Monday, November 15, 2010

ಡಂಬಳಕೆ ಪಾದಯಾತ್ರೆ : ಪೂಜ್ಯರ ಸಂಪರ್ಕ

ಪರಮಪೂಜ್ಯ ಗದುಗಿನ ತೋಂಟದಾರ್ಯ ಶ್ರೀಗಳು ಜನಪರ ಅಭಿವೃದ್ಧಿಯ ಆಶಯ, ಮಠದ ಬೆಳವಣಿಗೆಯೊಂದಿಗೆ ಭಕ್ತರನ್ನು ಸಂಘಟಿಸಬೇಕೆಂಬ ಕಾರಣದಿಂದ ತಮ್ಮ ಮೂಲ ಪೀಠವಾದ ಡಂಬಳಕ್ಕೆ ಪ್ರತಿ ಅಮವಾಸ್ಯೆಯಂದು ಪಾದಯಾತ್ರೆಯ ಯೋಜನೆಯನ್ನು ಪ್ರಾರಂಭಿಸಿದರು.
ರಾತ್ರಿ ೧೨ ಗಂಟೆಯ ನಂತರ ನೂರಾರು ಭಕ್ತರೊಂದಿಗೆ, ಭಜನೆ ಹಾಡುಗಳ ಮೂಲಕ ಡಂಬಳಕ್ಕೆ ಪಾದಯಾತ್ರೆಯ ಯೋಜನೆ ಮಠದ ಅಭಿವೃದ್ಧಿಯಲ್ಲಿ ವಿಶೇಷ ಪಾತ್ರವಹಿಸಿತು. ದಾರಿಯುದ್ದಕ್ಕೂ ಎಲ್ಲ ಜನಾಂಗದ ಜನ ನಡು ರಾತ್ರಿಯಲ್ಲಿ ಪೂಜ್ಯರನ್ನು ಆರತಿ ಬೆಳಗಿ ಸ್ವಾಗತಿಸುವ ದೃಶ್ಯ ಅನೇಕ ಪ್ರಗತಿಪರ ಬೆಳವಣಿಗೆಗೆ ನಾಂದಿಯಾತು.

ಲಂಬಾಣಿ ಸಮಾಜದ ಡೋಣಿ ತಾಂಡಾದ ಯುವಕರು ಈ ಕಾರಣದಿಂದಾಗಿಯೇ ಡಂಬಳ ಮಠಕ್ಕೆ ಆಪ್ತರಾಗಿ ಶ್ರೀಮಠದ ಜಾತ್ಯಾತೀತ ಮೌಲ್ಯಗಳನ್ನು ಎತ್ತಿ ಹಿಡಿದರು. ಲಿಂಗಾಯತ ಧರ್ಮದ ನಿಜಾದರ್ಶನಗಳನ್ನು ಜನ ಅರ್ಥೈಸಿಕೊಳ್ಳುವಂತೆ ಪೂಜ್ಯರು ವಿವರಣೆ ನೀಡಿದ್ದು ಹೆಚ್ಚು ಅರ್ಥಪೂರ್ಣವಾಗಿತ್ತು.

ಅಂದು ಪೂಜ್ಯರು ಬಿತ್ತಿದ ಜಾತ್ಯಾತೀತ ಮೌಲ್ಯದ ಬೀಜ ಇಂದು ನನ್ನಲ್ಲಿ ಹೆಮ್ಮರವಾಗಿ ಬೆಳೆದಿದೆ.ಹಿಂದುಳಿದ, ದಲಿತರ, ಶೋಷಿತರ ಪರವಾಗಿರುವ ಶ್ರೀಗಳ ನಿಲುವು ನನಗೆ ಹೆಚ್ಚು ಸಮಂಜಸವೆನಿಸಿತು.

