Thursday, April 1, 2010

ಪ್ರೀತಿ ಪ್ರೇಮದ ಧ್ಯಾನದಲಿ


ಗಂಡು ಹೆಣ್ಣಿನ ಸೂಕ್ಷ್ಮ ಸಂಬಂಧ, ಪರಸ್ಪರ ಆಕರ್ಷಣೆ, ಅದೇ ಹೆಣಗಾಟದಲ್ಲಿ ಪೋಲಾಗುವ ಸಮಯ. ಕರಗುವ ಭಾವನೆಗಳನ್ನು ಈಗ ಒಂಚೂರು ವಯಸ್ಸು ಮಾಗಿದ ಮೇಲೆ ನೆನಪಿಸಿಕೊಂಡರೆ ಅಯ್ಯೋ ಎನಿಸುತ್ತದೆ.
ಹರೆಯದಲ್ಲಿ ಯಾರೋ ನೋಡಿ ನಕ್ಕರೆ ಸಾಕು, ಇಡೀ ದಿನ ನಗುವನ್ನು ಮೆಲುಕು ಹಾಕಿ ಅದಕೆ ನೂರೆಂಟು ಕನಸುಗಳ ಪೋಣಿಸಿ ಕಲ್ಪನಾ ಲೋಕದಲಿ ವಿಹರಿಸುವುದರಲ್ಲಿ ಎಂಥಾ ಮಜವಿತ್ತು.
ಆಕೆ ಅಥವಾ ಅವನು ಯಾಕೆ ನಕ್ಕ ಎಂಬುದು ಮುಖ್ಯವಲ್ಲ. ಆ ನಗು ತಂದೊಡ್ಡುವ thrill ಇದೆಯಲ್ಲ ಅದು ಕೋಟಿ ಕೊಟ್ಟರೂ ಸಿಗುವುದಿಲ್ಲ.
16 ರಿಂದ 25 ರವರೆಗೆ ಯುವಕರು ತೀರಾ ಭಾವುಕರಾಗಿರುತ್ತಾರೆ. ಇದು ನಾನು ಒಬ್ಬ ಶಿಕ್ಷಕನಾಗಿ ಇಂದಿನ ವಿದ್ಯಾರ್ಥಿಗಳ ಸ್ಥಿತಿಯಲ್ಲಿ ನೋಡಿ ಹೇಳುವ ಸಂಗತಿಯಲ್ಲ. ಆ ಹರೆಯದ ದಿನಗಳನ್ನು ನಾನೇ ಅನುಭವಿಸಿದ ಸಂಕಟಾನುಭವದ ಮಧುರ ಕ್ಷಣಗಳ ಆಧರಿಸಿ ಹೇಳುವ ಮಾತಿದು.
ಹರೆಯದ ನನ್ನ ತೀವ್ರ, ಅವಾಸ್ತವ ಭಾವುಕತೆಯನ್ನು ನನ್ನಷ್ಟಕ್ಕೆ ನಾನೇ ಸೂಕ್ಷ್ಮತೆ ಎಂದು ವಾಖ್ಯಾನಿಸಿಕೊಂಡಿದ್ದೂ ಇದೆ!
ಆದರೆ ಆ ಕಾಲದ ಸತ್ಯಾ ಸತ್ಯೆತೆಗಳನ್ನು ಈಗ ಮೆಲುಕು ಹಾಕಿದಾಗ ಎಂತಹ ಅಮೂಲ್ಯ ಸಮಯವನ್ನು ಬರೀ ಭ್ರಮೆಗಳಲಿ ಕಳೆದನಲ್ಲ ಎಂಬ ವ್ಯಥೆ.
ಇದೊಂದು ರೀತಿಯ ಮನಸಿಗೆ ಆವರಿಸುವ ಮಂಕು. ಅದು ತಪ್ಪೆಂದು ಗೊತ್ತಿದ್ದರೂ, ಅದೇ ತಪ್ಪನ್ನು ಮತ್ತೆ, ಮತ್ತೆ ಮಾಡಲು ಮನಸು ಹಾತೊರೆಯುತ್ತದೆ ಎಂದರೆ ಅದೆಂತಹ ಮಾಯೆ!
ಆ ಕಾಲ ಘಟ್ಟದಲ್ಲಿ, ಕಾಲೇಜು ಜೀವನದಲ್ಲಿ ಕನಸುಗಳನ್ನು ಬಿತ್ತಿದ ಚಲುವೆಯರನ್ನು ಅಲ್ಲಲ್ಲ ಎಲ್ಲರನು ಚಲುವೆಯರೆಂದು ಪರಿಭಾವಿಸಿದ ನನ್ನ ಮನಸ್ಸನ್ನು ನೆನಪಿಸಿಕೊಂಡು ಈಗಲೂ ಮಜಾ ಅನುಭವಿಸುತ್ತೇನೆ.20,30,40 ಮತ್ತೆ + ಆದಂತೆಲ್ಲ ಮನಸು ವಾಸ್ತವದ ಕಡೆಗೆ ವಾಲಬಹುದೆಂದು ನಾನಂತು ಅಂದುಕೊಂಡಿರಲಿಲ್ಲ.
20 ರಲ್ಲಿ ಸ್ನೇಹ ಹಸ್ತ ಚಾಚಿ ಭಾವನೆಗಳನ್ನು ಹಂಚಿಕೊಂಡು,(ದೇಹ ಹಂಚಿಕೊಳ್ಳುವ ವಾತಾವರಣ ಆಗಿನ್ನು ನಿರ್ಮಾಣವಾಗಿರಲಿಲ್ಲವಾದ್ದರಿಂದ) ಕ್ಯಾಂಪಸ್ ನಲ್ಲಿ ನಿಧಾನ ಗತಿಯಲ್ಲಿ ಹಾಕುವ ಹೆಜ್ಜೆಗಳ ಗುರುತಲ್ಲಿ ಅಚ್ಚೊತ್ತಿದ ದಿನಗಳು ಈಗ ಬರೀ ನೆನಪು.
ಹಾಗೆ 20 ರಲ್ಲಿ ಪ್ರೀತಿ ತೋರಿದ ಗೆಳತಿ ತೀರಾ ಅಚಾನಕಾಗಿ 25 ವರ್ಷಗಳ ನಂತರ ಫೋನಾಯಿಸಿದಾಗ ಹೇಗಾಗಿರಬೇಡ. ಬಹುಶ: ಈ ಸಾಲುಗಳನು ಓದುವ ಹರೆಯದ ಮನಸುಗಳಿಗೆ ಇಂತಹ ಅನುಭವ ಸಿಗಲು ಸಾಧ್ಯವೇ ಇಲ್ಲ. ಯಾಕೆಂದರೆ ನೀವು ಅದಕ್ಕಾಗಿ ಹತ್ತಾರು ವರ್ಷ ಕಾಯಬೇಕು.
ದೂರದ ಮುಂಬೈಯಲಿ ನೆಲೆಸಿರುವ ಗೆಳೆತಿ ತನ್ನೆಲ್ಲ ಬಾಳ ಕ್ಷಣಗಳನು ಹಂಚಿಕೊಂಡಾಗ ವಾಸ್ತವದ ದಂಡೆಯಲಿ ನಿಂತು, ಭ್ರಮೆಯ ಅಲೆಗಳನು ನೋಡಿ ನಗುತ್ತಿರುವಾಗ ಮತ್ತೆ ಆ ದಂಡೆಯಿಂದ ಅಲೆಗಳಲಿ ಧುಮುಕಿದ್ದು ಅಚ್ಚರಿಯಲ್ಲವೆ?
ವಾಸ್ತವ ವಾದಕ್ಕೆ ವಾಲಿದ್ದೇನೆ ಎಂಬ ನನ್ನ ಭ್ರಮೆಯನ್ನು ಕಳಚಿಹಾಕಿ ನಗ್ನಗೊಳಿಸುವ ಶಕ್ತಿ ಪ್ರೀತಿಗೆ ಇದೆ ಎಂದು ಮತ್ತೆ ಗೊತ್ತಾಯಿತು. ಆಗ ನನಗೆ ನಲವತ್ತರ ಆಜು-ಬಾಜು.
ದಿನಾ ತಪ್ಪದೇ ಕಾಲೇಜಿನ ದಿನಗಳನ್ನು ಮೆಲಕು ಹಾಕುತ್ತಾ, ನಂತರ ಮದುವೆಯಾಗಿ ಗಂಡನ ಮನೆ ಸೇರಿದ, ಕುಟುಂಬ ನಿರ್ವಹಣೆಯಲ್ಲಿ ಅನುಭವಿಸಿದ ನೋವು-ನಲಿವುಗಳ ರಸಾಯನ ವಿವರಿಸುತ್ತಾ ಹೋದ ಗೆಳತಿಗೆ ದಣಿವೇ ಇರಲಿಲ್ಲ. ಗಂಟೆಗಟ್ಟಲೆ ಭಾವನೆಗಳನ್ನು ರವಾನಿಸಿದ ಮೊಬೈಲ್ ಸೆಟ್ ಭಾವ ತೀವ್ರಗೊಂಡು ತನ್ನ ಮೈ ಬೆಚ್ಚಗಾಗಿಸಿ, ಚಾರ್ಜ ಕಳೆದುಕೊಂಡು ಅಸಹಾಯಕವಾದಾಗ ವಾಸ್ತವಕ್ಕೆ ಬಂದು Good Night ಅಂದಾಗ ಸರಿ ಸುಮಾರು ಮಧ್ಯ ರಾತ್ರಿ.
ನಿತ್ಯ ಮೆಗಾಸೀರಿಯಲ್ ನಂತೆ ಹೇಳುತ್ತ ಸಾಗಿದ ಗೆಳತಿಯ ಕಥೆಯ ಅಂತ್ಯ tragic ಆಗಿರಬಹುದು ಎಂದು ನಾನಂತು ಅಂದುಕೊಂಡಿರಲಿಲ್ಲ.
ಹೋಗಲಿ ಈಗ ಮಗ ಎಲ್ಲಿದ್ದಾನೆ? ಗಂಡ ಹೇಗಿದ್ದಾನೆ? ಯಾವಾಗ ಅವನನ್ನು ಪರಿಚಯಿಸುತ್ತಿಯಾ? ಎಂಬ ನನ್ನ ಪ್ರಶ್ನೆಗಳ ರಭಸ ಹೆಚ್ಚಾದಾಗ ಆಚೆ ಕಡೆಯ ಗೆಳತಿಯ ಧ್ವನಿಯಲ್ಲಿನ ನಗು ಮಾಯವಾಯಿತು. ಉತ್ಸಾಹ ಕುಗ್ಗಿ ಹೋಯಿತು. ಹಲೋ, ಹಲೋ ಎಂದರಚಿದರೂ ಉತ್ತರವಿಲ್ಲ. ಮತ್ತೆ, ಮತ್ತೆ ಕಡಲು ಶುರು ಮಾಡಿದಾಗ ಜೋರಾದ ಅಳು ನನಗೆ Shock. ಇಷ್ಟೊಂದು ದಿನ ಅತ್ಯಂತ ಸಂಭ್ರಮದಿಂದ ಮಾತಾಡಿದ ಗೆಳತಿ ಇಂದೇಕೆ ಕುಗ್ಗಿಹೋದಳೆನಿಸಿ ಕಸಿವಿಸಿಯಾಯಿತು. No, Please don't ask me anything more. ನಿನ್ನ ಇಷ್ಟು ದಿನದ ಮಾತುಗಳು ಬತ್ತಿಹೋದ ನನ್ನ ಬಾಳಿಗೆ ಹೊಸತನ, ಚೇತನ ನೀಡಿವೆ ಈಗ ಆ ಮಾತು ಬೇಡ ಎಂದಳು.
ನಾನು ಪ್ರಕಟಿಸಿದ ಪುಸ್ತಕಗಳು ಕಳಿಸಲು ಪಡೆದಿದ್ದ ಅಂಚೆ ವಿಳಾಸದ ಮೇಲೆ ಕಣ್ಣಾಡಿಸಿದೆ. ಮುಂಬೈ ಅಷ್ಟೇನು ದೂರವಿಲ್ಲ. ಬಾಲ್ಯದ ಗೆಳತಿಯಿಂದಾಗಿ ಇನ್ನೂ ಹತ್ತಿರವಾಗಿದೆ. ರೇಲ್ವೆ ಸ್ಟೇಶನ್ ಕಡೆ ಗಾಡಿ ಓಡಿಸಿ ಮುಂಬೈಗೆ ಟಿಕೇಟ್ ರಿಸರ್ವ ಮಾಡಿಸಿದೆ. ನಾನು ಮುಂಬೈಗೆ ಧಾವಿಸುವ ಯಾವುದೇ ಸೂಚನೆಯನ್ನು ಆಕೆಗೆ ನೀಡದೇ ಮುಂಬೈ ತಲುಪಿದೆ.

