Monday, August 13, 2018

ರೋತಾಂಗ್ ಪಾಸ್

ಏಕಾಂಗಿ ಸಂಚಾರ

ಮನಾಲಿಯ ರೋತಾಂಗ್ ಪಾಸ್

ದೆಹಲಿಯಲೊಂದು ಕಾನ್ಫರೆನ್ಸ್, ಮುಗಿದ ಕೂಡಲೇ ನೆನಪಾದದ್ದು ಕುಲು-ಮನಾಲಿ.
ಹೋಗಲೇಬೇಕೆನಿಸಿತು ಆದರೆ ಯಾವುದೇ ಪೂರ್ವತಯಾರಿ ಇರಲಿಲ್ಲ.
ಸ್ಥಳೀಯ ಟೂರಿಂಗ್ ಏಜೆಂಟ್ ಸೂಚಿಸಿದ ಬಸ್ ಹಿಡಿದು ಹೋದದ್ದು ಹರಸಾಹಸ ಅಂತ ಈಗ ಅನಿಸುತ್ತೆ.
ಬಾನಲ್ಲೆ ಮಧುಚಂದ್ರಕೆ ಕಾದಂಬರಿಯಲ್ಲಿನ ವಿವರಣೆ ನನ್ನ ತಲೆಯಲಿ ರಿಂಗಣವಾಡುತ್ತಿತ್ತು.‌
ರೋತಾಂಗ್ ಪಾಸ್ ನೋಡಲೇಬೇಕೆಂಬ ಮನಸಿನ ಹಟ. ಅದಕೆ ಈ ಒಂಟಿ ಪಯಣ.
ಮರುದಿನ ಮಧ್ಯಾನ್ಹ ಬಸ್ ಮನಾಲಿ ತಲುಪಿದಾಗ ಸುಸ್ತಾಗಿ ಹೋಗಿದ್ದೆ. ಇಡೀ ರಾತ್ರಿ ಚಳಿಯಿಂದಾಗಿ ನಿದ್ದೆಯಾಗಿರಲಿಲ್ಲ.
ಹೋಮ್ ಸ್ಟೇ ವಿಳಾಸ ಹಿಡಿದು ಹೊರಟೆ.
ಅದನ್ನು ನಡೆಸುತ್ತಿದ್ದ ಯುವ ದಂಪತಿಗಳು ನನ್ನ ನೋಡಿ ನಕ್ಕರು. ‘ಸರ್ ಯಾರೂ ಒಂಟಿಯಾಗಿ ಮನಾಲಿಗೆ ಬರೋದಿಲ್ಲ, ಇದು ಹನಿ‌ಮೂನ್ ಸ್ಪಾಟ್ ‘ ಅಂದಾಗ ಪೆಚ್ಚಾದೆ.

‘ಈಗಲೂ ಅಷ್ಟೇ ನವದಂಪತಿಗಳಿಗಾಗಿ ವಿನ್ಯಾಸಗೊಳಿಸಿದ ರೂಮ್ ಖಾಲಿ ಇದೆ’  ಅದನ್ನೇ ಕೊಡುವೆ ಅಂದಾಗ ಅನಿವಾರ್ಯವಾಗಿ ಒಪ್ಪಿಕೊಂಡೆ.

ಅದ್ಭುತ ಕೋಣೆ ಬೆರಗುಗೊಳಿಸಿತು. ಸುತ್ತಲೂ ಕನ್ನಡಿಗಳು, ಮೇಲೆ ಅಕ್ಕ ಪಕ್ಕದಲ್ಲಿ ಎಲ್ಲ ಕಡೆ ನನ್ನ ಒಂಟಿ ಪ್ರತಿಬಿಂಬ. ಏನೂ ತೋಚಲಿಲ್ಲ, ಒಂಟಿತನಕೆ ಮನಸು ಮರುಗಿತು.

ರೋತಾಂಗ್ ಪಾಸ್ ನೋಡುವ ಹುಮ್ಮಸ್ಸಿನಲ್ಲಿ ಹೊರಬಿದ್ದೆ. ಮತ್ತದೇ ಚೌಕಾಸಿ, ಹಳೇ ಓಮ್ನಿ‌‌ ಮುಗಿಸಿದೆ.
ಮನಾಲಿಯಿಂದ ರೋತಾಂಗ್ ಪಾಸ್ ಅವರ್ಣನೀಯ ಅನುಭವ, ಒಂಟಿಯಾಗಿ ಅನುಭವಿಸಿ ಸಂಭ್ರಮಿಸಿದೆ. ನೂರು ಕವಿತೆಗಳು, ಸಾವಿರದ ಪದಗಳು ಉಕ್ಕಿ ಹರಿದವು. ಅಂತಹ ದುರ್ಗಮ ಮಾರ್ಗದಲ್ಲಿ ಕಾರ್ ಪಂಕ್ಚರ್ ಆದ ಅಪಾಯ ನನಗೆ ಮಹತ್ವದ್ದೆನಿಸಲಿಲ್ಲ.

