ಆದದ್ದೆಲ್ಲಾ ಒಳ್ಳೆಯದಕ್ಕೇ ಆಗಿದೆ
ಆಗುತ್ತಿರುವುದೆಲ್ಲಾ ಒಳ್ಳೆಯದೇ ಆಗುತ್ತಿದೆ
ಆಗಲಿರುವುದು ಅದೂ ಒಳ್ಳೆಯದೇ ಆಗಲಿದೆ
ರೋಧಿಸಲು ನೀನೇನು ಕಳೆದುಕೊಂಡಿರುವೆ ?
ಕಳೆದುಕೊಳ್ಳಲು, ನೀನು ತಂದಿರುವುದಾದರೂ ಏನು ?
ನೀನೇನು ಪಡೆದಿದ್ದರೂ, ಅದನ್ನು ಇಲ್ಲಿಂದಲೇ ಪಡೆದಿರುವೆ
ಏನನ್ನು ನೀಡಿದ್ದರೂ ಅದನ್ನು ಇಲ್ಲಿಗೇ ನೀಡಿರುವೆ ?
ನಿನ್ನೆ ಬೇರಾರದ್ದೋ ಆಗಿದ್ದಿದ್ದು ಇಂದು ನಿನ್ನದಾಗಿದೆ.
ಮತ್ತೆ ನಾಳೆ ಮತ್ಯಾರದ್ದೋ ಆಗಲಿದೆ
ಪರಿವರ್ತನೆ ಜಗದ ನಿಯಮ
ನನ್ನ ನಂಬಿ ಕೆಟ್ಟವರಿಲ್ಲ.
ಹೀಗೆ ಹೇಳುವ ಕೃಷ್ಣನ ಮಾತುಗಳನ್ನು ನೂರೆಂಟು ಬಾರಿ ಓದಿದರೂ, ಓದಲೇ ಬೇಕೆನಿಸುತ್ತದೆ. ಪ್ರತಿ
ಓದಿನಲ್ಲೂ ಸಮಾಧಾನ ಸಿಕ್ಕುತ್ತದೆ. ಆದರೂ ನಾವು ನೆಮ್ಮದಿಯಿಂದ ಇಲ್ಲವಲ್ಲ ಏಕೆ ? ಎಂದನ್ನುಕೊಳ್ಳುತ್ತಲೇ
ಚಿಂತಿಸುತ್ತೇವೆ.
ಮಾತನಾಡುವಾಗ, ಬೇರೆಯವರು ತೊಂದರೆಯಲ್ಲಿದ್ದಾಗ, ಉಪದೇಶ ನೀಡುವಾಗ, ಹೀಗೆ ಹೇಳುತ್ತಲೇ
ಇರುತ್ತೇವೆ.
ಆದರೆ ಅಂತಹ ಸಂದರ್ಭ ನಮಗೆ ಬಂದಾಗ ನೆನಪು ಮಾಡಿಕೊಳ್ಳಬೇಕಾಗಿಲ್ಲ. ಅದು ತಾನೇ ತಾನಾಗಿ ನೆನಪಾಗಬೇಕಲ್ಲ .
೯ನೇ ಜೂನ್ ೨೦೧೦ ರಂದು ವೈಯಕ್ತಿಕ ಕೆಲಸಕ್ಕಾಗಿ ಬೆಂಗಳೂರಿಗೆ ಬರಬೇಕಾಗಿತ್ತು. ಅದಕ್ಕಾಗಿ
ಹಂಪಿ ಎಕ್ಸ್ ಪ್ರೆಸ್ ಗೆ ರಿಸರ್ವೇಷನ್ ಕೂಡ ಆಗಿತ್ತು. ಅನಿರೀಕ್ಷಿತವಾಗಿ ಸಚಿವ ಮಿತ್ರರಾದ ಶ್ರೀರಾಮುಲು
ಹುಬ್ಬಳ್ಳಿ ಇಂದ ವಿಮಾನಕ್ಕೆ ಒಟ್ಟಿಗೆ ಹೋಗೋಣವೆಂಬ ಒತ್ತಾಸೆಯನ್ನು ತಿರಸ್ಕರಿಸುವ ಮನಸ್ಸಾಗಲಿಲ್ಲ.
ಒಪ್ಪಿಕೊಂಡು ಹೊರಟೆ. ಗದಗ್ ನಿಂದ . ತುಂತುರು ಮಳೆ. ಮನದಲಿ ಏನೋ ದಾವಂತ.
