ ಪಡೆದ ಕರ್ನಾಟಕ ಕಾಲೇಜು ಧಾರವಾಡದ ವಾತಾವಣ ಹೊಸ ಭರವಸೆ ಮೂಡಿಸಿ ಭಯ ದೂರಾಗಿಸಿತು.  ಅಲ್ಲಿನ ಶಿಕ್ಷಕರು ಆದರ್ಶಪ್ರಾಯರಾದರು. ಡಾ: ಸಿದ್ಧಲಿಂಗ ಪಟ್ಟಣಶೆಟ್ಟಿ, ಇಂಗ್ಲಿಷ್ ವಿಭಾಗದ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಇಂಗ್ಲಿಷ್  ಮೇಜರ್ ವಿಷಯವಾಗಿ ತೆಗೆದುಕೊಳ್ಳಲು ಪ್ರೇರೆಪಿಸಿದರು. 

          ಆದರೆ ಅದಕ್ಕೆ ಅಗತ್ಯವಿರುವಷ್ಟು ಆಳವಾಗಿ ಓದಲು ಸಾಧ್ಯವಾಗದಿರಲು ಭಾಷಾ ಸಮಸ್ಯೆಯೇ ಕಾರಣ.  ಅಂದು ಸ್ನೇಹಿತರಾಗಿದ್ದ ಅರುಣ ಹಾನಗಲ್ಲ್, ಅನಿತಾರಾವ್ ಇಂಗ್ಲಿಷ್  ಮಾತನಾಡವ ಆತ್ಮವಿಶ್ವಾಸ ತುಂಬಿದರು.  ಆಗ ನಾನು ಇಂಗ್ಲಿಷ್  ಶಿಕ್ಷಕ ಆಗಬಹುದು ಎಂಬ ಭರವಸೆ ಮೂಡಿರಲಿಲ್ಲ.

          ಬದುಕಿಗೆ ಅದರದೇ ಆದ ತಿರುವುಗಳು ಇರುತ್ತವೆ.  ನಾವು ಬದುಕು ಕರೆದುಕೊಂಡು ಹೋಗುತ್ತೇವೆ.  ಅಲ್ಲಿಗೆ ಯಾಕೆ ಹೋಗುತ್ತೇವೆ ಎಂಬುದು ನಮಗೂ ಗೊತ್ತಿರುವುದಿಲ್ಲ. ನನ್ನ ಪಾಡು ಅದೇ ಆಯಿತು.  ಮನೆತನದ  ಅನಿರೀಕ್ಷಿತ ಸಮಸ್ಯೆಗಳ ಕಾರಣದಿಂದ ನೌಕರಿ ಹಿಡಿಯಲೇಬೇಕಿತ್ತು. ಎಂ.ಎ. ಧಾರವಾಡದಲ್ಲಿ ಅಸಾಧ್ಯ ವೆನಿಸಿದಾಗ ಧಾರವಾಡದಲ್ಲಿ ಭೇಟಿಯಾದ ಪ್ರೊ: ಪಿ.ಎಸ್. ರೆಡ್ಡಿ ಸರ್ ಜಗತ್ತಿನಲ್ಲಿ ಬೇಕಾದಷ್ಟು ವಿಶ್ವವಿದ್ಯಾಲಯಗಳಿವೆ, ಕೇವಲ ಧಾರವಾಡ ಒಂದೇ ಅಲ್ಲ ಎಂಬ ಮಾತು ಮುಂದೆ ಹೋಗಲು ಪ್ರೇತೆಪಿಸಿತು.

          ಎಂದೂ ನೋಡದ, ಕೇಳರಿಯದ ಕೆಡಗೆ ನನ್ನ ಪಯಣ ಸಾಗಿತು.  ಡಾ: ಸಿದ್ಧಲಿಂಗ ಪಟ್ಟಣಶೆಟ್ಟಿ ಸರ್ ಕೊಟ್ಟ ಚೀಟಿ ಹಿಡಿದು ಕೊಲ್ಲಾಪುರಕ್ಕೆ ಹೋಗಿ ಡಾ: ಶಾಂತಿನಾಧ ದೇಸಾಯಿಯವರನ್ನು ಕಂಡೆ.  ಅವರ ಕಧೆ, ಕಾದಂಬರಿಗಳನ್ನು  ಆಗಲೇ ಓದಿದ್ದೆ.  ಅವರು ಸಾಂಗ್ಲಿಯ ವಿಲ್ಲಿಂಗ್ಡನ್ ಕಾಲೇಜು ಸೇರಲು ತಿಳಿಸಿದಾಗ ಬೆಚ್ಚಿ ಬಿದ್ದೆ.  ಆಗ ನನಗೆ ಮರಾಠಿ, ಹಿಂದಿ ಭಾಷೆಗಳು ಬರುತ್ತಿರಲಿಲ್ಲ.  ಭಯ ಭೀತರಾಗಿ ಒಂಟಿಯಾಗಿ ಚಿಂತಿಸಿದೆ, ಹೋಗುವ ಅನಿವಾರ್ಯವಿತ್ತು.