0

Wednesday, March 31, 2010

ವಿಕಸನ ಮಾಲಿಕೆ







ಗೆಳೆಯರು ನನ್ನ ಭಾವನೆಗಳಿಗೆ ಸ್ಪಂದಿಸಿ ವ್ಯಕ್ತಿತ್ವ ವಿಕಸನ ಮಾಲಿಕೆಗೆ ಪ್ರಶ್ನೆ ಕಳಿಸಿದ್ದಾರೆ.
ವ್ಯಕ್ತಿಯ ದೌರ್ಬಲ್ಯ ಹಾಗೂ ಶಕ್ತಿಯನ್ನು ತಿಳಿಯುವ ಬಗೆ ಹೇಗೆ? ಯಾವುದನ್ನು ನಾವು ದೌರ್ಬಲ್ಯ ಎಂದು ಕರೆಯಬಹುದು?
* ಈ ಪ್ರಶ್ನೆ ನನ್ನನ್ನು ಕಾಡುತ್ತಿದ್ದ ಕಾರಣದಿಂದಲೇ ಬುದ್ಧಿ-ಭಾವಗಳ ಭ್ರಮೆಯಲ್ಲಿ ತೇಲಾಡುತ್ತಿದ್ದೆ. ಒಳಗೊಳಗೆ ಅನೇಕ ಗೊಂದಲಗಳಿದ್ದವು. ನನ್ನಲ್ಲಿಯ ಗೊಂದಲಗಳಿಗೆ ಪರಿಹಾರ ಕಂಡುಹಿಯಲು ಹೆಣಗಾಡಿ ಈಗ ಭಾಗಶ: ಯಶಕಂಡಿದ್ದೇನೆ. ಓದು, ಚರ್ಚೆಯ ಮೂಲಕ ಪರಿಹಾರ ನಿಮಗೂ ಸಿಗುತ್ತದೆ.
ಮನುಷ್ಯನ ದೌರ್ಬಲ್ಯವೆಂದರೆ ಮನದ ಮುಂದಿನ ಆಸೆ ಎನ್ನುತ್ತಾರೆ. ತಾತ್ವಿಕವಾಗಿ ಹೆಣ್ಣಿಗೆ ಗಂಡಿನ, ಗಂಡಿಗೆ ಹೆಣ್ಣಿನ, ಅಂದರೆ ಕಾಮ, ಹಣ - ಬಂಗಾರ ಹಾಗೂ ಆಸ್ತಿ ಭೂಮಿಯ ಮೇಲಿನ ವ್ಯಾಮೋಹವೇ ಮನದ ದೌರ್ಬಲ್ಯ ಎಂದು ಗಂಭೀರವಾಗಿ ಆರೋಪಿಸುತ್ತಾರೆ. ಅಂದರೆ ಹೊನ್ನು,ಮಣ್ಣು, ಹೆಣ್ಣು ಎಂದು ಪುರಾತನರು ವಿಶ್ಲೇಶಿಸಿದ್ದಾರೆ. ಆದರೆ ಮನುಷ್ಯ ಇವುಗಳಿಲ್ಲದೆ ಬದುಕುವುದು ಅಸಾಧ್ಯ. ಇವುಗಳನ್ನೆಲ್ಲ ನಿರಾಕರಿಸಿದವ ಮನುಷ್ಯನಾಗದೇ ಸಂತನಾಗುತ್ತಾನೆ.
ನಾವೆಲ್ಲ ಸಂತರಲ್ಲದ ಕಾರಣಕ್ಕೆ ಈ ಮೂರು ಶಕ್ತಿಗಳಲ್ಲಿ ನಾನು ಹೆಚ್ಚು ಯಾವುದಕ್ಕೆ ಮನಸೋಲುತ್ತೇನೆ, ಯಾಕೆ ಮನಸೋಲುತ್ತೇನೆ ಎಂಬುದನ್ನು ನಾವೇ ಪ್ರಾಮಾಣಿಕವಾಗಿ ವಿಶ್ಲೇಶಿಸಿಕೊಳ್ಳಬೇಕು. ಇದು ಬೇರೆಯವರ ಮುಂದೆ ಜೆ.ಎಚ್. ಪಟೇಲರ ತರಹ ಹೇಳಲಿಕ್ಕೆ ಅಗುವುದಿಲ್ಲ.
ಈ ಮೂರರ ಆಕರ್ಷಣೆಯನ್ನು ಅತೀಯಾಗಿಟ್ಟುಕೊಂಡರೆ ಕಷ್ಟವಾಗುತ್ತದೆ. ಯಾವುದಾದರು ಒಂದು normal ಆಗಿದ್ದರೆ ok. ಅದನ್ನು ನಾವೇ ಸಾರ್ವತ್ರಿಕ ದೌರ್ಬಲ್ಯವಾಗದಂತೆ ನಿಬಾಯಿಸಬೇಕು. ಒಂದು ವೇಳೆ ನಮ್ಮ ದೌರ್ಬಲ್ಯ ಸಾರ್ವತ್ರಿಕಗೊಂಡರೆ, ಚರ್ಚಿತವಾದರೆ ವ್ಯಕ್ತಿತ್ವಕ್ಕೆ ಪೆಟ್ಟು ಬೀಳುತ್ತದೆ. ಹಾಗಂತ ಇಂದಿನ ಕಾಲದಲ್ಲಿ ಅದನ್ನು ಮುಚ್ಚಿಡಲು ಆಗುವುದಿಲ್ಲ. ಇದನ್ನು ಸಮರ್ಥವಾಗಿ manage ಮಾಡುವ ಕಲೆಗಾರಿಕೆ ಬೇಕು.
ಹೀಗಾಗಿ ಖಾಸಗಿ ಸಂಗತಿಗಳ ಗೊಂದಲಗಳನ್ನು ಶಾಂತಚಿತ್ತರಾಗಿ ನಾವೇ ಆಲಿಸಬೇಕು. ನಮ್ಮ ಏರಿಳಿತದ ಭಾವನೆಗಳನ್ನು ಧ್ಯಾನಸ್ಥ ಸ್ಥಿತಿಯಲ್ಲಿ ನಾವೇ ಗಮನಿಸಿದರೆ ಪರಿಹಾರ ಸಿಕ್ಕೇ ಸಿಗುತ್ತದೆ. ಅದು ನಿಯಂತ್ರಣಕ್ಕೂ ಬರುತ್ತದೆ.
"Try to keep at least two persons happy, but one of them must be you" ಎಂಬ ಮಾತೊಂದಿದೆ. ನಮ್ಮನ್ನು ನಾವು ಸಂತೋಷದಲ್ಲಿಟ್ಟುಕೊಳ್ಳುವ ಪ್ರತಿಕ್ರಿಯೆಯಲ್ಲಿ ತೊಡಗಿಸಿದಾಗ ಒಂದು ರೀತಿಯ ಸಮಾಧಾನ ಸಿಗುತ್ತದೆ. ಬೇರೆಯವರನ್ನು ಸಮಾಧಾನಿಸುವ, ಖುಷಿಪಡಿಸುವ ಧಾವಂತದಲ್ಲಿ ನಾವು ನಮ್ಮ ಅಸ್ತಿತ್ವವನ್ನೆ ಕಳೆದುಕೊಳ್ಳುತ್ತೇವೆ.
ಹಾಗಾಗಿ ನಮಗೆ ಹೆಣ್ನು, ಮಣ್ಣು, ಹೊನ್ನು ಬೇಕು ಎಷ್ಟು ಹೇಗೆ ಯಾಕೆ ಬೇಕು ಎಂದು ಕಂಡುಕೊಳ್ಳುವ ಸಾಮರ್ಥ್ಯ ಬಂದರೆ ಸಾಕು. ಅದೇ ವಿಕಸನದ ಮೊದಲ ಹೆಜ್ಜೆ ಆಗುತ್ತದೆ. ಎಲ್ಲ ನಿರಾಕರಣೆ ಮಾಡುತ್ತೇನೆ ಎಂಬ ಬೂಟಾಟಿಕೆಯೂ ಸಲ್ಲದು. ಬೇರೆಯವರ ವಿಷಯಕ್ಕೆ ಇರುವ ಹಿಪೊಕ್ರಸಿ, ನಮ್ಮ ವಿಷಯಕ್ಕೂ ಪ್ರಾರಂಭವಾದರೆ ಕಷ್ಟ!