ಬಾಲ್ಯದಲ್ಲಿನ ಈ ಮೌಲ್ಯಗಳು ಹೇಗೆ ಶಾಶ್ವತವಾಗಿ ಉಳಿಯುತ್ತವೆ ಎಂಬುದಕ್ಕೆ ಪೂಜ್ಯರ ದಿವ್ಯ ಪ್ರಖರತೆ ಕಾರಣವೆನಿಸುತ್ತದೆ.

ಒಂಬತ್ತನೇ ತರಗತಿಯಲ್ಲಿ ಓದುತ್ತಿರುವಾಗ ನಾನು ಡಂಬಳ ಪಾದಯಾತ್ರೆಗೆ ಹೋಗಲು ನಿರ್ಧರಿಸಿ, ಪ್ರತಿ ಅಮವಾಸ್ಯೆಯ ಹಿಂದಿನ ರಾತ್ರಿಯ ಪಾದಯಾತ್ರೆಯಲ್ಲಿ ಪಾಲ್ಗೊಳ್ಳು ವ ಆಸೆಯನ್ನು ಪೂಜ್ಯರಿಗೆ ಒಪ್ಪಿಸಿದೆ.
ಮೊದಲ ಪಾದಯಾತ್ರೆಗೆ ಶರಣು ಕೂಡಾ ಒಪ್ಪಿದ ಗಂಗಾವತಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಅರಳಿ ನಾಗರಾಜ ಮಾಮಾ ಹಾಗೂ ಶಶಿಕಲಾ ಅಕ್ಕಾ ಪಾದಯಾತ್ರೆಗೆ ಬರುವುದು ತಿಳಿಸಿದಾಗ ಹೆಚ್ಚಿನ ಸಂಭ್ರಮವೆನಿಸಿತು. ಮೊದಲ ಅಮವಾಸೆಯ ಹಿಂದಿನ ರಾತ್ರಿ ಗದುಗಿನ ಜೋಳದ ಅಜ್ಜಾ ಅವರ ಮನೆಯಲ್ಲಿ ಸ್ನಾನ ಮಾಡಿ ಎಲ್ಲರೂ ಶ್ರದ್ಧೆಯಿಂದ ತಯಾರಾದೆವು.
ನೀವು ಸಣ್ಣ ಹುಡುಗರು ನಿಮಗೆ ತೊಂದರೆ ಆಗಬಹುದು. ಹಾಗೇನಾದರೂ ತೊಂದರೆಯಾದರೆ ನಿಧಾನವಾಗಿ ಬನ್ನಿರಿ ಎಂದು ಹೇಳಿ ಅಜ್ಜಾ ಅವರು ಆಶೀರ್ವದಿಸಿದರು.
ನಡುರಾತ್ರಿಯ ಕತ್ತಲೆಯ ತಂಪಿನಲ್ಲಿ ನಡೆಯುವದರಲಿ ಎಂತಹ ಅರ್ಥ ಅಡಗಿದೆ. ಗಾಂಧೀಜಿಯ ಪಾದಯಾತ್ರೆ ಸದುದ್ದೇಶವನ್ನು ಪೂಜ್ಯ ಅಜ್ಜಾ ಅವರು. ಡಂಬಳ ಪಾದಯಾತ್ರೆ ಮೂಲಕ ಪ್ರತಿಪಾದಿಸಿದರು.
ಈ ಪಾದಯಾತ್ರೆ ಮೂಲಕ ನಾನು ಅಜ್ಜಾರಿಗೆ ಹೆಚ್ಚು ಹತ್ತಿರವಾದೆ. ನನ್ನ ಎಲ್ಲ ರೀತಿಯ ವಿತಂಡ ಪ್ರಶ್ನೆಗಳಿಗೆ ಪೂಜ್ಯರು ನಸುನಗುತ್ತಾ ಉತ್ತರಿಸುತ್ತಿದ್ದರು. ಡಂಬಳ ಹತ್ತಿರ ವಾದಂತೆಲ್ಲ ಜನರ ಸಂಖ್ಯೆ ಕರಗುತ್ತಿತ್ತು. ಅಜ್ಜಾದೊಂದಿಗೆ ವಿಶ್ವನಾಥ ಬುಳ್ಳಾ ಅವರು, ನಾಗರಾಳ ಮಾಮಾ ಇನ್ನು ಕೆಲವರು, ಉಳಿಯುತ್ತಿದ್ದರು. ಬಿರುಸಾಗಿ ನಡೆದು ಇದೇ ಗುಂಪಲ್ಲಿ ನಾನು ಉಳಿದುಕೊಂಡೆ. ಧೈರ್ಯ, ಕುತೂಹಲದಿಂದ ನನ್ನ ಪ್ರಶ್ನೆಗಳಿಗೆ ಹಲವರು ತಕರಾರು ಎತ್ತುತ್ತಿದ್ದರು. ಅಜ್ಜಾ ಅವರಂತಹ ಹಿರಿಯರಿಗೆ ಇಂತಹ ಪ್ರಶ್ನೆಗಳನ್ನು ಕೇಳಬಾರದಪ್ಪ ತಮ್ಮಾ ಎಂದು ತಕರಾರು ಒಡ್ಡುತ್ತಿದ್ದರೂ ಅದನ್ನು ಲೆಕ್ಕಿಸದೇ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದೆ.

