Saturday, April 14, 2018

ಮುಗ್ಧ ಹುಡುಗಿ ಹಾಗೂ ದೇಸಿಯತೆ

*ಮುಗ್ಧ ಹುಡುಗಿ ಹಾಗೂ ದೇಸಿಯತೆ*

ಕರ್ನಾಟಕದ ಆಕ್ಸ್‌ಫರ್ಡ್ ಎನಿಸಿಕೊಂಡಿದ್ದ ಕರ್ನಾಟಕ ಕಾಲೇಜು ಅನೇಕಾನೇಕ ಪ್ರತಿಭಾವಂತರನ್ನು ಸೃಷ್ಟಿಸಿದೆ.

ಹಳ್ಳಿಯಿಂದ ಬಂದವರು, ಪ್ಯಾಟಿ ಹುಡುಗರು, ಇಂಗ್ಲಿಷ್ ಬರದವರು, ಬಂದವರು ಹೀಗೆ ಎಲ್ಲರನ್ನೂ ಸಹಿಸಿಕೊಂಡು ಬೆಳೆಸುತ್ತಿತ್ತು.

ಬಹುಪಾಲು ಕಲಿಯುವ ಛಲ ಇಟ್ಟುಕೊಂಡು ಬರುತ್ತಿದ್ದ ಹಳ್ಳಿ ಹುಡುಗರು ಪರಿಶ್ರಮದಿಂದ ಮೇಲೇರುತ್ತಿದ್ದರು.

ಲಂಗ-ದಾವಣಿ, ಚುಡಿ, ಜೀನ್ಸ್ ಹಾಗೂ ಸೀರೆಯನ್ನು ಉಟ್ಟುಕೊಂಡು ಬರುತ್ತಿದ್ದ ಹುಡುಗಿಯರ ದಂಡೇ ಇರುತ್ತಿತ್ತು.
ಅವರ ಕಡೆ ಕಣ್ಣೆತ್ತಿ ನೋಡುವ ಧೈರ್ಯ ಬರುತ್ತಿರಲಿಲ್ಲ.
ಮಾತುಕತೆ, ಪ್ರೀತಿ ಪ್ರೇಮ ದೂರದ ಮಾತು.

ಅಂತಹ ಸಂಕೋಚದ ಕಾಲದಲ್ಲಿ ಈ ಮುಗ್ಧ  ಹುಡುಗಿಯ ಮುಖ ಹೇಗೆ ನೆನಪಾದೀತು?

ಈಗಿನ ಅವತಾರ, ಧೈರ್ಯ, ಯಶಸ್ಸು, ಮುಕ್ತತೆಯನ್ನು ನೋಡಿದರೆ ಥ್ರಿಲ್ ಆಗುತ್ತೆ.

ಒಂದು ಕಾಲದ ಆ ಅಮಾಯಕ ಹುಡುಗಿಯೇ ಈಗಿನ ದೂರದರ್ಶನದ ಹಿರಿಯ ಅಧಿಕಾರಿ, ದಿಟ್ಟ ಮಹಿಳೆ, ಕವಿ ನಿರ್ಮಲಾ ಎಲಿಗಾರ.

ಆಗ ನಾನೂ ಹಾಗೆ ಇದ್ದೆ. ಆ ಅಮಾಯಕ ಮುಗ್ಧತೆ ಈಗ ಹುಡುಕುವುದು ಕಷ್ಟ. ಆದರೆ ಒಳಗೊಳಗೆ ಸಣ್ಣ ಸಂಕೋಚ ಇದ್ದೇ ಇದೆ.

ನಿರ್ಮಲಾ ಎಲಿಗಾರ ಸಾಧನೆ ಅನುಕರಣೀಯ. ಪ್ರಸಾರ ಭಾರತಿ ಎಂಬ ದೈತ್ಯ ಇಲಾಖೆಯ ಸೂಕ್ಷ್ಮ ವಾತಾವರಣಲ್ಲಿ ಸಿಡಿದೇಳುವುದು, ಬೆಳೆಯುವುದು ತುಂಬಾ ಕಠಿಣ.

ಒಳಕೋಣೆಯಲಿ ಕುಳಿತು, ಹೊರ ಜಗದ ಜನರ ಬದುಕನ್ನು ಅಲುಗಾಡಿಸುವ ತಾಕತ್ತು ಮಾಧ್ಯಮಕ್ಕಿದೆ.

ಸುದ್ದಿಯಾಗುವ ತವಕದಲಿ ಹಪಹಪಿಸುವ ಸಾರ್ವಜನಿಕ ಬದುಕಿನ ಜನರ ದೌರ್ಬಲ್ಯಗಳನ್ನು ಹಿಡಿದು ಹಡೆಮುರಿಗೆ ಕಟ್ಟುವ ವಿಚಿತ್ರ ಕ್ಷೇತ್ರವಿದು.

ಬಹುಪಾಲು ವಿಐಪಿಗಳಿಗೆ ಮಾಧ್ಯಮವೆಂದರೆ ಭಯ-ಭಕ್ತಿ.
ತೋರಿಸುವ, ತೋರಿಸಬಾರದ ಸಂಗತಿಗಳನ್ನು ಕಾಪಾಡುವ ಕೇಂದ್ರ.