ಅದನ್ನು ಮೆಟ್ಟಿ ನಿಲ್ಲುವ ಪ್ರಾಮಾಣಿಕ ಪ್ರಯತ್ನ ನಮ್ಮಿಂದ ನಮಗಾಗಿ, ನಮ್ಮ ಸಂತೋಷಕ್ಕಾಗಿ ಪ್ರಾರಂಭವಾಗಬೇಕು. ದಿನದಿಂದ ದಿನಕ್ಕೆ ಮನೋನಿಯಂತ್ರಣದ process ಮನಸ್ಸಿನಲ್ಲಿ ಪ್ರಾರಂಭವಾದಾಗ ಒಂದು ದಿನ ಒಳ್ಳೆ ಪರಿಣಾಮ ಸಿಕ್ಕೆ ಸಿಗುತ್ತದೆ. ಆದ್ದರಿಂದ ನಿಮ್ಮ weakness ಯಾವುದು ಎಂದು ನೀವೇ ಕಂಡುಕೊಂಡು ಯಶಪಡೆಯಿರಿ. ಕೆಲ ದಿನ ಬಿಟ್ಟ ನಂತರ ಈ ಪ್ರಶ್ನೆಗಾಗಿ ಮತ್ತೆ ಚರ್ಚೆಮಾಡೋಣ. But you have to wait for the results.
ಇಂದಿನಿಂದಲೇ ನಿಮ್ಮ ದೌರ್ಬಲ್ಯ ಅರಿಯುವ ಕೆಲಸ ಸಾಂಗವಾಗಿ ಸಾಗಲಿ All the best.

Tuesday, March 30, 2010

ತೇರನೆಳೆಯುತ್ತಾರೆ ತಂಗಿ ನೋಡಲಿಕ್ಕೆ ಹೋಗೋಣ ಬಾರೆ
ತೋಂಟದಾರ್ಯ ಜಾತ್ರೆ


ಸಂತ ಶಿಶುನಾಳ ಶರೀಫರ ಈ ಹಾಡು ನಮ್ಮ ನಾಡಿನ ಹಲವಾರು ಜಾತ್ರೆಗಳಿಗೆ ನಮ್ಮನ್ನು ಕೈ ಮಾಡಿ ಕರೆಯುತ್ತದೆ.
ಜಾತ್ರೆಗಳು ಎಂದರೆ ಗದ್ದಲು, ಜನಸಾಗರ. ಜಾತ್ರೆಯ ಸಾಮರ್ಥ್ಯಕ್ಕನುಗುಣವಾಗಿ ಜನ ಸೇರುತ್ತಾರೆ. ಸಾವಿರ, ಎರೆಡು ಸಾವಿರ, ಹತ್ತಾರು ಸಾವಿರ ಹೀಗೆ ಒಮ್ಮೊಮ್ಮೆ ಲಕ್ಷಾಂತರ ಜನರೂ ಸೇರುತ್ತಾರೆ.
ಜನಸೇರುವ ಈ ನೆಪದಲ್ಲಿ ನೂರಾರು ಪೂರಕ ಚಟುವಟಿಕೆಗಳು ಜರಗುತ್ತವೆ.
ಬಳೆ ವ್ಯಾಪಾರ, ಸಿಹಿ-ತಿಂಡಿ ವ್ಯಾಪಾರ, ಬಟ್ಟೆ-ಬರೆ ಹೀಗೆ ಜಾತ್ರೆಯಲ್ಲಿ ನೂರಾರು ಅಂಗಡಿಗಳು ಝಗಮಗಿಸುತ್ತವೆ. ಖರೀದಿಗಾಗಿ ಜನ ಸೇರುತ್ತಾರೋ, ಜನ ಸೇರಿದ್ದಕ್ಕಾಗಿ ಅಂಗಡಿಗಳು ಇರುತ್ತವೆಯೋ ಎಂಬಂತೆ ಜನ ಮರುಳೋ, ಜಾತ್ರೆ ಮರುಳೋ ಎಂಬ ವ್ಯಂಗ್ಯಾರ್ಥದ ನುಡಿಗಟ್ಟೂ ಇದೆ.
ಜಾಗತಿಕರಣದ ಜಗದಲ್ಲಿ ಈಗ ಜಾತ್ರೆಗಳು ದೇವರು ಧರ್ಮದ ಹೆಸರಿನಲ್ಲಿ ಜೀವಂತವಾಗಿರುವುದು ಏಷಿಯಾದಲ್ಲಿ ಮಾತ್ರ.
ಜಾಗತಿಕ ಧರ್ಮದ ಕ್ರಿಶ್ಚಿಯನ್ ಮುಖ್ಯಸ್ಥ ಪೋಪ್ ಅಧಿಕಾರ ಸ್ವೀಕರಿಸುವಾಗ, ಇಸ್ಲಾಂ ಧಾರ್ಮಿಕ ಕೇಂದ್ರ ಮೆಕ್ಕಾದಲ್ಲಿ ವರ್ಷಕ್ಕೊಮ್ಮೆ ಜನ ಸೇರುವುದು ಸಾಮಾನ್ಯ.
ಆದರೆ ಇಂಡಿಯಾ ದೇಶದಲ್ಲಿ ಪ್ರತಿ ಹಬ್ಬ-ಹುಣ್ಣಿಮೆಗಳಂದು ಲಕ್ಷಗಟ್ಟಲೆ ಜನ ಸೇರುತ್ತಾರೆ. ಜನರನ್ನು ಒಂದೆಡೆ ಸೇರಿಸಲು ಧರ್ಮ-ದೇವರು ಎಂಬ ಒಂದೇ ಅಸ್ತ್ರ ಸಾಕು!
ಕರ್ನಾಟಕದಲ್ಲಿ ಬಾದಾಮಿ, ಮೈಲಾರ, ಅಂಬಾಮಠ, ಕೊಪ್ಪಳ ಗವಿಮಠ, ಸುತ್ತೂರು ಹಾಗೂ ಗದುಗಿನ ಜಗದ್ಗುರು ತೋಂಟದಾರ್ಯ ಮಠಗಳ ಜಾತ್ರೆಗಳಲ್ಲಿ ಇಂದಿಗೂ ಲಕ್ಷಾಂತರ ಜನ ಸಂಭ್ರಮದಿಂದ ಸೇರಿ ಖುಷಿ ಪಡುತ್ತಾರೆ.
ಇಂದು ಸಾಮೂಹಿಕ ಭೋಜನ, ಪ್ರೀತಿ ಭೋಜನ, ಅದರಲ್ಲೂ ವಿಶೇಷವಾಗಿ ಲಕ್ಷಾಂತರ ಜನ ಸಾಮೂಹಿಕವಾಗಿ ಬಟಾ ಬಯಲಿನಲ್ಲಿ ಜಾತಿ ಭೇದ ಮರೆತು ಪ್ರಸಾದ ಸ್ವೀಕರಿಸುವ ಶ್ರೇಷ್ಠ ಪದ್ದತಿ ನಮ್ಮ ಗ್ರಾಮೀಣ ಜಾತ್ರೆಗಳಲ್ಲಿದೆ. ಅದಕ್ಕೆ ಶರೀಫರು ಹಾಡಿದ್ದು "ತೇರನೆಳೆಯುತಾರೆ ತಂಗಿ ತೇರನೆಳೆಯುತಾರೆ, ನೋಡಲಿಕ್ಕೆ ಹೋಗೋಣ ಬಾರೆ ಎಂದು ಹಾಡುತ್ತ ಜನಸೇರುವ ಜಾತ್ರೆಯನ್ನು ಆಧ್ಯಾತ್ಮದೊಂದಿಗೆ ಸಮೀಕರಿಸಿ ಈ ದೇಹವನ್ನು ಜಾತ್ರೆಯ ತೇರಿಗೆ ಹೋಲಿಸಿದ್ದಾರೆ.

