Monday, April 3, 2017

ಬಾಳ ಸಂಗಾತಿ

ಬಾಳ ಸಂಗಾತಿ

ಬದುಕಿನಲಿ ನೂರೆಂಟು ಸಂಗತಿಗಳು
ಬಾಳ ಭಾವ ಪಯಣದಲಿ ದೂರ
ಸಾಗಲು ನಾವಿಕ ಬೇಕೇ ಬೇಕು

ಹೆಂಡತಿ-ಅರ್ಧಾಂಗಿ -ಸಹಧರ್ಮಿಣಿ
ಹೀಗೆ ಏನೇ ಅಂದರೂ ಸಂಸಾರದ
ನೊಗ ಹೊರುವ ಸಹನಶೀಲೆ.

ಹಕ್ಕಿಯ ಹಾಗೆ ಸ್ವಚ್ಛಂದವಾಗಿ
ಹಾರಲು ಪ್ರೇರೆಪಿಸುವ ರೆಕ್ಕೆ

ಹುಸಿ ಮುನಿಸು ಹಸಿ ಕೋಪ
ಅವ್ವನಿಂದ ನನ್ನ ಕಸಿದುಕೊಳುವ
ಭರದಲಿ ತನ್ನ ತಾನೇ ಕಳಕೊಂಡ
ಹಳವಂಡ.

ವಾತ್ಸಲ್ಯದ ಹಗ್ಗ ಜಗ್ಗಾಟದಲಿ ನಾ
ನುಗ್ಗಾದ ಪರಿಯಲಿ
ಇನ್ನಿಲ್ಲದ ಪರದಾಟ.

ಅವ್ವ , ಈಕೆ ಮಧ್ಯದಲಿ ಆಕೆ
ಆದರೂ ನಕ್ಕಳು ಈಕೆ
ಆಕೆಯ ಆಕರ್ಷಣೆಗೆ
ಮರುಳಾದ ಮೋಡಿಗೆ .

ಊರೆಲ್ಲ ಹರಿಗ್ಯಾಡಿ ಮುಸ್ಸಂಜಿಯಲಿ
ಮನೆಗೆ ಮರಳುವ ಮರುಳಿಗೆ
ಮರುಳಾದಳು ಈಕೆ ಈಗಲೂ ಆಕೆಯ
ಪೈಪೋಟಿಯ ಭರದಲಿ.

ಇರಲೇಬೇಕಲ್ಲ ಎಲ್ಲರ ಬದುಕಲಿ
ಈಕೆ ಆಕೆಯ ಅಬ್ಬರದಲೆಗಳು.

ಮುಸುಕಿನ ಗುದ್ದಾಟದಲಿ ನನಗಿಲ್ಲದ ಹುರುಪು

ಎಂದಿನಂತೆ ವರುಷಕೊಮ್ಮೆ ಬಂತು
ಈಕೆಯ ಹುಟ್ಟು ಹಬ್ಬ.

ಮಗಳಿಗೆ ಕೇಕಿನ ಸಡಗರ
ಈಕೆಗೆ ಸೀರೆಯ ರಂಗಿನ ಗುಂಗು

ಮೈಮನಗಳು ಹಗುರ ಭಾರವಾದ
ಸಂಸಾರದ ನೊಗ ಹೊತ್ತು ಸಾಗಿಹಳು
ಒಮ್ಮೊಮ್ಮೆ ಬೈಯುತ್ತ ಕೂಗುತ್ತ ನನ್ನ
ಬೇಜವಬ್ದಾರಿಯ ಹಂಗಿಸುತ.

ಮನೆಗೆ ಮರಳುವೆ  ಹೊಟ್ಟೆ ತಾಳ
ಹಾಕಿದಾಗ ಬಟ್ಟೆ ಕೊಳೆಯಾದಾಗ
ಅದೇ ಕಾರಣಕೆ ನನ್ನಾಕೆ
Washing-ton-DC ದೋಬಿ ಘಾಟ್
ಖಾನಾವಳಿ ಒಡತಿ ಎಂಬ
ತಮಾಷೆಯಲೂ ನಗುವ ಸಹಜ
ಸುಂದರಿ ನಿತ್ಯ ನನ್ನ ಪಾಲಿಗೆ .

ಸೆಲ್ ಫೋನಿನ ಸೆಲ್ಲಿನೊಳು
ಬಂಧಿಯಾಗಿರುವ , ಜನರ
ಜಂಗುಳಿಯಲಿ ಕಳೆದು ಹೋಗುವ
ನನ್ನನು ಬಿಡಿಸಿ ತರುವ ಗಡಿಬಿಡಿ.

ಇಲ್ಲಿ ಪ್ರೀತಿ ತಮಾಷೆ ಎಲ್ಲವೂ ಅಷ್ಟೇ
ಏಕತಾನತೆಯ ಬಾಳ ನಾದ ಸೃಷ್ಟಿಸಿದ
ರಾಗಗಳಿಗೆ ಲೆಕ್ಕವಿಲ್ಲ.

ಹೀಗೆ ಸಾಗಲಿ ಬಾಳ ಪಯಣ ನಿನ್ನ
ಹೊಣೆಗಾರಿಕೆಯ ಹಡಗಲಿ.
ಹುಟ್ಟು ಹಬ್ಬ ಆದರೂ
ವಯಸ್ಸಾಯಿತಲ್ಲ ಎಂಬ
ವಿಶಾದದಲಿಯೂ ಹಿರಿತನದ ಗರಿಮೆ.

ಹುಟ್ಟು ಹಬ್ಬದ ಶುಭ ಹಾರೈಕೆಗಳು.
---ಸಿದ್ದು ಯಾಪಲಪರವಿ

No comments:

Post a Comment