ಊಷ್ಣದೇಹಿಯಾದ ನನಗೆ ಆ ಚಳಿ ಆರಂಭದಲ್ಲಿ ಥ್ರಿಲ್ ಅನಿಸಿತು. ‘ಇಲ್ಲ ಸಾಬ್ ಮೇಲೇ ಹೋದಂತೆ ವಿಪರೀತ ಛಳಿ, ನೀವು ದಯವಿಟ್ಟು ಹೊದಿಕೆ ವ್ಯವಸ್ಥೆ ಮಾಡಿಕೊಳ್ಳಿ’ ಅಂದದ್ದನ್ನು ನನ್ನ ಹುಂಬ ಮನಸು ಲೆಕ್ಕಿಸಲಿಲ್ಲ.
ಮೇಲೆ ಏರಿದಂತೆ ನಡುಕ, ಉಸಿರು ಗಟ್ಟಿದ ಅನುಭವ, ತಲೆ ಸುತ್ತಿದಂತಾಯಿತು. ಟ್ಯಾಕ್ಸಿವಾಲಾ ಗಾಭರಿಯಾದ. ನನಗೂ ದಿಕ್ಕೇ ತೋಚಲಿಲ್ಲ.
ರೋತಾಂಗ್ ಪಾಸ್ ತಲುಪಿದ ಕೂಡಲೇ  ಕೆಳಗಿಳಿಸಿ ಮೈತುಂಬ ಹೊದಿಕೆ ಹೊಚ್ಚಿ ಬಿಸಿ ಬಿಸಿ ಚಹಾ ಕೊಟ್ಟು ಕೈಕಾಲು ತಿಕ್ಕಿದ ಉಸಿರು ತಿರುಗಿ ಜೀವ ಬಂದಂತಾಯ್ತು.

ಒಮ್ಮೆ ಸುತ್ತಲೂ ನೋಡಿದೆ, ಅಬ್ಬಾ ! ನಂಬಲಸಾಧ್ಯ. ವರ್ಣಿಸಲೂ, ಊಹಿಸಲೂ ಆಗದೇ ಒದ್ದಾಡಿದೆ.‌
ಕೇವಲ ಕಣ್ತುಂಬಿಕೊಂಡೆ. ಈಗಲೂ ನೆನಪಾದರೆ ಅದೇ ರೋಮಾಂಚನ.

ಇನ್ನೂ ಮೇಲೆ ಹೋಗಲು ಕುದುರೆ ಸವಾರಿ ಅನಿವಾರ್ಯ. ಅವರು ಬೇಡ ಅಂದರೂ ಲೆಕ್ಕಿಸದೇ  ಧೈರ್ಯ ಮಾಡಿ ಹೊರಟೆ, ನೋಡಲೇಬೇಕೆಂಬ ಹಟ.

ಕಾದಂಬರಿಯಲ್ಲಿ ಓದಿದ ಸ್ಥಳ ನೋಡಿ ಖುಷಿಪಟ್ಟೆ. ಭಾವುಕನಾಗಿ ಒಬ್ಬನೇ ಓಡಾಡಿದ್ದು ನೋಡಿ ಕುದುರೆವಾಲಾ ಹುಚ್ಚ ಅಂದುಕೊಂಡಿರಬೇಕು. ಯಾವುದನ್ನು ಲೆಕ್ಕಿಸದೇ ಸೂರ್ಯಾಸ್ತ ನೋಡಿ ನಿಧಾನ ಕೆಳಗಿಳಿದೆ. ಕ್ಯಾಮರಾ ಇರಲಿಲ್ಲ. ಸ್ಮೃತಿ ಪಟಲದ ಮೇಲೆ ಚಿತ್ರಿಸಿಕೊಂಡೆ.

ಕತ್ತಲಾಗುವುದರೊಳಗೆ ಮನಾಲಿ ತಲುಪಬೇಕಿತ್ತು.
ರೂಮ್ ಸೇರಿದಾಗ ನನ್ನ ಅನುಭವ ಕೇಳಿದ ಸ್ಟೇ ಒಡೆಯ ಆತಂಕಗೊಂಡ. ‘ ಅಯ್ಯೋ ಒಬ್ಬರೇ ಹೋಗಿದ್ದಿರಿ ಏನಾದರೂ ಆಗಿದ್ದರೆ ಹೇಗೆ, ದೇವರು ದೊಡ್ಡವನು ನೀವು ಬದುಕಿ ಬಂದಿದ್ದೀರಾ’ ಅಂದಾಗ ನನಗೇನು ಅನಿಸಲೇ ಇಲ್ಲ. ಕೇವಲ ರೋತಾಂಗ್ ಪಾಸ್ ನೋಡಿದ ಸಡಗರ.
ಅಂದು ನಾ ತೆಗೆದುಕೊಂಡ ರಿಸ್ಕ್ ನಿಂದಾಗಿ ನಂತರ ಸಾವಿರಾರು ಮೈಲು ಸುತ್ತಿ ದೇಶ-ವಿದೇಶ ನೋಡಿದ ಹೆಗ್ಗಳಿಕೆ ನನ್ನದು.

   ಸಿದ್ದು ಯಾಪಲಪರವಿ
             

No comments:

Post a Comment