ಪ್ರಗತಿಪರ ಆಲೋಚನೆ ಹೊಂದಿದ ಸ್ವಾಮಿಗಳು ಈ ಜಾತ್ರೆಗಳಿಗೆ ಸಾಂಸ್ಕೃತಿಕ ಸ್ವರೂಪ ನೀಡಿದ್ದಾರೆ. ಅದರಲ್ಲೂ ವಿಶೇಷವಾಗಿ ಗದುಗಿನ ತೋಂಟದಾರ್ಯ ಮಠದ ಇಂದಿನ ಪೀಠಾಧಿಪತಿಗಳಾದ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು 1975 ರಿಂದ ಶ್ರೀಮಠದ ಜಾತ್ರೆಯನ್ನು ಸಾಂಸ್ಕೃತಿಕ ಯಾತ್ರೆಯನ್ನಾಗಿಸಿದ್ದಾರೆ.
ಪಲ್ಲಕ್ಕಿಯಲ್ಲಿ ಕುಳಿತು ಮೆರವಣಿಗೆ ಮಾಡಿಸಿಕೊಳ್ಳುವುದನ್ನು, ತೇರಿನ ಗಾಲಿಗೆ ಅನ್ನ ಹಾಕುವುದನ್ನು ನಿಲ್ಲಿಸಿದ್ದಾರೆ. ಪರಮ ಪೂಜ್ಯರ ಈ ಪ್ರಗತಿಪರ ನಿಲುವು ಆರಂಭದಲ್ಲಿ ಕಂದಾಚಾರಿಗಳಿಗೆ shock ನೀಡಿತು. ಈಗ ಎಲ್ಲವೂ ಸರಳ. ವಿನೂತನ ಆಚರಣೆಯ ಗದುಗಿನ ತೋಂಟದಾರ್ಯಮಠದ ಜಾತ್ರೆಗೆ ಈಗ ಮೂವೈತ್ತದರ ಸಂಭ್ರಮ. ಪ್ರತಿ ವರ್ಷ ಜಾತ್ರೆಯ ನೆಪದಲಿ ಹತ್ತಾರು ಪುಸ್ತಕಗಳ ಬಿಡುಗಡೆ, ಗಣ್ಯ ಮಹನೀಯರಿಗೆ ಸಂಮಾನ, ಕೃಷಿಮೇಳ, ಹಾಲುಕರೆಯುವ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಸಾಹಿತ್ಯಾಸಕ್ತರು, ಸಾಂಸ್ಕೃತಿಕ ಪ್ರೇಮಿಗಳು ಸಾವಿರ ಸಂಖ್ಯೆಯಲಿ ನಿಶ್ಯಬ್ದವಾಗಿ ಕುಳಿತು ಮಠದ ಆವರಣದಲ್ಲಿ ಹಾಕಿರುವ ಭವ್ಯ ಮಂಟಪದಲ್ಲಿ ಕಾರ್ಯಕ್ರಮ ವೀಕ್ಷಿಸುತ್ತಾರೆ. ಹೊರಗಡೆ ಜನಸಾಮಾನ್ಯರು ಸಂಭ್ರಮದಿಂದ ಓಡಾಡುತ್ತ, ಮಿರ್ಚಿ, ಭಜಿ ತಿನ್ನುತ್ತಾ ಮುಂಬೈ ಮೂಲದ ಸಂಸ್ಥೆ ಹಾಕಿರುವ ಪ್ರದರ್ಶನ ವೀಕ್ಷಿಸುತ್ತಾ ಆಟ ಆಡುತ್ತಾರೆ. ಹೀಗೆ ಜನಸಾಮಾನ್ಯರನ್ನು ಹಾಗೂ ಪ್ರಜ್ಞಾವಂತರನ್ನು ಏಕಕಾಲಕ್ಕೆ ತಣಿಸುವ ಜಾತ್ರೆಯಲ್ಲಿ ಈ ವರ್ಷವೂ ಅನೇಕಾನೇಕ ಕಾರ್ಯಕ್ರಮಗಳಿವೆ.
ಇಂದು ನಡೆಯುವ ಸಾಮೂಹಿಕ ವಿವಾಹದಲ್ಲಿ ನಾಡಿನ ಹರ-ಗುರು-ಚರ-ಮೂರ್ತಿಗಳು, ಜನಪ್ರತಿನಿಧಿಗಳು ಪಾಲ್ಗೊಳ್ಳುತ್ತಾರೆ.
ಒಂದುವಾರ ಸಾಮೂಹಿಕ ರುಚಿಕಟ್ಟಾದ ಭೋಜನ ವ್ಯವಸ್ಥೆಯೂ ಇದೆ. ಹೀಗೆ ಎಲ್ಲರೀತಿಯಲ್ಲಿಯೂ ಗದುಗಿನ ಜಾತ್ರೆ ಜನಪರ, ಸಾಮೂಹಿಕ, ಸಾಂಸ್ಕೃತಿಕ, ಸಾಹಿತ್ಯದ ಯಾತ್ರೆಯಾಗಿದೆ.
ನಾನು ವಿವರಿಸಿದ ಮಾತುಗಳನ್ನು ಸ್ವತ: ಅನುಭವಿಸಲು ದಯವಿಟ್ಟು ಇಂದೇ ಗದುಗಿನ ಜಾತ್ರೆಗೆ ಬನ್ನಿರಿ
.