ಉತ್ತರ ಕರ್ನಾಟಕದ ದೇಸಿಯ ಗಟ್ಟಿತನದ ನಿರ್ಮಲಾ ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ದಕ್ಕಿಸಿಕೊಂಡು ಬೆಳೆದಿದ್ದಾರೆ.
ಕೇವಲ ಅಧಿಕಾರದ ಕುರ್ಚಿ ಹಿಡಿದಿಲ್ಲ. ಅಧಿಕಾರದಾಚೆಗಿನ ಚಿಂತನಾ ಲಹರಿಯನ್ನು ಬೆಳೆಸಿಕೊಂಡಿದ್ದಾರೆ.

ಕಾಲ ಮಾಗಿದಂತೆ, ಕೊಂಚ ವಯಸ್ಸಾದಂತೆ ಧೈರ್ಯ ಪುಟಿದೇಳುತ್ತದೆ. ಪುಟಿದೇಳಲೇಬೇಕು.

ಪ್ರತಿ ಬಾರಿಯ ಭೇಟಿಯಲ್ಲೂ ಆ ಧೈರ್ಯವನ್ನು, ಮುಕ್ತತೆಯನ್ನು ನಾ ಅನುಭವಿಸುತ್ತೇನೆ.

ಗಂಡು-ಹೆಣ್ಣಿನ ಸಂಬಂಧ, ಸಾಂಸ್ಕೃತಿಕ ಲೋಕದ ಮುಖವಾಡಗಳು, ಓಲೈಸುವ ನೆಪದಲಿ ಪಟಾಯಿಸುವ ತವಕಗಳು. ಗಳಿಸುವ ಅನುಕಂಪಗಳು. ಒಂದಾ, ಎರಡಾ ಇನ್ನೂ ಏನೇನೋ. ಮಾತಾಡಿ ನಕ್ಕಿದ್ದೋ ನಕ್ಕಿದ್ದು.

*I'm not happy and comfortable with my wife* ಎಂಬ ವರಾತ ತೆಗೆದು ಹುಡುಗಿಯರ ಅನುಕಂಪ ಗಳಿಸುವ, ಸಿದ್ಧಾಂತ, ಸಾಹಿತ್ಯ, ಸಂಸ್ಕೃತಿಯ ನೆಪದಲಿ ಶಬ್ದ ಸೆಳೆತದಲಿ ಆಟ ಆಡಿ ಮಜಾ ಉಡಾಯಿಸುವ ಸಂಪನ್ನರ ಗುಣಗಾನ ತಮಾಷೆಯಿಂದ ಸಾಗಿಯೇ ಇತ್ತು.

ಇಂತವರ ಮಧ್ಯೆ ಹೆಣ್ಣು ಗಟ್ಟಿ ವ್ಯಕ್ತಿತ್ವ ಬೆಳೆಸಿಕೊಂಡು , ಚರಿತ್ರೆ-ಚಾರಿತ್ರ್ಯ ಉಳಿಸಿಕೊಂಡು ಬೆಳೆಯುವ ಅಗತ್ಯವನ್ನು ವರ್ಣಿಸುವ ಬಗೆ ಖುಷಿ ಎನಿಸಿತು.

ಯುರೋಪ್ ಹಾಗೂ ಅಮೇರಿಕ ಸುತ್ತಾಟದ ಅನುಭವ, ಅಲ್ಲಿ ಜನ ಅನುಭವಿಸುವ ಜೀವನೋತ್ಸಾಹ.

ಬದುಕನು ಸಂಭ್ರಮಿಸುವ ಬಗೆ ನಾನು ವಿವರಿಸುವ Joyful living ಗೆ ತಳುಕು ಹಾಕಿ, ವಯಸ್ಸು ಮುಚ್ಚುವ ಉಡುಗೆ,ತೊಡುಗೆ, ಟಿಂಕರಿಂಗ್-ಕಲರಿಂಗ್ ಕುರಿತೂ ನಮ್ಮನ್ನು ನಾವೇ ಚುಡಾಯಿಸಿಕೊಂಡು ಖುಷಿ ಪಟ್ಟ ಸಂಭ್ರಮ.

ಸ್ವಯಂ ಮರುಕದಿಂದ ವಯಸ್ಸಾದಂತೆ ಹೊರಬರುವ ಅನಿವಾರ್ಯತೆ.

ನಿರ್ಮಲಾ ವಿವರಿಸಿದ ಮುಕ್ತ ತೂಕಬದ್ಧ, ವಾಸ್ತವದ ಮಾತುಗಳ ರಸಗವಳ, ಪ್ರೀತಿಯಿಂದ ತಂದಿದ್ದ ಮನೆ ಚಪಾತಿ ತಿಂದು ಅಷ್ಟೇ ಖುಷಿಯಿಂದ ಕಾಲೇಜಿನ ಮುಗ್ಧ ದಿನಗಳ‌ ನಮ್ಮನ್ನು ಮನದಲ್ಲಿ ಮರುಸ್ಥಾಪಿಸಿಕೊಂಡು ಹೊರ ಬಂದಾಗ ಬಾನಲಿ ರವಿ ನಸು ನಗುತ್ತಿದ್ದ.

*Congratulations for your achievement Nirmala Yaligar*

-----ಸಿದ್ದು ಯಾಪಲಪರವಿ.

No comments:

Post a Comment