ಲಿಂಗಾಯತ ಧರ್ಮದ ಸೂಕ್ತ ಪರಿಕಲ್ಪನೆಗಳನ್ನು, ಬಸವಾದಿ ಶರಣರ ಮೌಲ್ಯಗಳನ್ನು ಪೂಜ್ಯರು ಸಮಗ್ರವಾಗಿ ವಿರಿಸುತ್ತಿದ್ದರು. ಅದನ್ನು ನೆನಪಿಸಿಕೊಂಡರೆ ಶ್ರೀಗಳ ವ್ಯಕ್ತಿತ್ವದ ಬಗ್ಗೆ ಅಚ್ಚರಿ. ೧೩-೧೪ ರ ವಯಸ್ಸಿನ ಬಾಲಕನ ಪ್ರಶ್ನೆಗಳಿಗೆ ಉತ್ತರಿಸುವ ಅವರ ಘನತೆ, ಹೃದಯ ವೈಷಾಲ್ಯ, ಯುವಕರಲ್ಲಿನ ನಂಬಿಕೆ ಅನನ್ಯವಾದುದು. ಆ ವಯಸ್ಸಿನಲ್ಲಿ ಅವರು ಬಿತ್ತಿದ ವಿಚಾರಧಾರೆಗಳು ಇಂದಿಗೂ ಹಚ್ಚಹಸಿರಾಗಿವೆ.
ಸಾಹಿತ್ಯ, ಧರ್ಮ, ಶಿಕ್ಷಣಗಳ ವಿಷಯವಾಗಿ ಇಂದು ಗಂಟೆಗಟ್ಟಲೆ ಮಾತನಾಡಿ ಶಾಬಾಷ್‌ಗಿರಿ ಗಳಿಸಲು ಪೂಜ್ಯರೇ ಕಾರಣ ಎಂದು ಹೇಳಲು ಅಭಿಮಾನವೆನಿಸುತ್ತದೆ. ಮುಂದಿನ ನನ್ನ ಭಾಷಣಗಳ ಮೇಲೆ ಪೂಜ್ಯರ ಶೈಲಿಯ ಪ್ರಭಾವವಾಯಿತು. ಎಂ.ಎ. ಮುಗಿಸಿ ಕಾಲೇಜು ಉಪನ್ಯಾಸಕನಾದಾಗಲೂ ಪೂಜ್ಯರ ಸಲಹೆ-ಮಾರ್ಗದರ್ಶನ ಪಡೆಯುವದನ್ನು ಮುಂದುವರೆಸಿದೆ.
ಡಂಬಳದ ಪಾದಯಾತ್ರೆಯನ್ನು ಮೂರು-ನಾಲ್ಕು ವರ್ಷ ಮುಂದುವರೆಸಿದೆ.ಅವರು ಜ್ಞಾನ ಸಂಪತ್ತನ್ನು ಹೆಚ್ಚಿಸಿದರು.
ಮುಂಜಾನೆ ಡಂಬಳಕೆ ತಲುಪಿದ ಮೇಲೆ ಸ್ನಾನ ಮಾಡಿ ಪೂಜ್ಯರೊಂದಿಗೆ ಪ್ರಸಾದ ಸ್ವೀಕರಿಸುವ ಯೋಗ ನಮ್ಮದಾಗಿತ್ತು. ಆದರೂ ಸ್ನಾನ ಮಾಡುವ ಮೊದಲು ಮಠದ ಎದುರಿಗಿನ ಚಾಹದ ಅಂಗಡಿಯಲ್ಲಿ ಪೂರಿ, ಚಟ್ನಿ ತಿನ್ನುತ್ತಿದ್ದೆ. ಉಳಿದವರು