Monday, March 29, 2010


ಮತ್ತೆ ಆರಂಭವಾದ ಕಿರುತೆರೆ ನಂಟು

ಕಳೆದೆರೆಡು ದಶಕಗಳ ಉಪನ್ಯಾಸಕ ವೃತ್ತಿಯೊಂದಿಗೆ ಅನೇಕ ಊರು ಉಸಾಬರಿ ಯೋಜನೆಗಳಲ್ಲಿ ತೊಡಗಿರುವುದನ್ನು ನೀವು ನೋಡಿದ್ದೀರಿ.
1996 ರಲ್ಲಿ ಸ್ಥಾನಿಕ ಸಿಟಿ ಕೇಬಲ್ ಗೆಳೆಯರಾದ ಸುನಿಲ್ ತೆಂಬದಮನಿ, ಮಹಾದೇವ ಕಲಬುರ್ಗಿ, ಹಿರಿಯ ತಂತ್ರಜ್ಞ ಫಡ್ನೀಸ್ ಅವರ ನೆರವಿನೊಂದಿಗೆ ಇರುವ ಪರಿಮಿತಿಯ ತಂತ್ರಜ್ಞಾನ ಬಳಸಿಕೊಂಡು ಸಿಟಿ ಕೇಬಲ್ ವೀಕ್ಷಕರಿಗಾಗಿ ಅಕರ್ಷಕ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ.
ಅನೇಕ ರಾಜಕೀಯ ದಿಗ್ಗಜರ ನೇರ ಸಂದರ್ಶನ ಪ್ರಸಾರ ಮಾಡಿದ್ದು ಈಗ ಇತಿಹಾಸ.
ನನ್ನ ಸಂದರ್ಶನ ಕಾರ್ಯಕ್ರಮ yapal's show time ನಲ್ಲಿ ನಾಡಿನ ಎಲ್ಲರ ಸದರ್ಶನ ಮಾಡಿದ್ದೇನೆ. ಈಗ ಅವುಗಳ ದಾಖಲೆ ಉಳಿದಿಲ್ಲ ಎನ್ನುವುದು ಅಷ್ಟೇ ವಿಷಾದದ ಸಂಗತಿ. ಮಾಜಿ ಪ್ರಧಾನಿ ದೇವೆಗೌಡರು, ಕೇಂದ್ರ ಸಚಿವರಾಗಿದ್ದ ಎಂ.ವಿ. ರಾಜಶೇಖರನ್, ಎಂ.ಪಿ. ಪ್ರಕಾಶ್ ಅಲ್ಲದೆ ಅನೇಕ ಮಠಾಧೀಶರ ಸಂದರ್ಶನಗಳು ಪ್ರಸಾರಗೊಂಡು ನಾನು ಸ್ಥಾನಿಕ ಕೇಬಲ್ ನ ಶೋ ಮ್ಯಾನ್ ಅನಿಸಿಕೊಂಡೆ. ನಂತರ ಬೇರೆ ಬೇರೆ ಕಾರಣಗಳಿಂದ Ten TV ಸ್ಥಗಿತಗೊಂಡು ನನ್ನ ಕಾರ್ಯಕ್ರಮಗಳಿಗೂ ತಾತ್ಕಾಲಿಕ ತೆರೆಬಿತ್ತು. Yapal's show time ನ್ನು 1999 ರ ಸಾರ್ವಜನಿಕ ಚುನಾವಣೆಯಲ್ಲಿಯೂ ಸಮರ್ಥವಾಗಿ ಬಳಸಿಕೊಂಡ ಹೆಗ್ಗಳಿಕೆ ನಮ್ಮದು.
ನಂತರ ವಾರ್ತಾ ಇಲಾಖೆ ಹಾಗೂ ಬೆಂಗಳೂರು ದೂರದರ್ಶನಕ್ಕಾಗಿ ಮೂರು ಸಾಕ್ಷ್ಯ ಚಿತ್ರಗಳನ್ನು ನಿರ್ಧೇಶಿಸಿದ ಅನುಭವ ನನ್ನ ಮನದ ಮೂಲೆಯಲ್ಲಿ ಅಡಗಿ ಕುಳಿತಿದೆ.
ನಂತರ ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸಿ-ನಿರ್ದೇಶಿಸುವ ಅವಕಾಶ ಬಂದರೂ ಕಾಲೇಜು ಕೆಲಸದ ಒತ್ತಡದ ಮಧ್ಯ ಪೂರೈಸಲಾಗಲಿಲ್ಲ ಎಂಬ ಬೇಸರ.
Jack of all master of none ಆಗದಂತೆ ಎಚ್ಚರವಹಿಸಿಕೊಂಡು ಸುಮ್ಮನಿದ್ದೇನೆ. ಅರ್ಧದಶಕದ ನಂತರ ಜನಪ್ರಿಯ ವಾಹಿನಿ ಈ ಟಿವಿಯಲ್ಲಿ ಮಧ್ಯಾನ್ಹ ಪ್ರಸಾರವಾಗುವ 'ಸುಕನ್ಯಾ' ಧಾರಾವಾಹಿಯಲ್ಲಿ ಅಭಿನಯಿಸುವ ಅವಕಾಶವನ್ನು ಗೆಳೆಯ ಸಹ ನಿರ್ದೇಶಕ ಮಂಜುನಾಥ ಪಾಂಡವಪುರ ಒದಗಿಸಿಕೊಟ್ಟರು.
ಡಿಸೆಂಬರ 1 ರಂದು ಎರೆಡು ಸನ್ನಿವೇಶಗಳಿಗಾಗಿ ಅಭಿನಯಿಸಿ ಬಂದೆ. ನಿರ್ದೇಶಕರಾದ ರವಿಕಿರಣ, ಶಶಿಕಿರಣ ಅಭಿನಯವನ್ನು ಮೆಚ್ಚಿಕೊಂಡದ್ದು, ಹಿರಿಯ ಅನುಭವಿ ಕಲಾವಿದರಾದ ಅನಂತವೇಲು, ಶ್ವೇತಾ ಚಂಗಪ್ಪ, ನಿನಾಸಂ ಸಂದಿಪ್ ರೊಂದಿಗೆ ಅಭಿನಯಿಸಿದ್ದು ಅವಿಸ್ಮರಣೀಯ ಅಂದುಕೊಳ್ಳಬಹುದಲ್ಲ.
ಸದರಿ ದೃಶ್ಯಗಳು 27-12-2009 ರಂದು ಹಾಗೂ 7-1-2010 ರಂದು ಪ್ರಸಾರಗೊಂಡವು. ಅದಕ್ಕೆ ಬೇಕಾದಷ್ಟು ಪ್ರಚಾರ ನೀಡದೆ ಕೇವಲ ಸ್ನೇಹಿತರಿಗೆ ಮಾತ್ರ ವಿಷಯ ತಿಳಿಸಿದೆ.
ನನ್ನ ಮೊದಲ ಆದ್ಯತೆ ಓದು, ಬರಹ ಹಾಗೂ ಉಪನ್ಯಾಸವಾದ್ದರಿಂದ ಅವಕಾಶ ಸಿಕ್ಕಾಗ ಮಾತ್ರ ಕಿರುತೆರೆಯನ್ನು ಬಳಸಿಕೊಳ್ಳುವುದು ಒಳಿತು ಅನಿಸಿದೆ.
ನಮಗಿರುವ ಸೀಮಿತ ಕಾಲಮಿತಿಯನ್ನು ಎಲ್ಲ ಅವಕಾಶಗಳನ್ನು ಬಳಸಿಕೊಳ್ಳುವ ಇರಾದೆ ಇದೆ. ಆದರೆ ಅದಕ್ಕಾಗಿ ಹೆಚ್ಚು ದಣಿದುಕೊಳ್ಳಬೇಕು ಎಂಬುದು ಅಷ್ಟೇ ಸತ್ಯ!.