ಅದಕ್ಕೆ ನೂರೆಂಟು ಕಾರಣಗಳು. ಮುಂದಿನ ಕಾರುಗಳಲ್ಲಿ ಸಚಿವರು ಹಾಗೂ ಅವರ ಹಿಂಬಾಲಕರು
ಹಿಂದೆ ಸ್ಕಾರ್‍ಫಿಯೋದಲ್ಲಿ. ಒಂಟಿ ಪಯಣ. ಮುಳಗುಂದ ನಾಕಾದಿಂದ ಫೋಟೋಗ್ರಾಫರ್ ಮಹೇಂದ್ರಕರ್
ಜೊತೆಗೂಡಿದ.
ಕಾರು ಹುಲಕೋಟಿ ದಾಟಿರಲಿಲ್ಲ. ವೇಗವಾಗಿ ಹೋಗುವುದು ಬೇಡವೆಂದೆ. ಇಲ್ಲ ಸಾರ್,
ಹುಬ್ಬಳ್ಳಿ ತಲುಪಿದ ಮೇಲೆ ಸಾಹೇಬರ ಹಿಂದೆ ಹೋಗದಿದ್ದರೆ ಸ್ಲೋ ಹೋಗ ಬೇಕಾಗುತ್ತದೆ ಅಂದ ಡ್ರೈವರ್ ಭದ್ರಿ.
ಸರಿ ಎಂದು ಸುಮ್ಮನಾದೆ. ಎಷ್ಟೇ ಆಗಲಿ, ಸ್ಟೇರಿಂಗ್ ಇರುವುದು ಅವನ ಕೈಲಿ ಅಲ್ಲವೇ ? ದುಂದೂರ್ ಕ್ರಾಸ್
ಬಳಿ ಯಾರದೋ ಸಣ್ಣ ತಪ್ಪಿನಿಂದ ತಕ್ಷಣ ನಿಂತ ಮಂತ್ರಿಗಳ ಕಾರಿಗೆ, ಭದ್ರಿ ಹೊಡೆಯುವುದನ್ನು ನೋಡುತ್ತಲೇ
ಅಯ್ಯೋ ಹೊಡೆದೆ ಮಾರಾಯ ಎಂದೆ. ಕ್ಷಣಾರ್ಧದಲ್ಲಿ ಎಲ್ಲವೂ ಮುಗಿತು. ನೋಡಿಕೊಂಡೆ, ಎಲ್ಲವೂ
ಸರಿಯಾಗಿತ್ತು. ಆದರೆ ಎಡ ಕೈ ಮಾತ್ರ ಫಾರ್ಸಿ ಹೊಡೆದಂತೆ ನಿಯಂತ್ರಣವಿಲ್ಲದೆ, ಗರಗರ ತಿರುಗತ್ತಲಿತ್ತು.
ಕೈ ಮುರಿತು ಮಾರಾಯ ಎಂದೆ. ನೋವು ಸಹಿಸಲಾಗಲಿಲ್ಲ. ಜೋರಾಗಿ ಚೀರಬೇಕೆನಿಸಿತು. ಸಹಿಸಿಕೊಂಡೆ.
ಎಷ್ಟೋ ಬಾರಿ ನಾನೇ ಹೇಳುತ್ತಿದ್ದ ಮೇಲಿನ ಕೃಷ್ಣನ ಮಾತುಗಳು ನೆನಪಾದವು. ಆಗುವುದೆಲ್ಲಾ ಒಳ್ಳೆಯದಕ್ಕೆ
ಸಧ್ಯ ಎಡದಕೈ ಮುರಿತು, ಬಲದಕೈ ಮುರಿಯಲಿಲ್ಲ ಎಂದು ಸಮಾಧಾನಿಸಿಕೊಂಡೆ. ಇಳಿದು ಎಲ್ಲವನ್ನೂ
ವಿವರಿಸಿ ಪ್ರಯಾಣ ರದ್ದು ಪಡಿಸಿ, ಸಚಿವರಿಗೆ ವಿಶಯ ತಿಳಿಸಿ ದು:ಖವನ್ನು ಸಹಿಸಿಕೊಂಡೆ. ಅತ್ತರೆ, ಚೀರಿದರೆ ಕೇಳುವರಾರು ?
