ಒಮ್ಮೆ ಎಲ್ಲವೂ ಸಾಕು ಅನಿಸುವದ್ಯಾಕೋ ?
ಹಗಲಿರುಳು ದುಡಿಮೆ , ಓಡಾಟ ಲೆಕ್ಕವಿಲ್ಲದಷ್ಟು ಕನಸುಗಳು , ನೂರೆಂಟು ಯೋಜನೆಗಳು. ಹೆಸರು , ಹಣ , ಕೀರ್ತಿ , ಗೆಳೆಯರು , ಸಂಗಾತಿಗಳು , ಅಂತರಂಗ ಬಹಿರಂಗದ ರಹಸ್ಯಗಳು. ಕಣ್ಣಾ-ಮುಚ್ಚಾಲೆ ಆಟಗಳು. ಹೇಳಲಾಗದ ಬಯಕೆಗಳು.
ಏನೇನೋ ಗಿಮಿಕ್ಕುಗಳು, ಅನರ್ಥ ಪ್ರಯತ್ನಗಳು. ತುಂಬಾ ದೂರ ನಿರಂತರ ಕ್ರಮಿಸುವ ವಾಹನ ಗಕ್ಕನೇ ನಿಂತಾಗ...
ಏಕೆ ಹೀಗೆ ? ಯಾರಿಗಾಗಿ ಈ ಹಾರಾಟ ? ಎಂಬ ಪ್ರಶ್ನೆಗಳು ನಮ್ಮನ್ನು ಕಾಡಲಾರಂಭಿಸುತ್ತವೆ.
ಒಂದು ಕ್ಷಣ ಎಲ್ಲವೂ ಬೇಡವೆನಿಸಿಬಿಡಬೇಕಾ !
ಈ ಖಾಲಿತನವನ್ನು ಆಗಾಗ ಅನುಭವಿಸಿ ಮುಂದೆ ಸಾಗುವ ಅನಿವಾರ್ಯತೆ.
ಏನಾದ್ರೂ ಸಾಧಿಸಬೇಕು ಅನ್ನೋ ಕಾರಣಕ್ಕೆ ವಿಪರೀತ ಹೊಂದಾಣಿಕೆ. ಕಂಡವರೊಂದಿಗೆ ಶಾಮೀಲಾಗುವ ಮಾನಸಿಕ ಕಿರಿಕಿರಿ. ಸಾಕಪ್ಪ ಸಾಕು ಅನಿಸಿದರೂ ಅನಿವಾರ್ಯ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗದ ಒದ್ದಾಟ.
ಎಲ್ಲ ಒತ್ತಡಗಳನ್ನು ಸಹಿಸಿಕೊಂಡು ಓಡಾಡುವಾಗ ಏಕಾಂತದಿ ಈ ರೀತಿಯ ಖಾಲಿತನ ಹೆಚ್ಚಾಗಿ ಖಿನ್ನತೆಗೆ ಒಳಗಾಗಬಾರದೆಂಬ ಎಚ್ಚರಿಕೆಯಿಂದ ಮುಂದೆ ಸಾಗಬೇಕು ಕೊಂಚ ವಿರಮಿಸಿ.
---ಸಿದ್ದು ಯಾಪಲಪರವಿ
No comments:
Post a Comment