ವ್ಯಕ್ತಿತ್ವ ವಿಕಸನ
ಪ್ರಶ್ನೋತ್ತರ ಮಾಲಿಕೆ -ಮಾನಸೋಲ್ಲಾಸ
ಕಳೆದ ಹತ್ತು ವರ್ಷಗಳಿಂದ ನನ್ನ ಶಿಕ್ಷಕ ವೃತ್ತಿಯೊಂದಿಗೆ ಹೆಚ್ಚುವರಿಯಾಗಿ ರೂಢಿಸಿಕೊಂಡ ಹವ್ಯಾಸ ವ್ಯಕ್ತಿತ್ವ ವಿಕಸನ ತರಬೇತಿ.
2004 ರಲ್ಲಿ ಆತ್ಮೀಯ ಸ್ನೇಹಿತ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲರ ಪುತ್ರ ಶ್ರೀಮಹಿಮಾ ಪಟೇಲ land mark ಸಂಸ್ಥೆಯಲ್ಲಿ ವ್ಯಕ್ತಿತ್ವ ವಿಕಸನ ತರಬೇತಿ ಪಡೆಯಲು ಒತ್ತಾಯಿಸಿ, ಮೂರು ದಿನಗಳ ತರಬೇತಿಯಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಒದಗಿಸಿದರು. ಅಲ್ಲಿಯವರೆಗೆ ನನಗೆ ವ್ಯಕ್ತಿತ್ವ ವಿಕಸನ ತರಬೇತಿಯ ಸ್ವರೂಪದ ಬಗ್ಗೆ ಪೂರ್ಣ ಮಾಹಿತಿ ಇರಲಿಲ್ಲ. Land mark Forum ನ ತರಬೇತುದಾರ ಗೋಪಾಲರ ಅಸ್ಖಲಿತ ಪ್ರತಿದಿನ 10 ತಾಸುಗಳವರೆಗಿನ ಮಾತುಗಳು ಅಚ್ಚರಿ ಎನಿಸಿದವು.
ವ್ಯಕ್ತಿತ್ವ ಪರಿವರ್ತನೆಯ ಸೂತ್ರಗಳನ್ನು ಮನದಾಳಕ್ಕೆ ಇಳಿಯುವಂತೆ ವಿವರಿಸುವ ಬಗೆ ಭಿನ್ನವೆನಿಸಿತು. ಹಲವಾರು ಉಪಯುಕ್ತ ಪುಸ್ತಕಗಳ ಅಧ್ಯಯನದ ನಂತರ, ಮಹಿಮಾ ಪಟೇಲರ ಸಲಹೆಯಂತೆ ನಾನೇ ತರಬೇತಿಯನ್ನು ಪ್ರಾರಂಭಿಸಿದೆ.
ಇಲ್ಲಿಯವರೆಗೆ ಹತ್ತು ಸಾವಿರ ವಿದ್ಯಾರ್ಥಿಗಳಿಗೆ, ಎರೆಡು ಸಾವಿರ ವಿವಿಧ ಸಂಸ್ಥೆಗಳ ಶಿಕ್ಷಕರಿಗೆ, ವೈದ್ಯರುಗಳಿಗೆ, ಕಾರ್ಪೋರೇಟ್ ಜಗತ್ತಿನ ಯುವಕರಿಗೆ ಯಶಸ್ವಿಯಾಗಿ ತರಬೇತಿ ನೀಡಿದ ಆತ್ಮವಿಶ್ವಾಸ ನನ್ನ ಪಾಲಿಗಿದೆ.
ಒಂದು ದಿನ, ಎರೆಡು ಹಾಗೂ ಮೂರು ದಿನಗಳ ತರಬೇತಿಗೆ ಬೇಕಾಗುವಷ್ಟು ಅಂಶಗಳನ್ನು ವೈಯಕ್ತಿಕವಾಗಿ ಅಭಿವೃದ್ಧಿ ಪಡಿಸಿಕೊಂಡಿದ್ದೇನೆ. power point ಮೂಲಕ ಸಂಗೀತ ಸಾಧನಗಳನ್ನು ಬಳಸಿ ಬೇಸರವಾಗುವಂತೆ ನೀಡುವ ತರಬೇತಿಗೆ ಈಗ ಬೇಡಿಕೆ ಹೆಚ್ಚಿದೆ.
ವೃತ್ತಿಯಲ್ಲಿ ಬಿಡುವು ಸಿಕ್ಕಾಗ ಅವಕಾಶ ಮಾಡಿಕೊಂಡು ತರಬೇತಿ ನೀಡಲು ಹೋಗುತ್ತೇನೆ. ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲಾಗದಕ್ಕೆ ಬೇಸರವಿದೆ.
ಈಗ ಅನೇಕರು ನನ್ನ mail ID ಗೆ ಪ್ರಶ್ನೆ ಕಳಿಸುತ್ತಾರಂತೆ, ನನ್ನ ಬ್ಲಾಗ್ ನಲ್ಲಿ ಅವುಗಳಿಗೆ ಉತ್ತರ ಪಡೆಯುವ ಸಲಹೆಯನ್ನು ನೀಡಿದ್ದಾರೆ. ಇದು ಪ್ರಶ್ನೆ ಕೇಳಿದವರೊಂದಿಗೆ, ಇತರ ಓದುಗರಿಗೂ ತಲುಪಬಹುದೆಂಬ ಸದಾಶಯದ ಸೂಚನೆಯನ್ನು ಒಪ್ಪಿಕೊಂಡಿದ್ದೇನೆ. ಈ ಪ್ರಶ್ನೋತ್ತರ ಮಾಲಿಕೆಯ Tittle ಮಾನಸೋಲ್ಲಾಸ.
ಮಾನಸೋಲ್ಲಾಸದ ಮೂಲಕ ವೈಯಕ್ತಿಕ ಸಮಸ್ಯಗಳಿಗೆ ಸಲಹೆ-ಚರ್ಚೆ ಬಯಸುವವರು ನನ್ನ mail ID - Siddu. Yapal @ gmail.com ಗೆ ಪ್ರಶ್ನೆ ಕಳಿಸಿರಿ, ಬ್ಲಾಗ್ ಮೂಲಕ ಉತ್ತರ ನೀಡುತ್ತೇನೆ.
ಆಧುನಿಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅಗತ್ಯವಿದೆ.
ನಾಳೆಯಿಂದ 'ಮಾನಸೋಲ್ಲಾಸ' ಪ್ರಾರಂಭವಾಗಲಿದೆ.
Let us share our feelings.
ಈ ಸಮಯದಲ್ಲಿ ಹಿಟ್ಲರ್ ನ ಆತ್ಮವಿಶ್ವಾಸದ ಮಾತುಗಳನ್ನು ಅಲಿಸೋಣ.
"Never try or beg for support from others.........
Stand alone and face the life as a race, then every thing will follow you".
Have a nice day.