          ವಿಲ್ಲಿಂಗ್ಡನ್ ಕಾಲೇಜು ಸೇರಿದೆ.  ಹೊಚ್ಚ ಹೊಸ ವಾತಾವರಣ ತಿಳಿಯದ ಮರಾಠಿ, ಧಾರವಾಡ ಎಂ.ಎ. ಕಷ್ಟಪಟ್ಟು ಎರಡು ವರ್ಷ ಪೂರೈಸಿದೆ.  ಒಳ್ಳೇ ಫಲಿತಾಂಶ ಬರಲಿಲ್ಲ.  54.5%ಗೆ ಮೀಸಲಾದೆ.  55% ಆಗಿದ್ದರೆ, ಸರಕಾರಿ ನೌಕರಿ ಸಿಗುತ್ತಿತ್ತು.  ಅದೃಷ್ಟ ಆಡಿದಂತೆ ಆಡಿದೆ.  ಅಮೆರಿಕನ್ ಸಾಹಿತ್ಯದಲ್ಲಿ ಮರು ಪರೀಕ್ಷೆ ತೆಗೆದುಕೊಳ್ಳುವ ಮೊದಲು ಆತ್ಮ ವಿಶ್ವಾಸ ಮೂಡಿಸಿಕೊಂಡು ವೃತ್ತಿಗೆ ಧುಮುಕಲು ತೀರ್ಮಾನಿಸಿದೆ. 

ಎಲ್. ಆರ್. ಮೂಲಿಪಾಟೀಲ್ ನಮಗೆ ಗೊತ್ತಿದ್ದ ಪೋಲಿಸ್  ಅಧಿಕಾರಿ ಅವರು ಚಿತ್ರದುರ್ಗದಲ್ಲಿ ಸಿ.ಪಿ.ಎ. ಆಗಿದ್ದರು.  ಅಲ್ಲಿನ ಡಿ. ಬೋರಪ್ಪನವರು ಸ್ಥಾಪಿಸಿದ  ಮಹಾರಾಜ ಹಾಗೂ ಮಹಾರಾಣಿ ಕಾಲೇಜುಗಳಲ್ಲಿ ಅರೆಕಾಲಿಕ ನೌಕರಿ ಕೊಡಿಸಿ ವಾಸ್ತವ, ಊಟಕ್ಕೆ ವ್ಯವಸ್ಥೆ ಮಾಡಿದರು.  ಚಿತ್ರದುರ್ಗದಲ್ಲಿ ಒಂದು ವರ್ಷ, ಗದುಗಿನ ಜೆ.ಡಿ.ಕಾಲೇಜಿನಲ್ಲಿ, ಮುಂಡರಗಿಯ ಕೆ.ಆರ್. ಬೆಲ್ಲದ ಕಾಲೇಜಿನಲ್ಲಿ,  ಅಂತಿಮವಾಗಿ ಫುಲ್ ಟೈಮ್ ಕೆ.ಎಲ್.ಇ. ಮಹಿಳಾ ಕಾಲೇಜಿನಲ್ಲಿ ಏಕಕಾಲಕ್ಕೆ ಕೆಲಸ ಮಾಡಿದೆ. 

          ಆಗಿದ್ದ ಛಲ, ಆತ್ಮವಿಶ್ವಾಸ, ಅನಿವಾರ್ಯತೆ ಹಾಗೂ ಪರಿಶ್ರಮವನ್ನು ನೆನಪಿಸಿಕೊಂಡರೆ ಬೆಳಗಾಗುತ್ತದೆ.  ಆಗ ನನಗೆ ಗದುಗಿನಲ್ಲಿ ಜನ ನನ್ನನ್ನು ಪ್ರೀತಿಯಿಂದ siddu yapalaparvi English lecturer of Gadag  Betageri. ಎನ್ನುತ್ತಿದ್ದರು.  ಅರೆಕಾಲಿಕ ವೃತ್ತಿ ನನ್ನ ಹೊಟ್ಟೆಯನ್ನು ತುಂಬಿ ಹೊಸ ಜಗತ್ತನ್ನು ತೋರಿಸಿತು.

           

 

 

No comments:

Post a Comment