ಡಾ:ಸಂಕನೂರು ಹತ್ತಿರ ಕರೆದುಕೊಂಡು ಹೋಗಲು ಹೇಳಿದೆ. ಮುರಿದಿದ್ದು ಖಾತ್ರಿಯಾತು. ಬೆಂಗಳೂರಿಗೆ
ಚಿಕಿತ್ಸೆಗಾಗಿ ತೆರಳುವ ನಿರ್ಧಾರ. ಯಮಯಾತನೆಯನ್ನು ಸಹಿಸಿಕೊಂಡೆ. ಅಳುತ್ತಾ ರೇಖಾ ಬಂದಳು. ಸಧ್ಯ
ಬದುಕಿದೆ. ತಲೆಗೆ ಪೆಟ್ಟಾಗಲಿಲ್ಲ. ಕಾಲು ಮುರಿಯಲಿಲ್ಲ. ರೈಲಿಗೆ ಹೋಗಿದ್ದರೆ ಚೆನ್ನಾಗಿತ್ತು. ಹೀಗೆ ಹತ್ತು
ಹಲವು ಭಾವಗಳು. ಆಗುವುದೆಲ್ಲಾ ಒಳ್ಳೆಯದಕ್ಕೆ ಅಂದುಕೊಂಡು ಮಾಧ್ಯಮ ಮಿತ್ರರ ಪ್ರಚಾರ ತಪ್ಪಿಸಿಕೊಂಡು
ಏನೂ ಆಗಿಲ್ಲ ಎಂದು ಸುದ್ದಿ ಮಾಡಿ ಡಾ: ಜಿ.ಬಿ. ಪಾಟೀಲ, ಗುಳಗೌಡರ್, ಡಾ: ವಿರೇಶ್, ಹಾಗೂ ಡಾ: ಸಂಕನೂರ್
ರವರೊಂದಿಗೆ ಚರ್ಚೆ ಮಾಡಿ, ಮನೆಗೆ ಬಂದೆ.
ಮಧ್ಯರಾತ್ರಿ ಅವ್ವ, ಅಪ್ಪ, ರತ್ನ ಬಂದಿದ್ದು ,ಆ ನೋವು ಈಗೆಲ್ಲಾ ಒಂದು ಕನಸು. ಮರುದಿನ
ಬೆಂಗಳೂರು ಪಯಣ. ರಾಮಪ್ರಿಯರವರ ಸೂಚನೆಯಂತೆ, ಜಯನಗರ ಸರ್ಕಾರಿ ಆಸ್ಪತ್ರೆಗೆ. ಯಾಕೋ ನಿರಾಶೆ.
ಇಷ್ಟೊಂದು ಅವಕಾಶಗಳು ಇರಬೇಕಾದಾಗ ಸರ್ಕಾರಿ ಆಸ್ಪತ್ರೆ ಏಕೆ ಎಂಬ ಆತಂಕ. ಸಣ್ಣ ಅಳುಕು. ಆದರೆ
ಶ್ರೀರಾಮುಲು ಹಾಗೂ ರಾಮಪ್ರಿಯರವರ ಕಾಳಜಿ ಗೊತ್ತಿದ್ದು, ಒಪ್ಪಿಕೊಂಡೆ. ಅದು ಈಗಲೂ ಸರಿ ಎನ್ನಿಸಿದೆ.
ಅವರ ಕಾಳಜಿ ಪೂರ್ವಕ ನಿರ್ಣಯ ಗೆದ್ದಿದೆ.
ಆಗಿದ್ದು ಸಣ್ಣ ಅಪಘಾತ, ಬಿದ್ದದ್ದು ದೊಡ್ಡ ಪೆಟ್ಟು. ಎಡಗೈಗೆ ಹ್ಯೂಮರಸ್ ಮಲ್ಟಿಪಲ್
ಫ್ರಾಕ್ಚರ್. ಮೂಳೆ ತುಂಡು ತುಂಡಾಗಿತ್ತು. ಸಹಿಸಿಕೊಂಡೆ.
ದಿನಾಂಕ ೧೩-೦೬-೨೦೧೦ ರಂದು ರವಿವಾರ ವಿಶೇಷ ಕಾಳಜಿಯೊಂದಿಗೆ, ಆಪರೇಷನ್
ಎಲ್ಲ ಯಾತನೆ ಸಹಿಸಿಕೊಂಡು ಕೇವಲ ವಿಶ್ವಾಸದಿಂದ, ಓ.ಟಿ.ಯಲ್ಲಿ ಕಣ್ಣುಮುಚ್ಚಿದೆ. ತುಂಬಾ ಮೇಜರ್
ಆದರೂ ನಾಲ್ಕು ತಾಸಿನ ಹೋರಾಟದಲ್ಲಿ ಗೆದ್ದೆ. ಬರುವ ಕರೆಗಳಿಗೆಲ್ಲಾ ಒಂದೇ ಉತ್ತರ, ಚೆನ್ನಾಗಿದ್ದೇನೆ.