Saturday, March 27, 2010



'ಕಾಲ'ನ ಮಹಿಮೆಯಲ್ಲಿ ನಾವು-ನೀವು
'ಸಿದ್ದು ಕಾಲ'ಕ್ಕೆ ಬೇಡಿಕೆ ಶುರು ಆಗಿದೆ ಎಂಬ ಖುಷಿ. ಕಮೆಂಟ್ಸ ಕಾಲಂನ್ನು ಸದಾ ಸೊನ್ನೆಗಿಟ್ಟಿರುವ ಬಿಜಿ ಓದುಗರು ಫೋನಾಯಿಸಿ ನೇರವಾಗಿ ಅಭಿಪ್ರಾಯ ಹಂಚಿಕೊಳ್ಳುತ್ತಿರುವುದು ತಂತ್ರಜ್ಞಾನಕ್ಕೊಂದು ನಿದರ್ಶನ. ಎಲ್ಲವೂ fast ಆಗಬೇಕು. ಅನಿಸಿದ್ದನ್ನು ತಕ್ಷಣ ತಿಳಿಸಬೇಕೆನ್ನುವ ಧಾವಂತದಿಂದ ಫೋನಾಯಿಸುವ ಹವ್ಯಾಸ ಪ್ರಾರಂಭವಾಗಿದೆ.
'ಕಾಲ' ಎಂದರೇನು ಎಂಬುದು ಎಲ್ಲರ ಸಹಜ ಪ್ರಶ್ನೆ. ನಮ್ಮ ಮಾತು, ವಿಚಾರಗಳಲ್ಲಿ ಸಹಜವಾಗಿ ನುಸುಳುವ ಪದ 'ಕಾಲ'. ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ, ಯಾರಾದರು ಬಹಳ ಅಟ್ಟಹಾಸದಿಂದ ಮೆರೆದರೆ ಅಯ್ಯೋ ಬಿಡ್ರಿ ಅವರದೊಂದು ಕಾಲ ಉರಿತಾರೆ ಅಂತ ಲೇವಡಿ ಮಾಡುತ್ತೇವೆ.
ತೀರಾ ನೋವಿನಲ್ಲಿದ್ದಾಗ ಅಯ್ಯೋ ನಮಗೊಂದು ಕಾಲ ಬರಬಹುದು ಎಂದು ಸಮಾಧಾನಿಸಿಕೊಳ್ಳುತ್ತೇವೆ. ಏನಾದರು ಕಾಂಟ್ರೊವರ್ಸಿಯಲ್ ಘಟನೆ ನಡೆದಾಗ ಎಲ್ಲ ವನ್ನು ಕಾಲ ನಿರ್ಧರಿಸುತ್ತದೆ ಎನ್ನುತ್ತಾ ನಿರ್ಣಯವನ್ನು ಕಾಲನ ಅಣತೆಗೆ ಬಿಡುತ್ತೇವೆ.
ಹೀಗೆ, ಎಲ್ಲ ವಿಚಾರಲಹರಿಗಳಲ್ಲಿ ನುಗ್ಗುವ 'ಹಿತಕರ' ಪದ 'ಕಾಲ'ವನ್ನು ನನ್ನ ಬ್ಲಾಗ್ ಗೆ tittle ಕೇಳಿದಾಗ ತಕ್ಷಣ 'ಸಿದ್ದು ಕಾಲ' ಇರಲಿ ಎಂದೆ.
ಈಗ ನನಗೆ ಒಂದು ರೀತಿಯ ಸಕಾರಾತ್ಮಕ ನೆಮ್ಮದಿ, ನನ್ನ ನಿತ್ಯದ ಬವಣೆಗಳನ್ನು ಹಂಚಿಕೊಳ್ಳುವ 'ಕಾಲ' ಕೂಡಿಬಂತಲ್ಲ ಎಂದು. ಅನೇಕ ಬೇಗುದಿಗಳನ್ನು ಅನಿವಾರ್ಯ ವಾಗಿ ಸಹಿಸಿಕೊಂಡು ವಿಲಿ,ವಿಲಿ ಒದ್ದಾಡುತ್ತೇವೆ. ಹಂಚಿಕೊಳ್ಳಲು ಮನಸ್ಸಾಗುವುದಿಲ್ಲ ಅನ್ನುವುದಕ್ಕೆ, ಹಂಚಿಕೊಳ್ಳುವಷ್ಟು ಆತ್ಮೀಯರು ಸಿಗುವುದಿಲ್ಲ, ಸಿಕ್ಕರೂ 'ಏನ್ರಿ ನಿಮ್ಮದು, ನಿಮ್ಮದು ಬರೀ ಗೊಣಗಾಟ, ಗೋಳಾಟವಾಯಿತು' ಎಂದು ಮಾರುದ್ದ ದೂರ ಸರಿಯುತ್ತಾರೆ. ಹಾಗಂತ ಎಲ್ಲ ವಿಷಯಗಳನ್ನು ಸಹಿಸಿಕೊಳ್ಳಲು ನಾವು ನಂಜುಂಡರಲ್ಲವಲ್ಲ. ಕಾರಿಕೊಂಡರೆ ಬೇರೆಯವರು ಸಹಿಸಿಕೊಳ್ಳಬೇಕಲ್ಲ? ನುಂಗದ ಕಾರದ ಈ ತೊಳಲಾಟಕ್ಕೆ ಪರಿಹಾರ ನನಗೆ ಬ್ಲಾಗ್ ನಲ್ಲಿ ಸಿಕ್ಕಿತು ಎಂಬ ಸಂಭ್ರಮಕ್ಕಾಗಿ ನನ್ನ ಬ್ಲಾಗ್ ಗೆ ಕಾಲ ಎಂದು ಕರೆದೆ. ಆದರಿದು ಅಹಂಕಾರದ, ಮೆರೆಯುವ ಕಾಲವಂತೂ ಅಲ್ಲ, ಎಲ್ಲವನ್ನು ಪ್ರಾಂಜಲವಾಗಿ ತೋಡಿಕೊಳ್ಳುವ ಕಾಲ ಎಂಬ ನೆಮ್ಮದಿ.
ಪ್ರತಿ ದಿನ ಕನಿಷ್ಠ ಹತ್ತಾರು ಮನಸ್ಸುಗಳು ನನ್ನ ಮಾತುಗಳನ್ನು ಗಂಭಿರವಾಗಿ ಆಲಿಸುತ್ತವೆ, ನಂತರ ಸ್ಪಂದಿಸುತ್ತಾರೆ ಎಂಬ ನಿರಾಳ ಭಾವ. ಮನುಷ್ಯರ ಮಧ್ಯ ಒಂದು unseen ಪ್ರವಾಹವಿರುತ್ತದೆ. ಅದನ್ನು ಅರಿಯಲು ಪರಸ್ಪರ ಮಾತಾಡಬೇಕು, ಸಂಪರ್ಕದಲ್ಲಿರಬೇಕು ಎಂಬ condition ಇಲ್ಲ. ಅದು ತನ್ನಿಂದ ತಾನೆ under current ತರಹ ಹರಿದಾಡುತ್ತದೆ. ಆ ಹರಿದಾಟ ನಮಗೆ ಅರಿವಿಲ್ಲದಂತೆ ಸಮಾಧಾನ ನೀಡುತ್ತದೆ. ಕೆಲವರು ಆಗಾಗ ಹೆಳುತ್ತಾರೆ ನೀವು ಹೇಳುವ ಮಾತುಗಳು ನಮ್ಮ ಅನುಭವಕ್ಕೂ ಬಂದಿವೆ ಆದರೆ ಹೇಳಲಾಗಿರಲಿಲ್ಲ. ನೀವು ಬರೆದದ್ದನ್ನು ಓದಿದ ಮೇಲೆ ಸಮಾಧಾನವಾಯಿತು ಎಂದಾಗ ನಮಗೂ ಸಮಾಧಾನವಾಗುತ್ತದೆ.
ಈಗಿರುವ ನನ್ನ 'ಕಾಲ'ದಲ್ಲಿ ಅತೀಯಾದ ಆತ್ಮಪ್ರಶಂಶೆ, ಆತ್ಮರತಿ ಇರದ ಹಾಗೆ ಎಚ್ಚರವಹಿಸುವ ಜವಾಬ್ದಾರಿ ಇದೆ. ವೈಯಕ್ತಿಕ ದ್ವೇಷಾಸೂಯೆಗಳನ್ನು ಕಾರಿಕೊಳ್ಳುವುದು ಅಷ್ಟೇನು positive ಅಲ್ಲ. ನೋಯಿಸಿದವರ ಹೆಸರನ್ನು ಪ್ರಸ್ತಾಪಿಸಿದೆ, ಯಾರನ್ನು ಅನಗತ್ಯ ಪೂರ್ವಾಗ್ರಹ ಭಾವನೆಯಿಂದ target ಮಾಡಬಾರದು ಎಂಬ ಎಚ್ಚರ ಇಟ್ಟುಕೊಂಡೇ ಸಂಯಮದಿಂದ ನೀವು ಕೊಟ್ಟ ಸ್ವಾತಂತ್ರ್ಯವನ್ನು ಉಪಯೋಗಿಸಿಕೊಂಡು ಹಗುರವಾಗುತ್ತೇನೆ.
ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು ಬಿಂದಾಸ್ ಆಗಿ share ಮಾಡಿಕೊಳ್ಳಿ. ಕಮೆಂಟ್ಸ್ ಕಾಲ '0' ಇಡಬೇಡಿ. ದುಬೈ, ಅಮೇರಿಕಾ, ಇಂಗ್ಲೆಂಡಿನಿಂದ ಫೋನಾಯಿಸಿ ಭಾವನೆಗಳನ್ನು ಹಂಚಿಕೊಂಡ ಆತ್ಮೀಯರಿಗೆ ಕೃತಜ್ಞನಾಗಿದ್ದೇನೆ. ಇಂಗ್ಲೆಂಡಿನ ಲಿವರ್ ಪೂಲ್ ನಲ್ಲಿರುವ ಸೋದರ ರಾಜು, ಸವಿತಾ ಬ್ಲಾಗ್ ಓದಿ ಖುಷಿ ಆಗಿದ್ದಾರೆ. ಜಗತ್ತಿನಲ್ಲಿರುವ ಎಲ್ಲ ಕನ್ನಡಿಗರನ್ನು ತಲುಪುವ ಸಂಭ್ರಮಕ್ಕೆ ಮತ್ತೊಮ್ಮೆ ಋಣಿಯಾಗಿದ್ದೇನೆ. Have a nice day.

