Tuesday, January 30, 2018

ಬಾ ಮನದಾಳದಿ ಜೋಪಾನವಾಗಿರಲು

*ಬಾ ಮನದಾಳದಿ ಜೋಪಾನವಾಗಿರಲು*

ಹೊಳೆವ ಕಂಗಳು ಹಿತವಾದ ನೋಟ
ಮುಗಿಯದ 'ಸವಿ' ಮಾತುಗಳು
ಅಗೋಚರ ಸೆಳೆತ
ಬಿದಿಗೆ ಚಂದ್ರನ ಬೆಳದಿಂಗಳು

ಅವ್ವನ ಅಕ್ಕರೆ
ಮಗಳ ಮಮತೆ
ಸಂಗಾತಿಯ ಸಂಭ್ರಮ
ಎಂದೋ ಎಲ್ಲೋ
ಕಳೆದು ಹೋದ ಮನದನ್ನೆ
ಸಿಕ್ಕ ಹರುಷ

ಸೌಂದರ್ಯ ರಾಶಿಯಲಡಗಿದ
ಸ್ನಿಗ್ದ ನಗುವಿನಲೆಗಳ ಜುಳು ಜುಳು ನಿನಾದ
ನೋಡುವ ನೋಟ ಕೀಳಲಾಗದ ಜಡಪಡಿಕೆ
ಹೇಳಲಾಗದ ಬಳಲಿಕೆ

ಒಮ್ಮೆ ಜೋರಾಗಿ ಕೂಗಿ ಹೇಳುವಾಸೆ
ಆದರೆ ಕಳೆದುಕೊಂಡರೆ ಹೇಗೆ ಎಂಬ ಭಯ

ಹೇಳಲಾರೆ ಏನನ್ನೂ ಕೇಳಲಾರೆ ನೀ
ಒಲಿಯುವತನಕ
ಮೌನದಿ ನಿನ್ನ ಹೃದಯದಲಿ
ಜೋಪಾನವಾಗಿ ಅಡಗಿ
ಅವಿತಿರುವೆ ಕಣ್ಣಿಗೆ ಕಾಣದ ಹಾಗೆ

ಕೊಡಲು ಏನೂ ಇಲ್ಲ ಪ್ರೀತಿಯ ಬಿಟ್ಟು
ಈಗ
ನಾ ವನವಾಸಿ ರಾಮ ಕೇವಲ
ಹನುಮನಾಲಿಂಗನವ ಬಿಟ್ಟು

ಬಿಗಿದಪ್ಪಿ ಮುದ್ದು ಮಾಡಿ ರಮಿಸಿ
ಸಂತೈಸಿ ಸಂತಸವ
ಹಂಚಿ ಹಗುರಾಗಬಲ್ಲೆ
ಆದರೆ ಈಗ ಅದಕೂ ಒಂದು
ಅಲ್ಪ ವಿರಾಮ !

ಸಾಗರದಾಚೆ ಬೆಟ್ಟದ ಮೇಲಿರುವ
ಗಮ್ಯ
ತಲುಪುವತನಕ ಮನದ ಸುತ್ತಲೂ
ನಿಯಂತ್ರಣದ ಕೋಟಿ ಬೇಲಿ
ತುಡುಗರು ನುಗ್ಗದ ಹಾಗೆ !!

ಕಾಯುವೆ ಕಾಲ ಮಾಗಿ
ಹಣ್ಣಾಗುವತನಕ
ಕಣ್ಣ ರೆಪ್ಪೆಯ ಪಿಳುಕಿಸದೇ

ಅಲ್ಲಿಯತನಕ ಬಾ ಮನದಾಳದಲಿ
ಜೋಪಾನವಾಗಿರಲು !!!

---ಸಿದ್ದು ಯಾಪಲಪರವಿ

No comments:

Post a Comment