Saturday, January 13, 2018

ನಿತ್ಯವೂ ಹಬ್ಬ-ಹರಿದಿನ

*ನಿತ್ಯವೂ ಹಬ್ಬ-ಹರಿದಿನ*

ಜೀವಪಯಣದಲಿ ಅಸಂಖ್ಯ
ಹಬ್ಬಗಳು ಆಚರಿಸುವ ತಾಕತ್ತಿರಲು ನಿತ್ಯವೂ ಸಡಗರ-ಸಂಭ್ರಮ

ಇಲ್ಲದಿರೆ ಇಲ್ಲಿ ಎಲ್ಲವೂ
ಖಾಲಿ
ಖಾಲಿ

ಸುಖವಿರಲು ಸಡಗರದಿ ನಡೆ
ದುಃಖವಿರಲು ಮರೆಯಲು ಓಡು
ಓಡುತ ಓಡುತ್ತಾ ಓಡುವುದೊಂದೇ
ನಿನ್ನ ಪರಮ ಗುರಿ

ಬದುಕು ಯಾರಿಗೂ ಕಾಯದೇ
ಸಾಗುತಿರೆ ಕಾಯುವದಾದರೂ
ಯಾರಿಗೆ

ಸಾಗಲೇಬೇಕು ಸರಿಕಂಡ ಹಾದಿಯಲಿ
ಸಪ್ತ ಸ್ವರಗಳ ನಿನಾದದಲಿ ನಿಧಾನದಿ...

ನಾವು ಕೇವಲ ನಮಗಾಗಿ

ತಾಳ ತಪ್ಪದೆ ಬಾಳು ಬೀಳದ
ಹಾಗೆ
ಜೋಲಿ ಹಿಡಿದು ಜ್ವಾಕಿಯಿಂದ
ಜೀಕುವ
ಈ ಜೀವ ಜೋಕಾಲಿ

ಇರುವ ಸಡಗರ ಹಿಡಿದು
ಬರುವ ಸಂಭ್ರಮ ನೆನೆದು
ಬರದಿರೆ ಕೊರಗಿ ನಲುಗದೆ
ನಸುನಗುತ ಸಾಗೋಣ

ಇದು ದೇವನೊಲುಮೆಯಾಟ
ಇಲ್ಲಿ ನಿತ್ಯವೂ ಹಬ್ಬ-ಹರಿದಿನ

ಉಸಿರ ಹಸಿರಲಿ ಮೈಯ ಬಿಸಿಯಲಿ
ಅಡಗಿರುವ ಬಿಸುಪ ಹಸನದಿ
ಕಾಪಿಟ್ಟು ಕಾಲ ಕಳೆಯುವ

ಕಾಲ ಕಾಯುವುದಿಲ್ಲ ಯಾರಿಗೂ
ನನಗೂ ನಮಗೂ ನಿನಗೂ

ಇಂದು ಸಂಕ್ರಮಣ ನಾಳೆ
ಉಗಾದಿ ನಾಡಿದ್ದಿ ದೀಪಾವಳಿ
ಮತ್ತದೇ ಹೋಳಿಗೆ ಹುಗ್ಗಿ

ಬರೀ ಜೋಳಿಗೆ ಈ ದುಡಿವ
ಕೈಗಳಿಗೆ ನಸುನಗುತ ಅವನ
ಬೇಡುತ ಹಾಕಿದ ಸವಿಯುತ
ನಿತ್ಯವೂ ಸಂಭ್ರಮಿಸೋಣ.

----ಸಿದ್ದು ಯಾಪಲಪರವಿ.

No comments:

Post a Comment