Friday, March 26, 2010


ಅಚ್ಚುಕಟ್ಟು ನಿರೂಪಣೆಯ ಯಶಸ್ಸು ತಂದ ಕುತ್ತು


76ನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿನ ನನ್ನ ಪಾಲ್ಗೊಳ್ಳುವಿಕೆಯನ್ನು ಈ ಹಿಂದೆ ವಿವರಿಸಿದ್ದೇನೆ. ಸಮ್ಮೇಳನವನ್ನು ಕಾಡಿಬೇಡಿ ತರುವಲ್ಲಿ ಯಶಸ್ವಿಯಾದವರಲ್ಲಿ ನಾನು ಒಬ್ಬ. ಆದರೆ ನಂತರದ ಬೆಳವಣಿಗೆಗಳು ಬೇಸರವನ್ನುಂಟು ಮಾಡಿದ್ದರೂ ಸಕಾರಾತ್ಮಕವಾಗಿ ಕನಸು ಕಾಣುವ ನಮಗೆ ಪ್ರತಿಫಲ ಸಿಕ್ಕಿದೆ.
ಆ ಮಾತು ಬೇರೆ.
ಕಾರ್ಯಕ್ರಮಗಳ ರೂಪರೇಷೆ, ಗಣ್ಯ ಮಹನೀಯರಿಗೆ ವಸತಿ ವ್ಯವಸ್ಥೆ, ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಸಾಹಿತಿಗಳೊಂದಿಗಿನ ಸಾಮರಸ್ಯದ ಜವಾಬ್ದಾರಿಯೊಂದಿಗೆ ಆರಂಭದ ಹಾಗೂ ಸಮಾರೋಪದ ನಿರೂಪಣೆಯೂ ನನ್ನ ಪಾಲಿಗೆ ಲಭ್ಯವಾದದ್ದು ಅನಿರೀಕ್ಷಿತ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ನಿರ್ವಹಿಸಿ ಎಲ್ಲರ ಮೆಚ್ಚುಗೆಯನ್ನು ಗಳಿಸಿದ್ದು ವೈಯಕ್ತಿಕವಾಗಿ ಖುಷಿ ತಂದದ್ದು ಸಹಜ ಅಲ್ಲವೆ?
ಸಮ್ಮೇಳನಕ್ಕೆ ಒಂದು ವಾರ ಮೊದಲು ಇಬ್ಬರು ಮಹನೀಯರು ನಾಲ್ಕಾರು ಜನರನ್ನು ಕಟ್ಟಿಕೊಂಡು ಬಂದು ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾದ ಶಾಸಕ ಬಿದರೂರ ಹಾಗೂ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಪ್ರೊ.ಎ.ಬಿ. ಹಿರೇಮಠ ಅವರನ್ನು ಭೇಟಿ ಆಗಿ ಯಾವುದೇ ಕಾರಣಕ್ಕೂ ಸಿದ್ದು ಯಾಪಲಪರವಿ ಅವರಿಗೆ ನಿರೂಪಣೆ ಮಾಡಲು ಅವಕಾಶ ನೀಡಬಾರದು ಎಂಬ ಹುಸಿ ಬಾಂಬ್ ಹಾಕಿದ ಸುದ್ದಿ ನನಗೆ ತಲುಪಿತ್ತು. ಅದನ್ನು ಮನಸ್ಸಿನಲ್ಲಿಟ್ಟುಕೊಂಡೇ ತುಂಬಾ ಎಚ್ಚರಿಕೆಯಿಂದ ಎಲ್ಲರೂ ಮೆಚ್ಚುವ ಹಾಗೆ ನಿರೂಪಣೆ ಮಾಡಿ ಅವರ ಹುಸಿ ಬಾಂಬನ್ನು ಎದುರಿಸಿದ್ದು ನನ್ನ ಹೆಗ್ಗಳಿಕೆ. ಅನೇಕ ಗೆಳೆಯರು ಒತ್ತಾಯಿಸಿದರೂ ನಾನವರನ್ನು ಇಲ್ಲಿಯವರೆಗೆ ಅವರ ವಿರೋಧಕ್ಕೆ ಕಾರಣ ಏನೆಂದು ಕೇಳಿಲ್ಲ, ಕೇಳುವುದು ಇಲ್ಲಾ!. ಅದನ್ನು ಆ ಮಹನೀಯರೆ ಆತ್ಮಾವಲೋಕನ ಮಾಡಿಕೊಳ್ಳಲಿ. ಅವರಿಗೆ ಬೇಡ ಎನ್ನಲು ನೂರು ಕಾರಣಗಳಿದ್ದರೆ, ನನಗೆ ನಿರೂಪಣೆಯನ್ನು ಅರ್ಥಪೂರ್ಣವಾಗಿ ಮಾಡಲು ಸಾವಿರ ಕಾರಣಗಳಿವೆ. ನಂತರ ಕೊನೆ ದಿನ ಮುಖ್ಯ ಮಂತ್ರಿಗಳು ಭಾಗವಹಿಸಿದ ಕಾರ್ಯಕ್ರಮ ನಿರೂಪಣೆಯ ಜವಾಬ್ದಾರಿ ನನ್ನ ಹೆಗಲಿಗೆ ಬಿದ್ದಾಗ ಕೊಂಚ ದಿಗಿಲುಕೊಂಡೆ. ಲಕ್ಷಾಂತರ ಜನ ಸಾಗರದ ಮಧ್ಯ, ಅನೇಕ ಗಣ್ಯ ಮಹನೀಯರೆದುರು ಐತಿಹಾಸಿಕ ಸಾಹಿತ್ಯ ಸಮ್ಮೇಳನದಲ್ಲಿ ಮತ್ತೊಮ್ಮೆ ನಿರೂಪಣೆಯಂತಹ ಕ್ಲಿಷ್ಟ ಜವಾಬ್ದಾರಿ ಹೊರುವುದೊಂದು ಸವಾಲೆಂದು ಸ್ವೀಕರಿಸಿ ಎರಡನೇ ಇನ್ನಿಂಗ್ಸ ಹೊಡೆದು ಎಲ್ಲರ ಮೆಚ್ಚುಗೆ ಗಳಿಸಿದೆ. ಪತ್ರಿಕೆಯವರು, ಸ್ಥಾನಿಕ ಸಿಟಿ ಕೇಬಲ್ ಗೆಳೆಯರು, ಸುವರ್ಣ ಹಾಗೂ ವಿವಿಧ ಚಾನೆಲ್ಲುಗಳ ಸ್ನೇಹಿತರು ನಂತರ ಖುದ್ದಾಗಿ ಅಭಿನಂದಿಸಿದಾಗ ಖುಷಿ ಅಗದಿರಲು ಸಾಧ್ಯವೇ?
ಆದರೆ ನನ್ನ ಅಚ್ಚುಕಟ್ಟು ನಿರೂಪಣೆ ಕೆಲವರಿಗೆ ವಿಪರೀತ ಕಿರಿ-ಕಿರಿ ಎನಿಸಿದೆ ಅಂತ ನಂತರ ಅವರು ಕೆಂಡ ಕಾರಿದಾಗಲೇ ತಿಳಿಯಿತು. ತುಂಬಾ ಸಹನೆಯಿಂದ ಅವರ ಅಟ್ಯಾಕನ್ನು ಎದುರಿಸಿದೆ. ಆದರೆ ಮನಸ್ಸಿಗೆ ತುಂಬಾ ಬೇಸರವಾಯಿತು. ಸಣ್ಣ ಪುಟ್ಟ ದೋಷಗಳನ್ನು ದೊಡ್ಡದು ಮಾಡುವವರ ಸಣ್ಣತನಕ್ಕೆ ಹೇಸಿಗೆಯೆನಿಸಿತು. ಸಾಕಪ್ಪ ಈ ಸಾರ್ವಜನಿಕ ಬದುಕು ಅನಿಸಿದರೂ, ಅದು ಕೇವಲ ಸ್ಮಶಾನ ವೈರಾಗ್ಯ ಎಂದು ಗೊತ್ತಲ್ಲವೆ?
ಕೆಲವರು ಶಾಸಕರನ್ನು ಓಲೈಸಲೆಂದೇ, ಅವರ ಎದುರಿಗೆ ನನ್ನನ್ನು ಟೀಕಿಸಿದಾಗ ಸುಮ್ಮನೆ ಸಹಿಸಿಕೊಂಡು ನಿರ್ಣಯ ಅವರಿಗೆ ಬಿಟ್ಟು ಬಿಟ್ಟೆ. ರಾಜಕೀಯ ಹಿಂಬಾಲಕರ ನಿರೀಕ್ಷೆಗಳು ವಿಚಿತ್ರವಾಗಿರುತ್ತವೆ. ಪ್ರತಿಯೊಬ್ಬರೂ ತಮ್ಮ ನಾಯಕರನ್ನೇ ಹೊಗಳಲಿ ಎಂದರೆ ಹೇಗೆ ಸಾಧ್ಯ? ನಿರೂಪಕರಿಗೂ ಕೆಲವೊಂದು ಮಿತಿಗಳು, ಅನಿವಾರ್ಯತೆಗಳು ಇರುತ್ತವೆ ಎಂಬ ಸೌಜನ್ಯ ಗೊತ್ತಿರದವರಿಗೆ ಏನು ಮಾಡಲು ಸಾಧ್ಯ. ಇಂತಹ ಕಹಿ ಅನುಭವಗಳಿಂದ ಪಾಠ ಕಲಿಯಬೇಕಾಗುತ್ತದೆ. ರಾಜಕೀಯ ಹಿಂಬಾಲಕರಿಂದ ಭಾಷೆ ಕಲಿಯುವ ದುಸ್ಥಿತಿಗಾಗಿ ನನ್ನ ಬಗ್ಗೆ ನನಗೆ ಮರುಕ ಉಂಟಾಯಿತು. ಇದು ಸಾರ್ವಜನಿಕ ವ್ಯಂಗ್ಯ ಕೂಡಾ! ನಂತರ ಸಾವಿರಾರು ಜನ ಮುಕ್ತ ಕಂಠದಿಂದ ಅಭಿನಂದಿಸಿದಾಗ ನೂರಾರು ಜನ ಫೋನ್ ಮೂಲಕ ಹೊಗಳಿದಾಗ ಈ ಕಹಿ ಈಗ ಮಾಯವಾಗಿದೆ. 'ನಗಬೇಕು, ಅಳಬೇಕು ಸಮತೆಯ ಶಮದಲಿ ಎಂಬ ಕವಿವಾಣಿ ನೆನಪಾಗಿ ನನ್ನನ್ನು ನಾನೇ ಸಮಾಧಾನಿಸಿಕೊಂಡೆ.