ಈಗ ಆಸ್ಪತ್ರೆಯ ಅನುಭವಗಳು ಹೊಸಲೋಕವನ್ನು ತೋರಿಸಿವೆ. ಶ್ರೀರಾಮುಲು ಭೇಟಿ
ಹಿತೈಷಿ- ಸ್ನೇಹಿತರುಗಳ ಕಾಳಜಿ, ರೇಖಾಳ ಜವಾಬ್ದಾರಿ, ಕಕ್ಕಿಯ ಸಾಂತ್ವನ. ಪಾಲಕರ ಪ್ರೀತಿ, ಅಭಿ ,ಚಿನ್ನಿಯ
ನೆನಪು. ಕಾಲೇಜಿನಲ್ಲಿ ಅಂದುಕೊಂಡಿರಬಹುದಾದ ಸಂಗತಿಗಳನ್ನು ಮೆಲಕು ಹಾಕುತ್ತಾ ಇಪ್ಪತ್ತು ದಿನ ಕಳೆದೆ.
ಈಗ ಎಲ್ಲವೂ ಯಥಾಸ್ಥಿತಿ ಮುಂದೇನು ?
ಇನ್ನೆರಡು ತಿಂಗಳು ಕಡ್ಡಾಯ ರಜೆ. ಆಚೀಚೆ ಓಡಾಡುವ ಹಾಗಿಲ್ಲ. ಡಾ: ಕೆ. ನಾಗರಾಜ್,
ಡಾ: ಮಂಜುನಾಥ್, ಪಿ.ಎಸ್. ರಾಮಪ್ರಿಯ, ಆಸ್ಪತ್ರೆಯ ಸಿಬ್ಬಂದಿ ತೋರಿದ ಕಾಳಜಿಗೆ---- ಹೇಳುವುದು
ಕಷ್ಟ. ಇಲ್ಲಿನ ಪ್ರತಿಕ್ಷಣಗಳ ಅನುಭವಗಳನ್ನು ಖಂಡಿತ ದಾಖಲಿಸಬೇಕು.
ಒಂದೆರಡು ತಿಂಗಳು ರಜೆ ಹಾಕಿ, ಬಾಕಿ ಇದ್ದ, ಕೆಲಸಗಳನ್ನು ಮುಗಿಸಲೇ ಬೇಕೆಂಬ
ಇರಾದೆ ಇತ್ತು. ಅದನ್ನು ಸೂಚ್ಯವಾಗಿ ಗೆಳೆಯರ ಮುಂದೆ ಹೇಳಿ ಕೊಂಡಿದ್ದೆ. ನನ್ನ ಇಚ್ಛೆಯಂತೆ, ರಜೆ
ಏನೋ ಸಿಕ್ಕಿತು. ಸಿಕ್ಕ ರೀತಿ ಮಾತ್ರ ತುಂಬಾ ಭಿನ್ನ. ಈ ರೀತಿ ಅಂದುಕೊಂಡಿರಲಿಲ್ಲ. ಗಟ್ಟಿಯಾಗಿ ಉಳಿದ
ಕಾಲು, ತಲೆ ಅಂಗಾಂಗಗಳಿಗಾಗಿ ಖುಷಿಯಾಗಿದೆ. ಕೆಲವು ತಿಂಗಳುಗಳಲ್ಲಿ ಕೈ ಮೊದಲಿನಂತಾಗುತ್ತದೆ.
ರಜೆ ಸಿಕ್ಕಿದೆ. ಸ್ವಲ್ಪ ಸಜೆಯೊಂದಿಗೆ. ಅದೇ ಕೃಷ್ಣನ ಮಾತುಗಳು ಆದದ್ದೆಲ್ಲಾ ಒಳ್ಳೆಯದಕ್ಕ ಆಗಿದೆ.
ನೋವು ಸಹಿಸಿಕೊಂಡು ಸಣ್ಣ ಗೆಲುವು ಸಾಧಿಸಿದ್ದೇನೆ. ಮತ್ತೆ, ಉಳಿದ ಅನುಭವಗಳು ನಿಮ್ಮೊಂದಿಗೆ-----
No comments:
Post a Comment