Thursday, December 21, 2017

ಹಟ ಬೇಡ ನಾ ಕಾಲಜ್ಞಾನಿ‌ ಅಲ್ಲ

*ಲವ್ ಕಾಲ*

*ಹಟ ಬೇಡ ನಾ ಕಾಲಜ್ಞಾನಿ ಅಲ್ಲ*

ಈ ಪ್ರೀತಿಯ ವಾಂಛೆ. ಏನೇನು ಹೇಳೋಕೆ ಬರೋದಿಲ್ಲ.

ಉಸಿರಿನ ಹಾಗೆ ಪ್ರೀತಿಸುವ ಹುಚ್ಚು.
ಒಮ್ಮೊಮ್ಮೆ ಇನ್ನಿಲ್ಲದ ಕೋಪ-ತಾಪ-ಜಗಳ. ಅದೂ ಬಹಳ ಕಾಲ ಇರುವುದಿಲ್ಲ .

ಎಲ್ಲಿ ನೊಂದುಕೊಂಡು ಕೊರಗುತ್ತೀಯಾ ಎಂಬ ಆತಂಕ. ಮತ್ತದೇ ಉತ್ಕಟತೆ.

ಕಾಳಜಿಯಿಂದ ಹೇಳಿದ ಮಾತುಗಳನ್ನು ಕೇಳದ ನಿನ್ನ ಹಟಮಾರಿತನದಿಂದ ರೋಸಿ ಹೋಗಿದ್ದೇನೆ .

ನನ್ನ ಉದ್ದೇಶ ಅರ್ಥ ಮಾಡಿಕೊಳ್ಳಲಾಗದ ನಿನ್ನ ಅಪಾರ್ಥ ಮಾಡಿಕೊಳ್ಳುವ ಇಬ್ಬಂದಿತನ, ಯಾರದೋ ಮುಲಾಜಿಗೆ ಬೀಳುವ ಅಮಾಯಕತೆ , ನಂಬಿ ಒದ್ದಾಡುವ ಅಸಹಾಯಕತೆಗೆ ಏನು ಹೇಳಲಿ ?

ಆದರೂ ತುಂಬಾ ನಿಷ್ಟುರವಾಗಿ ಮಾತನಾಡಿ ನನ್ನ ಪ್ರೀತಿಯ ಪಣಕ್ಕಿಟ್ಟರೂ ಲೆಕ್ಕಿಸದ ನಿನ್ನ ಧೋರಣೆಗೆ ಕಾರಣ ತಿಳಿಯುತ್ತಿಲ್ಲ.

ಅನಾರೋಗ್ಯ , ಅನೇಕ ಒತ್ತಡಗಳ ನಡುವೆ ಮುಖವಾಡ ಹಾಕಿಕೊಂಡ ಸೋಗಲಾಡಿಯೊಬ್ಬ ಕರೆದ ಕಾರ್ಯಕ್ರಮಕ್ಕೆ ನಿನ್ನನ್ನು ಕಳಿಸುವ ಮನಸ್ಸಿರಲಿಲ್ಲ ಆದರೂ ನೀನು ಹೋಗಲೇಬೇಕು ಅಂದಾಗ ಕಂಗಾಲಾದೆ.

ಬುದ್ಧಿ ಸಂಯಮ ಕಳೆದುಕೊಂಡು , ಮನಸ್ಸು ವ್ಯಗ್ರವಾಯಿತು.

ಮನಸು ಮುರಿದುಕೊಳ್ಳುವುದು ದೊಡ್ಡದಲ್ಲ , ನಿನ್ನ ಅಜ್ಞಾನಕೆ ಮರುಗಿ ನಾನೇ ಸಹಿಸಿಕೊಂಡೆ.

ಪ್ರೀತಿ ಎಲ್ಲವನ್ನೂ ಸಹಿಸುತ್ತದೆ ಎಂಬುದ ನಿರೂಪಿಸುವ ಹುಚ್ಚನಂತೆ !

ಗಾಢವಾಗಿ ಪ್ರೀತಿಸುವ ವ್ಯಕ್ತಿಗೆ ಅತೀಂದ್ರಿಯ ಶಕ್ತಿಯನ್ನು ಭಗವಂತ ಕರುಣಿಸಿರುತ್ತಾನೆ.

ಆ ಕಾಳಜಿ ಇಟ್ಟುಕೊಂಡು ಹೇಳಿದ ಮಾತುಗಳನ್ನು ನೀನು ಲೆಕ್ಕಿಸಲೇ ಇದ್ದಾಗ ಮರುಕಪಟ್ಟೆ.

ನಾನು ಕಾಲಜ್ಞಾನಿಯಲ್ಲ ಆದರೂ ನಿನಗಿಂತ ಹೆಚ್ಚು ಲೋಕಜ್ಞಾನ ಇದೆ.

ಎದುರಿಗೆ ಸುಂದರವಾಗಿ ಮಾತನಾಡಿ ಮುಖ ನೋಡಿ ಹಲ್ಲು ಕಿರಿಯುವ , ಮಾತಲ್ಲಿ ಮರ ಹತ್ತಿಸಿ ಮೋಜು ನೋಡುವ ಹಕನಾಕುಗಳ ಹರಾಮಿತನ ನಿನಗೆ ಬೇಗ ತಿಳಿದಷ್ಟು ಕ್ಷೇಮ.

ಯಾರನ್ನೂ ಬೆಳೆಸದ , ಬೆಳೆಯುವುದನ್ನು ಸಹಿಸದ ಜನರ ಮಧ್ಯೆ ನಾವು ನಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು.

*ಕಾಲ ಹಾಗೂ ಪ್ರೀತಿಸುವ ವ್ಯಕ್ತಿಗಳು* ಮಾಯವಾಗುವ ಮುನ್ನ ಎಚ್ಚತ್ತುಕೊಂಡು ಜೊಳ್ಳ ತೂರಿ , ಗಟ್ಟಿ ಕಾಳ ಕಾಪಾಡಿಕೊಳ್ಳಬೇಕು.

ಇಲ್ಲದಿರೆ ಪ್ರೀತಿಯ *ಬರದಲಿ* ಬಾಡಬೇಕಾದೀತು.

ಪ್ರೀತಿಸೌಧ ಒಮ್ಮೆಲೆ  ಕುಸಿಯವುದು ಬೇಡ ಎಂಬ ಕಾರಣಕ್ಕೆ ಎಲ್ಲ ಸಹಿಸಿಕೊಂಡಿರುವೆ.

ನನ್ನ ಸಹನೆ ದೌರ್ಬಲ್ಯವಲ್ಲ. ದಿವ್ಯಶಕ್ತಿ.

ನೀನೂ ಪರಿವರ್ತನೆಯಾಗುವೆ ಎಂಬ ಭರವಸೆಯಿಂದ ಕಾಯುತ್ತೇನೆ.

ಕರುಳು ಕತ್ತರಿಸುವ ತನಕ.

ಮುಖವಾಡ ನೋಡದೇ ಮುಖ ನೋಡು.
ಮರುಳ ಮಾತು ಕೇಳದೇ ಮನಸು ನೋಡು.

---ಸಿದ್ದು ಯಾಪಲಪರವಿ.

No comments:

Post a Comment