ಇದನ್ನು ರಹಸ್ಯವಾಗಿಟ್ಟರೂ ನಾನೊಮ್ಮೆ ಪೂರಿ ತಿನ್ನುವ ವಿಷಯವನ್ನು ಅಜ್ಜಾರ ಮುಂದೆ ಬಯಲು ಮಾಡಿದಾಗ ಹೊಟ್ಟೆ ತುಂಬಾ ನಕ್ಕರು. ನಿನ್ನ ಮುಂದ ಸಿಕ್ರೇಟ್ ವಿಷಯ ಹೇಳೋದೇ ಕಷ್ಟ ಅಂದರು. ಅ ನೇರವಂತಿಕೆ ಇಂದಿಗೂ ಉಳಿದು ಅನೇಕ ಅಪಾಯಗಳಿಗೆ ಕಾರಣವಾಗಿದೆ.
ಒಮ್ಮೊಮ್ಮೆ ಈ ರೀತಿಯ ಪಾರದರ್ಶಕ ನೇರ ಮಾತುಗಾರಿಕೆ, ಅನೇಕರನ್ನು ದೂರ ಮಾಡಿದೆ ಎಂಬ ವಿಷಾದವಿದ್ದರೂ ಅಭಿಮಾನವಿದೆ. ನೇರವಂತಿಕೆ ಪಾಠ ಹೇಳಿದ ಪರಮಪೂಜ್ಯ ಜಗದ್ಗುರುಗಳು ಅದೇ ಮೌಲ್ಯಗಳನ್ನು ಉಳಿಸಿಕೊಂಡಿದ್ದಾರೆ. ಅವರ ಆಶೀರ್ವಚನವೆಂದರೆ ತೆರೆದ ಪುಸ್ತಕವಿದ್ದಂತೆ ಅಜ್ಜಾ ಅವರು ಏನೂ ಮುಚ್ಚಿಡದೇ ಸಭೆಯಲ್ಲಿ ಹೇಳಿಬಿಡುತ್ತಾರೆ ಎಂಬ ಆತಂಕ ಕೆಲವರಲ್ಲಿ. ಆದರೆ ನನಗೆ ಮಾತ್ರ ಇದು ಸಮಂಜಸವೆನಿಸುತ್ತದೆ. ಡಂಬಳದ ಪಾದಯಾತ್ರೆ ಹೊಸ ಬದಲಾವಣೆ ನಾಂದಿ ಆದದ್ದನ್ನು ಮರೆಯಲ ಸಾದ್ಯ.

1 comment:

  1. Siddu, ee article odi nanna High school days nenapadavu, I did my High school Education in Dambal J.T.High school.Sree gala aashraydalli navoo odevi anno hemme ide.What a great days they are!!unforgottable!!

    ReplyDelete