Monday, August 21, 2017

ಅಕ್ಷರ ಸಖಿ

ಅಕ್ಷರ ಸಖಿ

ನಗುಮೊಗದ ನನ್ನ ಗೌರಿ ನಿತ್ಯ ಕಾದಿಹಳು
ಅಲ್ಲಿ ನನಗಾಗಿ

ಮೊದಲ ನೋಟದಲಿ ಕರಗಿಸಿತು 
ಕೈಕಟ್ಟಿ ನಿಂತ ನಿನ್ನ ಭಾವ ಶೈಲಿ

ಇರಲಿ ಬಿಡು ಯಾರಿದ್ದರೆ ನನಗೇನೆಂಬ
ಬಿಗುಮಾನದಿ ಬಿಗಿಯಾಗಿದ್ದೆ

ಮುಂದೊಂದು ದಿನ ಉದುರಿದ ಮೇಘಸಂದೇಶ
ಮತ್ತೆ ಕೆರಳಿಸಿ ಅರಳಿಸಿತು ಸುಪ್ತ ಮನದಾಸೆಯ

ಬೇಕೆನಿಸದಾಸೆಗೆ ಇನ್ನಿಲ್ಲದ ಸಹಸ್ಪಂದನೆಗೆ ಜೀವಪಡೆದು ಬಸಿರಾದ ಪದಗಳು

ಒಲ್ಲೆನೆಂಬ ಹುಸಿ ಮುನಿಸು ಒಳಗೆಲ್ಲ
ಬೇಕೇಂಬ ನಿನ್ನ ಕಳ್ಳಾಟವ ಕದಿಯುವ ಚಿತ್ತ

ಬೇಕೇ ಬೇಕನಗೆ ಈ ನಗೆ ಎಂಬ ಸಾತ್ವಿಕ ಹಟಕೆ
ಕೊಂಚ ಸಡಿಲಿದ ಕದಲಿದ ಮನಕೆ
ಕಾವ್ಯ ಸರ್ಪಗಾವಲು

ದೇವ ಕೇಳಿದ ಮನದಳಿಲು ತಥಾಸ್ತು
ಎಂದಪರಿಗೆ ಇನ್ನಿಲ್ಲದ ಸಂಭ್ರಮ

ಮುಂದೆ ಮಾತು-ಕಥೆ-ಚಿಂತನ-ಮಂಥನ
ಒಂದಿಷ್ಟು ಹುಸಿ ಮುನಿಸು

ಮನದಲಿ ಅರಳಿದ ಸಾವಿರ ಕನಸುಗಳಿಗೆ
ಬಣ್ಣ ತುಂಬುವ ಸಡಗರ

ಮನದಲಿ ತಿಂದ ಮಂಡಿಗೆಗೆ ಲೆಕ್ಕ
ಕೊಡುವವರು ಯಾರು ?

ಒಣ ಮೊಂಡಾಟಕೆ ನಿಧಾನದಿ
ಅರಳಿದ ಹೂಮನ

ಅವನ ಲೀಲಾ ವಿನೋದದಿ ಒಲಿದ
ಸೌಂದರ್ಯ ಸಿರಿಯ ಒಲ್ಲೆಯೆನದೆ
ಬಿಗಿದಪ್ಪಿದ ತಲ್ಲಣ

ಈಗ ನಾ ನೀ ನೀ ನಾನಾಗಿ ಹೊಸ
ತಾನಗಳ ಗಾನಸುಧೆ

ನೀ ಎಲ್ಲೇ ಇರು ನನ್ನ ಉಸಿರ ಬಸಿರಲಿ
ಕಣ್ಣ ಮಿಂಚ ಸಂಚಲಿ

ಎದೆಯ ಬಡಿತದ ಮಿಡಿತದಿ ಅಡಗಿ
ನಸುನಗುವ ಮಾಟಗಾತಿ

ಓಡಿ ಬಂದು ಬಿಗಿದಪ್ಪಿ ಮುತ್ತಿನ ಮಳೆಯಲಿ
ತೊಯ್ದು ತೆಪ್ಪಡಿಯಾಗಿ
ಮಡಿಲಲಿ ಕರಗುವಾಸೆ

ಬಾ ನನ್ನ ಮನದನ್ನೆ ಬಾ ಅರೆಹುಚ್ಚನ
ಅರಗಿಣಿ

ಒಮ್ಮೆ ನಶಿಸಿ ಹೋಗುವ ನಶ್ವರ ಬದುಕಲಿ
ಅಕ್ಷರ ಕಾವ್ಯಸಿರಿಯ ಸರಮಾಲೆ ಪೋಣಿಸಿ
ಶಿವನ ಕೊರಳಲಿ ನಳನಳಿಸುವ
ಬಾ ಬಾ ಭಾವಸಖಿ.

---ಸಿದ್ದು ಯಾಪಲಪರವಿ

No comments:

Post a Comment